ಬೆಂಗಳೂರು : ಕರ್ನಾಟಕದಲ್ಲಿ ವಿಧಾನಸಭಾ ಚುನಾವಣಾ ಅಬ್ಬರ ಜೋರಾಗಿದೆ. ಇದೇ ವೇಳೆ ವಿವಿಧ ರಾಷ್ಟ್ರೀಯ ಮುಖಂಡರು ರಾಜ್ಯಕ್ಕೆ ಆಗಮಿಸಿ ತಮ್ಮ ಪಕ್ಷಗಳ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯದಲ್ಲಿ ಈ ಮೂಲಕ ಚುನಾವಣಾ ರಣ ಕಹಳೆ ಮೊಳಗಿಸುತ್ತಿದ್ದಾರೆ.

ತಮ್ಮ ಪಕ್ಷಗಳಿಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ.  ಈ ರೀತಿ ರಾಷ್ಟ್ರೀಯ ನಾಯಕರ ಆಗಮನದಿಂದ ಅಭ್ಯರ್ಥಿಗಳು ಕೂಡ ಫುಲ್ ಖುಷ್ ಆಗುತ್ತಿದ್ದಾರೆ.  

ಆದರೆ ಕೆಲ  ಕೈ ಅಭ್ಯರ್ಥಿಗಳು ಮಾತ್ರ ತಮ್ಮ ಕ್ಷೇತ್ರಕ್ಕೆ ರಾಷ್ಟ್ರಮಟ್ಟದ ನಾಯಕರು ಬರುವುದೇ ಬೇಡ ಎನ್ನುತ್ತಿದ್ದಾರೆ.  ರಾಹುಲ್ ಗಾಂಧಿ ಸೇರಿದಂತೆ ಕೇಂದ್ರದ ಮಾಜಿ ಸಚಿವರು ಕ್ಷೇತ್ರಕ್ಕೆ ಬಂದರೆ ತಮಗೆ  ತಲೆ ನೋವು ಎನ್ನುತ್ತಿದ್ದಾರೆ. 
  
ರಾಷ್ಟ್ರೀಯ ನಾಯಕರು ಬಂದರೆ ತಯಾರಿಗಾಗಿಯೇ ಅಧಿಕ ಸಮಯ ವ್ಯರ್ಥವಾಗುತ್ತದೆ. ಜನರನ್ನು ಸೇರಿಸುವುದು. ಬಂದೋಬಸ್ತ್ ವ್ಯವಸ್ಥೆ ಮಾಡುವುದು. ವಾಹನ ವ್ಯವಸ್ಥೆ, ಊಟ ಉಪಚಾರದಂತ ವ್ಯವಸ್ಥೆ ಕೈಗೊಳ್ಳಬೇಕಾಗುತ್ತದೆ. ಇದಕ್ಕೆಲ್ಲಾ ಅತ್ಯಧಿಕ ಪ್ರಮಾಣದಲ್ಲಿ ಸಮಯವನ್ನು ವ್ಯರ್ಥ ಮಾಡಬೇಕಾಗುತ್ತದೆ ಎನ್ನುತ್ತಿದ್ದಾರೆ. 

ಇದರಿಂದ ತಾವು ಪ್ರಚಾರ ಮಾಡಲು ಮೀಸಲಿಟ್ಟ ಅತ್ಯಧಿಕ ಸಮಯವನ್ನು ವ್ಯರ್ಥ ಮಾಡಬೇಕೆನ್ನುವ ಆತಂಕ ಅವರಲ್ಲಿ ಮೂಡಿದೆ. ಜೊತೆಗೆ ಇವರು ಬಂದು ಎಡವಟ್ಟು ಹೇಳಿಕೆ ನೀಡಿದರೆ ತಮಗೆ ಸಮಸ್ಯೆ ಎನ್ನುವ ಅಳುಕು ಕೂಡ ಈ ನಾಯಕರಿಗೆ ಕಾಡುತ್ತಿದೆಯಂತೆ.  ಹಾಗಾಗಿ ರಾಷ್ಟ್ರೀಯ ನಾಯಕರು ತಮ್ಮ ಕ್ಷೇತ್ರಕ್ಕೆ ಬರುವುದೇ ಬೇಡ ಎನ್ನು ತ್ತಿದ್ದಾರಂತೆ ಕೆಲವು ನಾಯಕರು.