ಬೆಂಗಳೂರು : ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಕೆಲಸದಿಂದ ವಿಮುಖವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಬೆಂಗಳೂರಲ್ಲಿ ಇಲ್ಲದ ನೆಪ ಹೇಳಿ 1,500 ಮಂದಿ ತರಬೇತಿಗೆ ಗೈರು  ಹಾಜರಾಗಿದ್ದಾರೆ ಎಂದು ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಇಲ್ಲದ ನೆಪ ಹೇಳಿ ಚುನಾವಣಾ ತರಬೇತಿಗೆ ಗೈರಾಗಿರುವ 1500 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಬೆಂಗಳೂರು ಹೊರತು ಪಡಿಸಿ ರಾಜ್ಯದ ವಿವಿಧೆಡೆ ಈ ಸಮಸ್ಯೆ ಇಲ್ಲ. 
ಬೆಂಗಳೂರಲ್ಲಿ 1500 ಮಂದಿ ಚುನಾವಣಾ ಕೆಲಸದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಗೈರು ಹಾಜರಾತಿಗೆ ಸೂಕ್ತ ಕಾರಣ ಇಲ್ಲದಿದ್ದರೆ ಅಂತಹ ಸಿಬ್ಬಂದಿ ವಿರುದ್ಧ ಸೂಕ್ತ ಕಠಿಣ ಕ್ರಮ ಜರುಗಿಸಲಾಗುವುದು. ಕರ್ತವ್ಯದಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿದರೆ ಅಂತಹ ಸಿಬ್ಬಂದಿಯನ್ನು ಬಂಧಿಸುವ ಅವಕಾಶ ಕಾನೂನಿನಲ್ಲಿದೆ ಎಂದು ಎಚ್ಚರಿಕೆ ನೀಡಿದರು. 
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 21 ಸಾವಿರ ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳಾಗಿ ನಿಯೋಜನೆ ಗೊಂಡಿದ್ದಾರೆ. 8,278 ಮಂದಿ ಬೂತ್‌ಮಟ್ಟದ ಅಧಿಕಾರಿಗಳಿದ್ದಾರೆ. ತರಬೇತಿ ವೇಳೆ ವಿವಿಧ ಕಾರಣ ಹೇಳಿ 1500 ಮಂದಿ ಗೈರು ಹಾಜರಾಗಿದ್ದಾರೆ. ಇದನ್ನು ಚುನಾವಣಾ ಆಯೋಗವು ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ಕ್ರಮ ಜರುಗಿಸಲಿದೆ ಎಂದರು.