ಜನಾರ್ದನ ರೆಡ್ಡಿ ವಿರುದ್ಧ ಕಾಂಗ್ರೆಸ್‌ ದೂರು

Cong files complaint against Janardhan Reddy for comparing Siddaramaiah to a demon
Highlights

ಚುನಾವಣಾ ಪ್ರಚಾರದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ‘ರಾವಣ’, ‘ಮಹಿಷಾಸುರ’ನಿಗೆ ಹೋಲಿಸಿ ಅವಹೇಳನ ಮಾಡಿದ್ದಾರೆನ್ನಲಾದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಕಾಂಗ್ರೆಸ್‌ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಬೆಂಗಳೂರು :  ಚುನಾವಣಾ ಪ್ರಚಾರದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ‘ರಾವಣ’, ‘ಮಹಿಷಾಸುರ’ನಿಗೆ ಹೋಲಿಸಿ ಅವಹೇಳನ ಮಾಡಿದ್ದಾರೆನ್ನಲಾದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಕಾಂಗ್ರೆಸ್‌ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ವಿಧಾನ ಪರಿಷತ್‌ ಸದಸ್ಯ ವಿ.ಎಸ್‌.ಉಗ್ರಪ್ಪ ನೇತೃತ್ವದ ಕೆಪಿಸಿಸಿ ನಿಯೋಗ ಶನಿವಾರ ಆಯೋಗಕ್ಕೆ ಈ ಸಂಬಂಧ ದೂರು ಸಲ್ಲಿಸಿದ್ದಾರೆ. ‘ಜನಾರ್ದನ ರೆಡ್ಡಿ ಅವರು ಮೊಳಕಾಲ್ಮುರು ಮತ್ತು ಬಾದಾಮಿ ಕ್ಷೇತ್ರಗಳ ಚುನಾವಣಾ ಪ್ರಚಾರದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾವಣ, ಮಹಿಷಾಸುರ ಎಂದು ಸಂಬೋಧಿಸಿ ಅವಹೇಳನ ಮಾಡಿರುವುದು ಚುನಾವಣಾ ವೇಳೆ ಮತದಾರರ ಮೇಲೆ ಪ್ರಭಾವ ಬೀರಲಿದೆ. ಇದು ಸ್ಪಷ್ಟಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಕೂಡಲೇ ಅವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

‘ಮೈಸೂರು ಭಾಗದ ಜನರು ಚಾಮುಂಡೇಶ್ವರಿ ದೇವಿಯನ್ನು, ಮುಂಬೈ ಕರ್ನಾಟಕ ಜನರು ಬನಶಂಕರಿ ದೇವಿಯನ್ನು ಬಲವಾಗಿ ನಂಬಿದವರಾಗಿದ್ದಾರೆ. ಜನರು ರಾಮನನ್ನು ದೇವರೆಂದು ರಾವಣ ಮತ್ತು ಮಹಿಷಾಸುರನನ್ನು ರಾಕ್ಷಸರೆಂದು ನಂಬಿದ್ದಾರೆ. ಹೀಗಿರುವಾಗ ಜನಾರ್ದನ ರೆಡ್ಡಿ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಿಷಾಸುರನಾದರೆ, ಮೊಳಕಾಲ್ಮುರಿನಲ್ಲಿ ರಾವಣ. ಆ ರಾವಣನ ಸಂಹಾರಕ್ಕೆ ರಾಮನಾಗಿ ನನ್ನ ಆಪ್ತ ಶ್ರೀರಾಮುಲು ಅವರನ್ನು ಬಿಜೆಪಿ ಆಯ್ಕೆ ಮಾಡಿದೆ. ಬನಶಂಕರಿ ದೇವಿಯೇ ಶ್ರೀರಾಮುಲು ಅವರನ್ನು ಬಾದಾಮಿಗೆ ಕಳುಹಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಕೂಡ ಮುಖ್ಯಮಂತ್ರಿ ಅವರ ಬಗ್ಗೆ ಇದೇ ರೀತಿಯ ಹೇಳಿಕೆ ನೀಡಿದ್ದರು. 
ಇಂತಹ ಹೇಳಿಕೆಗಳು ಮತದಾರರ ಮೇಲೆ ಪ್ರಭಾವ ಬೀರುವುದರಿಂದ ನೀತಿ ಸಂಹಿತೆ ಉಲ್ಲಂಘಿಸಿದಂತಾಗಿದೆ. ಹಾಗಾಗಿ ಕೂಡಲೇ ಜನಾರ್ದನ ರೆಡ್ಡಿ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಉಗ್ರಪ್ಪ ನೇತೃತ್ವದ ನಿಯೋಗ ರಾಜ್ಯ ಮುಖ್ಯ ಚುನಾವಾಧಿಕಾರಿಗಳಿಗೆ ದೂರು ಸಲ್ಲಿಸಿದೆ.

loader