Asianet Suvarna News Asianet Suvarna News

ಜೆಡಿಎಸ್‌ ಜತೆ ಮೈತ್ರಿ ಮಾಡುವ ಪರಿಸ್ಥಿತಿ ಉದ್ಭವವಾಗದು: ಕಾಂಗ್ರೆಸ್

  • ಚುನಾವಣೋತ್ತರ ಸಮೀಕ್ಷೆಗಳಲ್ಲಿ ನಂಬಿಕೆಯಿಲ್ಲ
  • ಅತಂತ್ರ ಪರಿಸ್ಥಿತಿ ಉಂಟಾಗಲ್ಲ, ಬಹುಮತ ಖಚಿತ
Congress Denies Chances of Going in Alliance With JDS in Karnataka

ನವದೆಹಲಿ [ಮೇ.13]: ಕರ್ನಾಟಕದಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವ ಅನಿವಾರ್ಯತೆ ಉಂಟಾಗದು, ಎಂದು ಕಾಂಗ್ರೆಸ್ ಹೇಳಿದೆ.

ಕರ್ನಾಟಕದಲ್ಲಿ ಮೈತ್ರಿ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗದು ಎಂಬ ವಿಶ್ವಾಸ ನಮಗಿದೆ. ಕಾಂಗ್ರೆಸ್‌ಗೆ ಸರಳ ಬಹುಮತ ಸಿಗಲಿದೆ, ಅಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗದು, ಎಂದು ಪಕ್ಷದ ರಾಷ್ಟ್ರೀಯ ವಕ್ತಾರ ಪವನ್ ಖೇರಾ ಹೇಳಿದ್ದಾರೆ.

ಚುನಾವಣೋತ್ತರ ಸಮೀಕ್ಷೆಗಳು ಪಕ್ಷದ ಪರವಾಗಿರಲಿ ಅಥವಾ ವಿರುದ್ಧವಾಗಿರಲಿ, ಅದರಲ್ಲಿ ವಿಶ್ವಾಸವಿಲ್ಲವೆಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಶನಿವಾರ ಕರ್ನಾಟಕ ವಿಧಾನಸಭೆಯ 224 ಸ್ಥಾನಗಳ ಪೈಕಿ 222 ರಲ್ಲಿ ಚುನಾವಣೆಗಳು ನಡೆದಿದ್ದು, ಚುನಾವಣೋತ್ತರ ಸಮೀಕ್ಷೆಗಳು ರಾಜ್ಯದಲ್ಲಿ ಅತಂತ್ರ ವಿಧಾನಸಭೆ ರಚನೆಯಾಗುವ ಸುಳಿವು ನೀಡಿವೆ.

ಕೆಲವು ಸಮೀಕ್ಷೆಗಳು ಕಾಂಗ್ರೆಸ್‌ಗೆ ಮೇಲುಗೈ ನೀಡಿದ್ದರೆ, ಇನ್ನು ಕೆಲವು ಸಮೀಕ್ಷೆಗಳು ಬಿಜೆಪಿ ಮುನ್ನಡೆ ಸಾಧಿಸುವುದಾಗಿ ಹೇಳಿವೆ. ಇಂತಹ ಸನ್ನಿವೇಶದಲ್ಲಿ ಜೆಡಿಎಸ್ ಕಿಂಗ್ ಮೇಕರ್ ಆಗಲಿದೆ.

ಈ ಬಾರಿ ರಾಜ್ಯದ ಇತಿಹಾಸದಲ್ಲಿ ಅತೀ ಹೆಚ್ಚು- 72.36%- ಪ್ರಮಾಣದಲ್ಲಿ ಮತದಾನವಾಗಿದ್ದು, ಪಕ್ಷಗಳು ಸರಳ ಬಹುಮತಕ್ಕೆ 113 ಸ್ಥಾನಗಳನ್ನು ಪಡೆಯಬೇಕು. ಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಗಿದ್ದು,  ಮತಚೀಟಿ ಅಕ್ರಮದ ಹಿನ್ನೆಲೆಯಲ್ಲಿ ಆರ್‌.ಆರ್.ನಗರ ಕ್ಷೇತ್ರದ ಚುನಾವಣೆಯನ್ನು ಮೇ.28ಕ್ಕೆ ನಿಗದಿಪಡಿಸಲಾಗಿದೆ.

2013ರ  ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 122, ಬಿಜೆಪಿ 40, ಜೆಡಿಎಸ್ 40 ಹಾಗೂ ಕೆಜೆಪಿ 6 ಸ್ಥಾನಗಳನ್ನು ಪಡೆದಿತ್ತು.

Follow Us:
Download App:
  • android
  • ios