ಬೆಂಗಳೂರು: ಕಾಂಗ್ರೆಸ್ ಪಕ್ಷದ ಯಾವ ಶಾಸಕರೂ ಮಾರಾಟಕ್ಕಿಲ್ಲ. ಒಂದು ವೇಳೆ ಬಿಜೆಪಿಯು ಭಂಡತನದಿಂದ ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿದರೆ ಪ್ರತ್ಯುತ್ತರ ನೀಡಲು ಸಿದ್ಧವಿದ್ದೇವೆ. ಕಾಂಗ್ರೆಸ್ ಶಾಸಕರನ್ನು ಮುಟ್ಟಲಿ ನೋಡೋಣ ಎಂದು ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಸವಾಲು ಹಾಕಿದರು.

ನನ್ನ ಮೇಲೆ ಕಣ್ಣಿಟ್ಟಿದ್ದಾರೆ ಎಂಬುದು ನನಗೆ ಗೊತ್ತಿದೆ. ಆದರೆ, ಅದಕ್ಕೆ ನಾನು ಜಗ್ಗುವುದಿಲ್ಲ. ಜೈಲಿಗೆ ಹಾಕಿದರೂ ಸರಿ ಚಿಂತೆ  ಮಾಡುವುದಿಲ್ಲ. ಕಾಂಗ್ರೆಸ್‌ನ ಯಾವೊಬ್ಬ ಶಾಸಕರನ್ನೂ ಕದ್ದೊಯ್ಯಲು ನಾವು ಬಿಡುವುದಿಲ್ಲ ಎಂದು ಅವರು ಹೇಳಿದರು.ಜೆಡಿಎಸ್ ಹಾಗೂ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತವಿದೆ. ನಮ್ಮ ಬಹುಮತ ಸಾಬೀತುಪಡಿಸಲು ನಾವು ಸಿದ್ಧವಿದ್ದೇವೆ. 

ಆದರೂ, ಕಾನೂನು ಬಾಹಿರವಾಗಿ  ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಬಿಜೆಪಿಯವರು ಕುದುರೆ ವ್ಯಾಪಾರಕ್ಕೆ ಇಳಿಯುವ ಬಗ್ಗೆಯೂ ಮಾಹಿತಿ ಇದೆ. ಅವರ ಜತೆ ಯಾರು ಪರ್ಕದಲ್ಲಿದ್ದಾರೋ ಗೊತ್ತಿಲ್ಲ. ಕಾಂಗ್ರೆಸ್ ಶಾಸಕರನ್ನು ಮುಟ್ಟಿ ನೋಡೋಣ. ಬಿಜೆಪಿ ಶಾಸಕರು ನಮ್ಮ ಜತೆಯೂ ಸಂಪರ್ಕದಲ್ಲಿದ್ದಾರೆ. ನಾವೂ ಸಹ ರಾಜಕೀಯವಾಗಿಯೇ ಪ್ರತ್ಯುತ್ತರ ನೀಡುತ್ತೇವೆ ಎಂದರು. 

ಯಡಿಯೂರಪ್ಪ ತರಾತುರಿ ಯಲ್ಲಿದ್ದಾರೆ. ರಾಮನಗರದಲ್ಲಿ ರೆಸಾರ್ಟ್‌ಗೆ ಪೊಲೀಸ್ ಭದ್ರತೆ ಹಿಂಪಡೆದಿದ್ದಾರೆ. ತರಾತುರಿಯಲ್ಲಿ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡುತ್ತಿದ್ದಾರೆ ಎಂದು ಡಿಕೆಶಿ ಕಿಡಿಕಾರಿದರು.