ಖಾಸಗಿ ಬಸ್ ಗಳ ಟಿಕೆಟ್ ದರ ದುಪ್ಪಟ್ಟು ಏರಿಕೆ

Bus Ticket Fare Hike
Highlights

ರಾಜ್ಯ ವಿಧಾನಸಭೆ ಚುನಾವಣೆ, ರಜೆ ಹಾಗೂ ಸರ್ಕಾರಿ ಬಸ್‌ಗಳ ಕೊರತೆಯ ಲಾಭ ಪಡೆಯಲು ಮುಂದಾಗಿರುವ ಖಾಸಗಿ ಬಸ್  ಆಪರೇಟರ್‌ಗಳು ಟಿಕೆಟ್ ದರವನ್ನು ಏಕಾಏಕಿ ಏರಿಸಿಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು :  ರಾಜ್ಯ ವಿಧಾನಸಭೆ ಚುನಾವಣೆ, ರಜೆ ಹಾಗೂ ಸರ್ಕಾರಿ ಬಸ್‌ಗಳ ಕೊರತೆಯ ಲಾಭ ಪಡೆಯಲು ಮುಂದಾಗಿರುವ ಖಾಸಗಿ ಬಸ್  ಆಪರೇಟರ್‌ಗಳು ಟಿಕೆಟ್ ದರವನ್ನು ಏಕಾಏಕಿ ಏರಿಸಿಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮತದಾನದ ಹಿನ್ನೆಲೆಯಲ್ಲಿ ಮೇ 12 ರಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಅಂತೆಯೇ ಚುನಾವಣಾ ಕಾರ್ಯಕ್ಕೆ ಸುಮಾರು ನಾಲ್ಕು ಸಾವಿರ ಕೆಎಸ್ ಆರ್‌ಟಿಸಿ ಬಸ್‌ಗಳನ್ನು ನಿಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೇ 11 ಮತ್ತು 12 ರಂದು ಬಸ್ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ಈ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿರುವ ಖಾಸಗಿ ಬಸ್ ಆಪರೇಟರ್ ಗಳು ಹುಬ್ಬಳ್ಳಿ, ಬೀದರ್, ಧಾರವಾಡ, ಶಿವಮೊಗ್ಗ, ಮಂಗಳೂರು, ಚಿಕ್ಕಮಗಳೂರು, ಕಲಬುರಗಿ ಮೊದಲಾದ ಕಡೆಗೆ ತೆರಳುವ ಬಸ್‌ಗಳ ಟಿಕೆಟ್ ದರವನ್ನು ಶೇ.100, ಕೆಲವು ಟ್ರಾವೆಲ್ಸ್‌ಗಳು ಶೇ.200ರಷ್ಟು ಏರಿಸಿವೆ. ಕೆಲವೊಂದು ಟ್ರಾವೆಲ್ಸ್‌ಗಳಲ್ಲಿ ಮೇ 11ರ ಸೀಟ್‌ಗಳು ಸಹ ಭರ್ತಿಯಾಗಿವೆ.

ಇನ್ನು ಕೆಲ ಟ್ರಾವೆಲ್ಸ್‌ಗಳಲ್ಲಿ ಕೆಲವೇ ಸೀಟುಗಳು ಮಾತ್ರ ಉಳಿದಿದ್ದು, ಟಿಕೆಟ್ ದರ ದುಬಾರಿಯಾಗಿದೆ. ಸಾಮಾನ್ಯ ದಿನಗಳಲ್ಲಿ  ಬೆಂಗಳೂರಿನಿಂದ ಮಂಗಳೂರಿಗೆ 700-800 ರು. ಇರುತ್ತದೆ. ಇದೀಗ 1500-2000 ರು.ಗೆ ಏರಿಸಲಾಗಿದೆ. ಮಡಿಕೇರಿಗೆ 500 - 600 ರು. ಇದ್ದುದು 1000 ರು., ಬೀದರ್‌ಗೆ 900 ರು. ಇದ್ದುದು 1700  ರು., ಧಾರವಾಡಕ್ಕೆ 700-800 ರು. ಇದ್ದುದು 1800 -2500 ರು., ಶಿವಮೊಗ್ಗಕ್ಕೆ 500 - 700 ರು.ನಿಂದ 1100 -14 000 ರು.ಗೆ ಏರಿಸಲಾಗಿದೆ. ಮತದಾನದ ಕಾರಣ ಊರುಗಳಿಗೆ ತೆರಳುವ ಅನಿವಾರ್ಯದಲ್ಲಿರುವ ಪ್ರಯಾಣಿಕರು ಖಾಸಗಿ ಬಸ್‌ಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. 

ನಗರದ ಐಟಿ ಕಂಪನಿಯೊಂದರಲ್ಲಿ ಕೆಲಸ  ಮಾಡುತ್ತಿದ್ದು, ಮೇ 11 ರಂದು ಧಾರವಾಡಕ್ಕೆ ತೆರಳಬೇಕಿದೆ. ಸಾಮಾನ್ಯ ದಿನಗಳಲ್ಲಿ ಧಾರವಾಡಕ್ಕೆ ಟಿಕೆಟ್ ದರ ಗರಿಷ್ಠ800 ರು. ಇರುತ್ತದೆ. ಆದರೆ, ಇದೀಗ 2000 ರು.ಗೆ ಏರಿಸಲಾಗಿದೆ. ಅನಿವಾರ್ಯವಾಗಿ ಊರಿಗೆ 
ತೆರಳಲೇಬೇಕಿರುವುದರಿಂದ ನಿಗದಿತ ಹಣ  ಪಾವತಿಸಿ ಟಿಕೆಟ್ ಪಡೆದಿದ್ದೇನೆ. ಖಾಸಗಿ ಬಸ್‌ಗಳಲ್ಲಿ ಇದೇನೂ ಹೊಸದಲ್ಲ. ಹಬ್ಬದ, ಸಾಲು ರಜೆಗಳ ಸಂದರ್ಭದಲ್ಲಿ ಪ್ರಯಾಣಿಕರ ಸುಲಿಗೆ ಮಾಡುತ್ತಾರೆ. 

ಯಾವ ಸರ್ಕಾರ ಬಂದರೂ ಈ ಖಾಸಗಿ ಬಸ್‌ಗಳಿಗೆ ಕಡಿವಾಣ ಮಾತ್ರ ಹಾಕುತ್ತಿಲ್ಲ ಎಂದು ಗುಡ್ಡಪ್ಪ ಬಿರಾದರ್ ಆಕ್ರೋಶ ವ್ಯಕ್ತಪಡಿಸಿದರು.

loader