ದಾಸರಹಳ್ಳಿಯಲ್ಲಿ ಹ್ಯಾಟ್ರಿಕ್ ತವಕದಲ್ಲಿದೆ ಬಿಜೆಪಿ

Dasarahalli Constituency Election
Highlights

ಕೈಗಾರಿಕಾ ಕಾರ್ಮಿಕರು ಹಾಗೂ ಗಾರ್ಮೆಂಟ್ಸ್ ನೌಕರರಿಂದ ಕೂಡಿರುವ ದಾಸರಹಳ್ಳಿ 2008ರಲ್ಲಿ ಕ್ಷೇತ್ರ ವಿಂಗಡಣೆಗೂ ಮುನ್ನ ದೇಶದ ಅತಿ ದೊಡ್ಡ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದ್ದ ಉತ್ತರಹಳ್ಳಿ ಕ್ಷೇತ್ರದಲ್ಲಿತ್ತು. ನೂತನ ಕ್ಷೇತ್ರವಾದ ಬಳಿಕ 2008 ಮತ್ತು 2013 ರಲ್ಲಿ ಎರಡೂ ಬಾರಿಯೂ ಬಿಜೆಪಿ ಗೆಲವಿನ ನಗೆ ಬೀರಿದೆ. ಸತತ ಎರಡು ಗೆಲುವುಗಳನ್ನು ಪಡೆದಿರುವ ಬಿಜೆಪಿ ನಗರ ಘಟಕದ ಅಧ್ಯಕ್ಷರೂ ಆಗಿರುವ ಎಸ್. ಮುನಿರಾಜು, ಈ ಬಾರಿಯ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. 

ಎನ್.ಎಲ್.ಶಿವಮಾದು

ಬೆಂಗಳೂರು :  ಏಷ್ಯಾದಲ್ಲಿಯೇ ಅತಿ ದೊಡ್ಡ ಕೈಗಾರಿಕಾ ಪ್ರದೇಶ ಎಂಬ ಹೆಗ್ಗಳಿಕೆ ಪಡೆದಿರುವ ‘ಪೀಣ್ಯ ಕೈಗಾರಿಕಾ ಪ್ರದೇಶ’ವನ್ನು ಒಳಗೊಂಡಿರುವ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಸ್ಥಳೀಯ ನಿವಾಸಿಗಳಿಗಿಂತ ಹೆಚ್ಚು ವಲಸಿಗರಿಂದಲೇ ಕೂಡಿದೆ. ಬೆಂಗಳೂರು ನಗರ ಪ್ರವೇಶ ದ್ವಾರದ ಆಸುಪಾಸಿನಲ್ಲಿಯೇ ಇರುವುದರಿಂದ ತುಮಕೂರು, ಹಾಸನ ಮತ್ತು ಉತ್ತರ ಕರ್ನಾಟಕ ಭಾಗದಿಂದ ವಲಸೆ ಬಂದವರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. 

ಕೈಗಾರಿಕಾ ಕಾರ್ಮಿಕರು ಹಾಗೂ ಗಾರ್ಮೆಂಟ್ಸ್ ನೌಕರರಿಂದ ಕೂಡಿರುವ ಕ್ಷೇತ್ರವಾಗಿದೆ. 2008 ರಲ್ಲಿ ಕ್ಷೇತ್ರ ವಿಂಗಡಣೆಗೂ ಮುನ್ನ ದೇಶದ ಅತಿ ದೊಡ್ಡ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದ್ದ ಉತ್ತರಹಳ್ಳಿ ಕ್ಷೇತ್ರದಲ್ಲಿತ್ತು. ನೂತನ ಕ್ಷೇತ್ರವಾದ ಬಳಿಕ 2008 ಮತ್ತು 2013 ರಲ್ಲಿ ಎರಡೂ ಬಾರಿಯೂ ಬಿಜೆಪಿ ಗೆಲವಿನ ನಗೆ ಬೀರಿದೆ. ಸತತ ಎರಡು ಗೆಲುವುಗಳನ್ನು ಪಡೆದಿರುವ ಬಿಜೆಪಿ ನಗರ ಘಟಕದ ಅಧ್ಯಕ್ಷರೂ ಆಗಿರುವ ಎಸ್. ಮುನಿರಾಜು, ಈ ಬಾರಿಯ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. 

2008 ರಲ್ಲಿ ಜೆಡಿಎಸ್‌ನ ಅಂದಾನಪ್ಪ ಹಾಗೂ 2013 ರಲ್ಲಿ ಕಾಂಗ್ರೆಸ್‌ನ ಬಿ.ಎಲ್.ಶಂಕರ್ ವಿರುದ್ಧ ಗೆಲವು ಸಾಧಿಸಿರುವ ಎಸ್.  ಮುನಿರಾಜು ಹ್ಯಾಟ್ರಿಕ್ ಗೆಲುವು ಎದುರು ನೋಡುತ್ತಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್‌ನಲ್ಲಿ ಹೊಸ ಅಭ್ಯರ್ಥಿಗಳು ಸ್ಪರ್ಧಿಸುತ್ತಿರುವುದು ಬಿಜೆಪಿಗೆ ವರದಾನವಾಗಿ ಪರಿಣಮಿಸಬಹುದು. ಕಾಂಗ್ರೆಸ್ ಅಭ್ಯರ್ಥಿ ಪಿ.ಎನ್. ಕೃಷ್ಣಮೂರ್ತಿ ದಶಕಕ್ಕೂ ಹೆಚ್ಚಿನ ಕಾಲದಿಂದ ಕಾಂಗ್ರೆಸ್ ಕಾರ್ಯಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ಬಾರಿ ಟಿಕೆಟ್ ಪಡೆದಿದ್ದಾರೆ. ಕಾಂಗ್ರೆಸ್‌ನಲ್ಲಿಯೇ  ಇದ್ದು ಮಾಜಿ ಮುಖ್ಯಮಂತ್ರಿ ಕೃಷ್ಣಗೆ ಒಂದು ಕಾಲದಲ್ಲಿ ಗನ್ ಮ್ಯಾನ್ ಆಗಿದ್ದ ಆರ್. ಮಂಜುನಾಥ್ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಈಗಾಗಲೇ 2 ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ಸೋಲುಂಡಿರುವ ಮಂಜುನಾಥ್, ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಾಂತರ ಮಾಡು ವ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಪೀಣ್ಯ, ಮಲ್ಲಸಂದ್ರ, ಟಿ. ದಾಸರಹಳ್ಳಿ, ಬಾಗಲಕುಂಟೆ, ರಾಜಗೋಪಾಲನಗರ, ಹೆಗ್ಗನಹಳ್ಳಿ, ಶೆಟ್ಟಿಹಳ್ಳಿ ಸೇರಿದಂತೆ ಒಟ್ಟಾರೆ ಎಂಟು ಬಿಬಿಎಂಪಿ ವಾರ್ಡ್‌ಗಳ ಪೈಕಿ ಐದು ಬಿಜೆಪಿ ಪಾಳಯದಲ್ಲಿವೆ.ಇಬ್ಬರು ಕಾಂಗ್ರೆಸ್ ಮತ್ತು ಓರ್ವ ಜೆಡಿಎಸ್ ಸದಸ್ಯರಿದ್ದಾರೆ. ಆದರೆ, ವಲಸಿಗರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಅಭ್ಯರ್ಥಿಗಳ ಆತಂಕಕ್ಕೆ ಕಾರಣವಾಗಿದೆ. ಮತದಾರರು ಹಾಗೂ ಅಭ್ಯರ್ಥಿಗಳ ನಡುವೆ ಒಡನಾಟ, ಬಾಂಧವ್ಯ ಇಲ್ಲದಿರುವುದರಿಂದ  ಮತಯಾಚನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿ ಕೊಳ್ಳುವಲ್ಲಿ ಅತಂತ್ರ ಪರಿಸ್ಥಿತಿ ಎದುರಿ ಸುತ್ತಿದ್ದಾರೆ. 

ಕೇವಲ ಮತಪಟ್ಟಿಯಲ್ಲಿರುವ ಹೆಸರು ಹಾಗೂ ಕ್ಷೇತ್ರದಲ್ಲಿರುವ ಮನೆಗಳಿಗಷ್ಟೇ ಹೋಗಿ ಮತಯಾಚಿಸಬೇಕಿದೆ. ಮತದಾರರ ಮುಖ ಪರಿಚಯ ಇಲ್ಲದಿರುವುದರಿಂದ ಇಂತಿಷ್ಟೇ ಮತಗಳು ನಿಗದಿತ ಪಕ್ಷ ಪಡೆಯಲಿದೆ ಎಂದು ನೆಚ್ಚಿಕೊಳ್ಳಲು ಸಾಧ್ಯವಿಲ್ಲ. ತ್ರಿಕೋನ ಸ್ಪರ್ಧೆ: ಕ್ಷೇತ್ರದಲ್ಲಿ ಒಟ್ಟಾರೆ 4.5 ಲಕ್ಷ ಮತದಾರರಿದ್ದು, ಈ ಪೈಕಿ ಅಂದಾಜು 1.2 ಲಕ್ಷ ಒಕ್ಕಲಿಗ ಸಮುದಾಯದ ಮತಗಳಿವೆ. ಲಿಂಗಾಯತ ಸಮುದಾಯದ 30 ಸಾವಿರ, ಪರಿಶಿಷ್ಟ ಜಾತಿ, ಪಂಗಡದ 50 ರಿಂದ 60 ಸಾವಿರ ಮತಗಳು, ಕುರುಬ, ಬಣಜಿಗ, ಕ್ರಿಶ್ಟಿಯನ್, ಮಲಯಾಳಿ ತಲಾ 20 ಸಾವಿರ ಮತಗಳಿವೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರೂ ಪಕ್ಷದ ಅಭ್ಯರ್ಥಿಗಳು ಕೂಡ ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳು ಆಗಿರುವುದರಿಂದ ಜಾತಿ ಲೆಕ್ಕಾಚಾರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಹಾಲಿ ಶಾಸಕರಾಗಿರುವ ಮುನಿರಾಜು ಅವರನ್ನು ಜೆಡಿಎಸ್ ಮತ್ತು ಕಾಂಗ್ರೆಸ್‌ನ ಇಬ್ಬರೂ ಅಭ್ಯರ್ಥಿಗಳು ಎದುರಿಸಬೇಕಿದೆ. ಕ್ಷೇತ್ರದಲ್ಲಿ ಮೂಲ ಸೌಕರ್ಯ ಕಲ್ಪಿಸದಿರುವುದನ್ನೇ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಮಾನ ದಂಡವಾಗಿಟ್ಟು ಪ್ರಚಾರಕ್ಕೆ ಇಳಿದಿದ್ದರೆ, ಕಾವೇರಿ ನೀರಿನ ಸಂಪರ್ಕ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನೇ ಮುಂದಿಟ್ಟುಕೊಂಡು ಮುನಿರಾಜು ಮತಯಾಚನೆ ಮಾಡುತ್ತಿದ್ದಾರೆ. 

ಪ್ರಮುಖ ಸಮಸ್ಯೆಗಳೇನು?: ಕ್ಷೇತ್ರದಲ್ಲಿರುವ ರಸ್ತೆಗಳಿಗೆ ಸಮರ್ಪಕ ಡಾಂಬರ್ ಇಲ್ಲ, ಅರ್ಧಕ್ಕರ್ಧ ರಸ್ತೆಗಳಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ, ಬೀದಿ ದೀಪಗಳಿಲ್ಲ, ರಿಯಲ್ ಎಸ್ಟೇಟ್ ಮಾಫಿಯಾ ಹಾಗೂ ಕ್ಷೇತ್ರದ ಕೆಲವೆಡೆ ಕಾನೂನು ಸುವ್ಯವಸ್ಥೆ ಇಲ್ಲದೆ ಜನರು ನೆಮ್ಮದಿ ಕಳೆದುಕೊಂಡಿರುವ ಪ್ರಕರಣಗಳಿವೆ. ಕ್ಷೇತ್ರದ ವಿವಿಧೆಡೆ ನೆಲೆಸಿರುವ ಸುಮಾರು 10 ಸಾವಿರಕ್ಕೂ ಹೆಚ್ಚಿನ ಜನರಿಗೆ 20 ವರ್ಷಗಳಿಂದ ಹಕ್ಕುಪತ್ರ ದೊರೆಯದಿರುವುದು ಕೂಡ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ.

loader