ಆರ್‌. ತಾರಾನಾಥ್‌

ಚಿಕ್ಕಮಗಳೂರು : ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರಿಗೆ 1978ರಲ್ಲಿ ರಾಜಕೀಯ ಪುನರ್‌ ಜನ್ಮ ನೀಡುವ ಮೂಲಕ ರಾಷ್ಟ್ರ ರಾಜಕಾರಣದ ಚಿತ್ರಣ ಬದಲಿಸಿದ್ದ ಇತಿಹಾಸ ‘ಕಾಫಿಯ ನಾಡು’ ಚಿಕ್ಕಮಗಳೂರು ಜಿಲ್ಲೆಗಿದೆ. ಇಂತಹ ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳ ಮುಂದಿರುವ ಹಾದಿ ಕಲ್ಲು- ಮುಳ್ಳಿನಿಂದ ಕೂಡಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್‌, ಬಿಜೆಪಿ ಜೆಡಿಎಸ್‌ ನಡುವೆ ಪೈಪೋಟಿ ಕಂಡುಬರುತ್ತಿದೆ.

1. ತರೀಕೆರೆ

ಕಾಂಗ್ರೆಸ್‌- ಎಸ್‌.ಎಂ. ನಾಗರಾಜ್‌

ಬಿಜೆಪಿ- ಡಿ.ಎಸ್‌. ಸುರೇಶ್‌

ಜೆಡಿಎಸ್‌- ಶಿವಶಂಕರಪ್ಪ

ಪಕ್ಷೇತರ- ಜಿ.ಎಚ್‌. ಶ್ರೀನಿವಾಸ್‌

ಕಳೆದ ಬಾರಿ ಕಾಂಗ್ರೆಸ್ಸಿನ ಜಿ.ಎಚ್‌. ಶ್ರೀನಿವಾಸ್‌ ಆಯ್ಕೆಯಾಗಿದ್ದರು. ಈ ಬಾರಿ ಅವರಿಗೆ ಟಿಕೆಟ್‌ ಕೈತಪ್ಪಿದೆ. ಹೀಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷೇತರರಾಗಿ ಅಖಾಡದಲ್ಲಿದ್ದಾರೆ. ಬಿಜೆಪಿಯಿಂದ ಡಿ.ಎಸ್‌. ಸುರೇಶ್‌, ಕಾಂಗ್ರೆಸ್‌ನಿಂದ ಎಸ್‌.ಎಂ. ನಾಗರಾಜ್‌, ಜೆಡಿಎಸ್‌ನಿಂದ ಶಿವಶಂಕರಪ್ಪ ಅಭ್ಯರ್ಥಿಯಾಗಿದ್ದಾರೆ. ಜಾತಿಯ ಆಧಾರದಲ್ಲಿ ಮತದಾನ ನಡೆಯುವ ಈ ಕ್ಷೇತ್ರದಲ್ಲಿ ಕುರುಬ ಹಾಗೂ ಲಿಂಗಾಯತ ಸಮುದಾಯದವರು ಶಾಸಕರಾಗುತ್ತಾ ಬಂದಿದ್ದಾರೆ. ಶ್ರೀನಿವಾಸ್‌ ಹಾಗೂ ಶಿವಶಂಕರಪ್ಪ ಕುರುಬ ಸಮುದಾಯದವರು. ಸುರೇಶ್‌ ಹಾಗೂ ನಾಗರಾಜ್‌ ಅವರು ವೀರಶೈವ- ಲಿಂಗಾಯತರು (ಕ್ರಮವಾಗಿ ಸಾಧು ಹಾಗೂ ನೊಳಂಬ). ಎರಡೂ ಸಮುದಾಯಕ್ಕೆ ಸೇರಿದ ತಲಾ ಇಬ್ಬರು ಕಣದಲ್ಲಿರುವುದರಿಂದ ಆಯಾ ಸಮಾಜದ ಮತ ವಿಭಜನೆಯಾಗುವುದು ನಿಶ್ಚಿತ ಎನ್ನುವಂತಾಗಿದೆ. ಕಳೆದ ಬಾರಿ ಶ್ರೀನಿವಾಸ್‌ ಅವರು ಕೆಜೆಪಿ ಅಭ್ಯರ್ಥಿಯಾಗಿದ್ದ ಡಿ.ಎಸ್‌. ಸುರೇಶ್‌ ಎದುರು ಕೇವಲ 899 ಮತಗಳ ಅಂತರದಿಂದ ಗೆದ್ದಿದ್ದರು. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಜತೆಗೆ ಪಕ್ಷೇತರ ಅಭ್ಯರ್ಥಿ ಶ್ರೀನಿವಾಸ್‌, ಎಚ್‌.ಎನ್‌. ಗೋಪಿ ಕೂಡ ಪೈಪೋಟಿ ಒಡ್ಡುತ್ತಿದ್ದಾರೆ.

2. ಕಡೂರು

ಜೆಡಿಎಸ್‌- ವೈಎಸ್‌ವಿ ದತ್ತ

ಬಿಜೆಪಿ- ಬೆಳ್ಳಿಪ್ರಕಾಶ್‌

ಕಾಂಗ್ರೆಸ್‌- ಕೆ.ಎಸ್‌.ಆನಂದ್‌

ಜನ ಜಾತಿಗೆ ಜೋತು ಬಿದ್ದರೆ ದತ್ತಗೆ ಕಷ್ಟ

ಜಾತಿ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಈ ಕ್ಷೇತ್ರದಲ್ಲಿ ಕಳೆದ ಬಾರಿ ವಿಭಿನ್ನ ಫಲಿತಾಂಶ ಬಂದಿತ್ತು. ಕ್ಷೇತ್ರದಲ್ಲಿ ಕೇವಲ 1500 ಮತದಾರರನ್ನು ಹೊಂದಿರುವ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಜೆಡಿಎಸ್‌ ಅಭ್ಯರ್ಥಿ ವೈ.ಎಸ್‌.ವಿ. ದತ್ತ ಜಯಭೇರಿ ಬಾರಿಸಿದ್ದರು. ಈ ಸಲ ಮತ್ತೊಮ್ಮೆ ಅವರು ಅಖಾಡಕ್ಕೆ ಇಳಿದಿದ್ದಾರೆ. ಕುರುಬ ಸಮಾಜದ ಕೆ.ಎಸ್‌. ಆನಂದ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಕೊಟ್ಟಿದೆ. ಬಿಜೆಪಿಯಿಂದ ಬೆಳ್ಳಿ ಪ್ರಕಾಶ್‌ ಅಭ್ಯರ್ಥಿ. ಅವರು ವೀರಶೈವ- ಲಿಂಗಾಯತರು. ಮತದಾರರೇನಾದರೂ ಜಾತಿ ನೋಡಿ ಮತ ಹಾಕಿದರೆ ದತ್ತ ಅವರು ಪ್ರಯಾಸ ಪಡಬೇಕಾಗುತ್ತದೆ. ಆದರೆ ಆ ರೀತಿ ಆಗುವುದಿಲ್ಲ ಎಂಬ ವಿಶ್ವಾಸ ಅವರಿಗಿದೆ. ಜತೆಗೆ ದತ್ತ ಅವರ ಬಗ್ಗೆ ಕ್ಷೇತ್ರದಲ್ಲಿ ಅಭಿಮಾನವಿದೆ. ಅದು ಕೆಲಸಕ್ಕೆ ಬಂದರೆ ದತ್ತ ಅವರಿಗೆ ಲಾಭ. ಲಿಂಗಾಯತರ ಜತೆಗೆ ಇತರೆ ವರ್ಗದ ಮತ ಸೆಳೆದರೆ ಬಿಜೆಪಿಗೆ ಅವಕಾಶವಿದೆ. ಒಟ್ಟಿನಲ್ಲಿ ಜೆಡಿಎಸ್‌- ಬಿಜೆಪಿ ನಡುವೆ ನೇರ ಸ್ಪರ್ಧೆ ಕಂಡುಬರುತ್ತಿದೆ. ಕಾಂಗ್ರೆಸ್‌ ಅಭ್ಯರ್ಥಿ ಕುರುಬ ಸಮಾಜದ ಮತ ಸೆಳೆಯುವ ಎಲ್ಲ ಸಾಧ್ಯತೆಗಳೂ ಇವೆ.

3. ಚಿಕ್ಕಮಗಳೂರು

ಬಿಜೆಪಿ- ಸಿ.ಟಿ. ರವಿ

ಕಾಂಗ್ರೆಸ್‌- ಡಾ.ಬಿ.ಎಲ್‌. ಶಂಕರ್‌

ಜೆಡಿಎಸ್‌- ಬಿ.ಎಚ್‌. ಹರೀಶ್‌

ಬಿ.ಎಲ್‌. ಶಂಕರ್‌, ಸಿ.ಟಿ. ರವಿ ಜಿದ್ದಾಜಿದ್ದಿ

ಬಿಜೆಪಿಯ ಹಾಲಿ ಶಾಸಕ ಸಿ.ಟಿ. ರವಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಡಾ

ಬಿ.ಎಲ್‌. ಶಂಕರ್‌ ಅವರಿಗೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಇಬ್ಬರೂ ಅಭ್ಯರ್ಥಿಗಳ ನಡುವೆ ಆರೋಪ- ಪ್ರತ್ಯಾರೋಪಗಳ ಭರಾಟೆ ಶುರುವಾಗಿದೆ. 15 ವರ್ಷಗಳಿಂದ ರವಿ ಅವರು ಶಾಸಕರಾಗಿದ್ದು ಪ್ರಭುತ್ವ ವಿರೋಧಿ ಅಲೆ ಇದೆ ಎಂದು ಕಾಂಗ್ರೆಸ್‌ ವಾದಿಸಿದರೆ, ಬೆಂಗಳೂರಿನಲ್ಲಿರುವ ಶಂಕರ್‌ ಅವರು ಸಾಮಾನ್ಯ ಜನರಿಗೆ ಸಿಗುವುದಿಲ್ಲ ಎಂದು ಬಿಜೆಪಿ ಹೇಳುತ್ತಿದೆ. ಈ ನಡುವೆ, ಜೆಡಿಎಸ್‌ ಲಿಂಗಾಯತ ಸಮುದಾಯದ ಬಿ.ಎಚ್‌. ಹರೀಶ್‌ಗೆ ಟಿಕೆಟ್‌ ಕೊಟ್ಟಿದೆ. ಶಂಕರ್‌ ಹಾಗೂ ರವಿ ಒಕ್ಕಲಿಗರು. ಕಳೆದ ಬಾರಿ ಲಿಂಗಾಯತ, ಒಕ್ಕಲಿಗರು ಹಾಗೂ ಕುರುಬರ ಮತಗಳನ್ನು ಹೆಚ್ಚು ಪಡೆದು ರವಿ ಆಯ್ಕೆಯಾಗಿದ್ದರು. ಈ ಬಾರಿ ಬದಲಾವಣೆ ಗಾಳಿ ಬೀಸಿದರೆ ಒಕ್ಕಲಿಗ, ಕುರುಬ ಮತಗಳು ಶಂಕರ್‌ ಪಾಲಾಗುವ ಸಾಧ್ಯತೆ ಇದೆ. ಲಿಂಗಾಯತ ಸಮುದಾಯ ಹರೀಶ್‌ ಬೆಂಬಲಕ್ಕೆ ನಿಲ್ಲುವ ಸಂಭವವಿದೆ. ಲಿಂಗಾಯತರ ಜತೆಗೆ ಮುಸ್ಲಿಂ, ದಲಿತ ಮತಗಳನ್ನು ಪಡೆದರೆ ಹರೀಶ್‌ಗೆ ಹಾದಿ ಸಲೀಸು. ಒಂದು ವೇಳೆ ಅವರು, ಲಿಂಗಾಯತ ಮತಗಳನ್ನಷ್ಟೇ ಸೆಳೆದರೆ ರವಿ, ಮುಸ್ಲಿಂ ಮತಗಳನ್ನು ಸೆಳೆದರೆ ಶಂಕರ್‌ ಅವರಿಗೆ ಕಷ್ಟ.

4. ಮೂಡಿಗೆರೆ

ಜೆಡಿಎಸ್‌- ಬಿ.ಬಿ. ನಿಂಗಯ್ಯ

ಕಾಂಗ್ರೆಸ್‌- ಮೋಟಮ್ಮ

ಬಿಜೆಪಿ- ಕುಮಾರಸ್ವಾಮಿ

10 ವರ್ಷ ಬಳಿಕ ತವರಿಗೆ ಮೋಟಮ್ಮ

ಇದು ಪರಿಶಿಷ್ಟಜಾತಿ ಮೀಸಲು ಕ್ಷೇತ್ರ. 10 ವರ್ಷಗಳ ಬಳಿಕ ಮಾಜಿ ಸಚಿವೆ, ಹಾಲಿ ಮೇಲ್ಮನೆ ಸದಸ್ಯೆ ಮೋಟಮ್ಮ ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಕಳೆದ ಬಾರಿ ಪರಾಭವಗೊಂಡಿದ್ದ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಹಾಲಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಿ.ಬಿ. ನಿಂಗಯ್ಯ ಜೆಡಿಎಸ್‌ನಿಂದ ಮತ್ತೊಮ್ಮೆ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಈ ಮೂರೂ ಅಭ್ಯರ್ಥಿಗಳಿಗೆ ಹೊರಗಿನವರಿಗಿಂತ ಒಳಗಿನ ಶತ್ರುಗಳ ಕಾಟ ಜಾಸ್ತಿ ಇದೆ. ಅದನ್ನು ನಿಭಾಯಿಸುವುದು ಸುಲಭದ ಮಾತಲ್ಲ. ವಿಶೇಷ ಎಂದರೆ ಈ ಮೂವರೂ ಎದುರಾಳಿಗಳು ಪರಸ್ಪರ ವೈಯಕ್ತಿಕ ಟೀಕೆ ಮಾಡುವುದಿಲ್ಲ. ಪಕ್ಷಗಳ ಸಾಧನೆಯ ಮೇಲೆ ಮತ ಕೇಳುತ್ತಾರೆ. ನಿಂಗಯ್ಯ ಅವರಿಗೆ ಆಂತರಿಕ ಬಿಕ್ಕಟ್ಟು ಮುಳುವಾಗುವ ಸಾಧ್ಯತೆ ಇದ್ದರೆ, ಮೋಟಮ್ಮ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎಂಬುದು ಅವರಿಗೆ ಮೈನಸ್‌. ಎಂ.ಪಿ. ಕುಮಾರಸ್ವಾಮಿ ಅವರಿಗೂ ಸವಾಲುಗಳಿವೆ. ಅವೆಲ್ಲವನ್ನೂ ಮೆಟ್ಟಿನಿಂತು ಯಾರು ಗೆಲ್ಲುತ್ತಾರೆ ಎಂಬುದನ್ನು ನೋಡಬೇಕಾಗಿದೆ. ಮೀಸಲು ಕ್ಷೇತ್ರವಾಗಿದ್ದರೂ, ಒಕ್ಕಲಿಗ ಸಮುದಾಯದ ಪ್ರಾಬಲ್ಯವಿದೆ. ಆ ಮತಗಳು ಯಾರ ಪಾಲಾಗುತ್ತವೋ ಅವರು ಗೆಲುವಿನ ಸನಿಹ ಬರುವುದು ಗ್ಯಾರಂಟಿ.

5. ಶೃಂಗೇರಿ

ಬಿಜೆಪಿ- ಡಿ.ಎನ್‌.ಜೀವರಾಜ್‌

ಕಾಂಗ್ರೆಸ್‌- ಟಿ.ಡಿ. ರಾಜೇಗೌಡ

ಜೆಡಿಎಸ್‌- ಎಚ್‌.ಜಿ. ವೆಂಕಟೇಶ್‌

ಬ್ರಾಹ್ಮಣರ ಒಲವು ಯಾರ ಕಡೆಗೆ?

ಹ್ಯಾಟ್ರಿಕ್‌ ಗೆಲುವು ಕಂಡಿರುವ ಡಿ.ಎನ್‌. ಜೀವರಾಜ್‌ ಮತ್ತೆ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಟಿ.ಡಿ. ರಾಜೇಗೌಡ ಎರಡನೇ ಬಾರಿ ಈ ಕ್ಷೇತ್ರದಲ್ಲಿ ಕಣಕ್ಕೆ ಇಳಿದಿದ್ದಾರೆ. ಮಾಜಿ ಸಚಿವ ಗೋವಿಂದೇಗೌಡರ ಪುತ್ರ ಎಚ್‌.ಜಿ. ವೆಂಕಟೇಶ್‌ ಜೆಡಿಎಸ್‌ ಅಭ್ಯರ್ಥಿಯಾಗಿದ್ದಾರೆ. ಒಕ್ಕಲಿಗರು, ಬ್ರಾಹ್ಮಣರು ಅಧಿಕ ಸಂಖ್ಯೆಯಲ್ಲಿದ್ದಾರೆ. ಕಣದಲ್ಲಿರುವ ಮೂವರೂ ಅಭ್ಯರ್ಥಿಗಳು ಒಕ್ಕಲಿಗ ಸಮುದಾಯದವರು. ಹೀಗಾಗಿ ಆ ಮತಗಳು ವಿಭಜನೆಯಾಗುವ ಸಂಭವ ಅಧಿಕವಾಗಿದೆ. ಹಿಂದಿನ ಚುನಾವಣೆಯಲ್ಲಿ ಬ್ರಾಹ್ಮಣ ಸಮುದಾಯದ ಬೆಂಬಲ ಜೀವರಾಜ್‌ ಅವರಿಗೆ ಸಿಕ್ಕಿತ್ತು. ಈ ಬಾರಿಯೂ ಅದು ಮುಂದುವರಿಯುತ್ತಾ ಎಂಬುದನ್ನು ನೋಡಬೇಕಾಗಿದೆ. ಒಕ್ಕಲಿಗ, ಬ್ರಾಹ್ಮಣ ಮತಗಳನ್ನು ಸೆಳೆದರೆ ಜೀವರಾಜ್‌ ನಾಲ್ಕನೇ ಗೆಲುವು ಕಾಣಬಹುದು. ಮುಸ್ಲಿಮರು, ಕ್ರೈಸ್ತರು ಕಾಂಗ್ರೆಸ್‌ ಕೈಹಿಡಿಯುವ ಸಂಭವವಿದೆ. ಜತೆಗೆ ಬ್ರಾಹ್ಮಣ ಸಮುದಾಯದ ಮತ ಸೆಳೆಯುವಲ್ಲಿ ಸಫಲರಾದರೆ ರಾಜೇಗೌಡರ ಹಾದಿ ಸುಗಮವಾಗಬಹುದು. ಜೆಡಿಎಸ್‌ ಅಭ್ಯರ್ಥಿ ಕೂಡ ಒಕ್ಕಲಿಗರ ಜತೆಗೆ ಇತರೆ ವರ್ಗದ ಮತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.