ಕೃಷ್ಣನ ನಾಡಿನಲ್ಲೂ ಜಾತಿಯದ್ದೇ ಆಟ

karnataka-assembly-election-2018 | Saturday, April 28th, 2018
Suvarna Web Desk
Highlights

ಉಡುಪಿ ಜಿಲ್ಲೆಯಲ್ಲಿರುವ 5 ವಿಧಾನಸಭಾ ಕ್ಷೇತ್ರಗಳಲ್ಲಿ ಜಾತಿವಾರು ಪ್ರಾಬಲ್ಯದ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಇಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ನಡೆಯುತ್ತಿದೆ. ಜೆಡಿಎಸ್‌ ಅಥವಾ ಇತರೆ ಪಕ್ಷಗಳು ಆಟಕ್ಕಿವೆ, ಆದರೆ ಲೆಕ್ಕಕ್ಕಿಲ್ಲ.

ಉಡುಪಿ :  ಉಡುಪಿ ಜಿಲ್ಲೆಯಲ್ಲಿರುವ 5 ವಿಧಾನಸಭಾ ಕ್ಷೇತ್ರಗಳಲ್ಲಿ ಜಾತಿವಾರು ಪ್ರಾಬಲ್ಯದ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಇಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ನಡೆಯುತ್ತಿದೆ. ಜೆಡಿಎಸ್‌ ಅಥವಾ ಇತರೆ ಪಕ್ಷಗಳು ಆಟಕ್ಕಿವೆ, ಆದರೆ ಲೆಕ್ಕಕ್ಕಿಲ್ಲ. ಜಿಲ್ಲೆಯಲ್ಲಿ ಬಿಲ್ಲವ, ಬಂಟ ಮತ್ತು ಮೊಗವೀರ ಸಮುದಾಯದವರದ್ದೇ ಪ್ರಾಬಲ್ಯ. ಆದ್ದರಿಂದ ಬಿಜೆಪಿ ಇಬ್ಬರು ಬಂಟರು, ಒಬ್ಬ ಮೊಗವೀರ, ಒಬ್ಬ ಬಿಲ್ಲವ ಮತ್ತು ಒಬ್ಬ ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಕಾಂಗ್ರೆಸ್‌ ಇಬ್ಬರು ಬಿಲ್ಲವ, ಒಬ್ಬ ಮೊಗವೀರ, ಒಬ್ಬ ಬಂಟ ಮತ್ತು ಒಬ್ಬ ಹಿಂದುಳಿದ ವರ್ಗಗಳ ಅಭ್ಯರ್ಥಿಗಳನ್ನು ಸ್ಪರ್ಧೆಗೊಡ್ಡಿದೆ.


ಉಡುಪಿ

ಕಾಂಗ್ರೆಸ್‌- ಪ್ರಮೋದ್‌ ಮಧ್ವರಾಜ್‌

ಬಿಜೆಪಿ- ರಘುಪತಿ ಭಟ್‌


ಹೈಸ್ಕೂಲು ಸಹಪಾಠಿಗಳಾಗಿದ್ದ ಕಾಂಗ್ರೆಸ್‌ ಶಾಸಕ ಪ್ರಮೋದ್‌ ಮಧ್ವರಾಜ್‌ ಮತ್ತು ಬಿಜೆಪಿಯ ಮಾಜಿ ಶಾಸಕ ಕೆ. ರಘುಪತಿ ಭಟ್‌ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಇವರಿಬ್ಬರ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವ, ಪ್ರಮೋದ್‌ ಮಧ್ವರಾಜ್‌ ಅವರನ್ನು ಹೊಗಳುವ ಶಿರೂರು ಮಠದ ಸ್ವಾಮೀಜಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದರೂ ಕೊನೇ ಕ್ಷಣದಲ್ಲಿ ಹಿಂಪಡೆದಿದ್ದಾರೆ. ಇದು ಬಿಜೆಪಿಗೆ ಸಮಾಧಾನಕರ. ಬಹುಸಂಖ್ಯಾತ ಮೊಗವೀರ ಸಮುದಾಯದ ಪ್ರಮೋದ್‌, ಸಾಂಪ್ರದಾಯಿಕ ಮೀನುಗಾರರ ಬಹಿರಂಗ ವಿರೋಧವನ್ನು ಎದುರಿಸುತ್ತಿದ್ದಾರೆ. ಇದು ಅವರಿಗೆ ಕುತ್ತಾಗುವ ಸಾಧ್ಯತೆ ಇದೆ. ಸಾಫ್ಟ್‌ ಹಿಂದುತ್ವವಾದವನ್ನು ಕಾಯ್ದುಕೊಂಡರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೃಷ್ಣಮಠದ ವಿರೋಧಿ ಎಂಬ ಆರೋಪ ಪ್ರಮೋದ್‌ ಅವರಿಗೂ ಮಗ್ಗುಲ ಮುಳ್ಳಾಗಿದೆ. ಬಿಜೆಪಿ ಬಹಳ ಅಳೆದೂ ಸುರಿದೂ ರಘುಪತಿ ಭಟ್ಟರಿಗೆ ಟಿಕೆಟ್‌ ನೀಡಿದೆ. ಸಂಸದೆ ಶೋಭಾ ಕರಂದ್ಲಾಜೆ ಅವರಿಂದಲೇ ಭಟ್ಟರಿಗೆ ಟಿಕೆಟ್‌ ನೀಡುವುದಕ್ಕೆ ವಿರೋಧವಿತ್ತು. ಕಳೆದ ಚುನಾವಣೆ ಸಂದರ್ಭ ಬಯಲಾದ ರಾಸಲೀಲೆಯ ಕಳಂಕ ಇನ್ನೂ ಅವರನ್ನು ಬಿಟ್ಟಿಲ್ಲ. ಆದರೂ ಕೃಷ್ಣಮಠ, ಅಷ್ಟಮಠಗಳ ಬೆಂಬಲ ಇದೆ. ಬಿಜೆಪಿಯಲ್ಲಿದ್ದರೂ ವೈಯಕ್ತಿಕ ಜಾತ್ಯತೀತ ವರ್ಚಸ್ಸು ಅವರನ್ನು ಹಿಂದೆ ಎರಡು ಬಾರಿ ಗೆಲ್ಲಿಸಿತ್ತು. ಚುನಾವಣೆ ದಿನ ಸಮೀಪಿಸುತ್ತಿದ್ದಂತೆ ಅವರಿಗೆ ಈ ಹಿಂದೆ ಮೆತ್ತಿದ್ದ ಕಳಂಕವನ್ನು ಮತ್ತೆ ಕೆದಕುವ ಪ್ರಯತ್ನ ನಡೆಯುತ್ತಿದೆಯಾದರೂ ಭಟ್ಟರೇ ಅದಕ್ಕೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಜತೆಗೆ, ಪಕ್ಷದ ಕೆಲ ಕಾರ್ಯಕರ್ತರು ಭಟ್ಟರ ಬೆನ್ನಿಗೆ ಗಟ್ಟಿಯಾಗಿ ನಿಂತಿರುವುದು ಅವರಲ್ಲಿ ಇನ್ನಷ್ಟುಹುಮ್ಮಸ್ಸು ಮೂಡಿಸಿದೆ.

ಕಾಪು

ಕಾಂಗ್ರೆಸ್‌- ವಿನಯಕುಮಾರ್‌ ಸೊರಕೆ

ಬಿಜೆಪಿ- ಲಾಲಾಜಿ ಮೆಂಡನ್‌

ಜನಶಕ್ತಿ ಕಾಂಗ್ರೆಸ್‌- ಅನುಪಮಾ ಶೆಣೈ

ಲಾಲಾಜಿ ಎದುರು ಸೊರಕೆ ಅಬ್ಬರ

ಇಲ್ಲಿನ ಕಾಂಗ್ರೆಸ್‌ ಶಾಸಕ, ಬಿಲ್ಲವ ಸಮುದಾಯದ ವಿನಯಕುಮಾರ್‌ ಸೊರಕೆ ಮತ್ತು ಬಿಜೆಪಿಯ ಮಾಜಿ ಶಾಸಕ ಮೊಗವೀರ ಸಮುದಾಯದ ಲಾಲಾಜಿ ಮೆಂಡನ್‌ ನಡುವೆ ಮುಖಾಮುಖಿ ಸ್ಪರ್ಧೆ ಇದೆ. ಶಾಸಕ, ಸಚಿವರಾಗಿ 5 ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿಯೇ ಅವರ ಪ್ರಮುಖ ಅಸ್ತ್ರವಾಗಿದೆ. ಈ ಕ್ಷೇತ್ರದ ಬಹುಸಂಖ್ಯಾತ ಬಿಲ್ಲವರ ಮತಗಳು ಅವರ ಬಲವೂ ಆಗಿದೆ. ಎರಡು ಬಾರಿ ಶಾಸಕರಾಗಿದ್ದರೂ ಹಾಯಲಾರದ, ಒದೆಯಲಾರದ ಗುಣ ಲಾಲಾಜಿ ಪ್ಲಸ್‌ ಪಾಯಿಂಟ್‌ ಮತ್ತು ಸೊರಕೆಯವರ ಅಬ್ಬರದ ಮುಂದೆ ಲಾಲಾಜಿ ಸಪ್ಪೆಯಾಗಿ ಕಾಣುತ್ತಿರುವುದು ಅವರ ಮೈನಸ್‌ ಪಾಯಿಂಟ್‌. ಸರಳ ಸಜ್ಜನ ಎಂಬ ಅನುಕಂಪದ ಮತಗಳು ಅವರನ್ನು ಗೆಲ್ಲಿಸುವುದು ಸಾಧ್ಯವಿಲ್ಲ. ಇಲ್ಲಿ ಬಿಜೆಪಿಯಿಂದ ಟಿಕೆಟ್‌ ಸಿಗದ ಮೊಗವೀರ ನಾಯಕ ಯಶಪಾಲ್‌ ಸುವರ್ಣ ಮತ್ತು ಬಂಟ ಜಾತಿಯ ಉದ್ಯಮಿ ಸುರೇಶ್‌ ಶೆಟ್ಟಿಗುರ್ಮೆ ತಟಸ್ಥರಾಗಿರಲು ನಿರ್ಧರಿಸಿದ್ದಾರೆ. ಇದು ಲಾಲಾಜಿ ಗೆಲುವಿನ ಮೇಲೆ ಪರಿಣಾಮ ಬೀರಿದರೆ ಅಚ್ಚರಿ ಇಲ್ಲ. ಇಲ್ಲಿಂದ ಸ್ಪರ್ಧಿಸುತ್ತಿರುವ ಭಾರತೀಯ ಜನಶಕ್ತಿ ಕಾಂಗ್ರೆಸ್‌ ಪಕ್ಷದ (ಮಾಜಿ ಡಿವೈಎಸ್ಪಿ) ಅನಪಮಾ ಶೆಣೈ ಅವರ ಬಗ್ಗೆ ಕಾಂಗ್ರೆಸ್ಸಾಗಲಿ, ಬಿಜೆಪಿಯಾಗಲಿ ಕ್ಯಾರೇ ಎನ್ನುತ್ತಿಲ್ಲ.

ಕಾರ್ಕಳ

ಕಾಂಗ್ರೆಸ್‌- ಗೋಪಾಲ ಭಂಡಾರಿ

ಬಿಜೆಪಿ- ಸುನಿಲ್‌ ಕುಮಾರ್‌

ಕಾಂಗ್ರೆಸ್‌ ಬಂಡಾಯ ಬಿಜೆಪಿಗೆ ಲಾಭ

ಕಾಂಗ್ರೆಸ್‌ ಪಕ್ಷದಲ್ಲಿ ಟಿಕೆಟಿಗಾಗಿ ನಡೆದ ಒಳಜಗಳದಿಂದ ಬಿಜೆಪಿಗೆ ಲಾಭವಾಗಿದೆ. ಬಿಜೆಪಿಯಿಂದ ಹಾಲಿ ಶಾಸಕ ಸುನಿಲ್‌ ಕುಮಾರ್‌ ಮತ್ತು ಕಾಂಗ್ರೆಸ್‌ನಿಂದ ಮಾಜಿ ಶಾಸಕ ಗೋಪಾಲ ಭಂಡಾರಿ ಕಣದಲ್ಲಿದ್ದಾರೆ. ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ, ಗುತ್ತಿಗೆದಾರ ಉದಯಕುಮಾರ್‌ ಶೆಟ್ಟಿಈ ಬಾರಿ ಟಿಕೆಟ್‌ ಕೇಳಿದ್ದರು. ಆದರೆ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅದಕ್ಕೆ ತಡೆಯೊಡ್ಡಿದರು. ಇದರಿಂದ ಅಲ್ಲಿ ಮಲಗಿದ್ದ ಕಾಂಗ್ರೆಸನ್ನು ತಟ್ಟಿಎಬ್ಬಿಸಿದ್ದ ಉದಯಕುಮಾರ್‌ ಶೆಟ್ಟಿಅಭಿಮಾನಿಗಳು ನಾಲ್ಕೈದು ದಿನ ಮೊಯ್ಲಿ-ಭಂಡಾರಿ ವಿರುದ್ಧ ನಡೆಸಿದ ಬಂಡಾಯ ಪ್ರತಿಭಟನೆ ಕಾಂಗ್ರೆಸ್‌ ಅನ್ನು ಬಣ ಬಣ ಮಾಡಿಬಿಟ್ಟಿದೆ. ಇದರ ಪೂರ್ತಿ ಲಾಭ ಬಿಜೆಪಿಗಾಗಲಿದೆ. ಆರೆಸ್ಸೆಸ್‌ ಹಿನ್ನೆಲೆಯ ಸುನಿಲ್‌ ಕುಮಾರ್‌ ಅವರ ಮಾತುಗಾರಿಕೆ, ಚುರುಕುತನ, ಕಾರ್ಕಳದಲ್ಲಿ ಮಾಡಿರುವ ಒಂದಷ್ಟುಅಭಿವೃದ್ಧಿ ಕಾರ್ಯಗಳು ಅವರನ್ನು ಪುನಃ ಗೆಲ್ಲಿಸಿದರೆ, ಅದಕ್ಕೆ ಕಾರಣ ಕಾಂಗ್ರೆಸ್‌ ಪಕ್ಷದ ಒಳಜಗಳವೇ ಆಗಿದೆ. ಇಲ್ಲಿ ಕಣದಲ್ಲಿರುವ 4 ಮಂದಿ ಮುಸ್ಲಿಂ ಅಭ್ಯರ್ಥಿಗಳು ಹಾಗೂ ಒಬ್ಬ ತುಳುನಾಡು ಹೋರಾಟಗಾರ ಹೆಚ್ಚು ಮತ ಗಳಿಸಿದಷ್ಟೂಬಿಜೆಪಿಗೇ ಲಾಭ.

ಕುಂದಾಪುರ

ಕಾಂಗ್ರೆಸ್‌- ರಾಕೇಶ್‌ ಮಲ್ಲಿ

ಬಿಜೆಪಿ- ಹಾಲಾಡಿ ಶ್ರೀನಿವಾಸ ಶೆಟ್ಟಿ

ಹಾಲಾಡಿಗೆ 5ನೇ ಗೆಲುವು ಸುಲಭವಿದೆಯಾ?

ಜಿಲ್ಲೆಯಲ್ಲಿ ಬಹಳ ಕುತೂಹಲ ಕೆರಳಿಸಿರುವ ಕ್ಷೇತ್ರ ಇದು. ಇಲ್ಲಿ 4 ಬಾರಿ ಗೆದ್ದಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿಅವರು ಬಿಜೆಪಿಯಿಂದ ಮತ್ತೊಮ್ಮೆ ಸ್ಪರ್ಧಿಸಿದ್ದಾರೆ. ಅವರ ಎದುರು ದಕ್ಷಿಣ ಕನ್ನಡ ಜಿಲ್ಲೆಯ ರಾಜ್ಯ ಕಾಂಗ್ರೆಸ್‌ ಇಂಟಕ್‌ ಅಧ್ಯಕ್ಷ ರಾಕೇಶ್‌ ಮಲ್ಲಿ ಕಣದಲ್ಲಿದ್ದಾರೆ. ಮೂರು ಬಾರಿ ಬಿಜೆಪಿಯಿಂದ ಗೆದ್ದಿದ್ದ ಹಾಲಾಡಿ, ಕಳೆದ ಬಾರಿ ಬಿಜೆಪಿ ನಾಯಕರೊಂದಿಗೆ ಮುನಿದು ಪಕ್ಷ ಬಿಟ್ಟು ಪಕ್ಷೇತರವಾಗಿ ಸ್ಪರ್ಧಿಸಿ ಗೆದ್ದು, ಈಗ ಪುನಃ ಬಿಜೆಪಿ ಸೇರಿದ್ದಾರೆ. ಇದು ಸಹಜವಾಗಿಯೇ ಬಿಜೆಪಿಯ ಒಂದು ಬಣಕ್ಕೆ ಬೇಸರ ಮೂಡಿಸಿದೆ. ಆದರೂ ಈ ಬಣ ದೊಡ್ಡದಿಲ್ಲದ ಕಾರಣ, ಅದೇನೂ ಕಾಂಗ್ರೆಸಿಗೆ ಲಾಭ ಮಾಡಲಿಕ್ಕಿಲ್ಲ. ಶ್ರೀನಿವಾಸಶೆಟ್ಟಿಅವರೆದುರು ಕಣದಲ್ಲಿರುವ ರಾಕೇಶ್‌ ಮಲ್ಲಿ ಕಳೆದ 6 ತಿಂಗಳಿಂದ ಕುಂದಾಪುರದಲ್ಲಿ ನೆಲೆಸಿ, ಕ್ಷೇತ್ರಕ್ಕೆ ಪರಿಚಯವಾಗಿದ್ದಾರೆ. ಕ್ರಿಕೆಟ್‌, ಕಬಡ್ಡಿ ಎಂದೆಲ್ಲಾ ಪ್ರಾಯೋಜಿಸುತ್ತಾ ಯುವಕರನ್ನು ಸೇರಿಸಿಕೊಂಡಿದ್ದಾರೆ. ಈ ಪ್ರಾಯೋಜಿತ ಕೆಲಸಗಳು ಅವರಿಗೆ ಎಷ್ಟುಓಟು ತಂದು ಕೊಡುತ್ತವೆ ಎನ್ನುವ ಲೆಕ್ಕಾಚಾರ ಫಲಿತಾಂಶದ ವೇಳೆಯೇ ಗೊತ್ತಾಗಬೇಕು.

ಬೈಂದೂರು

ಕಾಂಗ್ರೆಸ್‌- ಗೋಪಾಲ ಪೂಜಾರಿ

ಬಿಜೆಪಿ- ಸುಕುಮಾರ್‌ ಶೆಟ್ಟಿ

ಕಾಂಗ್ರೆಸ್ಸಿಗೆ ಮತ ವಿಭಜನೆಯಾಗುವ ಭೀತಿ

ಈ ಕ್ಷೇತ್ರ ಉಡುಪಿ ಜಿಲ್ಲೆಯಲ್ಲಿದ್ದರೂ, ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸೇರಿದೆ. ಶಿವಮೊಗ್ಗ ಲೋಕಸಭಾ ಸದಸ್ಯ ಬಿಜೆಪಿಯ ಬಿ.ಎಸ್‌. ಯಡಿಯೂರಪ್ಪ ಆಗಿದ್ದರೂ, ಬೈಂದೂರಿನಲ್ಲಿ ಕಾಂಗ್ರೆಸ್‌ ಪಕ್ಷದ ಹೊಟೇಲ್‌ ಉದ್ಯಮಿ ಗೋಪಾಲ ಪೂಜಾರಿ ಶಾಸಕರಾಗಿದ್ದಾರೆ. 4 ಬಾರಿ ಕ್ಷೇತ್ರದಿಂದ ಗೆದ್ದು ಶಾಸಕರಾದರೂ ಮಂತ್ರಿಯಾಗುವುದಕ್ಕಾಗಿಲ್ಲ, ಹೇಳಿಕೊಳ್ಳುವ ಅಭಿವೃದ್ಧಿಯನ್ನೂ ಮಾಡಿಲ್ಲ ಎಂಬುದು ಅವರ ಮೇಲಿರುವ ಆರೋಪ. ಆದರೆ ಬಿಲ್ಲವ ಸಮುದಾಯದ ಮತಗಳು ಮತ್ತು ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು ತಮ್ಮನ್ನು ಕೈಬಿಡುವುದಿಲ್ಲ ಎನ್ನುವುದು ಗೋಪಾಲ ಪೂಜಾರಿ ಅವರ ನಂಬಿಕೆ. ಇಲ್ಲಿ ಬಿಜೆಪಿಯಿಂದ ಬಂಟ ಸಮುದಾಯದ ಬಿ.ಎಂ. ಸುಕುಮಾರ್‌ ಶೆಟ್ಟಿಕಣದಲ್ಲಿದ್ದಾರೆ. ಅವರು ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನ ಮಂಡಳಿಯ ಅಧ್ಯಕ್ಷರಾಗಿದ್ದವರು. ಕಳೆದ ಬಾರಿಯ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಆದರೆ ಜನರಿಗೆ ಪರಿಚಯರಾದರು. ಈಗಂತೂ ಫುಲ್‌ ಟೈಮ್‌ ರಾಜಕಾರಣಿಯಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಬೈಂದೂರಿನಲ್ಲಿ ಅತೀಹೆಚ್ಚು ಮತ ಗಳಿಸಿಕೊಟ್ಟಿದ್ದಾರೆ. ಯಡಿಯೂರಪ್ಪ ಅವರ ಪ್ರಭಾವ ಈ ಬಾರಿಯೂ ಇಲ್ಲಿ ಕೆಲಸ ಮಾಡುತ್ತದೆ ಎನ್ನುವ ನಿರೀಕ್ಷೆ ಬಿಜೆಪಿಗಿದೆ. ಇಲ್ಲಿ ಸಿಪಿಎಂ ಮತ್ತು ಎಂಇಪಿ ಪಕ್ಷದ ಅಭ್ಯರ್ಥಿಗಳು ತಮ್ಮ ಮತಗಳಿಗೆ ಕನ್ನ ಹಾಕಬಹುದು ಎಂಬುದು ಆತಂಕ ಗೋಪಾಲ ಪೂಜಾರಿ ಅವರಿಗಿದೆ.

Comments 0
Add Comment

    Related Posts

    India Today Karnataka PrePoll Part 6

    video | Friday, April 13th, 2018

    India Today Karnataka PrePoll 2018 Part 7

    video | Friday, April 13th, 2018

    India Today Karnataka Prepoll 2018

    video | Friday, April 13th, 2018

    India Today Karnataka PrePoll Part 6

    video | Friday, April 13th, 2018
    Suvarna Web Desk