ಬಳ್ಳಾರಿ

ಕೆ.ಎಂ ಮಂಜುನಾಥ್

ದಶಕಗಳ ಕಾಲ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ಬಳ್ಳಾರಿ ಜಿಲ್ಲೆಗೆ ಬಿಜೆಪಿ ಲಗ್ಗೆ ಇಟ್ಟಿದ್ದು 2008ರಲ್ಲಿ. ಗಣಿ ರೆಡ್ಡಿಗಳ ಸಹಾಯದಿಂದ ಇತಿಹಾಸದಲ್ಲೇ ಅತ್ಯಧಿಕ ಸ್ಥಾನಗಳನ್ನು ಗೆದ್ದಿದ್ದ ಆ ಪಕ್ಷಕ್ಕೆ ೨೦೧೩ರ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಹೊಡೆತ ನೀಡಿತ್ತು. ಈ ಬಾರಿ ಎರಡೂ ಪಕ್ಷಗಳ ನಡುವೆ ಜಿದ್ದಾಜಿದ್ದಿ ಪೈಪೋಟಿ ಏರ್ಪಟ್ಟಿದೆ. ಯಾರು ಗೆದ್ದರೂ, ಸೋತರೂ ಅಂತರ ಹೆಚ್ಚಿರಲಿಕ್ಕಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಕಾಂಗ್ರೆಸ್, ಬಿಜೆಪಿ ಎರಡಕ್ಕೂ ಬಂಡಾಯದ ಬಿಸಿ ತಟ್ಟಿದ್ದು, ಬಂಡಾಯಗಾರರು ಸೆಳೆಯುವ ಮತಗಳು ಸೋಲು- ಗೆಲುವಿನಲ್ಲಿ ಪಾತ್ರ ವಹಿಸುವ ಸಾಧ್ಯತೆ ಹೆಚ್ಚಿದೆ. 

ಬಳ್ಳಾರಿ ನಗರ
ಹಾಲಿ ಕಾಂಗ್ರೆಸ್ ಶಾಸಕ ಅನಿಲ್ ಲಾಡ್, ಬಿಜೆಪಿ ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ಹಾಗೂ ಜೆಡಿಎಸ್ ಅಭ್ಯರ್ಥಿ ಮಹ್ಮದ್ ಇಕ್ಬಾಲ್ ನಡುವೆ ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಈವರೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರಾ ಜಿದ್ದಾಜಿದ್ದಿ ಎಂಬಂತಿದ್ದ ಕಣದ ಚಿತ್ರಣ ಬದಲಾಗಿದೆ. ಗಣಿ ಮಾಲೀಕ ಹಾಗೂ ಮುಸ್ಲಿಂ ಸಮುದಾಯದ ಪ್ರಭಾವಿ ಮುಖಂಡ ಮಹ್ಮದ್ ಇಕ್ಬಾಲ್ ಮುಸ್ಲಿಂ ಮತಗಳನ್ನು ಸೆಳೆಯುವ ನಿರೀಕ್ಷೆ ಇದೆ. ಇದು ಕಾಂಗ್ರೆಸ್ ಅಭ್ಯರ್ಥಿಗೆ ಮುಳುವಾಗಲಿದೆ ಎಂಬ ಲೆಕ್ಕಾಚಾರ ಶುರುವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಪರ ಸ್ಥಳೀಯ ಹಿರಿಯ ನಾಯಕರಾದ ಎನ್. ಸೂರ್ಯನಾರಾಯಣ ರೆಡ್ಡಿ, ಅಲ್ಲಂ ವೀರಭದ್ರಪ್ಪ, ಕೆ.ಸಿ. ಕೊಂಡಯ್ಯ ಅವರು ಒಂದಾಗಿ ಕೆಲಸ ಮಾಡುವ ನಿರ್ಧಾರಕ್ಕೆ ಬಂದಿದ್ದು, ಇದು ಲಾಡ್ ಅವರಿಗೆ ಕೊಂಚ ನೆಮ್ಮದಿ ತಂದಿದೆ. ಹಾಲಿ ಸ್ಪರ್ಧೆಯಲ್ಲಿರುವ ಮೂವರೂ ಅಭ್ಯರ್ಥಿಗಳು ಗಣಿ
ಹಿನ್ನೆಲೆಯವರು. ಹೀಗಾಗಿ ಚುನಾವಣೆ ಕಣ ರೋಚಕವಾಗಿರಲಿದೆ.


ಬಳ್ಳಾರಿ ಗ್ರಾಮಾಂತರ
ಬಾದಾಮಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಖಾಡಕ್ಕೆ ಇಳಿದಿರುವ ಬಿ. ಶ್ರೀರಾಮುಲು ಹಿಂದೆ ಪ್ರತಿನಿಧಿಸುತ್ತಿದ್ದ ಕ್ಷೇತ್ರವಿದು. 2004 ರಿಂದ ಪ್ರತಿ ಚುನಾವಣೆಯಲ್ಲೂ ರಾಮುಲು ಅವರನ್ನು ಇಲ್ಲಿನ  ಮತದಾರರು ಕೈ ಹಿಡಿದಿದ್ದಾರೆ. ಆದರೆ, ಈ ಬಾರಿ ಕೂಡ್ಲಿಗಿ ಶಾಸಕ ಬಿ. ನಾಗೇಂದ್ರ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಶ್ರೀರಾಮುಲು ಸಂಬಂಧಿಕ ಹಾಗೂ ಮಾಜಿ ಸಂಸದ ಸಣ್ಣ ಫಕ್ಕೀರಪ್ಪ ಕಣಕ್ಕಿಳಿದಿದ್ದಾರೆ. ಬಿ. ನಾಗೇಂದ್ರ ಅವರಿಗೆ ಈ ಕ್ಷೇತ್ರದಲ್ಲಿ  ಬಿಗಿ ಹಿಡಿತವಿದೆ. ಶ್ರೀರಾಮುಲು ಈ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ. ಹೀಗಾಗಿ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಬಲ ಬಂದಿದೆ. ಲಿಂಗಾಯತ ಮತಗಳು ಈ ಭಾಗದಲ್ಲಿ ಬಿಜೆಪಿಯ ಕಡೆಗೇ ಬರುವ ಸಾಧ್ಯತೆ ಇದ್ದು, ಹೆಚ್ಚಿನ ಸಂಖ್ಯೆಯಲ್ಲಿರುವ ಮುಸ್ಲಿಂ ಮತಗಳನ್ನು ಕಾಂಗ್ರೆಸ್ ಬಾಚಿಕೊಳ್ಳುವ ಲೆಕ್ಕಾಚಾರ ಇದೆ. ಜೆಡಿಎಸ್ ಅಭ್ಯರ್ಥಿ 
ರಮೇಶ್ ಅಖಾಡದಲ್ಲಿದ್ದರೂ ಸ್ಪರ್ಧೆ ಏನಿದ್ದರೂ ಕಾಂಗ್ರೆಸ್, ಬಿಜೆಪಿ ನಡುವೆ. 


ಸಂಡೂರು
2008 ರಲ್ಲಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ 8 ಕಡೆ ಬಿಜೆಪಿ ಗೆದ್ದಿದ್ದರೂ ಸಂಡೂರಿನಲ್ಲಿ ಮಾತ್ರ ಕಾಂಗ್ರೆಸ್ ಗೆಲುವು ಕಂಡಿತ್ತು. ಕಾಂಗ್ರೆಸ್ ಪಕ್ಷದ ಹಿಡಿತ ಈ ಬಾರಿಯೂ ಮುಂದುವರಿದಿದೆ. ಎರಡು ಬಾರಿ ಕಾಂಗ್ರೆಸ್‌ನಿಂದ ಶಾಸಕರಾಗಿರುವ ತುಕಾರಾಂ ಅವರಿಗೆ ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ರಾಘವೇಂದ್ರ ಸ್ಪರ್ಧೆಯೊಡ್ಡುತ್ತಿದ್ದಾರೆ. ಜೆಡಿಎಸ್‌ನಿಂದ ಸ್ಪರ್ಧಿಸಿರುವ ವಸಂತಕುಮಾರ್ ಹಾಗೂ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದಿಂದ ಸ್ಪರ್ಧಿಸಿರುವ ಎ. ರಾಮಾಂಜಿನಪ್ಪ ಅವರು ಕಾಂಗ್ರೆಸ್ ಮತ ಬುಟ್ಟಿಗೆ ಕೈಹಾಕುವ ಸಾಧ್ಯತೆ ಇದೆ. ಒಂದು ವೇಳೆ ಈ ಇಬ್ಬರು ಅಭ್ಯರ್ಥಿಗಳು ಹೆಚ್ಚಿನ ಮತ ಗಳಿಸಿದರೆ ಕಾಂಗ್ರೆಸ್ ಅಭ್ಯರ್ಥಿಗೆ ಹಿನ್ನಡೆಯಾಗಬಹುದು. ಸಂಡೂರು ತನ್ನ ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಗಣಿಗಾರಿಕೆಯಿಂದ ವಿಶ್ವ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಸಂಡೂರು ಘೋರ್ಪಡೆ ರಾಜಮನೆತನದವರು ಅನೇಕ ವರ್ಷ ಇಲ್ಲಿ ರಾಜಕೀಯ ಪಾರಮ್ಯ ಹೊಂದಿದ್ದರು


ಹೂವಿನ ಹಡಗಲಿ
ಹಾಲಿ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಈ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯ ಮಾಜಿ ಶಾಸಕ ಚಂದ್ರನಾಯ್ಕ ಎದುರಾಳಿಯಾಗಿದ್ದಾರೆ. ಈ ಕ್ಷೇತ್ರ ಹರಪನಹಳ್ಳಿ  ಕಾಂಗ್ರೆಸ್ ಶಾಸಕ ಎಂ.ಪಿ. ರವೀಂದ್ರ ಅವರ ಪೂರ್ಣ ಹಿಡಿತದಲ್ಲಿದೆ. ರವೀಂದ್ರ ಬಹಿರಂಗವಾಗಿ ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿದರೆ ಪರಮೇಶ್ವರ ನಾಯ್ಕ ಗೆಲುವಿನ ತುತ್ತು ಮತ್ತಷ್ಟು ಸುಲಭ. 
ಇಲ್ಲವಾದರೆ ಬಿಜೆಪಿ ಅಭ್ಯರ್ಥಿಗೆ ಹೆಚ್ಚು ಅನುಕೂಲ ಆಗಬಹುದು. ಇನ್ನು ಬಿಜೆಪಿ ಬಂಡಾಯ ಅಭ್ಯರ್ಥಿ ಓದೋ ಗಂಗಪ್ಪ ಅವರು ಎಂ.ಪಿ. ರವೀಂದ್ರಗೆ ಆಪ್ತರಾಗಿದ್ದವರು. ಬಿಜೆಪಿ ಸೇರಿದ್ದರೂ ರವೀಂದ್ರ ಜತೆಗೆ ಗಂಗಪ್ಪ ಸಂಬಂಧ ಈಗಲೂ ಚೆನ್ನಾಗಿಯೇ ಇದೆ. ರವೀಂದ್ರ ಅವರು ಗಂಗಪ್ಪ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಲಾಗುತ್ತಿರುವುದರಿಂದ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಕಂಡು ಬಂದಿದೆ. ಜೆಡಿಎಸ್
ಅಭ್ಯರ್ಥಿಯಾಗಿ ಕೆ. ಪುತ್ರಪ್ಪ ಕಣದಲ್ಲಿದ್ದಾರೆ. 

ಹಗರಿ ಬೊಮ್ಮನಹಳ್ಳಿ
ಕಳೆದ ಬಾರಿ ಜೆಡಿಎಸ್‌ನಿಂದ ಗೆದ್ದಿದ್ದ ಭೀಮಾನಾಯ್ಕ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಮಾಜಿ ಶಾಸಕ ನೇಮಿರಾಜ ನಾಯ್ಕ ಅವರು ಬಿಜೆಪಿ ಅಭ್ಯರ್ಥಿಯಾಗಿ ಅಖಾಡದಲ್ಲಿದ್ದಾರೆ. ಅತಿ ಹೆಚ್ಚು ಜನಸಂಖ್ಯೆ ಇರುವ ಮಾದಿಗ ಸಮುದಾಯಕ್ಕೆ ಈ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡುವಂತೆ ಕಾಂಗ್ರೆಸ್ ಅನ್ನು ಕೋರಲಾಗಿತ್ತು. ಆದರೆ, ಆ ಮನವಿಗೆ ಕಾಂಗ್ರೆಸ್ ಸ್ಪಂದಿಸಲಿಲ್ಲ. ಹೀಗಾಗಿ ಕಾಂಗ್ರೆಸ್ 
ಸೋಲಿಸಲು ಪಣ ತೊಟ್ಟಿರುವ ಈ ಸಮಾಜದ ಮುಖಂಡರು ಒಕ್ಕೊರಲಿನಿಂದ ಪಕ್ಷೇತರ ಅಭ್ಯರ್ಥಿಯನ್ನಾಗಿ ನಿವೃತ್ತ ಆರ್‌ಟಿಒ ಅಧಿಕಾರಿ ಎಲ್.ಪರಮೇಶ್ವರಪ್ಪ ಅವರನ್ನು ಸ್ಪರ್ಧೆಗಿಳಿಸಿದ್ದಾರೆ. ಇದರಿಂದ ದಲಿತರ ಮತಗಳು ಹಂಚಿ ಹೋಗುವ ಸಾಧ್ಯತೆಗಳಿವೆ. ಜೆಡಿಎಸ್ ಅಭ್ಯರ್ಥಿಯಾಗಿ ಕೃಷ್ಣನಾಯ್ಕ ಕಣದಲ್ಲಿದ್ದರೂ ಇಲ್ಲಿ ಜಿದ್ದಾಜಿದ್ದಿ ಸ್ಪರ್ಧೆ ಏರ್ಪಟ್ಟರೆ ಅದು ಬಿಜೆಪಿ, ಕಾಂಗ್ರೆಸ್ ಹಾಗೂ ಪರಮೇಶ್ವರಪ್ಪ ನಡುವೆ ಮಾತ್ರ.

ಹೊಸಪೇಟೆ
ಬಿಜೆಪಿಯಿಂದ ಹೊರ ಬಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆಯಲ್ಲಿರುವ ಮಾಜಿ ಶಾಸಕ ಆನಂದ ಸಿಂಗ್ ಹಾಗೂ ಕಾಂಗ್ರೆಸ್‌ನ ನಡೆಯಿಂದ ಮುನಿಸಿಕೊಂಡು ಬಿಜೆಪಿ ಸೇರಿರುವ ಎಚ್.ಆರ್. ಗವಿಯಪ್ಪ ನಡುವೆ ನೇರ ಹಣಾಹಣಿ ಇದೆ. ಸದಾ ಜನರೊಂದಿಗೆ ಗುರುತಿಸಿಕೊಂಡಿರುವ ಸಿಂಗ್‌ಗೆ ಗೆಲುವಿನ ವಿಶ್ವಾಸವಿದೆ. ಲಿಂಗಾಯತ ಮತಗಳು, ಪಕ್ಷ ಹಾಗೂ ಶ್ರೀರಾಮುಲು ಪ್ರಭಾವವನ್ನು ಬಿಜೆಪಿ ಅಭ್ಯರ್ಥಿ ಹೆಚ್ಚು ನೆಚ್ಚಿಕೊಂಡಿದ್ದಾರೆ. ಈ ಕ್ಷೇತ್ರದಲ್ಲಿ ವಾಲ್ಮೀಕಿ, ಲಿಂಗಾಯತ ಹಾಗೂ ಕುರುಬ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಕಾಂಗ್ರೆಸ್‌ನಿಂದ ಬಂಡೆದ್ದಿರುವ ದೀಪಕ್ ಸಿಂಗ್ ಜೆಡಿಎಸ್‌ನಿಂದ ಅಖಾಡದಲ್ಲಿ  ಇದ್ದಾರಾದರೂ ಇಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆಯೇ ನೇರ ಹಣಾಹಣಿ. ಈ ಹಿಂದಿನ ಚುನಾವಣೆಯಲ್ಲಿ ಗವಿಯಪ್ಪ ಕಾಂಗ್ರೆಸ್‌ನಲ್ಲಿದ್ದರೆ ಆನಂದ ಸಿಂಗ್ ಬಿಜೆಪಿಯಲ್ಲಿದ್ದರು. ಈಗ ಇಬ್ಬರೂ ಅದಲು-ಬದಲು ಪಾತ್ರ ನಿರ್ವಹಿಸುತ್ತಿರುವುದು ವಿಶೇಷ.


ಕೂಡ್ಲಿಗಿ 
ವಾಲ್ಮೀಕಿ ಸಮಾಜದವರೇ ಸಾಕಷ್ಟು ಸಂಖ್ಯೆಯಲ್ಲಿರುವ ಕೂಡ್ಲಿಗಿ ಕ್ಷೇತ್ರದಲ್ಲಿ ಎರಡು ಅವಧಿಗೆ ಬಿ. ನಾಗೇಂದ್ರ ಶಾಸಕರಾಗಿದ್ದವರು. ಈ ಬಾರಿ ನಾಗೇಂದ್ರ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಅಲ್ಲಿನ ಹಾಲಿ ಶಾಸಕ ಎನ್.ವೈ. ಗೋಪಾಲಕೃಷ್ಣ ಬಿಜೆಪಿ ಟಿಕೆಟ್ ಮೂಲಕ ಈ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.  ಕಾಂಗ್ರೆಸ್ ಇಲ್ಲಿ ಹೊಸ ಮುಖವನ್ನು ಪರಿಚಯಿಸಿದೆ. ಯುವ ಕಾಂಗ್ರೆಸ್‌ನ ಗುಜ್ಜಲ ರಘು ಅಭ್ಯರ್ಥಿಯಾಗಿದ್ದಾರೆ. ಮಾಜಿ ಶಾಸಕ ಹಾಗೂ ಹಾಲಿ ಜೆಡಿಎಸ್ ಅಭ್ಯರ್ಥಿ ಎನ್.ಟಿ. ಬೊಮ್ಮಣ್ಣ ಕ್ಷೇತ್ರದಲ್ಲಿ ಹೆಚ್ಚು ಹಿಡಿತ ಹೊಂದಿದವರು. ಹೀಗಾಗಿ ಬಿಜೆಪಿಯ ಎನ್.ವೈ. ಗೋಪಾಲ ಕೃಷ್ಣ ಹಾಗೂ ಎನ್.ಟಿ. ಬೊಮ್ಮಣ್ಣ ನಡುವೆ ಪೈಪೋಟಿ ನಡೆದಿದೆ. ಲೋಕೇಶ ನಾಯ್ಕ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಇದರಿಂದ ಕಾಂಗ್ರೆಸ್ ಮತಗಳು ಹಂಚಿ ಹೋಗುವ ಸಾಧ್ಯತೆಗಳಿದ್ದು, ಬಿಜೆಪಿ ಹಾಗೂ
ಜೆಡಿಎಸ್ ನಡುವೆ ವೇದಿಕೆ ಸಿದ್ಧವಾಗಿದೆ. 

ಕಂಪ್ಲಿ
ಎರಡು ಬಾರಿ ಬಿಜೆಪಿಯಿಂದ ಗೆದ್ದಿರುವ ಹಾಲಿ ಶಾಸಕ ಟಿ.ಎಚ್. ಸುರೇಶ್ ಬಾಬು ಅವರು ಹ್ಯಾಟ್ರಿಕ್ ಗೆಲುವಿಗಾಗಿ ಮತ್ತೆ ಕಣಕ್ಕಿಳಿದಿದ್ದಾರೆ. ಈ ಹಿಂದೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲುಂಡಿದ್ದ ಗಣೇಶ್ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಸುರೇಶ್ ಬಾಬು ಅವರಿಗೆ ಈ ಕ್ಷೇತ್ರದಲ್ಲಿ ಹೆಚ್ಚು ಪ್ರಾಬಲ್ಯವಿದೆ. ವಾಲ್ಮೀಕಿ ಹಾಗೂ ಲಿಂಗಾಯತ  ಮತಗಳು ಬಿಜೆಪಿಗೆ ವಾಲುವ ಸಾಧ್ಯತೆಗಳು ಹೆಚ್ಚಾಗಿವೆ ಎಂಬ ಮಾತುಗಳು
ಕ್ಷೇತ್ರದಾದ್ಯಂತ ಕೇಳಿ ಬಂದಿವೆ. ಕಾಂಗ್ರೆಸ್‌ನ ಜಿಲ್ಲೆಯ ಹಿರಿಯ ನಾಯಕರು ಈ ಬಾರಿ ಕಂಪ್ಲಿ ಕ್ಷೇತ್ರವನ್ನು ಗೆದ್ದುಕೊಳ್ಳಬೇಕು ಎಂದು ಶತಗತಾಯ ಪ್ರಯತ್ನ ನಡೆಸಿದ್ದಾರೆ. ಇದರಿಂದ ಸುರೇಶ್ ಬಾಬು ಅವರಿಗೆ ಈ ಬಾರಿ ಪ್ರಬಲ ಪೈಪೋಟಿ ಎದುರಾಗಬಹುದು ಎಂಬ ರಾಜಕೀಯ ಲೆಕ್ಕಾಚಾರ ನಡೆಯುತ್ತಿದೆ. ಜೆಡಿಎಸ್ ಅಭ್ಯರ್ಥಿಯಾಗಿ ರೈತ ಮುಖಂಡ ಕೆ. ರಾಘವೇಂದ್ರ ಹಾಗೂ ಸಿಪಿಐಎಂ ಅಭ್ಯರ್ಥಿಯಾಗಿ ವಿ.ಎಸ್.
ಶಿವಶಂಕರ್ ಕಣದಲ್ಲಿದ್ದಾರೆ. 

ಸಿರಗುಪ್ಪ
ಹಾಲಿ ಕಾಂಗ್ರೆಸ್ ಶಾಸಕ ಬಿ.ಎಂ. ನಾಗರಾಜ್ ಅವರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿದ್ದು, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ. ನಾಗೇಂದ್ರ ಅವರ ಅಳಿಯ ಮುರಳೀಕೃಷ್ಣ ಅವರಿಗೆ ದಕ್ಕಿದೆ. ಮುರಳೀಕೃಷ್ಣ ಈ ಕ್ಷೇತ್ರಕ್ಕೆ ಹೊಸ ಮುಖ. ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಅಖಾಡದಲ್ಲಿದ್ದಾರೆ. ಇಲ್ಲಿನ ಹಾಲಿ ಶಾಸಕ ಬಿ.ಎಂ. ನಾಗರಾಜ್ ಅವರ ಮುನಿಸು ತಣಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದು, ನಾಯಕರು ಒಗ್ಗಟ್ಟಾಗಿ ಇಲ್ಲಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಒಂದು ವೇಳೆ ಈ ಬಂಡಾಯ ಮುಂದುವರೆದಿದ್ದರೆ ಸೋಮಲಿಂಗಪ್ಪ ಅವರಿಗೆ  ಅನುಕೂಲವಾಗುವ ನಿರೀಕ್ಷೆ ಇತ್ತು. ಆದರೆ, ಸಕಾಲದಲ್ಲಿ ವರಿಷ್ಠರ ಮಧ್ಯಪ್ರವೇಶದಿಂದ ಸದ್ಯ ಕಾಂಗ್ರೆಸ್ ನಾಯಕರು ಮುನಿಸು ಮರೆತು ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮಾರುತಿ ಅಖಾಡದಲ್ಲಿದ್ದಾರೆ. ಆದರೆ, ನಿಜವಾದ ಸ್ಪರ್ಧೆ ಮುರಳೀಕೃಷ್ಣ ಮತ್ತು ಸೋಮಲಿಂಗಪ್ಪ ಅವರ ನಡುವೆ ಏರ್ಪಡಲಿದೆ.