ದಾವಣಗೆರೆ : ಮಧ್ಯ ಕರ್ನಾಟಕದ ‘ಕಾಂಗ್ರೆಸ್ಸಿನ ಭದ್ರಕೋಟೆ’ ದಾವಣಗೆರೆ 2 ಮೀಸಲು ಸೇರಿ 8 ಕ್ಷೇತ್ರಗಳನ್ನು ಒಳಗೊಂಡಿದೆ. ಅಭಿವೃದ್ಧಿಯನ್ನೇ ಮುಂದಿಟ್ಟುಕೊಂಡು ಸಾಂಪ್ರದಾಯಿಕ ಎದುರಾಳಿಗಳಾದ ಕಾಂಗ್ರೆಸ್-ಬಿಜೆಪಿ ಮತದಾರರ ಮುಂದೆ ಹೋಗುತ್ತಿದ್ದರೆ, ಎರಡೂ ಪಕ್ಷಗಳಿಗೆ ಕೆಲವೆಡೆ ಜೆಡಿಎಸ್, ಜೆಡಿಯು ಸವಾಲು ಒಡ್ಡುತ್ತಿವೆ. ಜತೆಗೆ ಬಂಡಾಯದ ಬಾವುಟ ಹಿಡಿದವರು ಬಿಸಿ ತುಪ್ಪವಾಗಿದ್ದಾರೆ.

ನಾಗರಾಜ್ ಬಡದಾಳ್

ದಾವಣಗೆರೆ ಉತ್ತರ : ಇದು ಕಾಂಗ್ರೆಸ್- ಬಿಜೆಪಿಗೆ ಪ್ರತಿಷ್ಠೆಯ ಕಣ. ಬದ್ಧ ವೈರಿಗಳಾದ ಕಾಂಗ್ರೆಸ್ಸಿನ ಎಸ್.ಎಸ್. ಮಲ್ಲಿಕಾರ್ಜುನ, ಬಿಜೆಪಿಯ ಎಸ್.ಎ. ರವೀಂದ್ರನಾಥ್ ಕಣದಲ್ಲಿದ್ದಾರೆ. ಲಿಂಗಾಯತ, ಕುರುಬ, ಪರಿಶಿಷ್ಟ ರು, ಮುಸ್ಲಿಂ ಮತಗಳೇ ನಿರ್ಣಾಯಕ. ಅಭ್ಯರ್ಥಿಗಳಿಬ್ಬರೂ ಲಿಂಗಾಯತರು. ಹೀಗಾಗಿ ಆ ಸಮುದಾಯದ ಮತಗಳ ವಿಭಜನೆ ಸಂಭವ ಅಧಿಕ. ಮುಸ್ಲಿಂ, ಹಿಂದುಳಿದವರು, ದಲಿತರು ಕಾಂಗ್ರೆಸ್ಸಿನ  ಕೈಹಿಡಿಯುವ ನಿರೀಕ್ಷೆ ಇದ್ದರೆ ನವ ಮತದಾರರು, ಯುವ ಪೀಳಿಗೆ ಮತ ಬಿಜೆಪಿ ಪಾಲಾಗುವ ಸಾಧ್ಯತೆ ಇದೆ. ಕಳೆದ ಬಾರಿ ಇದ್ದ ಬಿಜೆಪಿ- ಕೆಜೆಪಿ ಗೊಂದಲ ಈಗಿಲ್ಲ. ಬಿಜೆಪಿ ಬಗ್ಗೆ ಜನರ ಒಲವು ಗುಪ್ತಗಾಮಿ ನಿಯಂತೆ ಹರಿಯುತ್ತಿದೆ ಎನ್ನಲಾಗುತ್ತಿದ್ದು, ಟಿ-20 ಕ್ರಿಕೆಟ್‌ನ ಕೊನೆ ಓವರ್‌ನ ಕಡೆ ಎಸೆತದ ಫಲಿತಾಂಶದಂತೆ ಇಲ್ಲಿನ ಫಲಿತಾಂಶವೂ ರೋಚಕವಾದರೆ ಅಚ್ಚರಿ ಇಲ್ಲ. ಬಿಜೆಪಿ ಟಿಕೆಟ್ ವಂಚಿತ ಒಕ್ಕಲಿಗ ಜನಾಂಗದ ಆನಂದಪ್ಪ ಇಲ್ಲಿ ಜೆಡಿಎಸ್ ಅಭ್ಯರ್ಥಿ. ಅವರು ಪಡೆವ ಮತಗಳು ಫಲಿತಾಂಶ ನಿರ್ಧರಿಸುವ ಸಾಧ್ಯತೆ ಇದೆ.

ದಾವಣಗೆರೆ ದಕ್ಷಿಣ : ಕ್ಷೆೀತ್ರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಏಕಚಕ್ರಾಧಿಪತಿಯಂತೆ ಆಯ್ಕೆ ಯಾದವರು ಕಾಂಗ್ರೆಸ್ಸಿನ ಡಾ. ಶಾಮನೂರು ಶಿವಶಂಕರಪ್ಪ. ಇಳಿ  ವಯಸ್ಸಿನಲ್ಲೂ ಕಣದಲ್ಲಿರುವ ಅವರಿಗೆ ಇದೇ ಕಡೇ ಚುನಾವಣೆ. ಶಾಮನೂರು ವಿರುದ್ಧ ಮೂರು ಸಲ ಪರಾಭವಗೊಂಡಿರುವ  ಬಿಜೆಪಿಯ ಯಶವಂತರಾವ್ ಜಾಧವ್ ಮತ್ತೆ ಬಿಜೆಪಿಯಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅನುಕಂಪದ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಲಿಂಗಾಯತ, ಕುರುಬ, ಮುಸ್ಲಿಂ, ಪರಿಶಿಷ್ಟರು ಹೆಚ್ಚಿರುವ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಜೆ. ಅಮಾನುಲ್ಲಾ ಖಾನ್, ಆಮ್ ಆದ್ಮಿ ಪಕ್ಷದಿಂದ ವಾಸವಿ ರಾಘವೇಂದ್ರ ಸ್ಪರ್ಧಿಸಿದ್ದಾರೆ. ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆದ ಶಾಮನೂರು ಅವರು ಜಾತಿ ಮತಗಳ ಜೊತೆ ಕುರುಬರು, ಪರಿಶಿಷ್ಟರು, ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಸಂಸದ ಜಿ.ಎಂ. ಸಿದ್ದೇಶ್ವರ ಪರಮಾಪ್ತರೂ ಆದ ಯಶವಂತರಾವ್ ಮರಾಠ ಕ್ಷತ್ರಿಯ ಸಮಾಜಕ್ಕೆ ಸೇರಿದ ವರು. ಹಗ್ಗ ಜಗ್ಗಾಟದಂತಹ ಬಿರುಸಿನ ಸ್ಪರ್ಧೆ ಇಲ್ಲಿ ಏರ್ಪಟ್ಟಿದೆ.

ಹರಿಹರ : ಜೀವನದಿ ತುಂಗಭದ್ರಾ ತಟದ ಹರಿಹರ ಕ್ಷೇತ್ರದ ಮತದಾರರದು ಚಂಚಲ ಮನಸ್ಸು. ಒಮ್ಮೆ ಗೆದ್ದವರನ್ನು ಇಲ್ಲಿನ ಜನ ಸತತ ಎರಡನೇ  ಬಾರಿಗೆ ಆಯ್ಕೆ ಮಾಡಿಲ್ಲ. ಕ್ಷೇತ್ರದ ಜೆಡಿಎಸ್ ಶಾಸಕ ಎಚ್.ಎಸ್. ಶಿವಶಂಕರ್, ಬಿಜೆಪಿ ಮಾಜಿ ಶಾಸಕ ಬಿ.ಪಿ. ಹರೀಶ, ಕಾಂಗ್ರೆಸ್ಸಿನ ಎಸ್. ರಾಮಪ್ಪ ಮಧ್ಯೆ ತ್ರಿಕೋನ ಸ್ಪರ್ಧೆ ಇದೆ. ಶಿವಶಂಕರ, ಹರೀಶ ಲಿಂಗಾಯತರಾದರೆ, ರಾಮಪ್ಪ ಕುರುಬರು. ಲಿಂಗಾಯತ, ಕುರುಬರು, ಪರಿಶಿಷ್ಟರು, ಎಸ್ಟಿ, ಮುಸ್ಲಿಂ ಮತಗಳು ಹೆಚ್ಚಿರುವ ಕ್ಷೇತ್ರವಿದು. ಪಕ್ಷಗಳ ಜೊತೆಗೆ ಅಭ್ಯರ್ಥಿ ಜಾತಿ, ವೈಯಕ್ತಿಕ ವರ್ಚಸ್ಸೂ ಇಲ್ಲಿ ಪರಿಗಣಿಸಲ್ಪಡುತ್ತದೆ. ಮುಸ್ಲಿಂ ಮತಗಳ ಮೇಲೆ ಕಾಂಗ್ರೆಸ್, ಜೆಡಿಎಸ್ ಕಣ್ಣಿಟ್ಟಿದ್ದರೆ, ರೈತರು, ಯುವ ಮತದಾರರು, ನವ ಮತದಾರರತ್ತ ಬಿಜೆಪಿ ದೃಷ್ಟಿ ಹರಿದಿದೆ. ಮೂವರ ಪೈಪೋಟಿ ಯಲ್ಲಿ ಕ್ಷೇತ್ರದ ಮತದಾರರು ಒಮ್ಮೆ ಗೆದ್ದವರನ್ನು ನಂತರದ ಚುನಾವಣೆಯಲ್ಲಿ ಆಯ್ಕೆ ಮಾಡುವುದಿಲ್ಲವೆಂಬುದನ್ನು ಸುಳ್ಳು ಮಾಡು ತ್ತಾರೋ, ಸತ್ಯವಾಗಿಸುತ್ತಾರೋ ಎಂಬುದೇ ಈಗ ಕುತೂಹಲ.

ಚನ್ನಗಿರಿ : ಮಾಜಿ ಸಿಎಂ ದಿವಂಗತ ಜೆ.ಎಚ್. ಪಟೇಲರ ತವರು ಕ್ಷೇತ್ರ. ಸಾಂಪ್ರದಾಯಿಕ ವೈರಿಗಳಾದ ಕಾಂಗ್ರೆಸ್- ಬಿಜೆಪಿಗೆ ಜೆಡಿಎಸ್- ಜೆಡಿಯು ಸ್ಪರ್ಧೆಯೊಡ್ಡಿವೆ. ಕಾಂಗ್ರೆಸ್ಸಿನ ವಡ್ನಾಳ್ ರಾಜಣ್ಣ ಪುನ ರಾಯ್ಕೆ ಬಯಸಿದ್ದರೆ, ಕೆಜೆಪಿಯಿಂದ ಕಳೆದ ಸಲ ಸ್ಪರ್ಧಿಸಿದ್ದ ಮಾಡಾಳ್ ವಿರೂಪಾಕ್ಷಪ್ಪ ಈಗ ಬಿಜೆಪಿ ಅಭ್ಯರ್ಥಿ. ಜೆಡಿಯುನಿಂದ ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಕಣಕ್ಕಿಳಿದರೆ, ಜೆಡಿಎಸ್‌ನಿಂದ ಹೊದಿಗೆರೆ ರಮೇಶ ಸ್ಪರ್ಧಿಸಿದ್ದಾರೆ. ರಾಜಣ್ಣ, ವಿರೂಪಾಕ್ಷಪ್ಪ, ಮಹಿಮಾ ಮೂವರೂ ಲಿಂಗಾಯತರು. ರಮೇಶ ಎಸ್ಟಿಗೆ ಸೇರಿದವರು. ಕ್ಷೇತ್ರದಲ್ಲಿ ಈ ಬಾರಿ ಚತುಷ್ಕೋನ ಸ್ಪರ್ಧೆ ಇದೆ. ಸಾಂಪ್ರದಾಯಿಕ ಮತಗಳು ಹಂಚಿ ಹೋದರೆ ಕಾಂಗ್ರೆಸ್ಸಿಗೆ ಅಪಾಯ ತಪ್ಪಿದ್ದಲ್ಲ. ಇದರ ಲಾಭ ಪಡೆಯಲು ಯುವ, ನವ ಮತದಾರರು, ರೈತರ ಮತ ನೆಚ್ಚಿಕೊಂಡ ಬಿಜೆಪಿ ಹಾದಿ ಸುಗಮವಾದರೂ ಅಚ್ಚರಿ ಇಲ್ಲ. ಇನ್ನು ಮಹಿಮಾಗೆ ತಮ್ಮದೇ ಪ್ರಭಾವವಿದೆ. ರಮೇಶ ಜಾತಿ ಮತ ನೆಚ್ಚಿಕೊಂಡಿದ್ದಾರೆ.


ಹೊನ್ನಾಳಿ
ಕಾಂಗ್ರೆಸ್ಸಿನ ಹಾಲಿ ಶಾಸಕ ಡಿ.ಜಿ. ಶಾಂತನಗೌಡ, ಬಿಜೆಪಿಯ ಎಂ.ಪಿ. ರೇಣುಕಾಚಾರ್ಯ ಮಧ್ಯೆ ನೇರ ಸ್ಪರ್ಧೆ ಇರುವ ಕ್ಷೇತ್ರ. ಬಿಎಸ್‌ಪಿಯಿಂದ ಸತ್ಯನಾರಾಯಣ ಕಠಾರಿ ಅಖಾಡದಲ್ಲಿದ್ದಾರೆ. ಒಟ್ಟು 10 ಅಭ್ಯರ್ಥಿಗಳು ಕಣದಲ್ಲಿದ್ದರೂ, ಸಾಂಪ್ರದಾಯಿಕ ವೈರಿ  ಗಳಾದ ಕಾಂಗ್ರೆಸ್-ಬಿಜೆಪಿ ಮಧ್ಯೆಯೇ ಹೋರಾಟ. ಲಿಂಗಾಯತ, ಕುರುಬರು, ಮುಸ್ಲಿಂ, ಪರಿಶಿಷ್ಟರು ಕ್ಷೇತ್ರದಲ್ಲಿ ಹೆಚ್ಚಿದ್ದಾರೆ. ಕುರುಬ ಸಮುದಾಯದ ಎಚ್.ಬಿ. ಮಂಜಪ್ಪ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾ ಗಿದ್ದು, ಕಳೆದ ಬಾರಿಯಂತೆ ಈ ಸಲವೂ ಅವರಿಗೆ ಟಿಕೆಟ್ ತಪ್ಪಿದೆ.ಹೀಗಾಗಿ ಕುರುಬರು ಕಾಂಗ್ರೆಸ್ಸಿನ ಮೇಲೆ ಮುನಿಸಿಕೊಂಡಿದೆಯೆಂಬ ಗುಸುಗುಸು ಕೇಳಿ ಬರುತ್ತಿದೆ. ಆದರೆ, ಸಿಎಂ ಸಿದ್ದರಾಮಯ್ಯ ಪರ ಸಮುದಾಯ ನಿಂತಿದೆ ಎಂದೂ ಹೇಳಲಾಗುತ್ತಿದೆ. ಬಿಜೆಪಿ ಟಿಕೆಟ್ ವಂಚಿತ ಆಕಾಂಕ್ಷಿಗಳೂ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.  ಅಧಿಕಾರವಿಲ್ಲದಿದ್ದರೂ ಜನರ ಜತೆ ಒಡನಾಟ ಹೊಂದಿರುವ ರೇಣು ಕಾಚಾರ್ಯ ಸವಾಲನ್ನು ಶಾಂತನಗೌಡ ಇಲ್ಲಿ ಎದುರಿಸಬೇಕಿದೆ

ಮಾಯಕೊಂಡ
ಪರಿಶಿಷ್ಟ ಜಾತಿಗೆ ಮೀಸಲಾದ ಮಾಯಕೊಂಡ ಕ್ಷೇತ್ರ ಬಿಜೆಪಿಯ ಅತ್ಯಂತ ಭದ್ರಕೋಟೆಯಾಗಿತ್ತು. ಆದರೆ ಕಳೆದ ಬಾರಿಯ ಚುನಾವಣೆಯಲ್ಲಿ ಕೆಜೆಪಿ- ಬಿಜೆಪಿ- ಬಿಎಸ್ಸಾರ್ ಗೊಂದಲ ದಿಂದಾಗಿ ಕಾಂಗ್ರೆಸ್ಸಿಗೆ ಒಲಿದಿತ್ತು. ಹಾಲಿ ಶಾಸಕ ಕೆ. ಶಿವಮೂರ್ತಿನಾಯ್ಕ ಬದಲಿಗೆ ಎಚ್. ಆಂಜನೇಯ ಅಳಿಯ ಕೆ.ಎಸ್. ಬಸವರಾ ಜಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಬಿಜೆಪಿಯಿಂದ ಪ್ರೊ. ಎನ್. ಲಿಂಗಣ್ಣ ಕಣಕ್ಕಿಳಿದಿದ್ದಾರೆ. ಬಿಜೆಪಿ ಟಿಕೆಟ್ ವಂಚಿತ ಎಂ. ಬಸವರಾಜ ನಾಯ್ಕ ಜೆಡಿಯು ಆಶ್ರಯ ಪಡೆದರೆ, ಭೋವಿ ಸಮಾಜದ ಆನಂದಪ್ಪ ಬಂಡಾಯ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್‌ನಿಂದ ಶೀಲಾ ನಾಯ್ಕ ಕಣದಲ್ಲಿದ್ದಾರೆ. ಕಾಂಗ್ರೆಸ್, ಬಿಜೆಪಿ ಎರಡಕ್ಕೂ ಟಿಕೆಟ್ ವಂಚಿತರ ಅಸಮಾಧಾನದ ಸಮಸ್ಯೆ ಇದೆ. ಲಿಂಗಾಯತ, ಕುರುಬರು, ಭೋವಿ, ನಾಯಕರ ಮತ ಯಾರಿಗೆ ಬಿಳುತ್ತವೆಂಬು ದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ. ಲಂಬಾಣಿ ಸಮು ದಾಯ ಜೆಡಿಯುನತ್ತ ಆಸಕ್ತಿ ತೋರಿದರೂ ಅಚ್ಚರಿ ಇಲ್ಲ.

ಹರಪನಹಳ್ಳಿ
ಹೈದ್ರಾಬಾದ್ ಕರ್ನಾಟಕದ ಭಾಗವಾದ ಹರಪನಹಳ್ಳಿ ಕ್ಷೇತ್ರಕ್ಕೆ 371 ಜೆ ಸೌಲಭ್ಯದ್ದೇ ಮುಖ್ಯ ಬೇಡಿಕೆ. ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಹಣಾಹಣಿ ಇದ್ದರೂ ದಿಢೀರನೆ ಕಣಕ್ಕಿಳಿದ ಜೆಡಿಎಸ್ ತ್ರಿಕೋನ ಸ್ಪರ್ಧೆಗೆ ಕಾರಣವಾಗಿದೆ. ಕಾಂಗ್ರೆಸ್ಸಿಂದ ಎಂ.ಪಿ.ರವೀಂದ್ರ, ಬಿಜೆಪಿಯಿಂದ ಕರುಣಾಕರ ರೆಡ್ಡಿ ಅಭ್ಯರ್ಥಿಯಾಗಿದ್ದಾರೆ. ಕಳೆದ ಬಾರಿಯ ಕೆಜೆಪಿ ಅಭ್ಯರ್ಥಿ ಅರಸೀಕೆರೆ ಕೊಟ್ರೇಶ್ ಬಿಜೆಪಿ ಟಿಕೆಟ್ ತಪ್ಪಿದ್ದರಿಂದ ಬಂಡಾಯದ ಬಾವುಟ ಹಾರಿಸಲು ಸಜ್ಜಾಗಿದ್ದರು. ಅಭ್ಯರ್ಥಿಗಾಗಿ ಹುಡುಕಾಡುತ್ತಿದ್ದ ಜೆಡಿಎಸ್ ಜಾಣತನ ಪ್ರದರ್ಶಿಸಿ ಕೊಟ್ರೇಶ್‌ರನ್ನು ತೆಕ್ಕೆಗೆ ಸೆಳೆದು, ಕಣಕ್ಕಿಳಿಸಿದೆ. ಕಾಂಗ್ರೆಸ್ಸಿನ ರವೀಂದ್ರ ಜಾತಿಯಲ್ಲಿ ಜಂಗಮ ಸಮಾಜದವರಾದರೆ, ಕರುಣಾಕರ ರೆಡ್ಡಿ ಅವರು ರೆಡ್ಡಿ ಜನಾಂಗದವರು. ಇನ್ನು ಕೊಟ್ರೇಶ ಕ್ಷೇತ್ರದ ಪ್ರಬಲ ಪಂಚಮಸಾಲಿ ಲಿಂಗಾಯತ. ಜಾತಿ ಬೆಂಬಲದ ಜೊತೆ ಪರಿಶಿಷ್ಟರು, ಮುಸ್ಲಿಂ ಮತ ಬಿದ್ದರೆ ಕೊಟ್ರೇಶ ಹಾದಿ ಸುಗಮ. ರವೀಂದ್ರ, ಕರು ಣಾಕರ ರೆಡ್ಡಿ ತಮ್ಮ ವರ್ಚಸ್ಸನ್ನು ಇಲ್ಲಿ ಪಣಕ್ಕಿಡಬೇಕಿದೆ.


ಜಗಳೂರು 
ಬರಗಾಲವನ್ನೇ ಹಾಸು ಹೊದ್ದಿರುವ ಈ ಕ್ಷೇತ್ರದಲ್ಲಿ ರಾಜಕೀಯಕ್ಕೆ ಬರ ಇಲ್ಲ. ಬಿಜೆಪಿ ಅಭ್ಯರ್ಥಿ ಎಸ್.ವಿ. ರಾಮಚಂದ್ರ ವರ್ಷಗ ಳಿಂದಲೇ ಚುನಾವಣೆಗೆ ತಯಾರಿ ನಡೆಸಿದ್ದಾರೆ. ಆದರೆ, ಕಾಂಗ್ರೆಸ್ಸಿನ ಶಾಸಕ ಎಚ್.ಪಿ. ರಾಜೇಶ್ ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಯಾಸಪ ಡ ಬೇಕಾಯಿತು. ಕಾಂಗ್ರೆಸ್ ಮೊದಲು ಎಸ್ಟಿ ಮಹಿಳೆಗೆ ಬಿ ಫಾರಂ ಕೊಟ್ಟು, ಕಸಿದುಕೊಂಡಿದ್ದು ಜನರ ಬೇಸರಕ್ಕೆ ಕಾರಣವಾಗಿದೆ. ಇಂಗ್ಲಿಷ್ ಪ್ರಾಧ್ಯಾಪಕಿ ಪುಷ್ಪಾ ಲಕ್ಷ್ಮಣಸ್ವಾಮಿ ತಮಗೆ ಅವಕಾಶ ತಪ್ಪಿ ದ್ದರಿಂದ ಬೇಸತ್ತು ಕಾಂಗ್ರೆಸ್ ವಿರುದ್ಧ ಬಂಡಾಯದ ಕಹಳೆಯೂದಿ ದ್ದಾರೆ. ಇಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿ ಪ್ರತಿರೋಧದ ಜೊತೆಗೆ ತನ್ನದೇ ಪಕ್ಷದ ಬಂಡಾಯ ಅಭ್ಯರ್ಥಿ ಅದರಲ್ಲೂ ಮಹಿಳೆ ಸ್ಪರ್ಧೆಯನ್ನೂ  ಎದುರಿಸಬೇಕಾದ ಸಂದಿಗ್ಧತೆಯಲ್ಲಿದೆ. ಅತ್ಯಾಧುನಿಕ ಬಸ್‌ನಲ್ಲೇ ಪುಷ್ಪಾ ಕ್ಷೇತ್ರಾದ್ಯಂತ ಪ್ರಚಾರ ಕೈಗೊಂಡಿದ್ದರೆ, ರಾಜೇಶ್ ತಾವೂ ಕಡಿಮೆ ಇಲ್ಲವೆಂಬಂತೆ ಪ್ರಚಾರ ನಡೆಸಿದ್ದಾರೆ. ಕ್ಷೇತ್ರವನ್ನು ಮರಳಿ ಪಡೆಯಲು ರಾಮಚಂದ್ರ ಸಹ ಭರ್ಜರಿ ಪ್ರಚಾರ ನಡೆಸಿದ್ದಾರೆ.