ಜಿ.ಪರಮೇಶ್ವರ್‌ ಉಪ ಮುಖ್ಯಮಂತ್ರಿಯಾಗಿದ್ದಾರೆ. ಇನ್ನೀಗ ಒಕ್ಕಲಿಗ ನಾಯಕ ಡಿ.ಕೆ.ಶಿವಕುಮಾರ್‌ ಅವರಿಗೆ ಯಾವ ಹುದ್ದೆ ದೊರೆಯಲಿದೆ ಎಂಬ ಕುತೂಹಲ ಉಳಿದುಕೊಂಡಿದೆ.

ಬೆಂಗಳೂರು: ಜಿ.ಪರಮೇಶ್ವರ್‌ ಉಪ ಮುಖ್ಯಮಂತ್ರಿಯಾಗಿದ್ದಾರೆ. ಇನ್ನೀಗ ಒಕ್ಕಲಿಗ ನಾಯಕ ಡಿ.ಕೆ.ಶಿವಕುಮಾರ್‌ ಅವರಿಗೆ ಯಾವ ಹುದ್ದೆ ದೊರೆಯಲಿದೆ ಎಂಬ ಕುತೂಹಲ ಉಳಿದುಕೊಂಡಿದೆ.

ಡಿಸಿಎಂ ಹುದ್ದೆಯ ಆಕಾಂಕ್ಷಿಯಾಗಿದ್ದ ಶಿವಕುಮಾರ್‌ ಬುಧವಾರವೇ ಪ್ರಮಾಣವಚನ ಪಡೆಯಲು ಬಯಸಿದ್ದರು. ಹೀಗೊಂದು ಬೇಡಿಕೆಯನ್ನೂ ಹೈಕಮಾಂಡ್‌ ಮುಂದೆ ಇಟ್ಟಿದ್ದರು. ಆದರೆ, ಒಂದೇ ಡಿಸಿಎಂ ಹುದ್ದೆ ಸೃಷ್ಟಿಮಾಡುವ ನಿರ್ಧಾರ ಮಾಡಿದ್ದ ಕಾಂಗ್ರೆಸ್‌ ನಾಯಕತ್ವ ಶಿವಕುಮಾರ್‌ ಬೇಡಿಕೆಯನ್ನು ಈಡೇರಿಸಿಲ್ಲ. ಇದರಿಂದ ಸಿಟ್ಟಾಗಿರುವ ಶಿವಕುಮಾರ್‌ ಮಾಧ್ಯಮಗಳ ಮುಂದೆ ‘ಎಲ್ಲದಕ್ಕೂ ಸಮಯ ಬರಬೇಕು. ರಾಹುಕಾಲ, ಗುಳಿಕಕಾಲ ಎಲ್ಲ ಬರಬೇಕು. ನಾನು ಕೂಡ ಇಲ್ಲಿಗೆ ಫುಟ್‌ಬಾಲ್‌ ಆಡಲು ಬಂದಿಲ್ಲ. ಚೆಸ್‌ ಆಡುತ್ತೇನೆ’ ಎನ್ನುವ ಮೂಲಕ ತಮ್ಮ ಸಿಟ್ಟು ಹೊರಹಾಕಿದರು.

ಇದಕ್ಕಿಂತ ಹೆಚ್ಚು ಸಿಟ್ಟನ್ನು ಅವರ ಸಹೋದರ ಡಿ.ಕೆ.ಸುರೇಶ್‌ ಅವರು ಖುದ್ದು ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರ ಸಮ್ಮುಖವೇ ಪ್ರದರ್ಶಿಸಿದ್ದು, ಪಕ್ಷಕ್ಕಾಗಿ ಹೋರಾಡಲು ನಾವು ಬೇಕು. ಆದರೆ, ಅಧಿಕಾರ ನೀಡಲು ಬೇರೆಯವರು ಬೇಕಾ ಎಂದು ನೇರವಾಗಿ ಪ್ರಶ್ನಿಸಿದರು ಎನ್ನಲಾಗಿದೆ.

ಶಿವಕುಮಾರ್‌ ಸಹ ಬುಧವಾರವೇ ಪ್ರಮಾಣವಚನ ಸ್ವೀಕಾರ ಮಾಡುವಂತಾಗಬೇಕು ಮತ್ತು ಅವರಿಗೆ ಡಿಸಿಎಂ ಪದವಿ ನೀಡಬೇಕು ಎಂಬುದು ಸಹೋದರರ ವಾದವಾಗಿತ್ತು. ಇದು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಹೋದರರಿಬ್ಬರೂ ಕ್ರುದ್ಧರಾಗಿದ್ದರು. ಈ ಹಿನ್ನೆಲೆಯಲ್ಲಿ ಹೈಕಮಾಂಡ್‌ನ ನಾಯಕರು ಮಧ್ಯಪ್ರವೇಶಿಸಿ ಉಭಯ ಸಹೋದರರನ್ನು ಸಮಾಧಾನ ಪಡಿಸಿದರು ಎನ್ನಲಾಗಿದೆ. ಈ ವೇಳೆ ಪಕ್ಷಕ್ಕಾಗಿ ಶಿವಕುಮಾರ್‌ ಸಹೋದರರು ನೀಡಿದ ಕೊಡುಗೆಯನ್ನು ಅಲಕ್ಷಿಸುವುದಿಲ್ಲ. ಸೂಕ್ತ ಸ್ಥಾನಮಾನ ಖಂಡಿತ ದೊರೆಯುತ್ತದೆ ಎಂದು ಹೈಕಮಾಂಡ್‌ನ ಉನ್ನತ ಮಟ್ಟದಿಂದಲೇ ಶಿವಕುಮಾರ್‌ ಸಹೋದರರಿಗೆ ನೇರ ಭರವಸೆ ದೊರೆತಿದೆ ಎಂದು ಮೂಲಗಳು ತಿಳಿಸುತ್ತವೆ.

ಡಿಕೆಶಿಗೆ ಸಚಿವ-ಕೆಪಿಸಿಸಿ ಅಧ್ಯಕ್ಷ ಎರಡೂ ಹುದ್ದೆ?:

ಡಿಸಿಎಂ ಪದವಿಯ ಮೇಲೆ ಕಣ್ಣಿಟ್ಟಿದ್ದ ಶಿವಕುಮಾರ್‌ ಅವರಿಗೆ ಸೂಕ್ತ ಸ್ಥಾನ ನೀಡುವ ಭರವಸೆಯನ್ನು ಹೈಕಮಾಂಡ್‌ ನೀಡಿರುವ ಹಿನ್ನೆಲೆಯಲ್ಲಿ ಅವರಿಗೆ ಯಾವ ಹುದ್ದೆ ದೊರೆಯಲಿದೆ ಎಂಬ ಬಗ್ಗೆ ಕಾಂಗ್ರೆಸ್‌ ವಲಯದಲ್ಲಿ ತೀವ್ರ ಚರ್ಚೆ ಆರಂಭವಾಗಿದೆ.

ಮೂಲಗಳ ಪ್ರಕಾರ ಕಾಂಗ್ರೆಸ್‌ ವರಿಷ್ಠರು ಶಿವಕುಮಾರ್‌ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನು ನೀಡಲು ಸಿದ್ಧರಾಗಿದ್ದಾರೆ. ಆದರೆ, ಕೇವಲ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ವಹಿಸಿಕೊಳ್ಳಲು ಶಿವಕುಮಾರ್‌ ಸಿದ್ಧರಿಲ್ಲ ಎನ್ನಲಾಗಿದೆ. ಏಕೆಂದರೆ, ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಉತ್ತಮ ಸಂಪನ್ಮೂಲ ಸಂಗ್ರಹ ಮಾಡುವ ಅಗತ್ಯವಿದೆ. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಘಟಾನುಘಟಿ ಸಚಿವರು ಸಹ ಪಕ್ಷಕ್ಕೆ ಸೂಕ್ತ ಸಂಪನ್ಮೂಲ ಒದಗಿಸಿಲ್ಲ ಎಂಬ ದೂರುಗಳಿವೆ. ಹೀಗಿರುವಾಗ ಕೇವಲ ಅಧ್ಯಕ್ಷ ಗಾದಿ ತೆಗದುಕೊಂಡರೆ ಲೋಕಸಭಾ ಚುನಾವಣೆಯಲ್ಲಿ ಉತ್ತಮವಾಗಿ ಪಕ್ಷ ಸಂಘಟನೆ ಸಾಧ್ಯವಾಗುವುದಿಲ್ಲ ಎಂದು ಶಿವಕುಮಾರ್‌ ವಾದ ಮಂಡಿಸಿದ್ದಾರೆ ಎನ್ನಲಾಗಿದೆ.

ಹೀಗಾಗಿ ಸಚಿವ ಸ್ಥಾನ ಮತ್ತು ಕೆಪಿಸಿಸಿ ಹುದ್ದೆ ಎರಡನ್ನೂ ಅವರಿಗೆ ನೀಡುವ ಬಗ್ಗೆ ಹೈಕಮಾಂಡ್‌ ಪರಿಶೀಲಿಸುತ್ತಿದ್ದು, ಒಂದು ವರ್ಷದ ಮಟ್ಟಿಗೆ ಈ ಹುದ್ದೆ ಅವರಿಗೆ ದೊರೆಯುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಪರಿಶಿಷ್ಟಎಡಗೈ ಪಂಗಡದ ನಾಯಕ ಹಾಗೂ ಸಂಸದ ಕೆ.ಎಚ್‌.ಮುನಿಯಪ್ಪ ಮತ್ತು ಹಿಂದುಳಿದ ವರ್ಗದಿಂದ ಬಿ.ಕೆ. ಹರಿಪ್ರಸಾದ್‌ ಅವರು ಸಹ ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.


ಹಣೆಬರಹದ ಮುಂದೆ ಯಾರು ಏನು ಮಾಡಿದರೂ ನಡೆಯಲ್ಲ. ಎಲ್ಲದಕ್ಕೂ ಹಣೆಯಲ್ಲಿ ಬರೆದಿರಬೇಕು. ನಾನು ಸರ್ಕಾರದ ಭಾಗವಾಗಿ ಇರ್ತೀನೋ ಇಲ್ವೋ ಗೊತ್ತಿಲ್ಲ. ಪಕ್ಷದ ಕೆಲಸ ಮಾಡಲು ಹೇಳಿದ್ದರು, ಮಾಡಿದ್ದೇನೆ. ಶಾಸಕರನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳಲು ಹೇಳಿದ್ದರು, ಅದನ್ನೂ ಮಾಡಿದ್ದೇನೆ. ಇಷ್ಟಕ್ಕೂ ನಾನು ಇಲ್ಲಿ ಫುಟ್‌ಬಾಲ್‌ ಆಡಲು ಬಂದಿಲ್ಲ. ನಾನು ಚೆಸ್‌ ಆಡುತ್ತೇನೆ.

- ಡಿ.ಕೆ. ಶಿವಕುಮಾರ್‌, ಮಾಜಿ ಸಚಿವ