ಸ್ಪೀಕರ್ ಹುದ್ದೆ ಕಾಂಗ್ರೆಸ್ ಗೆ - ಡೆಪ್ಯುಟಿ ಸ್ಪೀಕರ್ ಹುದ್ದೆ ಜೆಡಿಎಸ್ ಗೆ

Congress get deputy CM And speaker post
Highlights

ಒಲ್ಲೆನೆಂದರೂ ಸ್ಪೀಕರ್ ಹುದ್ದೆ ಕಾಂಗ್ರೆಸ್ ನಾಯಕ, ಮಾಜಿ ಸಚಿವ ರಮೇಶ್ ಕುಮಾರ್ ಪಾಲಾಗಿದೆ. ಡೆಪ್ಯುಟಿ ಸ್ಪೀಕರ್ ಹುದ್ದೆ ಜೆಡಿಎಸ್‌ನ ಎ.ಟಿ. ರಾಮಸ್ವಾಮಿ ಪಾಲಾಗುವ ಸಾಧ್ಯತೆಯಿದೆ. 

ಬೆಂಗಳೂರು: ಒಲ್ಲೆನೆಂದರೂ ಸ್ಪೀಕರ್ ಹುದ್ದೆ ಕಾಂಗ್ರೆಸ್ ನಾಯಕ, ಮಾಜಿ ಸಚಿವ ರಮೇಶ್ ಕುಮಾರ್ ಪಾಲಾಗಿದೆ. ಡೆಪ್ಯುಟಿ ಸ್ಪೀಕರ್ ಹುದ್ದೆ ಜೆಡಿಎಸ್‌ನ ಎ.ಟಿ. ರಾಮಸ್ವಾಮಿ ಪಾಲಾಗುವ ಸಾಧ್ಯತೆಯಿದೆ. ಕಾಂಗ್ರೆಸ್‌ಗೆ ಸಭಾಧ್ಯಕ್ಷ ಹಾಗೂ ಜೆಡಿಎಸ್‌ಗೆ ಉಪ ಸಭಾಧ್ಯಕ್ಷ ಹುದ್ದೆಯ ರಮೇಶ್‌ಕುಮಾರ್ ರಾಮಸ್ವಾಮಿ ಸೂತ್ರಕ್ಕೆ ಎರಡು ಪಕ್ಷಗಳ ನಾಯಕರು ಒಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಭಾಧ್ಯಕ್ಷ ಹುದ್ದೆಗೆ
ರಮೇಶ್‌ಕುಮಾರ್ ಅವರ ಹೆಸರನ್ನು ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. 

ಮೈತ್ರಿ ಸರ್ಕಾರದ ಸೂಕ್ಷ್ಮಗಳನ್ನು ನಿಭಾಯಿಸುವ ಅಗತ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿಯು ಪ್ರಬಲ ಪ್ರತಿಪಕ್ಷವಾಗಿರುವ 15 ನೇ ವಿಧಾನಸಭೆ ನಿರ್ವಹಿಸಲು ಸ್ಪೀಕರ್ ಹುದ್ದೆ ನಿರ್ವಹಿಸಿದ ಅನುಭವವುಳ್ಳ ರಮೇಶ್ ಕುಮಾರ್ ಸೂಕ್ತ ಎಂಬುದು ಕಾಂಗ್ರೆಸ್ ಹೈಕ ಮಾಂಡ್ ತೀರ್ಮಾನವಾಗಿದೆ.  

ಜತೆಗೆ, ರಮೇಶ್‌ಕುಮಾರ್ ಅವರಿಗೆ ಈ ಹುದ್ದೆಯನ್ನು ನೀಡಲು ಜಾತಿ ಲೆಕ್ಕಾಚಾರ ಕೂಡ ಕೆಲಸ ಮಾಡಿದ ಎನ್ನುತ್ತವೆ ಮೂಲಗಳು. ವಾಸ್ತವವಾಗಿ ರಮೇಶ್‌ಕುಮಾರ್ ಅವರಿಗೆ ಸ್ಪೀಕರ್ ಹುದ್ದೆಯ ಮೇಲೆ ಮನಸ್ಸು ಇಲ್ಲ ಎಂದೇ ಕಾಂಗ್ರೆಸ್ ಮೂಲಗಳು ಹೇಳುತ್ತವೆ. ಆದರೆ, ಕಾಂಗ್ರೆಸ್‌ನಲ್ಲಿ ಬ್ರಾಹ್ಮಣ ಸಮುದಾಯದಿಂದ ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿಯಿದೆ. ಆರ್.ವಿ. ದೇಶಪಾಂಡೆ, ದಿನೇಶ್‌ ಗುಂಡೂರಾವ್ ಹಾಗೂ ರಮೇಶ್ ಕುಮಾರ್ ಈ ಮೂವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಆದರೆ, ಮೂರು ಜನ ಬ್ರಾಹ್ಮಣರಿಗೆ ಈ ಹುದ್ದೆ ನೀಡುವುದು ಕಷ್ಟ ಸಾಧ್ಯ. 

ಆದರೆ, ಈ ಮೂರು ಜನರಿಗೆ ಹುದ್ದೆಯನ್ನು ನಿರಾಕರಿಸುವುದು ಕಷ್ಟ. ಹೀಗಾಗಿ ದೇಶಪಾಂಡೆ ಹಾಗೂ ದಿನೇಶ್ ಗುಂಡೂರಾವ್ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಲು ಪಕ್ಷ ತೀರ್ಮಾನಿಸಿ ರಮೇಶ್‌ಕುಮಾರ್ ಅವರಿಗೆ ಸ್ಪೀಕರ್ ಹುದ್ದೆಯನ್ನು ನೀಡಿದೆ ಎಂದು ಮೂಲಗಳು ಹೇಳುತ್ತವೆ. ಇನ್ನು ಜೆಡಿಎಸ್‌ನಲ್ಲಿ ಎ.ಟಿ. ರಾಮಸ್ವಾಮಿ ಅವರನ್ನು ಡೆಪ್ಯುಟಿ ಸ್ಪೀಕರ್ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಇದಕ್ಕೆ ಕಾರಣ ಎಟಿಆರ್ ಅವರ ಸ್ವಂತ ಜಿಲ್ಲೆಯಾದ ಹಾಸನದಿಂದ ಅವರೂ ಸೇರಿದಂತೆ ಮೂರು ಜನ ಸಚಿವ ಸ್ಥಾನಾಕಾಂಕ್ಷಿಗಳಿದ್ದಾರೆ.

ದೇವೇಗೌಡರ ಹಿರಿಯ ಪುತ್ರ ಎಚ್.ಡಿ. ರೇವಣ್ಣ ಹಾಗೂ ಹಿರಿಯ ಶಾಸಕ ಶಿವಲಿಂಗೇಗೌಡ ಮತ್ತು ಎ.ಟಿ. ಆರ್ ಅವರು ಸಚಿವ ಸ್ಥಾನಾ ಕಾಂಕ್ಷಿಗಳು. ಆದರೆ, ಹಾಸನ ಜಿಲ್ಲೆಯೊಂದಕ್ಕೆ ಮೂರು ಸಚಿವ ಸ್ಥಾನ ನೀಡುವುದು ಕಷ್ಟ ಎಂಬ ಕಾರಣಕ್ಕೆ ಎಟಿಆರ್ ಅವರನ್ನು ಡೆಪ್ಯುಟಿ ಸ್ಪೀಕರ್ ಹುದ್ದೆಗೆ ಪರಿಗಣಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

loader