ದಿನೇಶ್ ಗುಂಡೂ ರಾವ್ ಬಿಚ್ಚಿಟ್ಟ ಕಾಂಗ್ರೆಸ್ ಸೀಕ್ರೇಟ್ಸ್

Dinesh Gundu rao Interview
Highlights

ಕಾಂಗ್ರೆಸ್‌ ಪ್ರಚಾರ ತಂತ್ರವೇನು? ಸರ್ಕಾರ ಬಿಟ್ಟು ಪಕ್ಷಕ್ಕೆ ಬಂದ ಮೇಲೆ ತಮಗೆ ಕಟ್ಟಿಕೊಂಡ ಹಣೆಪಟ್ಟಿಯ ರಹಸ್ಯವೇನು? ಟಿಕೆಟ್‌ ಹಂಚಿಕೆಯಲ್ಲಿ ಯಾರ ಕೈ ಮೇಲಾಗಿದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ದಿನೇಶ್‌ ಗುಂಡೂರಾವ್‌ ಮುಕ್ತವಾಗಿ ಮಾತನಾಡಿದ್ದಾರೆ.

ಎಸ್‌. ಗಿರೀಶ್‌ಬಾಬು

ಬೆಂಗಳೂರು

ಹಿರಿಯರಿಗಾಗಿ ಸಚಿವ ಸ್ಥಾನ ‘ತ್ಯಾಗ ಮಾಡಿ’ ಪಕ್ಷದ ಸೇವೆಗೆ ಬಂದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರ ಶ್ರಮದ ಫಲವಾಗಿ ಕಾಂಗ್ರೆಸ್‌ ಸೋಷಿಯಲ್‌ ಮೀಡಿಯಾ ವಿಭಾಗ ಬಿಜೆಪಿಗೆ ಠಕ್ಕರ್‌ ನೀಡುವಷ್ಟುಬೆಳೆದುನಿಂತಿತು. ಸಾಮಾಜಿಕ ಜಾಲತಾಣದ ‘ಯುದ್ಧ’ದಲ್ಲಿ ದಿನೇಶ್‌ ಗುಂಡೂರಾವ್‌ ಮಾರ್ಗದರ್ಶನದಲ್ಲಿ ಪತ್ನಿ ಟಬು ಹಾಗೂ ಸಿಎಂ ಪುತ್ರ ಯತೀಂದ್ರ ಕಟ್ಟಿದ ತಂಡ ಬಿಜೆಪಿಯೇ ಹುಬ್ಬೇರಿಸುವಂತೆ ಕೆಲಸ ಮಾಡಿದೆ. ಈಗ ಪ್ರಚಾರದ ಅಂತಿಮ ಹಂತ ಬಂದಿದೆ. ಮೋದಿ ಬರುತ್ತಿದ್ದಾರೆ. ಈ ಹಂತದಲ್ಲಿ ಕಾಂಗ್ರೆಸ್‌ ಪ್ರಚಾರ ತಂತ್ರವೇನು? ಸರ್ಕಾರ ಬಿಟ್ಟು ಪಕ್ಷಕ್ಕೆ ಬಂದ ಮೇಲೆ ತಮಗೆ ಕಟ್ಟಿಕೊಂಡ ಹಣೆಪಟ್ಟಿಯ ರಹಸ್ಯವೇನು? ಟಿಕೆಟ್‌ ಹಂಚಿಕೆಯಲ್ಲಿ ಯಾರ ಕೈ ಮೇಲಾಗಿದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ದಿನೇಶ್‌ ಗುಂಡೂರಾವ್‌ ‘ಕನ್ನಡಪ್ರಭ’ಕ್ಕೆ ನೀಡಿದ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

ಸಚಿವರಾಗಿದ್ದ ನೀವು ಪಕ್ಷದ ಸೇವೆಗೆ ಬಂದಿರಿ. ಆಗ ‘ಸಿದ್ದರಾಮಯ್ಯ ಕಾಂಗ್ರೆಸ್‌ನ ಅಧ್ಯಕ್ಷ’ ಎಂಬ ಹಣೆಪಟ್ಟಿನಿಮಗೆ ಸಿಕ್ಕಿತು, ಏಕೆ?

ಇಲ್ಲ. ನನ್ನ ಬಗ್ಗೆ ಯಾರೂ ಇಂತಹ ಮಾತನ್ನು ಹೇಳಲು ಸಾಧ್ಯವಿಲ್ಲ. ಏಕೆಂದರೆ, ನಾನು ಯಾರ ಕ್ಯಾಂಪ್‌ನಲ್ಲೂ ಇಲ್ಲ. ರಾಜ್ಯದ ಯಾವ ನಾಯಕರೂ ನಾನು ಕಾರ್ಯಾಧ್ಯಕ್ಷನಾಗಬೇಕು ಎಂದು ಹೇಳಲಿಲ್ಲ. ಯಾರೋ ಹೇಳಿದ್ದರಿಂದಲೂ ಈ ಹುದ್ದೆ ನನಗೆ ಸಿಗಲಿಲ್ಲ. ಇದು ಸಂಪೂರ್ಣವಾಗಿ ಹೈಕಮಾಂಡ್‌ನ ನಿರ್ಧಾರ. ಇನ್ನು ಸಿದ್ದರಾಮಯ್ಯ ಅವರು ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಹೀಗಿದ್ದಾಗ ಅವರಿಗೆ ಶಕ್ತಿ ತುಂಬ ಕೆಲಸವನ್ನು ಪಕ್ಷದ ಕಾರ್ಯಾಧ್ಯಕ್ಷನಾಗಿ ನಾನು ಮಾಡಬೇಕು. ಅದನ್ನು ಮಾಡುತ್ತಿದ್ದೇನೆ, ಅಷ್ಟೆ.

ಕಾರ್ಯಾಧ್ಯಕ್ಷರಾಗಿ ಹಳೆ ಮೈಸೂರು ನಿಮ್ಮ ಕಾರ್ಯಕ್ಷೇತ್ರವಾಗಿತ್ತು. ಆದರೆ, ರಿಮೋಟ್‌ ಕಂಟ್ರೋಲ್‌ ಸಿದ್ದರಾಮಯ್ಯ ಅವರ ಕೈಯಲ್ಲಿತ್ತು?

ಆ ರೀತಿಯೇನೂ ಇರಲಿಲ್ಲ. ಸಿದ್ದರಾಮಯ್ಯ ಅವರು ಹಳೆ ಮೈಸೂರು ಭಾಗದವರಾಗಿದ್ದರು. ಅವರಿಗೆ ಆ ಭಾಗದ ಬಗ್ಗೆ ಹೆಚ್ಚು ಗೊತ್ತಿತ್ತು.

ಈ ಬಾರಿ ಟಿಕೆಟ್‌ ಹಂಚಿಕೆಯಲ್ಲೂ ಸಿದ್ದರಾಮಯ್ಯ ಅವರ ಕೈ ಮೇಲಾಗಿದೆ?

ಸಿಎಂ ಸಿದ್ದರಾಮಯ್ಯ ಅವರಿಗೆ ಹೆಚ್ಚು ಜನ ಸಂಪರ್ಕವಿದೆ. ಮಾಹಿತಿಯೂ ಹೆಚ್ಚು ಇರುತ್ತದೆ. ಅಲ್ಲದೆ, ಅವರು ತಮ್ಮದೇ ಆದ ವಿಶಿಷ್ಟರಾಜಕೀಯ ವಿವೇಚನೆ ಇರುವ ನಾಯಕ. ಹೀಗಾಗಿ ಟಿಕೆಟ್‌ ಹಂಚಿಕೆ ವೇಳೆ ಸಿದ್ದರಾಮಯ್ಯ ಅವರ ನಿಲುವು ಪ್ರಮುಖ ಆಗಿದೆ. ಇಷ್ಟಕ್ಕೂ ಟಿಕೆಟ್‌ ಹಂಚಿಕೆಯನ್ನು ಎಲ್ಲರೂ ಸೇರಿ ಮಾಡಿದ್ದೇವೆ. ಯಾವ ನಾಯಕರಿಂದಲೂ ಅಸಮಾಧಾನದ ಮಾತು ಕೇಳಿಬರಲಿಲ್ಲ. ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆಯಲ್ಲಿ ಸಾಮಾಜಿಕ ನ್ಯಾಯ ಪರಿಪಾಲನೆ ಚೆನ್ನಾಗಿದೆ. ಬೇಟಿ ಬಚಾವೋ, ಬೇಟಿ ಪಡಾವೋ ಎನ್ನುವ ಬಿಜೆಪಿ ಎಷ್ಟುಮಂದಿ ಮಹಿಳೆಯರಿಗೆ ಟಿಕೆಟ್‌ ನೀಡಿದೆ? ಕಾಂಗ್ರೆಸ್‌ 15 ಮಂದಿ ಮಹಿಳೆಯರಿಗೆ ಟಿಕೆಟ್‌ ನೀಡಿದೆ.

ಆದರೆ, ಅಭ್ಯರ್ಥಿ ಪಟ್ಟಿನೋಡಿದಾಗ ಮಾನದಂಡವೇನು ಎಂಬುದು ಗೊತ್ತಾಗುವುದಿಲ್ಲ. 85 ದಾಟಿದವರಿಗೂ ಟಿಕೆಟ್‌ ಸಿಕ್ಕಿದೆ?

75 ವರ್ಷವಾಗುತ್ತಿದ್ದಂತೆಯೇ ನಿವೃತ್ತಿ ಎನ್ನುವ ಮೋದಿ ಸಿದ್ಧಾಂತ, ನಮ್ಮದಲ್ಲ. ಆರೋಗ್ಯವಾಗಿದ್ದು, ಕ್ರಿಯಾಶೀಲರಾಗಿದ್ದರೆ ಸಾಕು, ವಯಸ್ಸು ಮಾನದಂಡವಾಗಬೇಕಿಲ್ಲ. ನಾವು ಟಿಕೆಟ್‌ ನೀಡಿರುವ ಕಾಗೋಡು ತಿಮ್ಮಪ್ಪ ಅವರು ಈಗಲೂ ಕ್ರಿಯಾಶೀಲರಾಗಿದ್ದಾರೆ. ಶಾಮನೂರು ಶಿವಶಂಕರಪ್ಪ ತಮ್ಮ ಜಿಲ್ಲೆಯಲ್ಲಿ ಕ್ರಿಯಾಶೀಲರಾಗಿದ್ದಾರೆ.

ಶಾಮನೂರು ಶಿವಶಂಕರಪ್ಪ ಕ್ರಿಯಾಶೀಲರಾಗಿದ್ದಾರೆಯೇ?

ಹೌದು, ಅವರ ಕ್ಷೇತ್ರದಲ್ಲಿ ಶಾಮನೂರು ಆಕ್ಟಿವ್‌ ಆಗಿದ್ದಾರೆ ಮತ್ತು ಅವರು ಜನಪ್ರಿಯರೂ ಸಹ.

ಹಾಗಿದ್ದ ಮೇಲೆ ಅಂಬರೀಶ್‌ಗೆ ಏಕೆ ನೀವು ಚುನಾವಣೆಯಲ್ಲಿ ನಿಲ್ಲದಂತೆ ಸಲಹೆ ನೀಡಿದ್ದು?

ನಾನು ಆ ರೀತಿ ಹೇಳಿಲ್ಲ. ಆ ಸಂದರ್ಭ ಬೇರೆಯೇ ಇತ್ತು. ಪಕ್ಷದ ಟಿಕೆಟ್‌ ಪ್ರಕಟವಾಗಲು ಎರಡೇ ದಿನ ಬಾಕಿಯಿತ್ತು. ಅಂಬರೀಶ್‌ ತಮ್ಮ ನಿಲುವು ತಿಳಿಸಿರಲಿಲ್ಲ. ಆಗ ರಾಜ್ಯ ಉಸ್ತುವಾರಿಗಳು ಅವರೊಂದಿಗೆ ಮಾತನಾಡಲು ನನಗೆ ತಿಳಿಸಿದರು. ಹೀಗಾಗಿ ಅವರನ್ನು ಭೇಟಿ ಮಾಡಿ ಸ್ಪರ್ಧೆ ಬಗ್ಗೆ ನಿಲುವು ತಿಳಿಸಿ ಎಂದು ಕೇಳಿದ್ದೆ ಅಷ್ಟೆ.

ಸೋತು ಬಿಡುತ್ತಿರಾ, ಚುನಾವಣೆಗೆ ನಿಲ್ಲಬೇಡಿ ಎಂದು ನೀವು ಹೇಳಿದಿರಿ. ಹಾಗಂತ ಅಂಬರೀಶ್‌ ಅವರೇ ಹೇಳಿದ್ದಾರಲ್ಲ?

ನಾನು ಅಂಬರೀಶ್‌ಗೆ ಅಂತಹ ಮಾತು ಹೇಳಲು ಆಗುತ್ತದೆಯೇ? ಅದು ಸಾಧ್ಯವೇ?

ಅಂಬರೀಶ್‌ ಅವರಿಗೆ ಜೆಡಿಎಸ್‌ ಗಾಳ ಹಾಕಿದೆಯಂತೆ?

ಅಂಬರೀಶ್‌ ಕಾಂಗ್ರೆಸ್‌ ಬಿಟ್ಟು ಎಲ್ಲಿಗೂ ಹೋಗಲ್ಲ. ಕಾಂಗ್ರೆಸ್‌ ಬಗ್ಗೆ ಅವರಿಗೆ ಅಭಿಮಾನವಿದೆ. ಪಕ್ಷದಿಂದ ಅವರಿಗೆ ಯಾವ ನೋವೂ ಆಗಿಲ್ಲ. ಚುನಾವಣೆಯಿಂದ ಹಿಂದೆ ಸರಿಯಲು ಅನಾರೋಗ್ಯ ಕಾರಣವೇ ಹೊರತು ಮತ್ತೇನೂ ಇಲ್ಲ.

ಚುನಾವಣಾ ಪ್ರಚಾರ ಕ್ಲೈಮಾಕ್ಸ್‌ ಹಂತ ಬಂದಿದೆ. ಬಿಜೆಪಿ ಟ್ರಂಪ್‌ಕಾರ್ಡ್‌ ಮೋದಿ ಆಗಮನಕ್ಕೆ ವೇದಿಕೆ ಸಜ್ಜಾಗಿದೆ. ಇದಕ್ಕೆ ಕಾಂಗ್ರೆಸ್‌ ತಯಾರಿಯೇನು?

ನನ್ನ ಪ್ರಕಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮನದಿಂದ ರಾಜ್ಯದಲ್ಲಿ ಏನೂ ಬದಲಾವಣೆಯಾಗುವುದಿಲ್ಲ. ಏಕೆಂದರೆ, ಕೇಂದ್ರ ಸರ್ಕಾರ ರಾಜ್ಯಕ್ಕೆ ಯಾವ ಕೊಡುಗೆಯನ್ನೂ ನೀಡಿಲ್ಲ. ಮೋದಿ ಸಂಪುಟದಲ್ಲಿ ನಾಲ್ಕು ಮಂದಿ ಕನ್ನಡಿಗ ಸಚಿವರಿದ್ದರೂ ರಾಜ್ಯಕ್ಕೆ ನೀಡಿದ ಕೊಡುಗೆ ಶೂನ್ಯ. ಇನ್ನು ಮೋದಿ ಆಡಳಿತದಿಂದ ಅದರಲ್ಲೂ ವಿಶೇಷವಾಗಿ ನೋಟು ಅಮಾನ್ಯ ಹಾಗೂ ಜಿಎಸ್‌ಟಿಯ ಅಸಮರ್ಪಕ ಜಾರಿಯಿಂದಾಗಿ ರಾಜ್ಯ ಹಾಗೂ ದೇಶದ ಜನರು ತುಂಬಾ ನಷ್ಟಹಾಗೂ ಸಮಸ್ಯೆ ಎದುರಿಸಿದ್ದಾರೆ. ಮೋದಿ ಬಗ್ಗೆಯಿದ್ದ ನಿರೀಕ್ಷೆಗಳು ಹುಸಿಯಾಗಿವೆ. ಇನ್ನು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಮೋದಿ ಅವರು ಕೀಳು ಮಟ್ಟದ ಆರೋಪಗಳನ್ನು ಮಾಡುತ್ತಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮೋದಿ ಮಾತನಾಡುವುದಂತೂ ಹಾಸ್ಯಾಸ್ಪದ. ಜನಾರ್ದನರೆಡ್ಡಿ, ಸೋಮಶೇಖರ ರೆಡ್ಡಿ, ಕರುಣಾಕರ ರೆಡ್ಡಿ, ಶ್ರೀರಾಮುಲು, ಫಕೀರಪ್ಪ ಅಂತಹವರನ್ನು ಬಗಲಲ್ಲಿ ಇಟ್ಟುಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕೇ ಮೋದಿಗೆ ಇಲ್ಲ. ಬಿಜೆಪಿಯ ಇತ್ತೀಚಿನ ನಡವಳಿಕೆ ನೋಡಿದರೆ, ರಾಜ್ಯದಲ್ಲಿ ಮತ್ತೆ ಬಳ್ಳಾರಿ ರಿಪಬ್ಲಿಕ್‌ ಅನ್ನು ತರುವಂತೆ ಕಾಣುತ್ತಿದೆ.

ಬಳ್ಳಾರಿ ರಿಪಬ್ಲಿಕ್‌ ಅಂತೀರಿ. ಆದರೆ, ಆ ರಿಪಬ್ಲಿಕ್‌ನ ಕೆಲವರಿಗೆ ಕಾಂಗ್ರೆಸ್‌ ರೆಡ್‌ ಕಾರ್ಪೆಟ್‌ ಹಾಸಿದೆ?

ಕಾಂಗ್ರೆಸ್‌ ಸೇರಿದ ನಾಗೇಂದ್ರ ಅಂತಹವರನ್ನು ನೀವು ಜನಾರ್ದನ ರೆಡ್ಡಿಯಂತಹ ದುಷ್ಟಶಕ್ತಿಗಳಿಗೆ ಹೋಲಿಕೆ ಮಾಡಬೇಡಿ. ಜನಾರ್ದನ ರೆಡ್ಡಿ ಹಾಗೂ ಅವರ ತಂಡ ಇಡೀ ಬಿಜೆಪಿ ಸರ್ಕಾರವನ್ನೇ ನಿಯಂತ್ರಣ ಮಾಡಿತು. ಕರ್ನಾಟಕ ಹಿಂದೆಂದೂ ಕಾಣದಂತಹ ದುಸ್ಥಿತಿ ಕಂಡಿತ್ತು. ಯಾರನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ, ನಾಡಿನ ಕಾನೂನಿಗೂ ಬೆಲೆ ನೀಡದೇ ಅರಾಜಕತೆ ಸೃಷ್ಟಿಸಿದ್ದರು. ಅಷ್ಟೇ ಏಕೆ, ಬಿಜೆಪಿಯ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬ್ಲಾಕ್‌ಮೇಲ್‌ ಮಾಡಿದ್ದಂತಹ ದುಷ್ಟಶಕ್ತಿಗಳು ಅವರು. ಅವರನ್ನು ಕಾಂಗ್ರೆಸ್‌ ಸೇರಿದ ನಾಗೇಂದ್ರ ಅವರಿಗೆ ಹೋಲಿಕೆ ಮಾಡುವುದು ಸರಿಯಲ್ಲ.

ದುಷ್ಟಶಕ್ತಿಗಳು ಅಂತೀರಿ. ಅಂತಹ ಶಕ್ತಿಗಳ ಜತೆ ಇದ್ದವರೂ ಕಳಂಕಿತರೇ ಅಲ್ಲವೇ?

ರಾಜಕೀಯದಲ್ಲಿ ಇರುವಾಗ ಆರೋಪಗಳು ಬಹಳ ಬರುತ್ತವೆ. ಆರೋಪವಿದ್ದ ಮಾತ್ರಕ್ಕೆ ಕಳಂಕಿತ ಎಂದು ಹೇಳಲು ಆಗುವುದಿಲ್ಲ. ಕಾಂಗ್ರೆಸ್‌ ಕೂಡ ಯಾರನ್ನಾದರೂ ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಅವರ ಹಿನ್ನೆಲೆ ಹಾಗೂ ವ್ಯಕ್ತಿತ್ವವನ್ನು ಪರಿಶೀಲಿಸಿರುತ್ತದೆ. ಇನ್ನು ಕಾಂಗ್ರೆಸ್‌ ಸೇರಿದವರು ತಮ್ಮ ಕ್ಷೇತ್ರಗಳಲ್ಲಿ ಜನಪ್ರಿಯರು ಹಾಗೂ ಜನಾದೇಶ ಅವರ ಪರವಿದೆ. ಇಷ್ಟಕ್ಕೂ ರಾಜಕಾರಣದಲ್ಲಿ ಶೇ.100ರಷ್ಟುಪರಿಶುದ್ಧವಾಗಿರಲು ಎಲ್ಲಿ ಸಾಧ್ಯವಿದೆ? ಸ್ವಲ್ಪ ಹೊಂದಾಣಿಕೆ ಬೇಕಾಗುತ್ತದೆ. ಹೊಂದಾಣಿಕೆ ಎಂದ ಕೂಡಲೇ ಎಲ್ಲವನ್ನೂ ಬಿಟ್ಟುನಿಲ್ಲುವುದಲ್ಲ. ನಾವು ಬದಲಾಗಿದ್ದೇವೆ. ನಿಮ್ಮ ಜತೆ ಬರುತ್ತೇವೆ ಎಂದಾಗ ಅವರಿಗೂ ಅವಕಾಶ ನೀಡಬೇಕಾಗುತ್ತದೆ. ಒಳ್ಳೆಯವರ ಸಂಪರ್ಕ ಮಾಡಿದರೆ ಒಳ್ಳೆತನ ಬೆಳೆಯುತ್ತದೆ ಅಲ್ಲವೇ?

ಬಿಜೆಪಿ ಮಾತ್ರ ಮೋದಿ ಮ್ಯಾಜಿಕ್‌ ನಡೆದೇ ನಡೆಯುತ್ತದೆ ಎನ್ನುತ್ತಿದೆ. ಈ ಮ್ಯಾಜಿಕ್‌ ತಡೆಗಟ್ಟಲು ಕಾಂಗ್ರೆಸ್‌ ಯೋಜನೆಯೇನು?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ರಾಜ್ಯ ಪ್ರವಾಸದಲ್ಲಿ ಇದ್ದಾರೆ. ಮೋದಿ ಏನು ಹೇಳುತ್ತಾರೋ ಅದಕ್ಕೆ ಅವರೇ ಪ್ರತಿಯುತ್ತರ ನೀಡುತ್ತಾರೆ. ನಿಜ ಹೇಳಬೇಕು ಎಂದರೆ, ಮೋದಿ ಬಗ್ಗೆ ಜನರೇ ಭ್ರಮನಿರಸನಗೊಂಡಿದ್ದಾರೆ. ಕೀಳು ಮಟ್ಟದ ಪ್ರಚಾರ ತಂತ್ರ, ಎಲ್ಲರನ್ನೂ ಬೆದರಿಸಿ ನಿಯಂತ್ರಣದಲ್ಲಿಡುವ ಧೋರಣೆ, ಹುಚ್ಚುಚ್ಚು ಆಡಳಿತಾತ್ಮಕ ನಿರ್ಧಾರಗಳು ಮತ್ತು ಸರ್ವಾಧಿಕಾರಿ ಧೋರಣೆ ಇವು ಮೋದಿ ಆಡಳಿತದ ಹೈಲೈಟ್ಸ್‌. ಈ ಹಿಂದೆ ವಾಜಪೇಯಿ ಅವರ ಬಿಜೆಪಿಯಿತ್ತು. ಪ್ರತಿಪಕ್ಷವಾಗಿ ನಾವು ವಿರೋಧಿಸುತ್ತಿದ್ದರೂ ವಾಜಪೇಯಿ ಬಗ್ಗೆ ಗೌರವ, ಅಭಿಮಾನವಿತ್ತು. ಆದರೆ, ಮೋದಿ ನೇತೃತ್ವದ ಬಿಜೆಪಿಯಿದೆಯಲ್ಲ... ಅದು ಈ ದೇಶದ ಮೂಲ ಸಿದ್ಧಾಂತಗಳಿಗೆ ಮಾರಕ. ಈ ದೇಶ ಉಳಿಯಬೇಕು ಎಂದರೆ, ಮೊದಲು ಮೋದಿ ಸರ್ಕಾರವನ್ನು ತೆಗೆಯಬೇಕು. ಕರ್ನಾಟಕದ ಚುನಾವಣೆ ಆ ದಿಸೆಯಲ್ಲಿ ಮೊದಲ ಹೆಜ್ಜೆ.

ಬಿಜೆಪಿ ಕೀಳು ಮಟ್ಟದ ಪ್ರಚಾರ ಮಾಡುತ್ತದೆ ಎನ್ನುವಿರಿ, ನೀವು ಯೋಗಿ ಆದಿತ್ಯನಾಥ್‌ ವಿರುದ್ಧ ಬಳಸಿದ ಭಾಷೆಯೇನು?

ಯೋಗಿ ಆದಿತ್ಯನಾಥ್‌ಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂಬ ಮಾತು ನಾನು ಹೇಳಿದ್ದು ಚುನಾವಣಾ ಪ್ರಚಾರದಲ್ಲಿ ಅಲ್ಲ. ಉತ್ತರ ಪ್ರದೇಶದ ಅತ್ಯಾಚಾರ ಪ್ರಕರಣ ಖಂಡಿಸುವ ಪ್ರತಿಭಟನಾ ಕಾರ್ಯಕ್ರಮದಲ್ಲಿ. ಆ ಪ್ರಕರಣ ಅಷ್ಟೊಂದು ಭೀಕರವಾಗಿತ್ತು. ಅತ್ಯಾಚಾರಕ್ಕೊಳಗಾದ ಯುವತಿಯ ತಂದೆಯೇ ಪೊಲೀಸ್‌ ಠಾಣೆಯಲ್ಲಿ ಸಂಶಯಾಸ್ಪದವಾಗಿ ಸಾವನ್ನಪ್ಪುತ್ತಾರೆ. ನ್ಯಾಯಾಲಯ ಮಧ್ಯಪ್ರವೇಶ ಮಾಡುವವರೆಗೂ ಆದಿತ್ಯನಾಥ್‌ ಸರ್ಕಾರ ಏನೂ ಮಾಡುವುದಿಲ್ಲ. ಇಂತಹ ಆದಿತ್ಯನಾಥ್‌ ಕರ್ನಾಟಕಕ್ಕೆ ಬಂದು ನಮ್ಮ ಸರ್ಕಾರಕ್ಕೆ ಬುದ್ಧಿ ಹೇಳುತ್ತಾರಲ್ಲ ಅದು ಸಿಟ್ಟು ತರಿಸಿತ್ತು. ಇನ್ನು ಆ ಭೀಕರ ಅತ್ಯಾಚಾರ... ನನ್ನ ಮನೆಯಲ್ಲೂ ಹೆಣ್ಣುಮಕ್ಕಳಿದ್ದಾರೆ. ನಿಮ್ಮ ಮನೆಗಳಲ್ಲೂ ಇರಬಹುದು. ಯಾರದ್ದೋ ಸಹೋದರಿ, ಸ್ನೇಹಿತೆ, ತಾಯಿ ಇರಬಹುದು. ಇದೆಲ್ಲ ಯೋಚಿಸಿದಾಗ ನಾನು ಭಾವನೆಗಳಲ್ಲಿ ತೇಲಿ ಹೋಗಿ ಕೀಳು ಪದ ಪ್ರಯೋಗ ಮಾಡಿದ್ದು ನಿಜ. ಆದರೆ, ಮಾರನೇ ದಿನವೇ ವಿಷಾದ ವ್ಯಕ್ತಪಡಿಸಿದೆ.

ಸಚಿವರಾಗಿದ್ದ ನೀವು, ಈಗ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಸರ್ಕಾರ ಮತ್ತೆ ಬಂದರೆ ಎಲ್ಲಿರುತ್ತೀರಿ? ಪಕ್ಷದಲ್ಲೋ, ಸರ್ಕಾರದಲ್ಲೋ?

ಆ ಸಂದರ್ಭ ಬಂದಾಗ ಅಂದಿನ ಸನ್ನಿವೇಶ ಏನಿರುತ್ತದೆ ಎಂಬುದನ್ನು ನೋಡೋಣ.

ಕಾಂಗ್ರೆಸ್‌ ಪ್ರಣಾಳಿಕೆ ಬಗ್ಗೆ ಜನರಿಗಿದ್ದ ನಿರೀಕ್ಷೆ ಹುಸಿಯಾಗಿದೆ?

ಪ್ರಣಾಳಿಕೆಯಲ್ಲಿ ಉತ್ತಮ ಯೋಜನೆಗಳು ಇವೆ. ಆದರೆ, ನಾವು ಸುಳ್ಳು ಭರವಸೆ ನೀಡಿಲ್ಲ. ನೀರಾವರಿಗೆ 1.25 ಲಕ್ಷ ಕೋಟಿ ಹಣ ಮೀಸಲಿಡುವುದಾಗಿ ಹೇಳಿದ್ದೇವೆ. ಐದು ವರ್ಷದಲ್ಲಿ ಬೆಂಗಳೂರಿಗೆ ಒಂದು ಲಕ್ಷ ಕೋಟಿ ರು. ನೀಡುವುದಾಗಿ ಹೇಳಿದ್ದೇವೆ. ಅನ್ನಭಾಗ್ಯ, ಕ್ಷೀರ ಭಾಗ್ಯ, ಬಡ್ಡಿರಹಿತ ಸಾಲ, ಶೂ ಭಾಗ್ಯದಂತಹ ಜನಪ್ರಿಯ ಯೋಜನೆಗಳನ್ನು ಈಗಾಗಲೇ ಮಾಡಿದ್ದೇವೆ. ಹೀಗಾಗಿ ದೊಡ್ಡ ಜನಪ್ರಿಯ ಯೋಜನೆಗಳನ್ನು ಘೋಷಿಸಿಲ್ಲ. ಮಾತೃಪೂರ್ಣ, ವಿದ್ಯಾಸಿರಿಯಂತಹ ಕೆಲವು ಯೋಜನೆಗಳನ್ನು ವಿಸ್ತರಣೆ ಮಾಡಿದ್ದೇವೆ. ಇಂದಿರಾ ಕ್ಯಾಂಟೀನ್‌ ಆರಂಭವಾಗಿದೆ. ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌, ಲ್ಯಾಪ್‌ಟಾಪ್‌ ನೀಡುವುದು ಆಗಿದೆ. ಈಗ ಕಾಲೇಜು ವಿದ್ಯಾರ್ಥಿಗಳಿಗೆ ಮೊಬೈಲ್‌ ನೀಡಿದ್ದೇವೆ. ಇದುವರೆಗೂ ಏನು ಮಾಡಿಲ್ಲವೋ ಅದನ್ನು ಹೇಳಿದ್ದೇವೆ ಮತ್ತು ಕಾರ್ಯಸಾಧು ಇರುವಂತಹದ್ದನ್ನೇ ಹೇಳಿದ್ದೇವೆ.

ಮೊಬೈಲ್‌ ಫೋನ್‌ ಏಕೆ? ಮೊದಲ ಬಾರಿಯ ಮತದಾರರಿಗೆ ಆಮಿಷವೊಡ್ಡುತ್ತಿದ್ದೀರಾ?

ಈಗ ಮೊಬೈಲ್‌ ಎಂಬುದು ಒಂದು ಮಿನಿ ಕಂಪ್ಯೂಟರ್‌ ಆಗಿದೆ. ಎಲ್ಲ ರೀತಿಯ ಸಂವಹನ ಹಾಗೂ ಜ್ಞಾನ ಮೊಬೈಲ್‌ನಿಂದ ಲಭ್ಯವಾಗುತ್ತಿದೆ. ಅದರ ಪ್ರಯೋಜನ ಬಡ ವಿದ್ಯಾರ್ಥಿಗಳಿಗೆ ದೊರೆಯಬೇಕು ಎಂಬ ಕಾರಣಕ್ಕೆ ಈ ಯೋಜನೆ.

ಕನ್ನಡದ ಅಸ್ಮಿತೆಯ ಬಗ್ಗೆ ಮಾತನಾಡುತ್ತೀರಿ. ನಿಮ್ಮ ಪ್ರಣಾಳಿಕೆಯಲ್ಲೇ ಕನ್ನಡದ ಕಗ್ಗೊಲೆ ನಡೆದಿದೆ?

ನನಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯಿಲ್ಲ. ವೀರಪ್ಪ ಮೊಯ್ಲಿ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದರು. ತಪ್ಪುಗಳಿದ್ದರೆ, ಅದನ್ನು ಸರಿಪಡಿಸಿ ಹೊಸದಾಗಿ ಪ್ರಿಂಟ್‌ ಮಾಡುತ್ತಾರೆ.

loader