ನವದೆಹಲಿ :  ಪ್ರಧಾನಿ ನರೇಂದ್ರ ಮೋದಿ ಅವರ ನೇಪಾಳದಲ್ಲಿನ ದೇಗುಲಗಳ ಭೇಟಿಯಿಂದ ಕರ್ನಾಟಕ ಮತದಾರರ ಮೇಲೆ ಪ್ರಭಾವ ಉಂಟಾಗುತ್ತಿದೆ. ದೇಗುಲಗಳಿಗೆ ಭೇಟಿ ನೀಡಿ ಪರೋಕ್ಷವಾಗಿ ಮತದಾರರ ಮೇಲೆ ಪ್ರಭಾವ ಬೀರಲು ಮೋದಿ ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. 

ನೇಪಾಳದ ಮುಕ್ತಿನಾಥ ಹಾಗೂ ಪಶುಪತಿನಾಥ ದೇವಾಲಯಗಳಿಗೆ ಮೋದಿ ನೀಡಿದ ಭೇಟಿಯನ್ನು ಪ್ರಸ್ತಾಪಿಸಿದ ಹಿರಿಯ ಕಾಂಗ್ರೆಸ್ ಮುಖಂಡ ಅಶೋಕ್ ಗೆಹ್ಲೋಟ್, ‘ಮೋದಿ ಅವರ ದೇಗುಲ ಭೇಟಿಗಳು ಕರ್ನಾಟಕದ ಟೀವಿ ವಾಹಿನಿಗಳಲ್ಲಿ ಪ್ರಸಾರ ಆಗುತ್ತಿದೆ. ಇದು
ಪ್ರಜಾಸತ್ತೆಯ ಸಂಪ್ರದಾಯವಲ್ಲ. ಗುಜರಾತ್‌ನಲ್ಲೂ ಇದೇ ಥರ ಅವರು ರೋಡ್ ಶೋ ನಡೆಸಿದ್ದರು. 

ಈಗ ಹೊಸ ಮಾರ್ಗ ಹುಡುಕಿದ್ದಾರೆ. ಕರ್ನಾಟಕ ಪ್ರವಾಸದ ವೇಳೆಗೆ ಅವರು ನೇಪಾಳ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು. ‘ದೇವಾಲಯ ಭೇಟಿಗಳ ಮೂಲಕ ಮೋದಿ ಅವರು ತಾವು ಕಟ್ಟಾ ಹಿಂದು ಧಾರ್ಮಿಕ ವ್ಯಕ್ತಿ ಎಂದು ಕರ್ನಾಟಕ ಮತದಾರರ ಮುಂದೆ ಬಿಂಬಿಸಿಕೊಳ್ಳುವ ಯತ್ನ ಮಾಡುತ್ತಿದ್ದಾರೆ. 

ತಾನು,  ಅಮಿತ್ ಶಾ, ಆರೆಸ್ಸೆಸ್ ಹಾಗೂ ಬಿಜೆಪಿಗರನ್ನು ಬಿಟ್ಟರೆ ಉಳಿದವರಾರೂ ಹಿಂದುಗಳಲ್ಲ ಎಂಬ ಭ್ರಮೆಯಲ್ಲಿ ಮೋದಿ ಇದ್ದಾರೆ’ ಎಂದು ಗೆಹ್ಲೋಟ್ ಆಪಾದಿಸಿದ್ದಾರೆ.