Asianet Suvarna News Asianet Suvarna News

ಶಾಂತಿನಗರ ಗೆಲ್ಲಲು ಹ್ಯಾರಿಸ್ ಕಸರತ್ತು

ಶಾಂತಿನಗರದಲ್ಲಿ  ಹ್ಯಾರಿಸ್ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಎರಡು ಅವಧಿ ಗೆದ್ದಿರುವ ಅವರು ಹ್ಯಾಟ್ರಿಕ್‌ಗಾಗಿ ಬೆವರು ಸುರಿಸತೊಡಗಿದ್ದಾರೆ. ಪುತ್ರನ ಘಟನೆ ಕ್ಷೇತ್ರದಲ್ಲಿ ಭಾರೀ ಬದಲಾವಣೆ ಮಾಡುವುದಿಲ್ಲ ಎಂಬ  ವಿಶ್ವಾಸದಲ್ಲೇ ಕಾಂಗ್ರೆಸ್ ಟಿಕೆಟ್ ನೀಡಿದ್ದು, ಅವರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.

Haris Contest From Shanthinagar

ಶ್ರೀಕಾಂತ್ ಎನ್.ಗೌಡಸಂದ್ರ

ಬೆಂಗಳೂರು :  ಸಿಲಿಕಾನ್‌ಸಿಟಿಯಲ್ಲಿ ಮೋಜು-ಮಸ್ತಿಗೆ ಕೇರ್ ಆಫ್ ಅಡ್ರೆಸ್ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಯುಬಿ ಸಿಟಿ  ಹಾಗೂ ಚರ್ಚ್‌ಸ್ಟ್ರೀಟ್. ಇಂತಹ ಹೈಟೆಕ್ ಪ್ರದೇಶಗಳ ಆಗರ ‘ಶಾಂತಿನಗರ. 200 ಕ್ಕೂ ಹೆಚ್ಚು ಪಬ್, ದೇಶ-ವಿದೇಶಿ ಶೈಲಿಯ ಜೀವನಶೈಲಿ ಹೊಂದಿರುವ ಇಲ್ಲಿ ನಡೆಯುವ ಹೊಸ ವರ್ಷಾಚರಣೆ ರಾಜ್ಯದಲ್ಲೇ ಖ್ಯಾತಿ. ಈ ಪ್ರದೇಶ ಪಾಲಿಕೆಯ ಪ್ರಮುಖ ಆದಾಯದ ಮೂಲವೂ ಹೌದು. 175  ವರ್ಷ ಇತಿಹಾಸವುಳ್ಳ ಸೇಂಟ್ ಪ್ಯಾಟ್ರಿಕ್ ಚರ್ಚ್ ಸೇರಿ ಹತ್ತಾರು ಪ್ರಮುಖ ಚರ್ಚ್‌ಗಳು ಇಲ್ಲಿವೆ. 
ದೀಪದ ಬುಡ ಕತ್ತಲು ಎಂಬಂತೆ ಹೈಟೆಕ್ ಪ್ರದೇಶಗಳಿರುವ ಈ ಕ್ಷೇತ್ರದಲ್ಲಿ ಕಪ್ಪು ಚುಕ್ಕೆಗಳಿಗೆ ಬರವಿಲ್ಲ. ನೀಲಸಂದ್ರ, ಆಸ್ಟಿನ್‌ಟೌನ್, ಈಜಿಪುರ ಸುತ್ತಮುತ್ತಲಿನ ಕೊಳಗೇರಿ ಗಳಸಮಸ್ಯೆಗಳು ಪರಿಹಾರ ಕಂಡಿಲ್ಲ. ಇಂತಹ ಕ್ಷೇತ್ರ ಇದೀಗ ಮತ್ತೊಮ್ಮೆ ಚುನಾವಣಾ ಸಮರಕ್ಕೆ ಸಜ್ಜಾಗಿದೆ.  ‘ಶಾಂತಿನಗರ’ದ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್‌ರ ಪುತ್ರ ಮಹಮ್ಮದ್ ನಲಪಾಡ್ ಉದ್ಯಮಿಯೊಬ್ಬರ ಪುತ್ರ ವಿದ್ವತ್ ಮೇಲೆ ಹಲ್ಲೆ ಮಾಡಿದ ಪರಿಣಾಮ ಈಗ ಜೈಲಿನಲ್ಲಿದ್ದಾರೆ. 

ಮಗ ಮಾಡಿದ ತಪ್ಪಿಗೆ ತಂದೆ ಹ್ಯಾರಿಸ್ ಸೇರಿ ಕಾಂಗ್ರೆಸ್ ಪಕ್ಷವೇ ಮುಜುಗರ, ಟೀಕೆ ಎದುರಿಸಬೇಕಾಯಿತು. ಈ ಘಟನೆಯಿಂದ ಟಿಕೆಟ್ ತಪ್ಪುವ ಭೀತಿಯಲ್ಲಿದ್ದ ಹ್ಯಾರಿಸ್ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಎರಡು ಅವಧಿ ಗೆದ್ದಿರುವ ಅವರು ಹ್ಯಾಟ್ರಿಕ್‌ಗಾಗಿ ಬೆವರು ಸುರಿಸತೊಡಗಿದ್ದಾರೆ.ಪುತ್ರ ಮಾಡಿದ ಕೃತ್ಯದ ಬೆನ್ನಲ್ಲೇ  ಕ್ಷೇತ್ರಾದ್ಯಂತ ಸಂಚರಿಸಿದ್ದ ಅವರು ಪುತ್ರನ ತಪ್ಪನ್ನು ಸಮರ್ಥಿಸಿಕೊಳ್ಳದೆ ಭಾವನಾತ್ಮಕವಾಗಿ ಜನರ ಕ್ಷಮೆ ಕೇಳಿ, ಅದನ್ನು ಅನುಕಂಪದ ಅಲೆಯಾಗಿಯೂ ಬದಲಿಸಿದ್ದರು. ಹೀಗಾಗಿ, ಪುತ್ರನ ಘಟನೆ ಕ್ಷೇತ್ರದಲ್ಲಿ ಭಾರೀ ಬದಲಾವಣೆ ಮಾಡುವುದಿಲ್ಲ ಎಂಬ  ವಿಶ್ವಾಸದಲ್ಲೇ ಕಾಂಗ್ರೆಸ್ ಟಿಕೆಟ್ ನೀಡಿದೆ. 

ಆದರೆ, ಶತಾಯ ಗತಾಯ ಹ್ಯಾರಿಸ್ ಸೋಲಿಸಲು ಬಿಜೆಪಿ ರಣತಂತ್ರ ರೂಪಿಸಿದ್ದು, 2008 ರಲ್ಲಿ ಕೈ ಜಾರಿರುವ ಕ್ಷೇತ್ರವನ್ನು ಪುನಃ ವಶಕ್ಕೆ  ಪಡೆಯಲು ಪ್ರಯತ್ನ ನಡೆಸಿದೆ. ಇದಕ್ಕಾಗಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಪಕ್ಷ, ಕಳೆದ ಬಾರಿ ಜೆಡಿಎಸ್‌ನಿಂದ ಕಣಕ್ಕಿಳಿದು 34,155 ಮತ ಗಳಿಸಿದ್ದ ಕೆ. ವಾಸುದೇವಮೂರ್ತಿ ಅವರಿಗೆ ಟಿಕೆಟ್ ನೀಡಿದೆ. ಶಾಂತಲಾನಗರ ವಾರ್ಡ್‌ನಿಂದ ಎರಡು ಬಾರಿ ಪಾಲಿಕೆ ಸದಸ್ಯರಾಗಿ, ಉಪಮೇಯರ್ ಆಗಿದ್ದ ವಾಸುದೇವಮೂರ್ತಿಗೆ ಕ್ಷೇತ್ರದ ಮೇಲೆ ಹಿಡಿತವಿದೆ. ತಿಗಳ ಸಮುದಾಯದ ವಾಸುದೇವಮೂರ್ತಿ ತಮಿಳಿನಲ್ಲಿ ಅಬ್ಬರದ ಪ್ರಚಾರ ನಡೆಸುವ ಮೂಲಕ ತಮಿಳರ ಮತಗಳಿಗೆ ಕೈ ಹಾಕಿದ್ದಾರೆ.

ಕಾಂಗ್ರೆಸ್ ಕೋಟೆ: ಕ್ಷೇತ್ರದ ರಾಜಕೀಯ ಇತಿಹಾಸ ಗಮನಿಸಿದರೆ, ಕಳೆದ ಹನ್ನೊಂದು ಚುನಾವಣೆಯಲ್ಲಿ ಎಂಟು ಬಾರಿ ಕಾಂಗ್ರೆಸ್ ಹಾಗೂ ಜನತಾಪಕ್ಷ, ಜೆಡಿ ಹಾಗೂ ಬಿಜೆಪಿ ತಲಾ ಒಂದು ಬಾರಿ ಜಯಗಳಿಸಿದೆ. 35 ಸಾವಿರ ಅಲ್ಪಸಂಖ್ಯಾತ, ಸುಮಾರು 60 ಸಾವಿರ ಎಸ್‌ಸಿ,ಎಸ್‌ಟಿ ಮತ, 14 ಸಾವಿರ ಕುರುಬ ಹಾಗೂ ಒಕ್ಕಲಿಗ, ರೆಡ್ಡಿ ಒಕ್ಕಲಿಗ ಮತ ಇವೆ. ಈ ಕ್ಷೇತ್ರದ ಏಳು ವಾರ್ಡ್‌ಗಳ ಪೈಕಿ ನಾಲ್ಕು ಬಿಜೆಪಿ, ಎರಡು ಕಾಂಗ್ರೆಸ್, ಒಬ್ಬ ಪಕ್ಷೇತರ ಸದಸ್ಯ ಜಯಗಳಿಸಿದ್ದಾರೆ.

ಪಕ್ಷೇತರ ಸದಸ್ಯ ಗುಂಡಣ್ಣ (ಲಕ್ಷ್ಮೀನಾರಾಯಣ) ಕಾಂಗ್ರೆಸ್‌ಗೆ ಬೆಂಬಲ  ಘೋಷಿಸಿದ್ದಾರೆ. ಈ ಮೂಲಕ ಬಿಜೆಪಿಯು 2015 ರ ವೇಳೆಗೆ ಕ್ಷೇತ್ರದಲ್ಲಿ ಪ್ರಭಾವ ಹೆಚ್ಚಿಸಿಕೊಂಡಿರುವುದು ಚುನಾವಣೆಗೆ  ಅನುಕೂಲವಾಗ ಲಿದೆ ಎಂದು ಅಂದಾಜಿಸಲಾಗಿದೆ.

ಇನ್ನು ಕ್ಷೇತ್ರದಲ್ಲಿ ಹೆಚ್ಚಾಗಿರುವ ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಹಂಚಿಕೆಯಾದರೆ ವಿದ್ವತ್ ಪ್ರಕರಣದ ಲಾಭ ಪಡೆದು ಬಹುತೇಕ ಹಿಂದೂ ಮತ ಗಳನ್ನು ಕ್ರೂಢೀಕರಿಸುವ ಪ್ರಯತ್ನದಲ್ಲಿ ಬಿಜೆಪಿ ಇದೆ. ಆದರೆ ಬಿಜೆಪಿಯಿಂದ ಟಿಕೆಟ್ ಪಡೆಯಲು ಕೊನೆಯ ಕ್ಷಣದವರೆಗೆ ಹೋರಾಡಿದ ಹಗದೂರು  ವಾರ್ಡ್ ಮಾಜಿ ಸದಸ್ಯ ಶ್ರೀಧರ್‌ರೆಡ್ಡಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.ಹೀಗಾಗಿ ಹಿಂದೂ ಮತಗಳ ವಿಭಜನೆಯ ಲಾಭದಲ್ಲಿ ಕಾಂಗ್ರೆಸ್ ಇದೆ. ಇದರ ನಡುವೆ ಬಿಇಎಲ್ ಉದ್ಯೋಗಿಗಳ ಸಂಘದ ಅಧ್ಯಕ್ಷ ಶ್ರೀನಿವಾಸ್‌ರೆಡ್ಡಿ ಪ್ರಭಾವ ಜೆಡಿಎಸ್‌ಗೆ ವರವಾಗುವ ಸಾಧ್ಯತೆ ಇದೆ.

Follow Us:
Download App:
  • android
  • ios