ಚುನಾವಣೆ ಕಣಕ್ಕೆ ಇಳಿದ ನಟರ ಸಿನಿಮಾ, ಧಾರಾವಾಹಿಗೆ ಬ್ರೇಕ್‌

Election Code Of Conduct Apply On Actors Shows
Highlights

ಚುನಾವಣಾ ಕಣಕ್ಕಿಳಿದಿರುವ ಚಲನಚಿತ್ರರಂಗದ ಅಭ್ಯರ್ಥಿಗಳು ಅಭಿನಯಿಸಿರುವ ಚಲನಚಿತ್ರಗಳು ಮತ್ತು ಅವರು ನಡೆಸಿಕೊಡುತ್ತಿರುವ ರಿಯಾಲಿಟಿ ಶೋಗಳನ್ನು ಮಾಧ್ಯಮಗಳು ಪ್ರಸಾರ ಮಾಡಬಾರದು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಹೇಳಿದ್ದಾರೆ.

ಬೆಂಗಳೂರು :  ಚುನಾವಣಾ ಕಣಕ್ಕಿಳಿದಿರುವ ಚಲನಚಿತ್ರರಂಗದ ಅಭ್ಯರ್ಥಿಗಳು ಅಭಿನಯಿಸಿರುವ ಚಲನಚಿತ್ರಗಳು ಮತ್ತು ಅವರು ನಡೆಸಿಕೊಡುತ್ತಿರುವ ರಿಯಾಲಿಟಿ ಶೋಗಳನ್ನು ಮಾಧ್ಯಮಗಳು ಪ್ರಸಾರ ಮಾಡಬಾರದು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಹೇಳಿದ್ದಾರೆ.

ಶನಿವಾರ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ‘ಚುನಾವಣೆಗೆ ಸ್ಪರ್ಧಿಸಿರುವ ಚಿತ್ರರಂಗಕ್ಕೆ ಸೇರಿದ ವ್ಯಕ್ತಿಗಳು ಅಭಿನಯಿಸಿರುವ ಚಲನಚಿತ್ರಗಳು ಮತ್ತು ಅವರು ನಡೆಸಿಕೊಡುತ್ತಿರುವ ರಿಯಾಲಿಟಿ ಶೋಗಳನ್ನು ಮಾಧ್ಯಮಗಳು ಪ್ರಸಾರ ಮಾಡಬಾರದು. ಪ್ರಸಾರ ಮಾಡಿದರೆ ಪರಿಶೀಲಿಸಿ ಕಾನೂನು ರೀತ್ಯ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

ಇದರಿಂದಾಗಿ ಜಗ್ಗೇಶ್‌, ಉಮಾಶ್ರೀ, ಶಶಿಕುಮಾರ್‌, ಸಾಯಿಕುಮಾರ್‌, ಬಿ.ಸಿ. ಪಾಟೀಲ, ಹುಚ್ಚ ವೆಂಕಟ್‌ ಹಾಗೂ ನೆ.ಲ. ನರೇಂದ್ರಬಾಬು ಸೇರಿದಂತೆ ಕೆಲವು ನಟರ ಚಿತ್ರಗಳು/ಧಾರಾವಾಹಿಗಳಿಗೆ ಬ್ರೇಕ್‌ ಬೀಳುವ ಸಾಧ್ಯತೆ ಇದೆ.


ಜಗ್ಗೇಶ್‌ ಸಿನಿಮಾ, ಶೋ ನಿರ್ಬಂಧಿಸಿ:

ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಟ ಜಗ್ಗೇಶ್‌ ಅಭಿನಯದ ಎಲ್ಲಾ ಚಲನಚಿತ್ರಗಳು ಹಾಗೂ ಅವರು ನಡೆಸಿಕೊಡುತ್ತಿರುವ ರಿಯಾಲಿಟಿ ಶೋಗಳ ಪ್ರಸಾರಕ್ಕೆ ಚುನಾವಣೆ ಮುಗಿಯುವವರೆಗೆ ನಿರ್ಬಂಧ ವಿಧಿಸಬೇಕು ಎಂದು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಟಿ.ಸೋಮಶೇಖರ್‌ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಅವರಿಗೆ ಮನವಿ ಸಲ್ಲಿಸಿರುವ ಅವರು, ಜಗ್ಗೇಶ್‌ ಚಲನಚಿತ್ರ ನಟರಾಗಿದ್ದು, ‘ಅನೇಕ ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ. ಜತೆಗೆ ವಿವಿಧ ಖಾಸಗಿ ವಾಹಿನಿಗಳಲ್ಲಿ ಹಲವು ರಿಯಾಲಿಟಿ ಶೋಗಳನ್ನು ನಡೆಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ಜಗ್ಗೇಶ್‌ ಅವರು ಬಿಜೆಪಿ ಅಭ್ಯರ್ಥಿಯಾಗಿರುವುದರಿಂದ ಅವರ ಅಭಿಯನದ ಚಲನಚಿತ್ರಗಳು ಹಾಗೂ ರಿಯಾಲಿಟಿ ಶೋಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದರಿಂದ ಚುನಾವಣೆ ವೇಳೆ ಮತದಾರರ ಮೇಲೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪ್ರಭಾವ ಬೀರಲಿದೆ. ಹಾಗಾಗಿ ಇದು ಚುನಾವಣಾ ನೀತಿ ಸಂಹಿತೆಗೆ ವಿರುದ್ಧವಾಗಿದೆ. ಹಾಗಾಗಿ ಅವರ ಅಭಿಯನದ ಚಲನಚಿತ್ರಗಳು ಹಾಗೂ ರಿಯಾಲಿಟಿ ಶೋಗಳನ್ನು ಚುನಾವಣೆ ಮುಗಿಯುವವರೆಗೆ ದೂರದರ್ಶನ, ಖಾಸಗಿ ವಾಹಿನಿಗಳು, ಸ್ಥಳೀಯ ಕೇಬಲ್‌ ನೆಟ್‌ವರ್ಕ್ಗಳು ಸೇರಿದಂತೆ ಯಾವುದೇ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಬೇಕು’ ಎಂದು ಮನವಿ ಮಾಡಿದ್ದಾರೆ.
ಕಣದಲ್ಲಿರುವ ನಟರು

ಜಗ್ಗೇಶ್‌ (ಯಶವಂತಪುರ), ಬಿ.ಸಿ. ಪಾಟೀಲ (ಹಿರೇಕೆರೂರು), ಉಮಾಶ್ರೀ (ತೇರದಾಳ), ಹುಚ್ಚ ವೆಂಕಟ್‌ (ರಾಜರಾಜೇಶ್ವರಿನಗರ), ಸಾಯಿಕುಮಾರ್‌ (ಬಾಗೇಪಲ್ಲಿ), ನೆ.ಲ. ನರೇಂದ್ರಬಾಬು (ಮಹಾಲಕ್ಷ್ಮಿ  ಲೇ ಔಟ್‌)

loader