ಬೆಂಗಳೂರು (ಮೇ 15) :  ಕುತೂಹಲಕಾರಿ ಸಂಗತಿಯೆಂದರೆ, ನಗರಕ್ಕೆ ಆಗಮಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಸೋಮವಾರ ದೇವೇಗೌಡರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ. ಅತಂತ್ರ ವಿಧಾನಸಭೆ ಸೃಷ್ಟಿ ಸಾಧ್ಯತೆ ಹಿನ್ನೆಲೆಯಲ್ಲಿ ಈ ಮಾತುಕತೆಗೆ ಮಹತ್ವ ಬಂದಿದೆ. ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಮೈತ್ರಿ ಗೆ ಕಾಂಗ್ರೆಸ್ ಮೊದಲ ಹೆಜ್ಜೆ ಇಡುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಈ ಮಾತುಕತೆಗೆ ಮಹತ್ವ ಬಂದಿದೆ ಎನ್ನಲಾಗಿದೆ.

ಕರ್ನಾಟಕ ವಿಧಾನಸಭೆಯ ಫಲಿತಾಂಶ ಇಂದು ಪ್ರಕಟಗೊಳ್ಳಲಿರುವ ಹಿನ್ನೆಲೆಯಲ್ಲಿ ಎಂತಹುದೇ ಪರಿಸ್ಥಿತಿ ನಿರ್ಮಾಣವಾದರೂ ತಕ್ಷಣ ಸ್ಪಂದಿಸಲು ಅನುವಾಗುವಂತೆ ಹೈಕಮಾಂಡ್ ಹಿರಿಯ ಮುಖಂಡರಾದ ಗುಲಾಂ ನಬಿ ಆಜಾದ್, ಅಶೋಕ್ ಗೆಹ್ಲೋಟ್ ಮತ್ತು ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರನ್ನು ಬೆಂಗಳೂರಿಗೆ ಕಳುಹಿಸಿಕೊಟ್ಟಿದೆ. 

ಸೋಮವಾರ ಬೆಳಗ್ಗೆಯೇ ನಗರಕ್ಕೆ ಆಗಮಿಸಿದ ಗುಲಾಂ ನಬಿ ಆಜಾದ್ ಅವರು ಸ್ಥಳೀಯ ಕಾಂಗ್ರೆಸ್ ನಾಯಕರೊಂದಿಗೆ ಫಲಿತಾಂಶದ ಸ್ವರೂಪದ ಬಗ್ಗೆ ಚರ್ಚೆ ನಡೆಸಿದರು. ಮಧ್ಯಾಹ್ನದ ನಂತರ ನಗರಕ್ಕೆ ಆಗಮಿಸಿದ ವೇಣುಗೋಪಾಲ್ ಹಾಗೂ ಅಶೋಕ್ ಗೆಹ್ಲೋಟ್ ಅವರು ನಗರದ ಖಾಸಗಿ ಹೊಟೇಲ್‌ವೊಂದರಲ್ಲಿ ಗುಲಾಂ ನಬಿ ಆಜಾದ್ ಅವರೊಂದಿಗೆ ಸಮಾಲೋಚನೆ ನಡೆಸಿದರು.