ಸಿದ್ದರಾಮಯ್ಯ ಆಯ್ಕೆಗೆ ಗೌಡರ ನಕಾರ

Cong-JD(S) fight begins over post of Speaker?
Highlights

ಸಮ್ಮಿಶ್ರ ಸರ್ಕಾರ ರಚಿಸಲು ಮುಂದಾಗಿರುವ ಮಿತ್ರ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ವಿಧಾನಸಭೆಯ ಸ್ಪೀಕರ್ ಹುದ್ದೆಗೆ ಸಂಬಂಧಿಸಿದಂತೆ ಜಿದ್ದಾಜಿದ್ದಿ ಆರಂಭವಾಗಿದ್ದು, ಉಭಯ ಪಕ್ಷಗಳು ಸ್ಪೀಕರ್ ಹುದ್ದೆ ತಮಗೇ ಬೇಕು ಎಂದು ಬಿಗಿಪಟ್ಟು ಹಿಡಿದಿವೆ. 

ಬೆಂಗಳೂರು : ಸಮ್ಮಿಶ್ರ ಸರ್ಕಾರ ರಚಿಸಲು ಮುಂದಾಗಿರುವ ಮಿತ್ರ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ವಿಧಾನಸಭೆಯ ಸ್ಪೀಕರ್ ಹುದ್ದೆಗೆ ಸಂಬಂಧಿಸಿದಂತೆ ಜಿದ್ದಾಜಿದ್ದಿ ಆರಂಭವಾಗಿದ್ದು, ಉಭಯ ಪಕ್ಷಗಳು ಸ್ಪೀಕರ್ ಹುದ್ದೆ ತಮಗೇ ಬೇಕು ಎಂದು ಬಿಗಿಪಟ್ಟು ಹಿಡಿದಿವೆ. ಮೈತ್ರಿಕೂಟದ ರಾಜಕಾರಣದ ಭವಿಷ್ಯದ ರಾಜಕೀಯ ತಲ್ಲಣಗಳನ್ನು ಗಮನದಲ್ಲಿ ಇಟ್ಟುಕೊಂಡು ತಾಂತ್ರಿಕವಾಗಿ ಮಹತ್ವ ದ್ದಾದ ಸ್ಪೀಕರ್ ಹುದ್ದೆಯಲ್ಲಿ ತಮ್ಮ ಪಾಳೆಯದವರೇ ಇರುವುದು ಸೂಕ್ತ ಎಂಬ ನಿಲುವಿಗೆ ಬಂದಿರುವ ಉಭಯ ಪಕ್ಷಗಳ ನಾಯಕರು ತಮ್ಮ ಪಟ್ಟು ಸಡಿಲಿಸುತ್ತಿಲ್ಲ ಎನ್ನಲಾಗಿದೆ. 

ಇತ್ತ ಕಾಂಗ್ರೆಸ್ ಪಕ್ಷ ಹಿರಿಯ ಶಾಸಕರಾದ ಕೆ.ಆರ್.ರಮೇಶ್ ಕುಮಾರ್ ಅಥವಾ ಆರ್.ವಿ.ದೇಶಪಾಂಡೆ ಅವರ ಪೈಕಿ ಒಬ್ಬರಿಗೆ ಸ್ಪೀಕರ್ ಹುದ್ದೆ ನೀಡಬೇಕು ಎಂಬ ಅಭಿಪ್ರಾಯ ಹೊಂದಿದೆ. ಅದ ರಲ್ಲೂ ರಮೇಶ್‌ಕುಮಾರ್ ಪರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಲವಾದ ಪ್ರಯತ್ನ ಆರಂಭಿಸಿದ್ದಾರೆ. ಅತ್ತ ಪಕ್ಷದ ಹಿರಿಯ ಶಾಸಕ ಹಾಗೂ ಸಜ್ಜನ ರಾಜಕಾರಣಿ ಎಂದೇ ಕರೆಯಲ್ಪಡುವ ಎ.ಟಿ.ರಾಮ ಸ್ವಾಮಿ ಅವರನ್ನು ಸ್ಪೀಕರ್ ಆಗಿ ಆರಿಸುವ ಸಂಬಂಧ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಒಲವು ಹೊಂದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಹೀಗಾಗಿ, ಸ್ಪೀಕರ್ ಹುದ್ದೆ ಯಾರ ಪಾಲಾಗಲಿದೆ ಎಂಬುದು ಕುತೂಹಲ ಮೂಡಿಸಿದೆ. 

ಜೆಡಿಎಸ್ ಪಾಳೆಯದಿಂದ ರಾಮಸ್ವಾಮಿ: ಜೆಡಿಎಸ್ ಪ್ರಾಬಲ್ಯದ ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಶಾಸಕರಾಗಿರುವ ರಾಮಸ್ವಾಮಿ ಅವರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇ ಗೌಡರ ಚಿಂತಕರ ಚಾವಡಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಈಗಿನ ಜೆಡಿಎಸ್ ಶಾಸಕರ ಪೈಕಿ ಕಾನೂನು ಕಟ್ಟಲೆಗಳ ಕುರಿತು ರಾಮಸ್ವಾಮಿ ಅವರು ಅಧಿಕಾರಯುತವಾಗಿ ಮಾತನಾಡುವ ನೈಪುಣ್ಯತೆ ಹೊಂದಿದ್ದಾರೆ. ಹೀಗಾಗಿ ವಿಧಾನ ಸಭಾಧ್ಯಕ್ಷ ಸ್ಥಾನವು ಜೆಡಿಎಸ್ ವಶವಾದರೆ ಸಹಜವಾಗಿ ರಾಮಸ್ವಾಮಿ ಅವರೇ ದೊಡ್ಡ ಗೌಡರ ಆಯ್ಕೆಯಾಗಲಿದ್ದಾರೆ ಎಂದು ಮೂಲಗಳು ಹೇಳಿವೆ.

ತಮಗೆ ಸವಾಲೆಸೆದು ಹಾಸನ ಜಿಲ್ಲೆಯಲ್ಲಿ ಪರ್ಯಾಯ ನಾಯಕತ್ವ ಹುಟ್ಟುಹಾಕಿದ್ದ ಮಾಜಿ ಸಚಿವ ಎ.ಮಂಜು ಅವರನ್ನು ಮಣಿಸಿ ರುವ ರಾಮಸ್ವಾಮಿ ಅವರಿಗೆ ಮಂತ್ರಿಗಿರಿ ಕಲ್ಪಿಸಿ, ಮಂಜು ಅವರನ್ನು ರಾಜ ಕೀಯವಾಗಿ ಹಣಿಯುವ ಬಗ್ಗೆ ಸಹ ಗೌಡರು ಚಿಂತಿಸಿದ್ದಾರೆ. ಆದರೆ ಹಾಸನ ಜಿಲ್ಲೆಯಿಂದ ರೇವಣ್ಣ, ಶಿವ ಲಿಂಗೇಗೌಡ ಹಾಗೂ ಎಚ್.ಕೆ.ಕುಮಾರಸ್ವಾಮಿ ಅವರು ಸಂಪುಟ ಸೇರಲು ಲಾಬಿ ನಡೆಸಿದ್ದಾರೆ. 
ಒಕ್ಕಲಿಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಂಪುಟದಲ್ಲಿ ಸ್ಥಾನ ಕಲ್ಪಿಸಿದರೆ ಜನರಿಗೆ ತಪ್ಪು ಸಂದೇಶ ರವಾನೆಯಾಗಲಿದೆ ಎಂಬ ದಿಗಿಲು ದಳ ಪತಿಗಳಲ್ಲಿ ಹುಟ್ಟಿದೆ. 

ರಾಮಸ್ವಾಮಿ ಅಲ್ಲದಿದ್ದರೆ ಯಾರು?: ಒಂದು ವೇಳೆ ವಿಧಾನಸಭಾಧ್ಯಕ್ಷ ಹುದ್ದೆಗೆ ರಾಮಸ್ವಾಮಿ ಅವರ ಬದಲಿಗೆ ಮತ್ತೊಬ್ಬರನ್ನು  ಆರಿಸಲು ವರಿಷ್ಠರು ಮುಂದಾದರೆ, ಆಗ ಶಿರಾದ ಬಿ. ಸತ್ಯನಾರಾಯಣ್ ಹಾಗೂ ಕೋಲಾರದ ಶ್ರೀನಿವಾಸ್ ಗೌಡ ಅವರಿಗೆ ಪದವಿ ಒಲಿಯಬ ಹುದು. ಸತ್ಯನಾರಾಯಣ್ ಅವರು ಒಕ್ಕಲಿಗ ವರ್ಗದ ಉಪ ಜಾತಿ ಕುಂಚಿಟಿಗ ಸಮುದಾ ಯದ ಏಕೈಕ ಶಾಸಕರಾಗಿದ್ದಾರೆ. ತುಮಕೂರು  ಜಿಲ್ಲೆ ಕೋಟಾದಡಿ ಸತ್ಯನಾರಾಯಣ್ ಅವರು ಸಚಿವರಾಗಲು ಬಯಸಿದ್ದು, ಉಪ ಜಾತಿಗೆ ಮಣೆಹಾಕಲು ದೇವೇಗೌಡರು ಸಹ ಒಲವು ತೋರಿದ್ದಾರೆ ಎಂಬ ಮಾತುಗಳಿವೆ. ಅಲ್ಲದೆ ಬಿ. ಎಸ್.ಯಡಿಯೂರಪ್ಪ ಅವರಂತಹವರು ವಿರೋಧ ಪಕ್ಷದ ನಾಯಕರಾದಾಗ ಸದನ ನಿಭಾಯಿಸುವುದು ಶಿರಾದ ಶಾಸಕರಿಗೆ ಕಷ್ಟವಾಗಬಹುದು.

ಶ್ರೀನಿವಾಸ್‌ಗೌಡರಿಗೂ ಸಹ ಸದನ ನಡೆಸುವಷ್ಟು ಮಾತಿನ ಚಾತುರ್ಯತೆ ಇಲ್ಲ. ಹೀಗಾಗಿ ಎಲ್ಲ ದೃಷ್ಟಿಯಿಂದ ರಾಮಸ್ವಾಮಿ ಅವರೇ ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ಮೊದಲ ಮತ್ತು ಕೊನೆಯ ಆಯ್ಕೆಯಾಗಬಹುದು ಎನ್ನಲಾಗುತ್ತದೆ. ಇನ್ನು ಸಮಿಶ್ರ ಸರ್ಕಾರ ದಲ್ಲಿ ಭವಿಷ್ಯದಲ್ಲಿ ಉಂಟಾಗಬಹುದಾದ ರಾಜಕೀಯ ಬೆಳವಣಿಗೆ ಯಲ್ಲಿ ಸ್ಪೀಕರ್ ಅವರು ಶಾಸಕರ ರಕ್ಷಣೆಯಲ್ಲಿ ಮಹತ್ವದ ವಹಿಸುತ್ತಾರೆ. ಹೀಗಾಗಿ ಆ ಸ್ಥಾನಕ್ಕೆ ದೇವೇಗೌಡರು ಪಟ್ಟು ಹಿಡಿದಿದ್ದಾರೆ. 

ಈ ಹಿಂದೆ ಕುಮಾರಸ್ವಾಮಿ ಅವರು ಬಂಡೆದ್ದು ಬಿಜೆಪಿ ಜತೆ ಸರ್ಕಾರ ರಚಿಸಿದಾಗ ಶಾಸಕರನ್ನು ಅನರ್ಹ ಗೊಳ್ಳದಂತೆ ಅಂದಿನ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ರಕ್ಷಿಸಿದ್ದರು. ಈಗ ಮತ್ತೆ ಇತಿಹಾಸ ಮರುಕಳಿಸಿದರೆ ವಿಧಾನಸಭಾಧ್ಯಕ್ಷರ ಹುದ್ದೆಗೆ ಪ್ರಾಮುಖ್ಯತೆ ಸಿಗಲಿದೆ.

loader