ವಿಜಯಪುರ (ಮೇ. 04): ಜೆಡಿಎಸ್’ಗೆ ಮತ ಹಾಕಬೇಡಿ ಎಂಬ ಮೋದಿ ಹೇಳಿಕೆಗೆ ಹೆಚ್ಡಿಕೆ ತಿರುಗೇಟು ನೀಡಿದ್ದಾರೆ. 

ಕಾಂಗ್ರೆಸ್’ನವರು ಜೆಡಿಎಸ್’ಗೆ ಮತ ನೀಡಿದ್ರೆ ಬಿಜೆಪಿ ಬರುತ್ತೆ ಅಂತಾರೆ.  ಮೋದಿ ಅವರು ಜೆಡಿಎಸ್ ಗೆ ಮತ ನೀಡಿದರೆ ಕಾಂಗ್ರೆಸ್ ಬರುತ್ತೆ ಅಂತಾರೆ.  ಇವರಿಬ್ಬರೇ ಚುನಾವಣೆ ನಿರ್ಧಾರ ಮಾಡಿಕೊಂಡ ಹಾಗೆ ಕಾಣುತ್ತೆ ಎಂದಿದ್ದಾರೆ. 
ಒಬ್ಬ ಪ್ರಧಾನಿಯಾಗಿ ರಾಜ್ಯದ ಸಮಸ್ಯೆ ಬಗ್ಗೆ ಚರ್ಚಿಸುವುದನ್ನು  ಬಿಟ್ಟು ಜೆಡಿಎಸ್ ಬಗ್ಗೆ ಇವರು ಅಭಿಪ್ರಾಯ ಕೊಡುವುದಕ್ಕೆ  ದೆಹಲಿಯಿಂದ ಇಲ್ಲಿಗೆ ಬರಬೇಕಾಯಿತಾ? ಕಳೆದ 4 ವರ್ಷದ ಅಧಿಕಾರಾವಧಿಯಲ್ಲಿ ರಾಜ್ಯದ ಅಭಿವೃದ್ಧಿಗೆ ಮೋದಿ ರಾಜ್ಯದ ಜನರ‌ ಬಳಿ ಮತ ಕೇಳುವ ನೈತಿಕತೆ ಉಳಿಸಿಕೊಂಡಿಲ್ಲ.  ಉಗ್ರವಾದಿಗಳನ್ನು ರಾಜ್ಯಕ್ಕೆ ಕರೆ ತಂದು ಪ್ರಚಾರ ನಡೆಸಿದ್ದಾರೆಂದು ಆರೋಪಿಸುವ ಮೋದಿ ಅಮಿತ್ ಶಾ, ಯೋಗಿ ಆದಿತ್ಯನಾಥ್ ಹಾಗೂ ಮೋದಿ ಈ ಮೂವರಿಂದ  ಏನ್ ಕೊಡುಗೆ ಇದೆ ಎಂದು ಪ್ರಶ್ನಿಸಿದ್ದಾರೆ. 

ನೀವು ಹೊರ ರಾಜ್ಯಗಳಿಂದ ಬಂದು ಪ್ರಚಾರ ನಡೆಸಿದ್ದೀರಿ. ಭಾಷಣದಲ್ಲಿ ರಾಜ್ಯದ ಮಹಾನುಭಾವರ ಹೆಸರು ಹೇಳಿದಾಕ್ಷಣ ಜನ ಮರಳಾಗುವುದಿಲ್ಲ. ಅವರ ಹೆಸರು ಹೇಳುವ ನೀವು ಆಯಾ ಜಿಲ್ಲೆಗಳ ಸಮಸ್ಯೆಗೆ ನಿಮ್ಮ ಸರ್ಕಾರ ಯಾವ ನೆರವಿಗೆ ಬಂದಿದೆ? ಕಲ್ಬುರ್ಗಿ ತೊಗರಿ ರೈತರ ಬಗ್ಗೆ ಏನ್ ಕೊಟ್ಟಿದ್ದೀರಿ ಅದನ್ನು ಮೊದಲು ತಿಳಿಸಿ. ನಿಮ್ಮ ಡ್ರಾಮಾ ಕರ್ನಾಟಕ ಜನತೆ ಮುಂದೆ ನಡೆಯುವುದಿಲ್ಲ.  ಒಮ್ಮೆ ಜೆಡಿಎಸ್ ವಿರುದ್ಧ ಮಾತನಾಡಿ, ಇನ್ನೊಮ್ಮೆ  ಹೊಗಳಿ ಮಾತನಾಡುವುದರಿಂದ ಜನರ ಹಾದಿ ತಪ್ಪಿಸಲು ನಿಮ್ಮಿಂದ ಹಾಗೂ ಕಾಂಗ್ರೆಸ್’ನಿಂದಲೂ ಸಾಧ್ಯವಿಲ್ಲ.  ರಾಜ್ಯದ ಜನ ದಡ್ಡರಲ್ಲ. ಪ್ರತಿಯೊಂದನ್ನು ಯೋಚನೆ ಮಾಡ್ತಿದ್ದಾರೆ. ರಾಜ್ಯದ ಜನ ತಕ್ಕ ಉತ್ತರ ನೀಡುತ್ತಾರೆ ಎಂದು ಎಚ್’ಡಿಕೆ ಹೇಳಿದ್ದಾರೆ.