ಬೆಂಗಳೂರು : ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ವಿರಚಿತ ಕಾಂಗ್ರೆಸ್ ಪ್ರಣಾಳಿಕೆ  ಅನಾಥವಾಗಿದೆ! ಹೀಗೆ ಕಾಂಗ್ರೆಸ್ ಪ್ರಣಾಳಿಕೆಯನ್ನು ಅನಾಥ ಮಾಡಿರುವ ವರು ಖುದ್ದು ಕಾಂಗ್ರೆಸ್ಸಿಗರು. ಏಕೆಂದರೆ, ಮುಖ್ಯಮಂತ್ರಿ ಸಿದ್ದ ರಾಮಯ್ಯ ಆದಿಯಾಗಿ ಕಾಂಗ್ರೆಸ್‌ನ ನಾಯಕರು  ಪ್ರಣಾಳಿಕೆಯಲ್ಲಿ ಪಕ್ಷ ಘೋಷಿಸಿದ ಯೋಜನೆಗಳನ್ನು ತಮ್ಮ ಚುನಾವಣಾ  ಪ್ರಚಾರದ ಭಾಗವಾಗಿ  ಮಾಡಿಕೊಳ್ಳುತ್ತಿಲ್ಲ. ಅದರ ಬಗ್ಗೆ ಚಕಾರವನ್ನೂ ಎತ್ತುತ್ತಿಲ್ಲ. ತನ್ಮೂಲಕ ಕಾಂಗ್ರೆಸ್ ಪ್ರಣಾಳಿಕೆ ಯನ್ನು ಅನಾಥ  ಮಾಡಿದ್ದಾರೆ.
ಕರುನಾಡಿನಾದ್ಯಂತ ಸುತ್ತಾಡಿ ತಳಮಟ್ಟ ದಿಂದ ಜನರ ಅಭಿಪ್ರಾಯ ಪಡೆದು ರೂಪಿಸಲಾದ ಪ್ರಣಾಳಿಕೆಯಿದು ಎಂದು ಖುದ್ದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಂದಲೇ ಹೊಗಳಿಕೆ ಪಡೆದ ವೀರಪ್ಪ ಮೊಯ್ಲಿ ಅವರ ಸದರಿ ಪ್ರಣಾಳಿಕೆ ಕಾಂಗ್ರೆಸ್ಸಿಗರ ಪಾಲಿಗೆ ಬಿಸಿ ತುಪ್ಪವಾಗಿರುವುದೇ ಈ ಬೆಳವಣಿಗೆಗೆ ಕಾರಣ.
ಕಳೆದ ಬಾರಿ ಕಾಂಗ್ರೆಸ್ ಪ್ರಕಟಿಸಿದ್ದ ಪ್ರಣಾಳಿಕೆಯ ಬಹುತೇಕ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚುನಾ ವಣಾ ಪ್ರಚಾರದ ಮುಖ್ಯ ಅಂಶ. 
ಆದರೆ, ಮುಂದಿನ ಐದು ವರ್ಷ ಏನು ಮಾಡುತ್ತೇವೆ ಎಂಬ ಬಗ್ಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಏನೆಲ್ಲ ಹೇಳಿದ್ದೇವೆ ಎಂಬುದನ್ನು ಮುಖ್ಯಮಂತ್ರಿ ಸೇರಿದಂತೆ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವ ಕಾಂಗ್ರೆಸ್‌ನ ಯಾವ ಘಟಾನುಘಟಿ ನಾಯಕರೂ ಜನರ ಮುಂದಿಡುತ್ತಿಲ್ಲ.
ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ವಾಕ್ಸಮರ ಮಾತ್ರ ಚುನಾವಣಾ ಪ್ರಚಾರದ ಭಾಗವಾಗಿದೆ. ಬಿಜೆಪಿಯನ್ನು ಅಧಿಕಾರಕ್ಕೆ ತರಬೇಡಿ, ಜೆಡಿಎಸ್‌ಗೆ ಅವಕಾಶ ನೀಡಬೇಡಿ ಎಂಬುದು ಕಾಂಗ್ರೆಸ್ಸಿಗರ ಪ್ರಚಾರ ತಂತ್ರದ ಭಾಗವಾಗಿದೆಯೇ ಹೊರತು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷದಲ್ಲಿ ಏನು ಮಾಡಲಿದ್ದೇವೆ ಎಂಬುದನ್ನು ಹೇಳುತ್ತಿಲ್ಲ. ವೀರಪ್ಪ ಮೊಯ್ಲಿ ರಾಹುಲ್ ಗಾಂಧಿರಿಂದ ಮಂಗಳೂರಿನಲ್ಲಿ ಬಿಡುಗಡೆ ಮಾಡಿಸಿದ ಈ ಪ್ರಣಾಳಿಕೆ ನೇರವಾಗಿ ಜನರಿಗೆ ನೀಡುವ ಆಶ್ವಾಸನೆಗಳು ಮಾತ್ರವಾಗಿರದೇ, ಕಳೆದ ಐದು ವರ್ಷಗಳ ಅವಧಿಯಲ್ಲಿ ಸರ್ಕಾರದ ಸಾಧನೆ, ಪ್ರತಿ ಕ್ಷೇತ್ರದಲ್ಲಿ ಮಾಡಿದ್ದು ಏನು ಎಂಬುದನ್ನು ವಿಸ್ತೃತವಾಗಿ ವಿವರಿಸುತ್ತಾ ಅದರ ನಡುವೆ ಮುಂದೇನು ಮಾಡುತ್ತೇವೆ ಎಂಬುದನ್ನು ಹೇಳುತ್ತದೆ.

ಈ ಮುಂದೇನು ಮಾಡುತ್ತೇವೆ ಎಂಬ ಅಂಶವನ್ನು ವೀರಪ್ಪ ಮೊಯ್ಲಿ ಅವರ ಪ್ರಣಾಳಿಕೆ ಎಂಬ ಬೃಹತ್ ಗ್ರಂಥದಿಂದ ಹೆಕ್ಕಿ ತೆಗೆದು  ಸಾರ್ವಜನಿಕರ ಮುಂದಿಡುವ ‘ಸಾಮರ್ಥ್ಯ’ ಕಾಂಗ್ರೆಸ್ ನಾಯಕರಿಗೆ ಇಲ್ಲದಿರುವುದರಿಂದ ಇಂತಹ ಪರಿಸ್ಥಿತಿ ಉದ್ಭವಿಸಿದೆ ಎಂಬುದು ಕಾಂಗ್ರೆಸ್ ವಲಯದಲ್ಲಿ ಹಬ್ಬಿರುವ ಸಮಜಾಯಿಷಿ. ಪ್ರಣಾಳಿಕೆಯಲ್ಲಿ ಮುಂದೆ ಏನು ಮಾಡುತ್ತೇವೆ ಎಂಬ ಅಂಶಗಳು ಸ್ಪಷ್ಟ ಹಾಗೂ ನಿಖರವಾಗಿಲ್ಲ. ಇಡೀ ಪ್ರಣಾಳಿಕೆಯಲ್ಲಿ ಪಕ್ಷ ಏನನ್ನು ಹೇಳಲು ಹೊರಟಿದೆ? ನೀಡುತ್ತಿರುವ ವಾಗ್ದಾನವೇನು? ಅದು ಹೇಗೆ ಕಾರ್ಯ ಸಾಧು ಎಂಬುದನ್ನು ನೇರ ಹಾಗೂ ಸರಳವಾಗಿ ಹೇಳಿದ್ದರೆ, ಅದು ಜನರಿಗೆ ಸುಲಭವಾಗಿ ತಲುಪುತ್ತಿತ್ತು. ಆದರೆ, ಪಾಂಡಿತ್ಯಪೂರ್ಣ ಗ್ರಂಥದಂತೆ ಪ್ರಣಾಳಿಕೆ ಇರುವುದರಿಂದ ಹಾಗೂ ಅದರ ಕನ್ನಡ ಭಾಷಾಂತರ ಯಾರಿಗೂ ಅರ್ಥವಾಗದಂತೆ ಇರುವುದರಿಂದ ಕಾಂಗ್ರೆಸ್ ನಾಯಕರು ಈ ಪ್ರಣಾಳಿಕೆಯ ಸಹವಾಸಕ್ಕೆ ಹೋಗುತ್ತಿಲ್ಲ.
ಮೊಯ್ಲಿ ಅವರಂತಹ ಹಲವು ಮಹಾನ್ ಗ್ರಂಥಗಳನ್ನು ರಚಿಸಿದ ಹಿರಿಯರು ಪ್ರಣಾಳಿ ಕೆಯ ಹಿಂದಿನ ಶಕ್ತಿಯಾಗಿರುವುದರಿಂದ ಅದರ ಬಗ್ಗೆ ಚಕಾರವೆತ್ತುವ ಧೈರ್ಯವನ್ನು ಕಾಂಗ್ರೆಸ್ ನಾಯಕರು ತೋರುತ್ತಿಲ್ಲ. ಹೀಗಾಗಿ ಪ್ರಣಾಳಿಕೆಯನ್ನೇ ಜನರ ಮುಂದಿಡದೆ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿಗೆ ಪ್ರಚಾರವನ್ನು ಸೀಮಿತಗೊಳಿ ಸಿದ್ದಾರೆ.ಕಾಂಗ್ರೆಸ್ ಪ್ರಣಾಳಿಕೆಯ ಈ ಎಲ್ಲಾ ಅಪಸವ್ಯಗಳ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿದ ಹಿರಿಯ ಕಾಂಗ್ರೆಸ್  ನಾಯಕರೊಬ್ಬರು, ಬಹುಶಃ ಸಮಯದ ಅಭಾವದಿಂದ ಪ್ರಣಾಳಿಕೆಯಲ್ಲಿ ತಪ್ಪುಗಳು ನುಸುಳಿರಬಹುದು ಎನ್ನುತ್ತಾರೆ.
ಮತ್ತೊಬ್ಬ ನಾಯಕರನ್ನು ಈ ಬಗ್ಗೆ ಪ್ರಶ್ನಿಸಿದರೆ, ಇದು ವೀರಪ್ಪ ಮೊಯ್ಲಿ ಅವರ ಅಧ್ಯಕ್ಷತೆಯ ಸಮಿತಿ ರಚಿಸಿದ್ದು, ಈ ಬಗ್ಗೆ ಅವರೇ ಉತ್ತರಿಸಬೇಕು ಎನ್ನುತ್ತಾರೆ.