ಅನುಕಂಪದ ಅಲೆಯ ಮೇಲೆ ಪರಂ ಕಣ್ಣು

G Parameshwar Contest Election
Highlights

ಕಳೆದ ಬಾರಿ ಮುಖ್ಯಮಂತ್ರಿ ರೇಸ್‌ನಲ್ಲಿದ್ದರೂ ಅನಿರೀಕ್ಷಿತವಾಗಿ ಕೊರಟಗೆರೆಯಲ್ಲಿ ಸೋಲು ಕಂಡ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಅವರು ಈ ಬಾರಿ ಅನುಕಂಪದ ಅಲೆಯನ್ನು ನಂಬಿಕೊಂಡು ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಆದರೆ, ಅವರ ಪಾಲಿಗೆ ಗೆಲುವು ಮಾತ್ರ ಸುಲಭದ ತುತ್ತಾಗಿಲ್ಲ.

ಉಗಮ ಶ್ರೀನಿವಾಸ್‌

ತುಮಕೂರು :  ಕಳೆದ ಬಾರಿ ಮುಖ್ಯಮಂತ್ರಿ ರೇಸ್‌ನಲ್ಲಿದ್ದರೂ ಅನಿರೀಕ್ಷಿತವಾಗಿ ಕೊರಟಗೆರೆಯಲ್ಲಿ ಸೋಲು ಕಂಡ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಅವರು ಈ ಬಾರಿ ಅನುಕಂಪದ ಅಲೆಯನ್ನು ನಂಬಿಕೊಂಡು ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಆದರೆ, ಅವರ ಪಾಲಿಗೆ ಗೆಲುವು ಮಾತ್ರ ಸುಲಭದ ತುತ್ತಾಗಿಲ್ಲ.

ಈ ವಿಷಯ ಸ್ವತಃ ಪರಮೇಶ್ವರ್‌ಗೂ ಗೊತ್ತಿರುವುದರಿಂದ ಕಳೆದ 4 ತಿಂಗಳಿನಿಂದ ಕ್ಷೇತ್ರದಲ್ಲೇ ಬೀಡು ಬಿಟ್ಟು, ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಮತದಾರರ ಎದುರು ಭಾವುಕರಾಗಿ, ಮಹಿಳಾ ಸಮಾವೇಶಗಳನ್ನೂ ನಡೆಸುವ ಜೊತೆಗೆ ಮುಖ್ಯಮಂತ್ರಿಗಳನ್ನು ಕರೆ ತಂದು ಪ್ರಚಾರ ಕೂಡ ಮಾಡಿಸಿದ್ದಾರೆ.

ಕೊರಟಗೆರೆ ತಾಲೂಕಿನ ಕೋಳಾಲ, ಹೊಳವನಹಳ್ಳಿ, ಚನ್ನರಾಯನದುರ್ಗ ಹಾಗೂ ತೋವಿನಕೆರೆ ಹೋಬಳಿ, ತುಮಕೂರು ತಾಲೂಕಿನ ಕೋರಾ ಹಾಗೂ ಮಧುಗಿರಿ ತಾಲೂಕಿನ ಪುರವರ ಹೋಬಳಿಗಳನ್ನೊಳಗೊಂಡ ಕೊರಟಗೆರೆ ಮೀಸಲು ಕ್ಷೇತ್ರದಲ್ಲಿ 1,97,844 ಮತದಾರರಿದ್ದಾರೆ. ಈ ಪೈಕಿ ಶೇ. 30ರಷ್ಟುಅಂದರೆ 60 ಸಾವಿರ ಪರಿಶಿಷ್ಟಜಾತಿ ಮತಗಳಿವೆ. ತಲಾ ಶೇ.15ರಷ್ಟುಅಂದರೆ 30 ಸಾವಿರ ಲಿಂಗಾಯತ ಹಾಗೂ 30 ಸಾವಿರ ಒಕ್ಕಲಿಗ ಮತಗಳಿವೆ. 19 ಸಾವಿರದಷ್ಟುಕುರುಬರು, 15 ಸಾವಿರದಷ್ಟುಗೊಲ್ಲರು ಹಾಗೂ 12 ಸಾವಿರದಷ್ಟುಮುಸ್ಲಿಂ ಮತದಾರರನ್ನು ಈ ಕ್ಷೇತ್ರ ಒಳಗೊಂಡಿದೆ.

ಎಲ್ಲ ಕ್ಷೇತ್ರಗಳಲ್ಲೂ ಪ್ರಮುಖವಾಗಿರುವಂತೆ ಇಲ್ಲೂ ಜಾತಿ ಪ್ರಾಬಲ್ಯವೇ ಮೇಲುಗೈ ಸಾಧಿಸಲಿದೆ. 60 ಸಾವಿರ ಪರಿಶಿಷ್ಟಜಾತಿ ಮತದಾರರ ಪೈಕಿ ಅತಿ ಹೆಚ್ಚು ಪರಿಶಿಷ್ಟರಲ್ಲೇ ಎಡಗೈ ಸಮುದಾಯ (ಮಾದಿಗರು) ಇದ್ದಾರೆ. ಇನ್ನು ಬಲಗೈ ಸಮುದಾಯದವರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಜಾತಿ ಲೆಕ್ಕಾಚಾರಕ್ಕೆ ಬಂದರೆ ಪರಮೇಶ್ವರ್‌ ಅವರು ಬಲಗೈ ಸಮುದಾಯಕ್ಕೆ ಸೇರಿದವರು. ಹೀಗಾಗಿ, ಕ್ಷೇತ್ರದಲ್ಲಿ ಅವರ ಸಮುದಾಯದವರ ಸಂಖ್ಯೆ ಕಡಿಮೆ. ಆದರೆ, ಬಿಜೆಪಿಯಿಂದ ಸ್ಪರ್ಧಿಸಿರುವ ವೈ.ಹೆಚ್‌. ಹುಚ್ಚಯ್ಯ ಅವರು ಎಡಗೈ ಸಮುದಾಯಕ್ಕೆ ಸೇರಿದ್ದು, ಅವರ ಸಮುದಾಯದ ಮತಗಳು ನಿರ್ಣಾಯಕವಾಗಲಿವೆ.

ಕಳೆದ ಬಾರಿ ಪರಮೇಶ್ವರ್‌ ಅವರನ್ನು ಸೋಲಿಸಿದ್ದರಿಂದ ಕ್ಷೇತ್ರದ ಶಾಸಕರೊಬ್ಬರು ಸಿಎಂ ಆಗುವುದನ್ನು ತಪ್ಪಿಸಿದ್ದೇವೆ ಎಂಬ ಪಶ್ಚಾತ್ತಾಪ ಕ್ಷೇತ್ರದ ಮತದಾರರಲ್ಲಿದೆ. ಹೀಗಾಗಿ, ಪರಮೇಶ್ವರ್‌ ಅವರು ಅನುಕಂಪದ ಮತಗಳನ್ನು ನೆಚ್ಚಿಕೊಂಡಿದ್ದಾರೆ. ಆದರೆ, ಪರಿಶಿಷ್ಟರಲ್ಲಿ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ಪರಮೇಶ್ವರ್‌ ಅವರು ಒಳಮೀಸಲಾತಿ ವಿರೋಧಿ ಎಂಬ ಆರೋಪಗಳಿದ್ದು, ಎಡಗೈ ಸಮುದಾಯದವರು ಪರಮೇಶ್ವರ್‌ ಅವರ ವಿರುದ್ಧ ಸಿಟ್ಟಾಗಿದ್ದಾರೆ. ಹೀಗಾಗಿ, ಬಹುಸಂಖ್ಯಾತ ಎಡಗೈ(ಮಾದಿಗ) ಮತಗಳನ್ನು ಪಡೆಯಲು ಪರಮೇಶ್ವರ್‌ ಅವರು ಕಸರತ್ತು ಮಾಡಬೇಕಿದೆ. ಅಲ್ಲದೆ, ಒಳ ಮೀಸಲಾತಿ ಕಲ್ಪಿಸುವ ಸಂಬಂಧ ಸರ್ಕಾರ ದೃಢ ನಿರ್ಧಾರ ಕೈಗೊಳ್ಳಲಿಲ್ಲ ಎಂಬ ಸಿಟ್ಟು ಮಾದಿಗ ಸಮುದಾಯದಲ್ಲಿದೆ. ಎಲ್ಲಕ್ಕೂ ಮಿಗಿಲಾಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮಾದಿಗ ಸಮುದಾಯದವರಿದ್ದರೂ ಎರಡೂ ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನವರು ಮಾದಿಗ ಸಮುದಾಯದವರಿಗೆ ಟಿಕೆಟ್‌ ನೀಡಿಲ್ಲ ಎಂಬ ಆಕ್ರೋಶ ಎಡಗೈ ಸಮುದಾಯದಲ್ಲಿದೆ. ಇದು ಪರಮೇಶ್ವರ್‌ ಅವರ ಹಿನ್ನಡೆಗೆ ಸ್ವಲ್ಪಮಟ್ಟಿಗೆ ಕಾರಣವಾಗಿದೆ.

ಮೂರು ಬಾರಿ ಕೊರಟಗೆರೆ ಜಿ.ಪಂ. ಸದಸ್ಯರಾಗಿ ಕಳೆದ ಬಾರಿ ಶಾಸಕರೂ ಆಗಿದ್ದ ಸುಧಾಕರ್‌ಲಾಲ್‌ ಅವರು 30 ಸಾವಿರ ಒಕ್ಕಲಿಗ ಮತಗಳನ್ನು ನಂಬಿಕೊಂಡಿದ್ದಾರೆ. ಕಳೆದ ಬಾರಿ ಕೆಜೆಪಿ, ಬಿಜೆಪಿ ಒಡಕಿನ ಲಾಭ ಜೆಡಿಎಸ್‌ಗೆ ಆಗಿತ್ತು. ಸ್ಥಳೀಯರು ಮತ್ತು ಸುಲಭವಾಗಿ ಕೈಗೆ ಸಿಗುತ್ತಾರೆ ಎಂಬ ಕಾರಣಕ್ಕೆ ಮತದಾರರು ಜೆಡಿಎಸ್‌ನ ಸುಧಾಕರ ಲಾಲ್‌ ಅವರಿಗೆ ಮಣೆ ಹಾಕಿದ್ದರು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದ್ದರಿಂದ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಕೆಲಸ ಮಾಡಲು ಆಗಲಿಲ್ಲ. ಇದು ಅವರಿಗೆ ಸ್ವಲ್ಪ ತೊಂದರೆ ಮಾಡಲಿದೆ. ಇನ್ನು ಬಿಜೆಪಿಯಿಂದ ಸ್ಪರ್ಧಿಸಿರುವ ಜಿ.ಪಂ. ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ವೈ.ಹೆಚ್‌. ಹುಚ್ಚಯ್ಯ ಅವರು 3 ವರ್ಷಗಳ ಹಿಂದೆ ಜೆಡಿಎಸ್‌ ತೊರೆದು ಬಿಜೆಪಿಗೆ ಬಂದಾಗ ಅವರಿಗೆ ಕೊರಟಗೆರೆ ಮೀಸಲು ಕ್ಷೇತ್ರದಲ್ಲಿ ಟಿಕೆಟ್‌ ನೀಡುವ ಭರವಸೆ ನೀಡಲಾಗಿತ್ತು. ಅದರಂತೆ ಈಗ ಟಿಕೆಟ್‌ ನೀಡಿದ್ದು, ಪ್ರಚಾರದಲ್ಲಿ ತೊಡಗಿದ್ದಾರೆ.

ಇನ್ನು ಪರಮೇಶ್ವರ್‌ ಅವರು ಕೂಡ ಸುಮ್ಮನೆ ಕುಳಿತಿಲ್ಲ. ಮಾದಿಗ ಸಮುದಾಯದ ಬೆಳಗುಂಬ ನಾರಾಯಣಮೂರ್ತಿ ಇವರ ಬೆನ್ನಿಗೆ ನಿಂತಿದ್ದಾರೆ. ಇದಲ್ಲದೆ ಬಿಜೆಪಿಯಲ್ಲಿದ್ದ ಮಾದಿಗ ಸಮುದಾಯದ ವಾಲೆ ಚಂದ್ರಯ್ಯ ಅವರನ್ನೂ ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡಿದ್ದಾರೆ. ನಾರಾಯಣಮೂರ್ತಿ ಹಾಲಿ ಜಿ.ಪಂ. ಸದಸ್ಯರಾಗಿದ್ದು, ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದಾರೆ. ಈ ಮೂಲಕ ಪರಮೇಶ್ವರ್‌ ಮಾದಿಗ ಸಮುದಾಯದ ಮತಗಳನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಇದರ ಜೊತೆಗೆ ಹಿಂದುಳಿದ ವರ್ಗಗಳಾದ ಗೊಲ್ಲ, ಕುರುಬ ಹಾಗೂ ಅಲ್ಪಸಂಖ್ಯಾತ ಮತಗಳ ಮೇಲೆ ಕಣ್ಣಿಟ್ಟಿದ್ದು ಚುನಾವಣಾ ತಂತ್ರ ರೂಪಿಸುತ್ತಿದ್ದಾರೆ. ಕೆಲಕಾಲ ರಾಜ್ಯದ ಗೃಹ ಸಚಿವರಾಗಿದ್ದ ಪರಮೇಶ್ವರ್‌ ಅವರು ಕೊರಟಗೆರೆಗೆ ಪೊಲೀಸ್‌ ತರಬೇತಿ ಕೇಂದ್ರವನ್ನೂ ಮಂಜೂರು ಮಾಡಿಸಿದ್ದರು. ಕಳೆದ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಇರುವುದಿಲ್ಲ ಎಂಬ ಗುರುತರ ಆರೋಪವನ್ನು ಹೊತ್ತಿದ್ದ ಪರಮೇಶ್ವರ್‌ ಈ ಬಾರಿ ಕ್ಷೇತ್ರದಲ್ಲೇ ಬೀಡು ಬಿಟ್ಟಿದ್ದಾರೆ. ತಮ್ಮನ್ನು ಸೋಲಿಸಿದರು ಎಂಬ ಕಾರಣಕ್ಕೆ ಕ್ಷೇತ್ರದ ಮತದಾರರ ಮೇಲೆ ಮುನಿಸಿಕೊಂಡಿದ್ದ ಪರಮೇಶ್ವರ್‌ಗೆ ಅದೇ ಕ್ಷೇತ್ರದ ಮತದಾರರು ಮತ್ತೆ ಕೊರಟಗೆರೆಯಲ್ಲಿ ಸ್ಪರ್ಧಿಸುವಂತೆ ಕೋರಿದ್ದರು.

2013ರ ಚುನಾವಣೆಯಲ್ಲಿ ಭರ್ತಿ 19 ಸಾವಿರ ಮತಗಳ ಅಂತರದಿಂದ ಪರಮೇಶ್ವರ್‌ ಪರಾಭವಗೊಂಡಿದ್ದರು. ಅನುಕಂಪದ ಮತಗಳ ಜೊತೆಗೆ ಅಹಿಂದ ವರ್ಗಗಳ ಮತಗಳು ಮತ್ತು ಲಿಂಗಾಯತ, ಒಕ್ಕಲಿಗ ಮತಗಳ ಓಟ್‌ ಬ್ಯಾಂಕ್‌ ಮೇಲೆ ಕಣ್ಣಿಟ್ಟಿರುವ ಪರಮೇಶ್ವರ್‌ ಅವರಿಗೆ ಜೆಡಿಎಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳು ಭಾರಿ ಸ್ಪರ್ಧೆ ಒಡ್ಡುತ್ತಿದ್ದಾರೆ.


ಜಾತಿ ಲೆಕ್ಕಾಚಾರ

ಪರಿಶಿಷ್ಟಜಾತಿ- 60 ಸಾವಿರ

ಲಿಂಗಾಯತ- 30 ಸಾವಿರ

ಒಕ್ಕಲಿಗ- 30 ಸಾವಿರ

ಕುರುಬ- 19 ಸಾವಿರ

ಗೊಲ್ಲ- 15 ಸಾವಿರ

ಮುಸ್ಲಿಂ- 12 ಸಾವಿರ

ಕಳೆದ ಬಾರಿ ಪಡೆದಿದ್ದ ಮತಗಳು

ಅಭ್ಯರ್ಥಿ ಪಕ್ಷ ಮತ

ಸುಧಾಕರಲಾಲ್‌ ಜೆಡಿಎಸ್‌ 72229

ಡಾ ಜಿ. ಪರಮೇಶ್ವರ್‌ ಕಾಂಗ್ರೆಸ್‌ 54074

ವಾಲೆ ಚಂದ್ರಯ್ಯ ಕೆಜೆಪಿ 15738

ಪೆದ್ದರಾಜು ಬಿಜೆಪಿ 3088

loader