ಕೃಷಿ ವಿಜ್ಞಾನಿ ಈಗ ಉಪ ಮುಖ್ಯಮಂತ್ರಿ

First Published 23, May 2018, 9:38 AM IST
G Parameshwar Will Take Oath As DCM Today
Highlights

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಹುದ್ದೆಗೇರಲಿರುವ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಅವರು ಈ ಹುದ್ದೆಗೇರಿದ ರಾಜ್ಯದ ಎಂಟನೇ ರಾಜಕಾರಣಿ ಎನಿಸಲಿದ್ದಾರೆ. ಕರ್ನಾಟಕದಲ್ಲಿ ಇದುವರೆಗೂ ಎಂಟು ಬಾರಿ ಡಿಸಿಎಂ ಹುದ್ದೆ ಸೃಷ್ಟಿಯಾಗಿದೆ. 
 

ಬೆಂಗಳೂರು :  ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಹುದ್ದೆಗೇರಲಿರುವ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಅವರು ಈ ಹುದ್ದೆಗೇರಿದ ರಾಜ್ಯದ ಎಂಟನೇ ರಾಜಕಾರಣಿ ಎನಿಸಲಿದ್ದಾರೆ. ಕರ್ನಾಟಕದಲ್ಲಿ ಇದುವರೆಗೂ ಎಂಟು ಬಾರಿ ಡಿಸಿಎಂ ಹುದ್ದೆ ಸೃಷ್ಟಿಯಾಗಿದೆ. 

ಈ ಬಾರಿಯದ್ದು ಒಂಬತ್ತನೇ ಡಿಸಿಎಂ ಹುದ್ದೆ. ಈ ಹುದ್ದೆಯನ್ನು ಇದುವರೆಗೂ ನಿರ್ವಹಿಸಿರುವವರು ಏಳು ಮಂದಿ. ಏಕೆಂದರೆ, ಸಿದ್ದರಾಮಯ್ಯ ಅವರ ಎರಡು ಬಾರಿ ಡಿಸಿಎಂ ಹುದ್ದೆ ಪಡೆದಿದ್ದರು. ಹೀಗಾಗಿ ಪರಮೇಶ್ವರ್‌ ಈ ಹುದ್ದೆ ಗಿಟ್ಟಿಸಿದ ಎಂಟನೇ ರಾಜಕಾರಣಿ ಹಾಗೂ 9ನೇ ಡಿಸಿಎಂ. ಎಸ್‌.ಎಂ. ಕೃಷ್ಣ ಅವರು ಡಿಸಿಎಂ ಹುದ್ದೆಗೇರಿದ ರಾಜ್ಯದ ಮೊದಲ ರಾಜಕಾರಣಿ. ನಂತರ ಜೆ.ಎಚ್‌. ಪಟೇಲ್‌, ಸಿದ್ದರಾಮಯ್ಯ, ಎಂ.ಪಿ. ಪ್ರಕಾಶ್‌, ಯಡಿಯೂರಪ್ಪ, ಅಶೋಕ್‌, ಈಶ್ವರಪ್ಪ ಅವರು ಉಪಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.

ಕಾಂಗ್ರೆಸ್‌ನ ಎಂ.ವೀರಪ್ಪ ಮೊಯ್ಲಿ ಸರ್ಕಾರದಲ್ಲಿ ಮೊದಲ ಬಾರಿಗೆ ಉಪ ಮುಖ್ಯಮಂತ್ರಿ ಹುದ್ದೆ ರಾಜ್ಯದಲ್ಲಿ ಸೃಷ್ಟಿಯಾಗಿತ್ತು. ಆಗ ಎಸ್‌.ಎಂ.ಕೃಷ್ಣ ಉಪ ಮುಖ್ಯಮಂತ್ರಿಯಾಗಿದ್ದರು. ಅನಂತರ ಉಪ ಮುಖ್ಯಮಂತ್ರಿ ಸೃಷ್ಟಿಯಾಗಿದ್ದು ಜನತಾದಳದ ಎಚ್‌.ಡಿ. ದೇವೇಗೌಡ ನೇತೃತ್ವದ ಸರ್ಕಾರದಲ್ಲಿ. ಆಗ ಜೆ.ಎಚ್‌. ಪಟೇಲ್‌ ಡಿಸಿಎಂ ಆಗಿದ್ದರು. ನಂತರ ಪಟೇಲರು ಸಿಎಂ ಆದಾಗ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು.

2004ರಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಧರ್ಮಸಿಂಗ್‌ ಮುಖ್ಯಮಂತ್ರಿಯಾಗಿದ್ದರೆ, ಸಿದ್ದರಾಮಯ್ಯ ಮತ್ತು ಎಂ.ಪಿ.ಪ್ರಕಾಶ್‌ ಉಪ ಮುಖ್ಯಮಂತ್ರಿಯಾಗಿದ್ದರು. ನಂತರ ಬಿಜೆಪಿ-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಬಿ.ಎಸ್‌.ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿದ್ದರು. ಬಳಿಕ ಬಿಜೆಪಿಯ ಜಗದೀಶ್‌ ಶೆಟ್ಟರ್‌ ನೇತೃತ್ವದ ಸರ್ಕಾರದಲ್ಲಿ ಆರ್‌.ಅಶೋಕ್‌ ಮತ್ತು ಕೆ.ಎಸ್‌.ಈಶ್ವರಪ್ಪ ಉಪ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದರು.

loader