ದಕ್ಷಿಣ ಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ 8 ಕ್ಷೇತ್ರಗಳಲ್ಲಿ ಗೆಲ್ಲಲೇಬೇಕು ಎಂಬ ಛಲ ತೊಟ್ಟಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಇನ್ನಿಲ್ಲದ ತಂತ್ರಗಾರಿಕೆಗೆ ಶರಣಾಗಿವೆ. ಟಿಕೆಟ್ ಹಂಚಿಕೆಯಲ್ಲಿನ ಅತೃಪ್ತಿ ಜಾತಿವಾರು ನೆಲೆಯಲ್ಲಿ ಬಹಿರಂಗವಾಗಿ ತಾರಕಕ್ಕೆ ಏರಿದ್ದು, ಇದು ಬಿಜೆಪಿ ಪಾಲಿಗೆ ಮಗ್ಗುಲ ಮುಳ್ಳಾಗಿ ಕಾಡತೊಡಗಿದೆ. ಬೆರಳೆಣಿಕೆ ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಸಿಪಿಎಂ ಅಸ್ತಿತ್ವವನ್ನು ಸಾಬೀತುಪಡಿಸಲು ಹೊರಟಿವೆ. 

ಆತ್ಮಭೂಷಣ್ 

ಸುಳ್ಯ 
ಜಿಲ್ಲೆಯಲ್ಲಿ ಬಿಜೆಪಿಗೆ ಭದ್ರ ತಳಹದಿ ಹಾಕಿಕೊಟ್ಟ ಮೀಸಲು ಕ್ಷೇತ್ರ. 1994ರಿಂದ ಅಂಗಾರ ಅವರು ಸತತ 5 ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್ಸಿಂದ 3 ಬಾರಿ ಪರಾಭವಗೊಂಡಿದ್ದ ಡಾ. ರಘು 4ನೇ ಬಾರಿ ಕಣಕ್ಕಿಳಿದಿದ್ದಾರೆ. 2013 ರಲ್ಲಿ ಡಾ.ರಘು ಅವರು ಕೇವಲ 1,273  ಮತಗಳ ಅಂತರದಿಂದ ಹಿನ್ನಡೆ ಸಾಧಿಸಿದ್ದರು. ಈ ಬಾರಿ ಅವರು ಅಂಗಾರಗೆ ಪ್ರಬಲ ಸ್ಪರ್ಧೆ ಒಡ್ಡಲಿದ್ದಾರೆ. ಜಾತಿ ಲೆಕ್ಕಾಚಾರದಲ್ಲಿ ಸುಳ್ಯದಲ್ಲಿ ಗೌಡ ಸಮುದಾಯ ೪೦ ಸಾವಿರ, ಪರಿಶಿಷ್ಟ ಜಾತಿ 35 ಸಾವಿರ ಇದ್ದಾರೆ. ಅಲ್ಪಸಂಖ್ಯಾತರು ೫೫ ಸಾವಿರ. ಆದರೆ ಒಟ್ಟು 1.30 ಲಕ್ಷದಷ್ಟು ಹಿಂದೂಗಳೇ ಇದ್ದಾರೆ. ಹಾಲಿ ಶಾಸಕ ಅಂಗಾರ ಅಭಿವೃದ್ಧಿ ಕಾರ್ಯ ನಡೆಸಿಲ್ಲ ಎಂಬ ದೂರಿದೆ. ಸಂಘ ಪರಿವಾರದ ಪ್ರದೇಶವಾದ್ದರಿಂದ ಗೆಲುವಿಗೆ ಕಾಂಗ್ರೆಸ್ ಸಾಹಸ ಮಾಡಬೇಕು. 

ಪುತ್ತೂರು 
ಕಾಂಗ್ರೆಸ್‌ನಿಂದ 2ನೇ ಬಾರಿಗೆ ಶಾಸಕಿ ಶಕುಂತಳಾ ಶೆಟ್ಟಿ ಅವರಿಗೆ ಟಿಕೆಟ್ ಲಭಿಸಿದೆ. ಕಳೆದ ಬಾರಿ ಅವರ ಗೆಲುವಿಗೆ ನಿರ್ಣಾಯಕ ಪಾತ್ರ ವಹಿಸಿದ ಮತಗಳು ಈ ಬಾರಿ ಯಾರ ಪರ ಎಂಬುದು ನಿಗೂಢ. ಇದರ ಮೇಲೆ ಇಲ್ಲಿ ಗೆಲುವು ನಿರ್ಧಾರವಾಗಲಿದೆ. ಈ ಬಾರಿಯೂ ಶಕುಂತಳಾ ಶೆಟ್ಟಿ ಹಾಗೂ ಸಂಜೀವ ಮಠಂದೂರು ಪ್ರಮುಖ ಎದುರಾಳಿಗಳು. ಜೆಡಿಎಸ್ ಕೂಡ ಸ್ಪರ್ಧಿಸುತ್ತಿದೆ. ಟಿಕೆಟ್ ಹಂಚಿಕೆ ವೇಳೆ ಬಿಜೆಪಿಯಲ್ಲಿ ಬಂಡಾಯ ಕಾಣಿಸಿಕೊಂಡಿತ್ತು. ಹಿಂದೂ ಸಂಘಟಕ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರು  ಅಭಿಯಾನ ನಡೆಸಿದ್ದರು. ಪುತ್ತಿಲ ಅತೃಪ್ತಿ ಶಮನವಾಗಿದೆ. ಆದರೆಮತ್ತೊಬ್ಬ ಆಕಾಂಕ್ಷಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿ ತಟಸ್ಥರಾಗಿದ್ದಾರೆ. 

ಬೆಳ್ತಂಗಡಿ 
ಕಾಂಗ್ರೆಸ್‌ನಿಂದ ಹಾಲಿ ಶಾಸಕ ವಸಂತ ಬಂಗೇರ 9ನೇ ಬಾರಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಈ ಬಾರಿ ಹೊಸ ಮುಖವಾಗಿ ವಕೀಲ ಹರೀಶ್ ಪೂಂಜಾ ಅವರನ್ನು ಕಣಕ್ಕಿಳಿಸಿದೆ. ವಸಂತ ಬಂಗೇರ ಅವರಿಗೆ ೫ ಬಾರಿ ಶಾಸಕರಾದ ಅನುಭವವಿದೆ. ಹರೀಶ್ ಪೂಂಜಾ ಅವರು ಬಿಜೆಪಿ ವರಿಷ್ಠರು ನಡೆಸಿದ ಸಮೀಕ್ಷೆಯ ಅಭ್ಯರ್ಥಿ. ಇಲ್ಲಿ ಕಳೆದ ಬಾರಿ ಸ್ಪರ್ಧಿಸಿದ್ದ ರಂಜನ್ ಗೌಡ ಹಾಗೂ ಹಿಂದೆ ಸಚಿವರಾಗಿದ್ದ ಗಂಗಾಧರ ಗೌಡ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅಪ್ಪ-ಮಗ ತೀವ್ರ ಅಸಮಾಧಾನ ಗೊಂಡಿದ್ದಾರೆ. ಗಂಗಾಧರ ಗೌಡ ಕಾಂಗ್ರೆಸ್‌ಗೆ ಜಿಗಿದಿದ್ದಾರೆ. ಇದರ ಪ್ರತಿಫಲನ ಫಲಿತಾಂಶದಲ್ಲಿ ಬಿಂಬಿತವಾದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆಯಾದರೂ ಮೇ 15ರವರೆಗೆ ಕಾಯಬೇಕು.

ಬಂಟ್ವಾಳ
6 ಬಾರಿ ಶಾಸಕರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರಿಗೆ ಇದು ೮ನೇ ಚುನಾವಣೆ. ಅವರಿಗೆ ಎದುರಾಳಿ ಉದ್ಯಮಿ ರಾಜೇಶ್ ನಾಯ್ಕ್. ಕ್ಷೇತ್ರ ವ್ಯಾಪ್ತಿಯ ಕಲ್ಲಡ್ಕ, ಕನ್ಯಾನ ಸೇರಿದಂತೆ ವಿವಿಧೆಡೆ ನಡೆದ ಅಹಿತಕರ ಘಟನೆಗಳು ರಮಾನಾಥ ರೈ ಅವರನ್ನು ಕಾಡುತ್ತಿವೆ. ಕಲ್ಲಡ್ಕ ಶಾಲೆಗೆ ಕೊಲ್ಲೂರು ಕ್ಷೇತ್ರದಿಂದ ಸಿಗುತ್ತಿದ್ದ ಬಿಸಿಯೂಟ ಅನುದಾನವನ್ನು ರದ್ದುಗೊಳಿಸಿದ್ದು ಬಿಜೆಪಿಗೆ ಪ್ರಚಾ ರದ ವಸ್ತುವಾಗಿದೆ. ಜತೆಗೆ ಸಚಿವರು ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದ್ದಾರೆ ಎಂಬುದನ್ನೇ ಬಿಜೆಪಿ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಇದರ ಹೊರತಾಗಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ರೈ ನಡೆಸಿದ್ದಾರೆ. ಜಿದ್ದಾಜಿದ್ದಿ ಪೈಪೋಟಿ ಇದ್ದು ಯಾರೇ ಗೆದ್ದರೂ ಅಂತರ ಕಡಿಮೆ ಎಂಬ ಮಾತುಗಳಿವೆ.

ಮಂಗಳೂರು [ಉಳ್ಳಾಲ]
ಸತತ ಮೂರನೇ ಬಾರಿ ಶಾಸಕರಾಗಿರುವ ಯು.ಟಿ. ಖಾದರ್‌ಗೆ  ಇದು 4ನೇ ಬಾರಿಯ ಅದೃಷ್ಟ ಪರೀಕ್ಷೆ. ಸಚಿವರಾಗಿ ಕ್ಷೇತ್ರಕ್ಕೆ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಲ್ಲದೆ, ಬಹುಸಂಖ್ಯಾತರೊಂದಿಗೂ ಉತ್ತಮ ಬಾಂಧವ್ಯವನ್ನು ಅವರು ಮುಂದುವರಿಸಿಕೊಂಡು ಬಂದಿದ್ದಾರೆ. ಆದರೆ ಅಲ್ಪಸಂಖ್ಯಾತರ ಪರವಾಗಿ ಹೆಚ್ಚಿನ ಒಲವು ಹೊಂದಿದ್ದಾರೆ ಎಂಬ ಆರೋಪವಿದೆ. ಬಿಜೆಪಿಯಿಂದ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೊಸಮುಖವಾಗಿ ಕಣಕ್ಕೆ ಇಳಿದಿದ್ದಾರೆ. ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಪ್ರಾಬಲ್ಯವಿದ್ದು, ಆ ಸಮುದಾಯವೇ  ನಿರ್ಣಾಯಕವಾಗಿದೆ. ಜೆಡಿಎಸ್‌ನಿಂದ ಮಾಜಿ ಮೇಯರ್ ಅಶ್ರಫ್ ಅಭ್ಯರ್ಥಿಯಾಗಿದ್ದಾರೆ. ಅವರೇನಾದರೂ ಅಲ್ಪಸಂಖ್ಯಾತರ ಮತ ವಿಭಜಿಸಿದರೆ ಖಾದರ್‌ಗೆ ತೀವ್ರ ಪೈಪೋಟಿ ಎದುರಾಗುತ್ತದೆ.

ಮಂಗಳೂರು ದಕ್ಷಿಣ
ಕಾಂಗ್ರೆಸ್ಸಿನ ಹಾಲಿ ಶಾಸಕ ಜೆ.ಆರ್. ಲೋಬೋ 2ನೇ ಬಾರಿ  ಅದೃಷ್ಟ ಪರೀಕ್ಷೆಗೆ ಧುಮುಕಿದ್ದಾರೆ. ಬಾವುಟಗುಡ್ಡೆ ರಸ್ತೆಗೆ ಮೂಲ್ಕಿಸುಂದರ ರಾಮ್ ಶೆಟ್ಟಿ ಅವರ ಹೆಸರು ಇರಿಸುವ ವಿಚಾರದಲ್ಲಿ ಕ್ರೈಸ್ತರು ಮತ್ತು ಬಂಟರ ನಡುವಿನ ವಿವಾದ ಹಿನ್ನಡೆ ತಂದರೂ ಅಚ್ಚರಿ ಇಲ್ಲ. ವೇದವ್ಯಾಸ ಕಾಮತ್ ಬಿಜೆಪಿಯಿಂದ ಅಖಾಡಕ್ಕೆ ಇಳಿದಿದ್ದಾರೆ. ಬಿಜೆಪಿ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣವನ್ನು ನಿಭಾಯಿಸಿದ ರೀತಿ ಬಿಜೆಪಿಗೆ ತದ್ವಿರುದ್ಧ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬಿಜೆಪಿಯಿಂದ ಉಚ್ಚಾಟಿತ ಗೊಂಡಿದ್ದ ಶ್ರೀಕರ ಪ್ರಭು ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಮತಗಳ ಮೇಲೆ ಇವರು ಕಣ್ಣಿಟ್ಟಿದ್ದಾರೆ. ಬಿಜೆಪಿಯೊಳಗಿನ ಅಸಮಾಧಾನ ವರವಾಗಬಹುದು ಎಂಬ ನಿರೀಕ್ಷೆ ಕಾಂಗ್ರೆಸ್ಸಿಗಿದೆ. 

ಮಂಗಳೂರು ಉತ್ತರ
ಕಾಂಗ್ರೆಸ್ಸಿನ ಹಾಲಿ ಶಾಸಕ ಮೊಯ್ದಿನ್ ಬಾವಾ ೩ನೇ ಬಾರಿ  ಕಣಕ್ಕಿಳಿಯುತ್ತಿದ್ದಾರೆ. ಕೆಲ ಅಹಿತಕರ ಘಟನೆಗಳು ಬಾವಾ ಇಮೇಜಿಗೆ ಧಕ್ಕೆ ತಂದಿರುವುದು ಸುಳ್ಳಲ್ಲ. ಬಿಜೆಪಿಯು ಡಾ.ಭರತ್ ಶೆಟ್ಟಿ ಅವರಿಗೆ ಟಿಕೆಟ್ ನೀಡಿದೆ. ಇದು ಪ್ರಬಲ ಆಕಾಂಕ್ಷಿಗಳಾಗಿದ್ದ ಮಾಜಿ ಸಚಿವ ಕೃಷ್ಣ ಪಾಲೇಮಾರ್ ಹಾಗೂ ಬಿಜೆಪಿ ಹಿಂದುಳಿದ ವರ್ಗಗಳ ಮುಖಂಡ ಸತ್ಯಜಿತ್ ಸುರತ್ಕಲ್ ಅಸಮಾಧಾನಕ್ಕೆ  ಕಾರಣವಾಗಿದೆ. ಸತ್ಯಜಿತ್ ಸುರತ್ಕಲ್‌ರನ್ನು ಮನವೊಲಿಸುವ ಯತ್ನಫಲಪ್ರದವಾಗಿಲ್ಲ. ಅವರು ತಟಸ್ಥರಾಗಿದ್ದಾರೆ. ಇದರ ಪರಿಣಾಮ
ಜಿಲ್ಲೆಯಲ್ಲಿ ಬಿಲ್ಲವ ವರ್ಸಸ್ ಬಿಜೆಪಿ ಎಂಬಂತಾಗಿದೆ. ಡಿವೈಎಫ್‌ಐ  ಮುಖಂಡ ಮುನೀರ್ ಕಾಟಿಪಳ್ಳ ಸಿಪಿಎಂ ಅಭ್ಯರ್ಥಿ. ಬಿಜೆಪಿಯಲ್ಲಿ ಮೂಡಿದ ಬಿರುಕು ಕಾಂಗ್ರೆಸ್‌ಗೆ ಲಾಭವಾಗುತ್ತಾ ನೋಡಬೇಕು.

ಮೂಡಬಿದಿರೆ
ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದ ಹಾಲಿ ಶಾಸಕ  ಅಭಯಚಂದ್ರ ಜೈನ್ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ಸ್ಪರ್ಧೆ ಇಲ್ಲ ಎಂದು ಜೈನ್ ಹೇಳಿದ ಕಾರಣಕ್ಕೆ ಐವನ್ ಡಿಸೋಜಾ ಟಿಕೆಟ್‌ಗಾಗಿ ಲಾಬಿ ನಡೆಸಿದ್ದರು. ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥನ್ ರೈ ಕೂಡ ಪ್ರಯತ್ನಿಸಿದ್ದರು. ಡಿಸೋಜಾ ಅವರಿಗೆ ಟಿಕೆಟ್ ನೀಡದ ಸಿಟ್ಟು ಕ್ರೈಸ್ತರಲ್ಲಿ ಒಳಗೊಳಗೇ ಅಸಮಾಧಾನವನ್ನು ಹಬ್ಬಿಸಿದೆ.  ಐವನ್ ಮತ್ತು ಮಿಥುನ್‌ಗೆ ಟಿಕೆಟ್ ದಕ್ಕದೇ ಹೋಗಿದ್ದು, ಕಾಂಗ್ರೆಸ್ ವಿಜಯಕ್ಕೆ ಲಗಾಮು ಹಾಕಿದರೂ ಹಾಕಬಹುದು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮಾನಾಥ ಕೋಟ್ಯಾನ್ ಅವರು 2 ನೇ ಬಾರಿ ಅಭ್ಯರ್ಥಿಯಾಗಿದ್ದಾರೆ. ಇಲ್ಲಿ ಸಿಪಿಎಂ ಹಿರಿಯ ಮುಖಂಡ ಯಾದವ ಶೆಟ್ಟಿ ಅವರನ್ನು ಕಣಕ್ಕೆ ಇಳಿಸಿದೆ.