ಮೈತ್ರಿ ಸರ್ಕಾರದಿಂದ ಜನರಿಗೆ ಒಳ್ಳೆಯದಾಗದು: ಸಾಣೇಹಳ್ಳಿ ಶ್ರೀ

Coalition govt : Is It Good For People
Highlights

ಹೊತ್ತು ಬಂದಂತೆ ಕೊಡೆ ಹಿಡಿಯುವ ಸಂಸ್ಕೃತಿ ರಾಜ್ಯದ ರಾಜಕಾರಣದಲ್ಲಿ ದಟ್ಟವಾಗಿ ಬೆಳೆದಿದ್ದು, ಇಂತಹ ಸಂದರ್ಭದಲ್ಲಿ ಅಧಿಕಾರಕ್ಕೆ ಬರುತ್ತಿರುವ ಸಮ್ಮಿಶ್ರ ಸರ್ಕಾರದಿಂದ ರಾಜ್ಯದ ಜನರಿಗೆ ಒಳ್ಳೆಯದಾಗುವುದೆಂಬ ನಂಬಿಕೆ ಇಲ್ಲ ಎಂದು ತರಳಬಾಳು ಶಾಖಾಮಠದ ಸಾಣೆಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಿರಿಗೆರೆ :  ಹೊತ್ತು ಬಂದಂತೆ ಕೊಡೆ ಹಿಡಿಯುವ ಸಂಸ್ಕೃತಿ ರಾಜ್ಯದ ರಾಜಕಾರಣದಲ್ಲಿ ದಟ್ಟವಾಗಿ ಬೆಳೆದಿದ್ದು, ಇಂತಹ ಸಂದರ್ಭದಲ್ಲಿ ಅಧಿಕಾರಕ್ಕೆ ಬರುತ್ತಿರುವ ಸಮ್ಮಿಶ್ರ ಸರ್ಕಾರದಿಂದ ರಾಜ್ಯದ ಜನರಿಗೆ ಒಳ್ಳೆಯದಾಗುವುದೆಂಬ ನಂಬಿಕೆ ಇಲ್ಲ ಎಂದು ತರಳಬಾಳು ಶಾಖಾಮಠದ ಸಾಣೆಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಿರಿಗೆರೆಯಲ್ಲಿ ಬುಧ​ವಾರ ಪತ್ರಕರ್ತರೊಂದಿಗೆ ಮಾತನಾಡಿ, ವಿಭಿನ್ನ ವಿಚಾರಧಾರೆಗಳ ಎರಡು ಪಕ್ಷಗಳು ಒಟ್ಟಿಗೆ ಸೇರಿ ಜನಪರ ಆಡಳಿತ ನಡೆಸುವುದು ಕಷ್ಟಸಾಧ್ಯ. ಹಾಗಾಗಿ ರಾಜ್ಯದ ಹೊಸ ಮುಖ್ಯಮಂತ್ರಿ ಎಚ್‌.​ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರದಿಂದ ನಾಡಿನ ಅಭಿವೃದ್ಧಿಯಾಗುವ ವಿಶ್ವಾಸವಿಲ್ಲ. ತಮ್ಮ ಹಿತಚಿಂತನೆಗಳನ್ನು ಮಾಡಿಕೊಳ್ಳುವುದರಲ್ಲೇ ಕಾಲಕಳೆಯುವ ಸಂಭವ ಸಮ್ಮಿಶ್ರ ಸರ್ಕಾರದಲ್ಲಿ ಇದೆ ಎಂದು ಹೇಳಿದರು.

ಏಕಪಕ್ಷೀಯ ಸರ್ಕಾರ ಸೂಕ್ತ:

ಅಭಿವೃದ್ಧಿ ಸಾಧಿಸಲು ಏಕಪಕ್ಷದ ಆಡಳಿತವೇ ಸೂಕ್ತ. ಆದುದರಿಂದ ನಾಡಿನಲ್ಲಿ ಪ್ರಗತಿಯನ್ನು ಆಶಿಸುವ ಮತದಾರರು ಏಕಪಕ್ಷದ ಆಡಳಿತವನ್ನು ಅಧಿಕಾರಕ್ಕೆ ತರಬೇಕು. ಅತಂತ್ರ ಅಧಿಕಾರ ಶಕ್ತಿಯಿಂದ ಕುದುರೆ ವ್ಯಾಪಾರವೂ ಸೇರಿದಂತೆ ಅನೈತಿಕ ರಾಜಕಾರಣ ಒಡಮೂಡುತ್ತದೆ. ಇಂಥದ್ದ​ನ್ನೆಲ್ಲ ತಪ್ಪಿಸಲು ಏಕಪಕ್ಷೀಯ ಆಡಳಿತವೇ ಮಾರ್ಗ. ಜಾಗೃತ ಮತದಾರ ಮುಂದಿನ ಚುನಾವಣೆಗಳಲ್ಲಿ ಅತಂತ್ರ ಸರ್ಕಾರಗಳನ್ನು ಆರಿಸದೆ ಒಂದು ಪಕ್ಷದ ಸುಭದ್ರ ಸರ್ಕಾರ ರೂಪುಗೊಳ್ಳುವಂತೆ ಮತದಾನ ಮಾಡಬೇಕು ಎಂದು ಸಲಹೆ ನೀಡಿದರು.

ರಾಜಕಾರಣಿಗಳಲ್ಲಿ ಆದರ್ಶಗಳಿಲ್ಲ: ನಾಡಿನ ರಾಜಕಾರಣಿಗಳಲ್ಲಿ ಆದರ್ಶಗಳು ಕಣ್ಮರೆಯಾಗುತ್ತಿವೆ. ಅವರಲ್ಲಿ ಸಮುದಾಯದ ಚಿಂತನೆಗಿಂತ ವೈಯುಕ್ತಿಕ ಚಿಂತೆಯೇ ಹೆಚ್ಚಾಗಿದೆ. ಮಾತೆತ್ತಿದರೆ ಸಂವಿಧಾನದ ಕಡೆ ಬೆರಳು ಮಾಡುವ ರಾಜಕಾರಣಿಗಳು ಸಂವಿಧಾನದಲ್ಲಿ ಇಲ್ಲದೇ ಇರುವ ಉಪ ಮುಖ್ಯಮಂತ್ರಿ ಸ್ಥಾನ ಧಕ್ಕಿಸಿಕೊಳ್ಳಲು ನಡೆಸುತ್ತಿರುವ ಹುನ್ನಾರಗಳು ಯಾವುದೇ ಸಂದರ್ಭದಲ್ಲೂ ಒಪ್ಪಿಕೊಳ್ಳುವಂಥದ್ದ​ಲ್ಲ. ಸಂವಿಧಾನದಲ್ಲಿ ಮುಖ್ಯಮಂತ್ರಿ ಸ್ಥಾನವೇ ಶ್ರೇಷ್ಠ. ಅಧಿಕಾರದ ಗದ್ದುಗೆ ಉಳಿಸಿಕೊಳ್ಳಲು ಹಲವು ಸಂದರ್ಭಗಳಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ಹುಟ್ಟುಹಾಕಲಾಗಿದೆ. ಇದೊಂದು ಸಾಂವಿಧಾನಿಕ ಹುದ್ದೆಯಲ್ಲ ಎಂದು ಶ್ರೀಗಳು ಹೇಳಿದರು.

ರಾಜ್ಯದ ರೈತರ ಬದುಕು ಅತಂತ್ರವಾಗಿದೆ. ಚುನಾವಣೆಗೂ ಮೊದಲು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಹತ್ತಾರು ಬಾರಿ ಹೇಳುತ್ತಿದ್ದ ಕುಮಾರಸ್ವಾಮಿ ಈಗ ಮಾತು ಬದಲಿಸುತ್ತಿರುವಂತೆ ಕಾಣುತ್ತಿದೆ. ರೈತರ ಸಾಲ ಮನ್ನಾ ಮಾಡಲು ಯಾವುದೇ ಕಾರಣ ಹೇಳದೆ ಕೊಟ್ಟಮಾತು ಪೂರೈಸಬೇಕು. ಇಲ್ಲವಾದಲ್ಲಿ ನೂತನ ಸಿಎಂ ರೈತ ಸಮುದಾಯದ ವಿಶ್ವಾಸ ಕಳೆದುಕೊಳ್ಳುತ್ತಾರೆ.

- ಡಾ.ಪಂಡಿ​ತಾ​ರಾಧ್ಯ ಶಿವಾ​ಚಾರ್ಯ ಸ್ವಾಮೀಜಿ, ಸಾಣೇ​ಹಳ್ಳಿ ಮಠ

loader