ಸ್ತ್ರೀಯರಿಗೆ ಚಿನ್ನದ ತಾಳಿ, ವಿದ್ಯಾರ್ಥಿಗಳಿಗೆ ಮೊಬೈಲ್‌

Congress Karnataka Election Manifesto
Highlights

ಕರ್ನಾಟಕದ ಹೆಮ್ಮೆ, ಕಾಂಗ್ರೆಸ್‌ ಮತ್ತೊಮ್ಮೆ ಎಂಬ ಘೋಷವಾಕ್ಯದಡಿ ಮತ್ತೊಮ್ಮೆ ಸಿದ್ಧ ಸರ್ಕಾರಕ್ಕೆ ಅವಕಾಶ ನೀಡುವಂತೆ ಜನರ ಮುಂದೆ ಹೋಗಲು ಸಜ್ಜಾಗಿರುವ ಕಾಂಗ್ರೆಸ್‌ ಮುಂದಿನ ಐದು ವರ್ಷ ತಾನೇನು ಮಾಡಲಿದ್ದೇನೆ ಎಂದು ತಿಳಿಸಲು ಸಿದ್ಧಪಡಿಸಿರುವ ಪ್ರಣಾಳಿಕೆಯ ಮುಖ್ಯಾಂಶಗಳು.

ಮಂಗಳೂರು : ಮಹಿಳೆಯರಿಗೆ ಮೂರು ಗ್ರಾಂ ಚಿನ್ನದ ತಾಳಿ ನೀಡುವ ಮಂಗಲ ಭಾಗ್ಯ, ಮೊದಲ ಬಾರಿಗೆ ಮತ ಹಾಕುವ ಯುವ ವಿದ್ಯಾರ್ಥಿಗಳಿಗೆ ಮೊಬೈಲ್‌ ಭಾಗ್ಯ, ಎರಡು ಸಾವಿರ ಮನೆಯಿರುವ ಗ್ರಾಮಗಳಿಗೆ ನಲ್ಲಿ ನೀರು ಭಾಗ್ಯ, ರಾಜ್ಯಕ್ಕೆ 24 /7 ವಿದ್ಯುತ್‌ ಭಾಗ್ಯ, ನೀರಾವರಿಗೆ 1.25 ಲಕ್ಷ ಕೋಟಿ ರು. ಮೀಸಲು ವಾಗ್ದಾನ, ಕೃಷಿ ಉತ್ತೇಜನಕ್ಕಾಗಿ ಕೃಷಿ ಕಾರಿಡಾರ್‌ ಮತ್ತು ಇವೆಲ್ಲಕ್ಕಿಂತ ಮುಖ್ಯವಾಗಿ ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಲೋಕಾಯುಕ್ತಕ್ಕೆ ಪರಮಾಧಿಕಾರ!

ಕರ್ನಾಟಕದ ಹೆಮ್ಮೆ, ಕಾಂಗ್ರೆಸ್‌ ಮತ್ತೊಮ್ಮೆ ಎಂಬ ಘೋಷವಾಕ್ಯದಡಿ ಮತ್ತೊಮ್ಮೆ ಸಿದ್ಧ ಸರ್ಕಾರಕ್ಕೆ ಅವಕಾಶ ನೀಡುವಂತೆ ಜನರ ಮುಂದೆ ಹೋಗಲು ಸಜ್ಜಾಗಿರುವ ಕಾಂಗ್ರೆಸ್‌ ಮುಂದಿನ ಐದು ವರ್ಷ ತಾನೇನು ಮಾಡಲಿದ್ದೇನೆ ಎಂದು ತಿಳಿಸಲು ಸಿದ್ಧಪಡಿಸಿರುವ ಪ್ರಣಾಳಿಕೆಯ ಮುಖ್ಯಾಂಶಗಳು.

ಪ್ರಣಾಳಿಕೆ ಸಮಿತಿ ಅಧ್ಯಕ್ಷ ವೀರಪ್ಪ ಮೊಯ್ಲಿ ಅವರ ನೇತೃತ್ವದಲ್ಲಿ ಸಿದ್ಧಪಡಿಸಿರುವ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಮೊದಲ ಬಾರಿಗೆ ಮತ ಹಾಕುವ ಯುವಕರು, ಮಹಿಳೆಯರು, ಕೃಷಿಕರು, ಉದ್ಯಮಿಗಳು, ಅಹಿಂದ, ಮೇಲ್ವರ್ಗ ಸೇರಿದಂತೆ ಪ್ರತಿಯೊಬ್ಬರನ್ನೂ ಮುಟ್ಟುವ ಯೋಜನೆಗಳಿವೆ. ಇವೆಲ್ಲವುಗಳ ನಡುವೆ, ಢಾಳಾಗಿ ಕಾಣಿಸುವುದು ಲೋಕಾಯುಕ್ತಕ್ಕೆ ಪರಮಾಧಿಕಾರ ನೀಡುವ ವಾಗ್ದಾನ ನೀಡಲು ಮುಂದಾಗಿರುವ ಕಾಂಗ್ರೆಸ್‌ನ ಧೋರಣೆ.

ಕಳೆದ ಐದು ವರ್ಷಗಳಿಂದ ಲೋಕಾಯುಕ್ತವನ್ನು ಕ್ರಮೇಣ ನಿಃಶಕ್ತಗೊಳಿಸಿದ ಸರ್ಕಾರ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಕ್ಯಾರೆ ಎನ್ನದ ಕಾಂಗ್ರೆಸ್‌, ಜನರ ಮುಂದೆ ಹೋಗುವ ಈ ಹಂತದಲ್ಲಿ ಲೋಕಾಯುಕ್ತಕ್ಕೆ ಬಲ ತುಂಬುವ ಮಾತುಗಳನ್ನು ಪ್ರಣಾಳಿಕೆಯಲ್ಲಿ ಹೇಳಿದೆ. ಕೇವಲ ಬಲ ತುಂಬುವುದು ಮಾತ್ರವಲ್ಲ, ಸ್ವಯಂಪ್ರೇರಿತ ದೂರು ದಾಖಲಿಸುವಂತಹ ಪರಮಾಧಿಕಾರ ನೀಡುವ ವಾಗ್ದಾನ ಮಾಡುತ್ತಿದೆ. ಆದರೆ, ಸ್ವಯಂ ಪ್ರಕರಣ ದಾಖಲಿಸುವುದು ಜನಪ್ರತಿನಿಧಿಗಳ ಮೇಲೋ ಅಥವಾ ಉನ್ನತ ಅಧಿಕಾರಿಗಳ ಮೇಲೋ ಎಂಬುದನ್ನು ಸ್ಪಷ್ಟಪಡಿಸಿಲ್ಲ.

ಜತೆಗೆ, ಈ ಪ್ರಣಾಳಿಕೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಅವರಿಗೆ ಭರ್ಜರಿ ಟಾಂಗ್‌ ಕೂಡ ನೀಡಲಾಗಿದೆ. ಪ್ರಚಾರದ ವೇಳೆ ಯಡಿಯೂರಪ್ಪ ಅವರು ನೀರಾವರಿಗೆ ಒಂದು ಲಕ್ಷ ಕೋಟಿ ರು. ಮೀಸಲು ಇಡುತ್ತೇನೆ ಎಂದು ಸತತವಾಗಿ ಹೇಳುತ್ತಲೇ ಬಂದಿದ್ದರು. ಕಾಂಗ್ರೆಸ್‌ ಒಂದು ಹೆಜ್ಜೆ ಮುಂದೆ ಹೋಗಿ 1.25 ಲಕ್ಷ ರು.ಗಳನ್ನು ನೀರಾವರಿಗೆ ಮೀಸಲಿಡುವ ವಾಗ್ದಾನ ಮಾಡಿದೆ. ಇಷ್ಟೆಲ್ಲ ಜಾಣತನ ತೋರಿದ್ದರೂ, ಕಳೆದ ಬಾರಿಯ ಅನ್ನಭಾಗ್ಯ, ಕ್ಷೀರಭಾಗ್ಯದಂತಹ ಹೊಸ ಜನಪ್ರಿಯ ಯೋಜನೆಗಳು ಪ್ರಣಾಳಿಕೆಯಲ್ಲಿ ಕಾಣಿಸಿಕೊಂಡಿಲ್ಲ.

ನೀರಾವರಿ ಹಾಗೂ ಕೃಷಿಗೆ ಕಾಂಗ್ರೆಸ್‌ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡುವುದಾಗಿ ವಾಗ್ದಾನ ಮಾಡಿದೆ. ಮಧ್ಯ ಕರ್ನಾಟಕದ ಕುಡಿಯುವ ನೀರಿನ ಗಂಭೀರತೆಯನ್ನು ಅರಿತುಕೊಂಡು ಕುಡಿಯಲು ಮತ್ತು ಕೃಷಿಗೆ ನೀರಾವರಿ ವ್ಯವಸ್ಥೆ, ಉತ್ತರ ಕರ್ನಾಟಕದಲ್ಲಿ ಬರ ಹೋಗಲಾಡಿಸಲು ನದಿಗಳ ಜೋಡಣೆ, ದಕ್ಷಿಣ ಕರಾವಳಿಯಲ್ಲಿ ಪಶ್ಚಿಮ ವಾಹಿನಿಯ ಅನುಷ್ಠಾನ, ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತ ವಿಸ್ತರಣೆ, ಕೆರೆಗಳನ್ನು ತುಂಬಿಸಲು ವಿಶ್ವೇಶ್ವರಯ್ಯ ಅಭಿಯಾನ, ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಮತ್ತು ಇತರೆ ಪ್ರದೇಶಗಳಿಗೂ ಕಾವೇರಿ ಅಚ್ಚುಕಟ್ಟು ಅಡಿ ಕುಡಿಯುವ ನೀರು ಒದಗಿಸಲು ಯೋಜನೆಗಳನ್ನು ಅನುಷ್ಠಾನಿಸುವ, ಇದಕ್ಕಾಗಿ 75 ಟಿಎಂಸಿ ನೀರನ್ನು ಬಳಸಿಕೊಳ್ಳುವ ಬದ್ಧತೆಯನ್ನು ಪ್ರಣಾಳಿಕೆಯಲ್ಲಿ ತೋರಿಸಲಾಗಿದೆ.

ಕೃಷಿ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಿರುವ ಈ ಪ್ರಣಾಳಿಕೆಯಲ್ಲಿ ಬಳ್ಳಾರಿಯಿಂದ ಚಾಮರಾಜನಗರ ಜಿಲ್ಲೆಯ ನಡುವಿನ ಹತ್ತು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ 10 ಜಿಲ್ಲೆಗಳ ವ್ಯಾಪ್ತಿಯನ್ನು ಕೃಷಿ ಕಾರಿಡಾರ್‌ ರಚಿಸುವಂಥ ಪ್ರಮುಖ ಘೋಷಣೆಗಳಿದ್ದರೂ ಮೂಲಸೌಕರ್ಯ ಕ್ಷೇತ್ರವನ್ನು ಮಾತ್ರ ಹಿಂದಿನಿಂತೆ ಈ ಬಾರಿಯೂ ನಿರ್ಲಕ್ಷಿಸಲಾಗಿದೆ. ಇನ್ನು ಕಳೆದ ಬಾರಿ ಘೋಷಿಸಿದ ಅನ್ನಭಾಗ್ಯ, ಶಾದಿ ಭಾಗ್ಯದಂತೆ ಈ ಬಾರಿ ಬಡತನ ರೇಖೆಗಿಂತ ಕೆಳಗಿರುವ ಅವಿವಾಹಿತ ಯುವತಿಯರಿಗೆ ಮೂರು ಗ್ರಾಂ ಚಿನ್ನ ನೀಡುವ ‘ಮಂಗಲ ಭಾಗ್ಯ’ ಹಾಗೂ 18ರಿಂದ 23 ವರ್ಷ ನಡುವಿನ ಎಲ್ಲ ಯುವಜನರಿಗೆ ಉಚಿತ ಮೊಬೈಲ್‌ ನೀಡುವ ಎರಡು ಹೊಸ ಭಾಗ್ಯಗಳು ಈ ಬಾರಿಯ ಪ್ರಣಾಳಿಕೆಯಲ್ಲಿ ಹೊಸದಾಗಿ ಜಾಗಪಡೆದಿವೆ.

ಅಹಿಂದ ವರ್ಗ ಸೇರಿದಂತೆ ಎಲ್ಲ ಸಮುದಾಯಗಳನ್ನು ಪ್ರಣಾಳಿಕೆಯಲ್ಲಿ ಸ್ಪರ್ಶಿಸಲಾಗಿದೆ. ಮುಖ್ಯವಾಗಿ ಕೃಷಿ ಕ್ಷೇತ್ರಕ್ಕೆ ಇನ್ನಿಲ್ಲದ ಭರಪೂರ ಭರವಸೆಯನ್ನು ನೀಡಲಾಗಿದೆ. ಹೆದ್ದಾರಿ, ಕೈಗಾರಿಕಾ ಕಾರಿಡಾರ್‌ಂತೆ ಇನ್ನು ಕೃಷಿಗೂ ಕಾರಿಡಾರ್‌ ರಚನೆಗೊಳ್ಳಲಿದೆ ಎಂದು ವಾಗ್ದಾನ ಮಾಡುವ ಮೂಲಕ ಕಾಂಗ್ರೆಸ್‌ ರೈತಾಪಿವರ್ಗದ ಮನಸ್ಸು ಗೆಲ್ಲುವ ಪ್ರಯತ್ನವನ್ನು ನಡೆಸಿದೆ. ಕೃಷಿ, ತೋಟಗಾರಿಕೆ, ಮೀನು ಸಂಸ್ಕರಣೆ, ಸಾವಯವ ಕೃಷಿ ವಲಯ ಹೀಗೆ ಕೃಷಿರಂಗದ ಎಲ್ಲ ಆವರ್ತನಗಳನ್ನು ಬಳಸಿಕೊಂಡಿದೆ. ಕೃಷಿಗೆ ಡ್ರೋಣ್‌ ಬಳಕೆಯನ್ನು ಪ್ರಸ್ತಾಪಿಸಲಾಗಿದೆ. ಕೃಷಿಕರಿಗೆ ನ್ಯಾಯಯುತ ದರವನ್ನು ಒದಗಿಸುವ ಸಲುವಾಗಿ ಸಹಕಾರಿ ಬ್ಯಾಂಕ್‌ಗಳ ಸ್ಥಾಪನೆಯ ಪ್ರಸ್ತಾಪವನ್ನೂ ಪ್ರಣಾಳಿಕೆಯಲ್ಲಿ ಮಾಡಲಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿ ಆಡಳಿತಾತ್ಮಕ ಬದಲಾವಣೆ, ಹಾಸ್ಟೆಲ್‌ಗಳ ನಿರ್ಮಾಣ, ಮೂಲ ಸೌಕರ್ಯಗಳಿಗೆ ಆದ್ಯತೆಯನ್ನು ನೀಡುವುದರೊಂದಿಗೆ ಹಿಂದುಳಿದವರಿಗೆ ಉನ್ನತ ಶಿಕ್ಷಣಕ್ಕೂ ಉತ್ತೇಜನ ನೀಡುವ ಪ್ಯಾಕೆಜ್‌ಗಳನ್ನು ಪ್ರಕಟಿಸಿದೆ. ಉದ್ಯೋಗಕ್ಕೆ ಸಂಬಂಧಿಸಿ ಕೌಶಲ್ಯಾಭಿವೃದ್ಧಿಯ ಅಗತ್ಯತೆಯನ್ನು ವಿಶದಪಡಿಸಿದೆ. ಶಿಕ್ಷಣದ ಜೊತೆಗೆ ಕ್ರೀಡೆಗೂ ಪರಿಣಾಮಕಾರಿ ಉತ್ತೇಜನವನ್ನು ನೀಡಿದೆ. ಒಲಂಪಿಕ್ಸ್‌ ವಿಜೇತರಿಗೆ 1 ಕೋಟಿ ರು. ನಗದು ಪ್ರಸ್ತಾಪ ಮಾಡಿರುವುದು ಉತ್ತೇಜನಕಾರಿಯಾಗಿದೆ. ಆದರೆ ಕನ್ನಡ ಭಾಷೆಯ ವಿಚಾರದಲ್ಲಿ ಹೆಚ್ಚಿನ ಭರವಸೆ ಕಂಡುಬರುತ್ತಿಲ್ಲ.

ಗ್ರಾಮೀಣಾಭಿವೃದ್ಧಿ ದಿಶೆಯಲ್ಲಿ ಸರ್ವಋುತು ರಸ್ತೆ, ಗ್ರಾಮೀಣ ರಸ್ತೆಗಳ ಉನ್ನತಿ, ಮಂಗಳೂರು-ಹುಬ್ಬಳ್ಳಿ ನಡುವೆ ವಿಮಾನ ಸಂಪರ್ಕ, ಕಾರ್ಗೋ ಸೇವೆ, ಗ್ರಾಮೀಣ ಕರಕುಶಲ, ಗುಡಿಕೈಗಾರಿಕೆಗಳ ಅಭ್ಯುದಯಕ್ಕೆ ಎಲ್ಲ ರೀತಿಯ ಕ್ರಮಗಳನ್ನು ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಆದರೆ ಮೂಲಸೌಕರ್ಯಗಳ ಉತ್ತೇಜನಕ್ಕೆ ಅಷ್ಟಾಗಿ ಆಸಕ್ತಿಯನ್ನು ತೋರಿಸಿದಂತೆ ಕಾಣುತ್ತಿಲ್ಲ.

ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಗ್ರಾಮಗಳನ್ನು ಸ್ಮಾರ್ಟ್‌ ದರ್ಜೆಗೆ ಏರಿಸುವುದು. ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಅಗ್ರ ಪಂಕ್ತಿಯಲ್ಲಿ ನಿಲ್ಲುವಂತೆ ಮಾಡುವುದಕ್ಕೆ ಬ್ರಾಂಡ್‌ ಕರ್ನಾಟಕವನ್ನು ಪ್ರೋತ್ಸಾಹಿಸುವ ಅಂಶವನ್ನು ಹೇಳಲಾಗಿದೆ. ವಿದ್ಯುತ್‌ ಶುಲ್ಕ ಮನ್ನಾದ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ತಾಲೂಕುಗಳಲ್ಲಿ ರುಡ್‌ಸೆಟ್‌ಗಳ ಸ್ಥಾಪನೆ ಹೊಸ ಕಲ್ಪನೆ. ಈಗ ಇದನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಗತಗೊಳಿಸುತ್ತಿದೆ. ಪ್ರತಿ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಇರುವಾಗ, ಹೊಸದಾಗಿ ಮನೆಗೊಂದು ನಲ್ಲಿ ನೀರಿನ ಸಂಪರ್ಕ ನೀಡುವುದಾಗಿ ಭರವಸೆ ನೀಡಲಾಗಿದೆ.

ವೃದ್ಧಾಶ್ರಮಕ್ಕೆ ಆದ್ಯತೆ:  ಪೋಷಿಸಿದ ತಂದೆ, ತಾಯಿಯನ್ನೇ ಬೀದಿಗೆ ತಳ್ಳುವ ಈ ಕಾಲದಲ್ಲಿ ಪ್ರತಿ ತಾಲೂಕಿಗೊಂದು ವೃದ್ಧಾಶ್ರಮದ ಪ್ರಸ್ತಾಪ ಮಾಡಿದೆ. ಅಹಿಂದ ವರ್ಗದ ಸಂತುಷ್ಟಿಗೆ ಭರವಸೆಯನ್ನು ನೀಡಿದ್ದು ಬಿಟ್ಟರೆ ಹೊಸ ಗಮನ ಸೆಳೆಯುವ ಯೋಜನೆಯನ್ನು ಪ್ರಕಟಿಸಿಲ್ಲ. ಮಹಿಳೆಯರಿಗೆ ಉದ್ಯೋಗದಲ್ಲಿ ಶೇ.30 ಮೀಸಲಾತಿಯ ಭರವಸೆ ಕೊಡಲಾಗಿದೆ. ಆಧುನಿಕ ಸಂಚಾರಕ್ಕೆ ಒತ್ತು ನೀಡುವ ದಿಶೆಯಲ್ಲಿ ಸಿಗ್ನಲ್‌ ಮುಕ್ತ ಕಾರಿಡಾರ್‌ ರಚನೆ ಎಲ್ಲರೂ ಒಪ್ಪುವಂತೆ ಇದೆ. ಇಲ್ಲಿಯೂ ಸಂಚಾರ ನಿರ್ವಹಣೆಗೆ ಡ್ರೋಣ್‌ ಬಳಕೆಯನ್ನು ಪ್ರಸ್ತಾಪಿಸಿದೆ. ಕೆಲವು ಯೋಜನೆಗಳ ಅನುಷ್ಠಾನಕ್ಕೆ ನಿಗಮ, ಪ್ರಾಧಿಕಾರಗಳ ರಚನೆಯನ್ನು ಹೇಳಿದೆ.

loader