Asianet Suvarna News Asianet Suvarna News

5 ಕೇಂದ್ರಗಳಲ್ಲಿ ಬೆಳಗ್ಗೆ 8 ರಿಂದ 30 ಕ್ಷೇತ್ರಗಳ ಮತ ಎಣಿಕೆ

ರಾಜ್ಯ ರಾಜಧಾನಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ 30 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಗರದ ಐದು ಕೇಂದ್ರಗಳಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿದೆ.
 

Counting of votes in Karnataka assembly elections to start 8am

ಬೆಂಗಳೂರು (ಮೇ 15)  :  ರಾಜ್ಯ ರಾಜಧಾನಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ 30 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಗರದ ಐದು ಕೇಂದ್ರಗಳಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿದೆ.

ಬೆಂಗಳೂರು ನಗರ ವಿಭಾಗದ 8 ಕ್ಷೇತ್ರಗಳ ಮತ ಎಣಿಕೆ ಶೇಷಾದ್ರಿ ರಸ್ತೆಯ ಮಹಾರಾಣಿ ಕಾಲೇಜಿನಲ್ಲಿ, ಬಿಬಿಎಂಪಿ ಕೇಂದ್ರ ಭಾಗದ 6 ಕ್ಷೇತ್ರಗಳ ಮತ ಎಣಿಕೆ ಬಸವನಗುಡಿಯ ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ, ಬಿಬಿಎಂಪಿ ಉತ್ತರದ 7 ಕ್ಷೇತ್ರಗಳ ಮತ ಎಣಿಕೆ ಅರಮನೆ ರಸ್ತೆಯ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ, ಬಿಬಿಎಂಪಿ ದಕ್ಷಿಣದ 6 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಜಯನಗರ 4 ನೇ ಬ್ಲಾಕ್‌ನ ಎಸ್ ಎಂಆರ್‌ವಿ ಪಿಯು ಕಾಲೇಜು ಮತ್ತು ಬೆಂಗಳೂರು ಗ್ರಾಮಾಂತರದ 4 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಶಾಸಕರ ಭವನ ಬಳಿಯ ಆರ್.ಸಿ. ಕಾಲೇಜಿನಲ್ಲಿ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಪ್ರತಿ ಮತ ಎಣಿಕೆ ಕೇಂದ್ರದಲ್ಲಿ ಎಲ್‌ಇಡಿ ಪರದೆಯ ಎರಡೆರಡು ಟಿವಿ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಸುತ್ತಿನ ಮತ ಎಣಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಬಂದೋಬಸ್ತ್: ಮತ ಎಣಿಕೆ ಸುಗಮವಾಗಿ ನಡೆಯಲು ಬೆಂಗಳೂರು ನಗರದ ಐದು ಮತ ಎಣಿಕೆ ಕೇಂದ್ರಗಳಲ್ಲಿ 18  ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗುತ್ತದೆ. ರಾಜಕೀಯ ಪಕ್ಷಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಮತ ಎಣಿಕೆ ಕೇಂದ್ರ ಬಳಿ ಜಮಾಯಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಡಿಸಿಪಿ ಮಟ್ಟದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ. 

ಪ್ರತಿ ಮತ ಎಣಿಕೆ ಕೇಂದ್ರದಲ್ಲಿ ಓರ್ವ ಡಿಸಿಪಿ ನೇತೃತ್ವದಲ್ಲಿ ಮೂವರು ಎಸಿಪಿ, ಮೂವರು ಇನ್ಸ್‌ಪೆಕ್ಟರ್ ಸೇರಿ 150 ಮಂದಿ ಭದ್ರತೆಗೆ ಯುಕ್ತಿಗೊಳಿಸಲಾಗಿದೆ. ಅಲ್ಲದೆ, ಅರೆಸೇನಾ ಪಡೆ ಹಾಗೂ ಕೆಎಸ್ಸಾರ್ಪಿ ಬಳಸಿ ಕೊಳ್ಳಲಾಗುತ್ತಿದ್ದು,  ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಸೋಮವಾರ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು. 

ಮತ ಎಣಿಕೆ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಈ ಕೇಂದ್ರಗಳ ಬಳಿ 5 ಜನರಿಗಿಂತ ಹೆಚ್ಚು ಜನ ಗುಂಪು ಗೂಡುವಂತಿಲ್ಲ, ಪಟಾಕಿ ಹೊಡೆಯುವುದು ಸೇರಿದಂತೆ ಯಾವುದೇ ರೀತಿಯ ಸಂಭ್ರಮಾಚಾರಣೆಗೆ ನಿರ್ಬಂಧ ವಿಧಿಸಲಾಗಿದೆ.

Follow Us:
Download App:
  • android
  • ios