‘ವಜುಭಾಯಿ ವಾಲಕ್ಕಿಂತ ನಿಷ್ಠಾವಂತ ಯಾರೂ ಇಲ್ಲ’

Congress Leader Sanjay Nirupam Slams Karnataka Governor Vajubhai Vala
Highlights

  • ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲ ವಿರುದ್ಧ ಕಾಂಗ್ರೆಸ್ ಮುಖಂಡ ವಾಗ್ದಾಳಿ
  • ನಿಷ್ಠೆಗೆ ಹೊಸ ಭಾಷ್ಯವನ್ನು ಬರೆದಿದ್ದಾರೆ ವಜುಭಾಯಿ ವಾಲ: ಸಂಜಯ್ ನಿರುಪಮ್ ವ್ಯಂಗ್ಯ 

 

ನವದೆಹಲಿ [ಮೇ.19]: ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾಗಳಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್,  ರಾಜ್ಯಪಾಲ ವಜುವಾಲ ಭಾಯಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಏಎನ್‌ಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿರುವ ಸಂಜಯ್ ನಿರುಪಮ್, ವಜುಭಾಯಿ ವಾಲ ನಿಷ್ಠೆಯ ಹೊಸ ಮಾದರಿಗೆ ನಾಂದಿ ಹಾಡಿದ್ದಾರೆ. ಈ ಬೆಳವಣಿಗೆಗಳ ಬಳಿಕ ಪ್ರತಿಯೊಬ್ಬ ಭಾರತೀಯನೂ ತನ್ನ ನಾಯಿಗೆ ವಜುಭಾಯಿ ವಾಲ ಎಂದೇ ಹೆಸರಿಡುವ ಸಾಧ್ಯತೆಯಿದೆ. ಏಕೆಂದರೆ ಅವರಿಗಿಂತ ಹೆಚ್ಚು ನಿಷ್ಠ ಬೇರಾರೂ ಇರಲು ಸಾಧ್ಯವಿಲ್ಲ, ಎಂದು ಹೇಳಿದ್ದಾರೆ.

ಕಳೆದ ಮೇ.15ರಂದು ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟವಾದ ಬೆನ್ನಲ್ಲಿ, ರಾಜ್ಯಪಾಲ  ವಜುಭಾಯಿ ವಾಲ ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನಿಸಿದ್ದರು. ಬಹುಮತವಿರುವ ಕಾಂಗ್ರೆಸ್‌-ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚನೆಗೆ ಹಕ್ಕುಮಂಡಿಸಿದ್ದರೂ, ಬಹುಮತವಿಲ್ಲದ ಬಿಜೆಪಿಗೆ ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನಿಸಿ, ವಿಶ್ವಾಸ ಮತ ಯಾಚನೆಗೆ 15 ದಿನಗಳ ಕಾಲಾವಾಕಾಶ ನೀಡಿರುವ ರಾಜ್ಯಪಾಲರ ಕ್ರಮ ವ್ಯಾಪಕ ಚರ್ಚೆಗೊಳಗಾಗಿತ್ತು.  

ಸುಪ್ರೀಂ ಕೋರ್ಟ್ ನಿರ್ದೆಶನದಂತೆ ಶನಿವಾರ ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಗೆ ವೇದಿಕೆ ಸಿದ್ಧಗೊಂಡಿತ್ತು. ಆದರೆ ವಿಶ್ವಾಸ ಮತ ಯಾಚನೆಗೆ ಮುನ್ನಾ, ಗುರುವಾರವಷ್ಟೇ ಮುಖ್ಯಂಮಂತ್ರಿಯಾಗಿ ಶಪಥ ಸ್ವೀಕರಿಸಿದ ಯಡಿಯೂರಪ್ಪ, ರಾಜೀನಾಮೆ ನೀಡಿದ್ದಾರೆ. 

ಸಂಜಯ್ ನಿರುಪಮ್ ಹೇಳಿಕೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಪ್ರಕಾಶ್ ಜಾವ್ಡೇಕರ್, ಕಾಂಗ್ರೆಸ್‌ಗೆ ಪ್ರಜಾತಾಂತ್ರಿಕ ಸಂಸ್ಥೆ ಹಾಗೂ ಹುದ್ದೆಗಳ ಬಗ್ಗೆ ಎಷ್ಟು ಗೌರವ ಇದೆ ಎಂಬುವುದು ಇಂತಹ ಹೇಳಿಕೆಯಿಂದ ವ್ಯಕ್ತವಾಗುತ್ತಿದೆ, ಎಂದು ತಿರುಗೇಟು ನೀಡಿದ್ದಾರೆ.  

loader