ಖಾನ್‌ಗಳ ಕಾಳಗದಲ್ಲಿ ದೇವೇಗೌಡರ ಪ್ರತಿಷ್ಠೆ

Deve Gowda Prestige question
Highlights

ರಾಜಕಾರಣದಲ್ಲಿ ಸಂದರ್ಭಗಳು ಹೇಗೆಲ್ಲ ಬದಲಾಗುತ್ತವೆ ಎಂಬುದಕ್ಕೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ಅತ್ಯುತ್ತಮ ಉದಾಹರಣೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಒಂದು ಕಾಲದಲ್ಲಿ ದರಿದ್ರ ನಾರಾಯಣ ರ್ಯಾಲಿಯಂತಹ ತಂತ್ರಗಳನ್ನು ಬಳಸಿ ಯಾರನ್ನು ಗೆಲ್ಲಿಸಲು ಶ್ರಮ ಪಟ್ಟಿದ್ದರೋ ಈಗ ಅವರನ್ನೇ ಸೋಲಿಸಲು ತಮ್ಮೆಲ್ಲ ರಾಜಕೀಯ ಅನುಭವವನ್ನು  ಧಾರೆಯೆರೆಯಬೇಕಾಗಿದೆ.

ರಾಜಕಾರಣದಲ್ಲಿ ಸಂದರ್ಭಗಳು ಹೇಗೆಲ್ಲ ಬದಲಾಗುತ್ತವೆ ಎಂಬುದಕ್ಕೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ಅತ್ಯುತ್ತಮ ಉದಾಹರಣೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಒಂದು ಕಾಲದಲ್ಲಿ ದರಿದ್ರ ನಾರಾಯಣ ರ್ಯಾಲಿಯಂತಹ ತಂತ್ರಗಳನ್ನು ಬಳಸಿ ಯಾರನ್ನು ಗೆಲ್ಲಿಸಲು ಶ್ರಮ ಪಟ್ಟಿದ್ದರೋ ಈಗ ಅವರನ್ನೇ ಸೋಲಿಸಲು ತಮ್ಮೆಲ್ಲ ರಾಜಕೀಯ ಅನುಭವವನ್ನು  ಧಾರೆಯೆರೆಯಬೇಕಾಗಿದೆ.

2015 ರಲ್ಲಿ ಎದುರಾದ ಉಪ ಚುನಾವಣೆ ವೇಳೆ ದೇವೇಗೌಡರು ಎಬ್ಬಿಸಿದ ಹವಾ ಹಾಗೂ ಹೊಸ ಮುಖ ಬಿ.ಝಡ್. ಜಮೀರ್ ಖಾನ್ ಅವರ ಉತ್ಸಾಹದ ಫಲವಾಗಿ ಚಾಮರಾಜಪೇಟೆ ಎಂಬ ಕಾಂಗ್ರೆಸ್ ಭದ್ರಕೋಟೆ ಕ್ರಮೇಣ ಜೆಡಿಎಸ್‌ನ ಭದ್ರಕೋಟೆಯಾಗಿತ್ತು. ಇದರ ಲಾಭ ಪಡೆದ ಜಮೀರ್ ಒಂದು ಉಪ ಚುನಾವಣೆ ಹಾಗೂ ಎರಡು ಸಾರ್ವತ್ರಿಕ ಚುನಾವಣೆಗಳಲ್ಲಿ  ಭರ್ಜರಿ ಜಯ ಗಳಿಸಿ, ಒಂದು ಬಾರಿ ಸಚಿವರೂ ಆಗಿ ಮೆರೆದರು. ಆದರೆ ಬದಲಾದ ಸನ್ನಿವೇಶದಲ್ಲಿ ಜಮೀರ್ ಈಗ ಜೆಡಿಎಸ್ ವಿರುದ್ಧ ಸೆಟೆದು ನಿಂತಿದ್ದಾರೆ. ತಮ್ಮ ವಿರುದ್ಧ ಎದೆಯುಬ್ಬಿಸಿ ನಿಂತ ಜಮೀರ್ ಅವರನ್ನು ಹಣಿಯಲು ದೇವೇಗೌಡ ಕುಟುಂಬ ಪಣ ತೊಟ್ಟು ನಿಂತಿದೆ. ಪೈಪೋಟಿ ಯಾವ ಮಟ್ಟಕ್ಕೆ ಹೋಗಿದೆ ಎಂದರೆ, ಇಲ್ಲಿ ಕೀಳು ಭಾಷೆ ಬಳಕೆಗೆ ಮಿತಿಯಿಲ್ಲದಂತಾಗಿದೆ. ತಲೆ ಕತ್ತರಿಸಿ ಮಾಧ್ಯಮಗಳ ಮುಂದಿಡುವಂತಹ ಸವಾಲುಗಳಿಂದ ಹಿಡಿದು ಅಭ್ಯರ್ಥಿಗಳ ಎತ್ತರ, ಗಾತ್ರದಂತಹ ವಿಚಾರಗಳೆಲ್ಲ ಈ ವಾಕ್ಸಮರದಲ್ಲಿ ಬಂದು ಹೋಗಿವೆ. ಜೆಡಿಎಸ್ ತೊರೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಶ್ರಯಕ್ಕೆ ತೆರಳಿ ತಮ್ಮ ವಿರುದ್ಧ ತಿರುಗಿಬಿದ್ದಿರುವ  ಜಮೀರ್ ಸೋಲಿಸಲು ಕಾಂಗ್ರೆಸ್‌ನಿಂದ ಅಭ್ಯರ್ಥಿಯನ್ನು ಜೆಡಿಎಸ್ ಕರೆತಂದಿದೆ. ಚಾಮರಾಜಪೇಟೆಯ ಮತ್ತೊಬ್ಬ ಪ್ರಭಾವಿ ಮುಸ್ಲಿಂ ನಾಯಕ ಅಲ್ತಾಫ್ ಖಾನ್ ಜೆಡಿಎಸ್‌ನ ಹುರಿಯಾಳು. ಮುಸ್ಲಿಂ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಪ್ರಭಾವಿಯಾಗಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಮದಗಜಗಳಂತಹ ಮುಸ್ಲಿಂ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಿವೆ. 

ಈ ಇಬ್ಬರ ಜಗಳದಲ್ಲಿ ಮುಸ್ಲಿಂ ಮತಗಳ ವಿಭಜನೆಯಾಗುವ ನಿರೀಕ್ಷೆಯಲ್ಲಿ ಬಿಜೆಪಿಯು ಮಾಜಿ ಉಪ ಮೇಯರ್ ಲಕ್ಷ್ಮೀನಾರಾಯಣ ಅವರನ್ನು ಕಣಕ್ಕಿಳಿಸಿದೆ. ಮೇಲ್ನೋಟಕ್ಕೆ ಜಮೀರ್ ಮತ್ತು ಅಲ್ತಾಫ್ ನಡುವಿನ ಚುನಾವಣಾ ಹೋರಾಟ ಎನಿಸಿದರೂ, ಪರೋಕ್ಷವಾಗಿ ಜಮೀರ್ ಮತ್ತು ದೇವೇಗೌಡರ ಪ್ರತಿಷ್ಠೆ ಪಣದಲ್ಲಿದೆ. ಹಾಗಾಗಿ  ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ.

ಕಳೆದ ಮೂರೂ ಚುನಾವಣೆಗಳಲ್ಲಿ ಮುಸ್ಲಿಮರ ಮತಗಳನ್ನು ಇಡಿಗಂಟಾಗಿ ಪಡೆಯುವ ಮೂಲಕ ಜಮೀರ್ ಅಹಮದ್ ಗೆಲ್ಲುತ್ತಾ ಬಂದಿದ್ದರು. ಈ ಬಾರಿ ಕಾಂಗ್ರೆಸ್ ಪಾಳಯ ಸೇರಿರುವುದರಿಂದ ತಮ್ಮ ಸಮುದಾಯದ ಮತಗಳು ಗಟ್ಟಿ ಎನ್ನಬಹುದಾದರೂ, ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕೂಡ ಕ್ಷೇತ್ರದಲ್ಲಿ ಪ್ರಭಾವಿ ಮುಸ್ಲಿಂ ನಾಯಕ ಆಗಿರುವುದರಿಂದ 95  ಸಾವಿರದಷ್ಟಿರುವ ಮುಸ್ಲಿಮರ ಮತಗಂಟು ಕೆಲವೆಡೆ ಹೋಳಾಗುವ ಸಾಧ್ಯತೆಗಳಿವೆ. ಆದರೆ, ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶೀರ್ವಾದದಿಂದ ಕುರುಬ ಸೇರಿದಂತೆ ಇತರೆ ಹಿಂದುಳಿದ ವರ್ಗಗಳ ಮತಗಳು ಜಮೀರ್‌ಗೆ ವರವಾಗಬಹುದು. ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಖಾನ್ ಇಡೀ ಕ್ಷೇತ್ರದಲ್ಲಿ ತಮ್ಮ ಪ್ರಭಾವ ಹೊಂದಿಲ್ಲದಿರುವುದರಿಂದ ಮುಸ್ಲಿಂ ಮತಗಳಲ್ಲಿ ಅರ್ಧದಷ್ಟು ಪಾಲು ಪಡೆಯುವುದು ಕಷ್ಟಸಾಧ್ಯ. ಆದರೆ, ಜೆಡಿಎಸ್ ಅಭ್ಯರ್ಥಿಯಾಗಿರುವುದರಿಂದ ಕ್ಷೇತ್ರ ಒಕ್ಕಲಿಗರ ಮತಗಳು ಹಾಗೂ ಒಂದಷ್ಟು ಹಿಂದುಳಿದ ವರ್ಗಗಳ ಮತಗಳು ಅಲ್ತಾಫ್ ಪಾಲಾಗುವ ಸಾಧ್ಯತೆ ಇದೆ. ಆದರೆ, ಈ ಎಲ್ಲಾ ಮತಗಳು ಯಾರ ಗೆಲುವನ್ನೂ ನಿರ್ಣಯ ಮಾಡುವುದಿಲ್ಲ. 

ಕ್ಷೇತ್ರದ 2 ನೇ ಅತಿ ಹೆಚ್ಚು ಮತದಾರರಾಗಿರುವ ಪ.ಜಾತಿ ಮತ್ತು ಪ.ಪಂಗಡದ ಜನರ ಒಲವು ಯಾರಿಗೆ ಹೆಚ್ಚಾಗಿ ದೊರೆಯುತ್ತದೆಯೋ ಅವರು ಗೆಲ್ಲಬಹುದಾಗಿದೆ. 2.16 ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮುಸ್ಲಿಮರ ಮೇಲೆ ಪ್ರಭಾವ ಬೀರಲು ಇಲ್ಲಿ ಸಾಧ್ಯವಿರುವ ಎಲ್ಲಾ ದಾಳಗಳು ಬಳಕೆಯಾಗುತ್ತಿವೆ. ಬಿಜೆಪಿ ಹಾಗೂ ಜೆಡಿಎಸ್ ನಡುವೆ ಒಳ ಒಪ್ಪಂದವಿದೆ ಎಂದು ಕ್ಷೇತ್ರದಲ್ಲಿ ವ್ಯಾಪಕವಾಗಿ ಬಿಂಬಿಸಲಾಗುತ್ತಿದೆ. ಈ ತಂತ್ರ ಕೆಲಸ ಮಾಡಿದರೆ ಫಲಿತಾಂಶದ ತಕ್ಕಡಿ ಯಾವ ಕಡೆಗಾದರೂ ವಾಲಬಹುದು.

ಜಮೀರ್ ಮಾಡು ಇಲ್ಲವೇ ಮಡಿ ಹೋರಾಟ: 
ಜೆಡಿಎಸ್ ವರಿಷ್ಠರ ಬೆಂಬಲವಿಲ್ಲದೆಯೂ ಗೆಲ್ಲಬಲ್ಲೆ ಎಂದು ಸಾಬೀತುಪಡಿಸಲು ಹಾಗೂ ಅಲ್ಪಸಂಖ್ಯಾತರ ನಾಯಕ ಎಂದು ನಿರೂಪಿಸಲು ಈ ಚುನಾವಣೆ ಜಮೀರ್‌ಗೆ ಮಹತ್ವದ್ದಾಗಿದೆ. ಅವರಿಗೆ ಇದೊಂದು ರೀತಿ ಮಾಡು ಇಲ್ಲವೇ ಮಡಿ ಹೋರಾಟದಂತಾಗಿದೆ. ದೇವೇಗೌಡರು ಹೂಡುವ ತಂತ್ರಗಳಿಗೆ ಜಮೀರ್ ಪ್ರತಿ ತಂತ್ರ ಹೆಣೆಯುತ್ತಿದ್ದಾರೆ. ಮುಸ್ಲಿಂ ಮತಗಳ ವಿಭಜನೆಯಿಂದಾಗುವ ನಷ್ಟ ಸರಿದೂಗಿಸಲು ಜಮೀರ್ ಕ್ಷೇತ್ರದ ೨ನೇ ಅತಿ ಹೆಚ್ಚು ಮತದಾರರಾಗಿರುವ ಪ.ಜಾತಿ ಮತ್ತು ಪ.ಪಂಗಡದವರು ಹಾಗೂ ನಂತರದ ಸ್ಥಾನದಲ್ಲಿರುವ ಹಿಂದುಳಿದ ವರ್ಗಗಳ ಮತಗಳನ್ನು ಹೆಚ್ಚಾಗಿ ಸೆಳೆಯಲು ಪ್ರಯತ್ನ ನಡೆಸಿದ್ದಾರೆ. ಇದಕ್ಕಾಗಿ ಆಯಾ ಸಮುದಾಯದ ಪ್ರತಿಯೊಬ್ಬ ನಾಯಕರನ್ನು ಭೇಟಿ ಮಾಡಿ ಬೆಂಬಲ ಕೋರುತ್ತಿದ್ದಾರೆ. ಜಮೀರ್ ಈ ಬಾರಿ ತಾವು ಕಾಂಗ್ರೆಸ್‌ನಿಂದ  ಸ್ಪರ್ಧಿಸಿದರೂ ಕಳೆದ ಮೂರು ಬಾರಿ ತಮ್ಮ ಗೆಲುವಿಗೆ ಪ್ರಮುಖ ಕಾರಣೀಭೂತರಾಗಿದ್ದ ಬಿಬಿಎಂಪಿ ಜೆಡಿಎಸ್ ಸದಸ್ಯ ಇಮ್ರಾನ್‌ಪಾಷಾರ ಬೆಂಬಲ ಕಳೆದುಕೊಂಡಿಲ್ಲ. ಇಮ್ರಾನ್ ಅವರು ಜಮೀರ್ ಅಹ್ಮದ್‌ಖಾನ್ ಪರ ನಿಂತಿದ್ದಾರೆ ಹಾಗೂ ಯಾವುದೇ ಕಾರಣಕ್ಕೂ ಅಲ್ತಾಫ್ ಖಾನ್‌ರನ್ನು ಬೆಂಬಲಿಸುವುದಿಲ್ಲ ಎಂದು ಬಹಿರಂಗವಾಗಿಯೇ ಘೋಷಿಸಿಯಾಗಿದೆ. ಇದರ ನಡುವೆಯೇ ಇಮ್ರಾನ್ ಪಾಷಾರೊಂದಿಗೆ ಸಂಧಾನ ಮಾಡಿಕೊಳ್ಳಲು ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಖಾನ್ ಪ್ರಯತ್ನ ನಡೆಸಿರುವುದು ಕುತೂಹಲಕರವಾಗಿದೆ.

ಇತ್ತೀಚೆಗೆ ಹಿರಿಯ ಪತ್ರಕರ್ತರೊಬ್ಬರ ಮನೆಯಲ್ಲಿ ಮುಖಾಮುಖಿಯಾದ ಇಮ್ರಾನ್ ಪಾಷಾರನ್ನು ಹಳೆಯ ದ್ವೇಷ ಮರೆತು ಒಂದಾಗುವಂತೆ ಅಲ್ತಾಫ್ ಮನವಿ ಮಾಡಿದ್ದರು ಎನ್ನಲಾಗಿದೆ. ಈ ವೇಳೆ ಅಲ್ತಾಫ್ ಮತ್ತು ಇಮ್ರಾನ್ ಒಬ್ಬರಿಗೊಬ್ಬರು ತಬ್ಬಿಕೊಂಡು ಕಣ್ಣೀರು ಹಾಕಿದ ಘಟನೆಯೂ ನಡೆಯಿತು. ಆದರೂ, ಇಮ್ರಾನ್ ಮಾತ್ರ ಅಲ್ತಾಫ್ ಅವರಿಗೆ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವ ಬಗ್ಗೆ ಯಾವುದೇ ಭರವಸೆ ನೀಡಲಿಲ್ಲ. ತಮ್ಮ ಕುಟುಂಬದವರು ಹಾಗೂ ಗುರು ವರ್ಗವನ್ನು ಕೇಳಿ ತೀರ್ಮಾನಿಸುವುದಾಗಿ ಹೇಳಿ ಅಲ್ಲಿಂದ ಹೊರಟುಬಂದಿದ್ದಾಗಿ ಇಮ್ರಾನ್ ಆಪ್ತ ಮೂಲಗಳು ಖಚಿತಪಡಿಸಿವೆ. ಚುನಾವಣೆಗೆ ೪ ದಿನ ಬಾಕಿ ಇದ್ದು ಕೊನೆ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು.

ಜಮೀರ್ ವಿರುದ್ಧ ಒವೈಸಿ ಅಸ್ತ್ರ:
 ಜಮೀರ್ ವಿರುದ್ಧ ‘ಮುಸ್ಲಿಮರ ಐಕಾನ್’ ಹೈದರಾಬಾದ್ ಸಂಸದ, ಎಂಐಎಂ ರಾಷ್ಟ್ರೀಯ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಪ್ರಚಾರದ ಅಸ್ತ್ರವನ್ನು ಜೆಡಿಎಸ್ ಬಳಸಿದೆ. ಅಲ್ತಾಫ್  ಖಾನ್ ಅವರನ್ನು ಬೆಂಬಲಿಸುವಂತೆ ಈಗಾಗಲೇ ಒವೈಸಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಹೋಗಿದ್ದಾರೆ. ಅಲ್ಲದೆ, ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ವಿ. ಗಣೇಶ್ ಕೂಡ ದೇವೇಗೌಡ ರೊಂದಿಗೆ ಕೈಜೋಡಿಸಿದ್ದು, ಜಮೀರ್ ಸೋಲಿಸುವ ಸಲುವಾಗಿ ಜೆಡಿಎಸ್ ಪರ ನಿಂತಿದ್ದಾರೆ ಎನ್ನಲಾಗಿದೆ. ಇನ್ನು ಅಲ್ತಾಫ್ ಪತ್ನಿ ಸೀಮಾ ಅಲ್ತಾಫ್ ಕ್ಷೇತ್ರದಲ್ಲಿ ಬಿಬಿಎಂಪಿ ಪಾಲಿಕೆ ಸದಸ್ಯೆಯಾಗಿರುವುದು ಒಂದಷ್ಟು ಲಾಭ ತಂದುಕೊಡಲಿದೆ.

ಮತವಿಭಜನೆ ಲಾಭಕ್ಕೆ ಬಿಜೆಪಿ ಯತ್ನ: 
ಈ ನಡುವೆ  ಬಿಜೆಪಿ ಕೂಡ ಸುಮ್ಮನೆ ಕೂತಿಲ್ಲ. ಇಬ್ಬರ ನಡುವಿನ ಜಟಾಪಟಿಯ ಲಾಭ ಪಡೆಯಲು ಹವಣಿಸುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮುಸ್ಲಿಂ ಮತಗಳು ಹಂಚಿಹೋಗಲಿದ್ದು, ಇದರ ಲಾಭ ಪಡೆದು ಗೆಲುವ ಸಾಧಿಸಲು ಬಿಜೆಪಿ ಅಭ್ಯರ್ಥಿ ಮಾಜಿ ಉಪಮೇಯರ್ ಲಕ್ಷ್ಮೀನಾರಾಯಣ್ ಪ್ರಯತ್ನ ನಡೆಸಿದ್ದಾರೆ. ಬಿಜೆಪಿ ಸಾಂಪ್ರದಾಯಿಕ ಮತಗಳ ಜತೆಗೆ ತಮ್ಮ ವೈಯಕ್ತಿಕ ವರ್ಚಸ್ಸು ಹಾಗೂ ಉಪಮೇಯರ್ ಆಗಿದ್ದಾಗ ಮಾಡಿದ ಅಭಿವೃದ್ಧಿ ಕಾರ‌್ಯಗಳನ್ನು ಮುಂದಿಟ್ಟುಕೊಂಡು ಇತರೆ ಎಲ್ಲ ವರ್ಗಗಳ ಮತಗಳಲ್ಲೂ ಒಂದಷ್ಟು ಪಾಲು ಪಡೆಯುವ ಪ್ರಯತ್ನದಲ್ಲಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ ಎನ್ನುತ್ತಿರುವ ಜನರು ಬದಲಾವಣೆ ಬಯಸಿದರೆ ಅದು ಕೂಡ ಬಿಜೆಪಿಗೆ ನೆರವಾಗಲಿದೆ. 

loader