Asianet Suvarna News Asianet Suvarna News

ಬಿಎಸ್‌ವೈ ಮಣಿಸಲು ಕಾಂಗ್ರೆಸ್‌, ಜೆಡಿಎಸ್‌ ಹರಸಾಹಸ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಒಂಬತ್ತನೇ ಬಾರಿ ಶಿಕಾರಿಗೆ ಹೊರಟಿರುವ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಈ ಬಾರಿಯ ಗೆಲವು ಚಿನ್ನದ ತಟ್ಟೆಯಲ್ಲಿಟ್ಟು ಕೊಡುವ ಉಡುಗೊರೆಯಾಗುತ್ತದೆ ಎಂದು ಬಿಜೆಪಿ ನಿರೀಕ್ಷಿಸುತ್ತಿದೆ.

BSY Constituency Shikaripura Election War

ಹೊನ್ನಾಳಿ ಚಂದ್ರಶೇಖರ್‌

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಒಂಬತ್ತನೇ ಬಾರಿ ಶಿಕಾರಿಗೆ ಹೊರಟಿರುವ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಈ ಬಾರಿಯ ಗೆಲವು ಚಿನ್ನದ ತಟ್ಟೆಯಲ್ಲಿಟ್ಟು ಕೊಡುವ ಉಡುಗೊರೆಯಾಗುತ್ತದೆ ಎಂದು ಬಿಜೆಪಿ ನಿರೀಕ್ಷಿಸುತ್ತಿದೆ. ಈ ಚಿನ್ನದ ತಟ್ಟೆತಮ್ಮತ್ತ ತಿರುಗುವಂತಾಗಲು ಏನು ಮಾಡಬೇಕೆಂದು ಪ್ರತಿಪಕ್ಷಗಳು ಚಿಂತಿಸುತ್ತಿವೆ. ಎರಡೂ ಕಡೆಯಿಂದಲೂ ದಾಳಗಳು ಉರುಳುತ್ತಿವೆ.

ಗೆಲವಿನ ಬಗ್ಗೆ ಯಡಿಯೂರಪ್ಪ ಅವರಿಗೆ ಅದಮ್ಯ ವಿಶ್ವಾಸವಿದೆ. ಹಾಗಾಗಿ ಅವರು ಕ್ಷೇತ್ರದ ಪ್ರಚಾರದ ಹೊಣೆಯನ್ನು ಪುತ್ರ ಬಿ.ವೈ. ರಾಘವೇಂದ್ರಗೆ ನೀಡಿ ರಾಜ್ಯ ಪ್ರವಾಸ ಹೊರಟಿದ್ದಾರೆ. ಮತದಾನ ದಿನದವರೆಗೂ ಅವರು ಕ್ಷೇತ್ರಕ್ಕೆ ಬರುವುದು ಕಷ್ಟವಾಗಬಹುದು.

ಜಾತಿ ಲೆಕ್ಕಾಚಾರ ಕ್ಷೇತ್ರದ ಚುನಾವಣೆಯಲ್ಲಿ ಇವತ್ತಿಗೂ ಪ್ರಮುಖ ವಿಷಯವೇ ಆಗಿದೆ. ಲಿಂಗಾಯತ ಸಮುದಾಯದ ನಾಯಕರಾಗಿ ಹೊರಹೊಮ್ಮಿರುವ ಯಡಿಯೂರಪ್ಪ ಅವರಿಗೆ ಆ ಸಮುದಾಯದ ಬೆಂಬಲ ನಿರೀಕ್ಷಿತವೇ ಎಂದು ಬಿಜೆಪಿ ಭಾವಿಸಿದೆ. ಈ ಕ್ಷೇತ್ರದಲ್ಲಿ ಅವರೇ ಬಹುಸಂಖ್ಯಾತ ಮತದಾರರು. ‘ಲಿಂಗಾಯತ ಪ್ರತ್ಯೇಕ ಧರ್ಮ ಎಂಬುದು ವಿಷಯವೇ ಅಲ್ಲ’ ಎನ್ನುವ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಾಳ ತಮ್ಮ ಕ್ಷೇತ್ರದಲ್ಲಿ ಯಾವ ಪರಿಣಾಮವನ್ನೂ ಬೀರದು ಎಂಬುದು ಗೊತ್ತಿದೆ. ಪ್ರತಿ ಸಲದಂತೆ ಈ ಬಾರಿಯೂ ಕ್ಷೇತ್ರದ ಲಿಂಗಾಯತ ಸಮುದಾಯ ತಮ್ಮ ಕೈಬಿಡುವುದಿಲ್ಲ ಎಂದು ನಂಬಿದ್ದಾರೆ. ವಿಶೇಷವೆಂದರೆ 12ನೇ ಶತಮಾನದ ವಚನ ಚಳವಳಿಗೆ ಕಾರಣರಾದ ಪ್ರಮುಖ ಶರಣರು ಶಿಕಾರಿಪುರದಿಂದಲೇ ಕಲ್ಯಾಣದ ಕಡೆ ಸಾಗಿದವರು. ಅಕ್ಕ, ಅಲ್ಲಮನಿಂದ ಹಿಡಿದು 10ಕ್ಕೂ ಹೆಚ್ಚು ಪ್ರಮುಖ ಶರಣರು ಶಿಕಾರಿಪುರ ತಾಲೂಕಿನವರೇ.

ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಗೋಣಿ ಮಾಲತೇಶ ಅವರು ಕುರುಬ ಸಮುದಾಯಕ್ಕೆ ಸೇರಿದವರು. ಈ ಸಮುದಾಯದ ಮತಗಳು ಕ್ಷೇತ್ರದಲ್ಲಿ ನಿರ್ಣಾಯಕವೇನಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಣಕ್ಕೆ ಒಟ್ಟಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಮುಸ್ಲಿಂ ಮತಗಳು ತನ್ನ ಬುಟ್ಟಿಯಲ್ಲಿವೆ ಎಂದೇ ಕಾಂಗ್ರೆಸ್‌ ಹೇಳಿಕೊಳ್ಳುತ್ತಿದೆ. ಆದರೆ ವಾಲ್ಮೀಕಿ ಸಮುದಾಯದ ಜೆಡಿಎಸ್‌ ಅಭ್ಯರ್ಥಿ ಎಚ್‌.ಟಿ. ಬಳಿಗಾರ್‌ ಅವರು ಕ್ಷೇತ್ರದಲ್ಲಿ 2ನೇ ದೊಡ್ಡ ಮತಬ್ಯಾಂಕ್‌ ಆದ ಪರಿಶಿಷ್ಟರನ್ನು ಒಗ್ಗೂಡಿಸಲು ಸಮರ್ಥರಾದರೆ ಕ್ಷೇತ್ರದ ಚಿತ್ರಣವೇ ಬದಲಾಗುವ ಪರಿಸ್ಥಿತಿ ಇದೆ. ಆದರೆ ಪರಿಶಿಷ್ಟಮತಬ್ಯಾಂಕ್‌ ಏಕತ್ರವಾಗಿ ಚಿಂತಿಸಿದ ಸಾಧ್ಯತೆಗಳು ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಬಹು ಅಪರೂಪವೇ.

ರಾಜ್ಯದಲ್ಲೇ ಅತಿ ಹೆಚ್ಚು ತಾಂಡಾಗಳನ್ನು ಹೊಂದಿರುವ ತಾಲೂಕುಗಳಲ್ಲಿ ಶಿಕಾರಿಪುರವೂ ಒಂದು. ಇವರನ್ನು ನಂಬಿ ಹಲವು ಲಂಬಾಣಿ ಸಮುದಾಯದ ಅಭ್ಯರ್ಥಿಗಳು ಎಲ್ಲೆಲ್ಲಿಂದಲೂ ಶಿಕಾರಿಪುರಕ್ಕೆ ಬಂದು ಸ್ಪರ್ಧಿಸಿದ್ದಾರೆ. ಇದರಿಂದ ಮತಗಳ ಲೆಕ್ಕಾಚಾರದಲ್ಲಿ ಹೆಚ್ಚೇನೂ ಬದಲಾಗದು.

ನೀರಾವರಿಯೇ ಅಜೆಂಡಾ:

ಜೆಡಿಎಸ್‌ ಅಭ್ಯರ್ಥಿ ಎಚ್‌.ಟಿ. ಬಳಿಗಾರ್‌ ಅವರು ಕ್ಷೇತ್ರದಲ್ಲಿ ಬಲು ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಗೋಣಿ ಮಾಲತೇಶ್‌ ಅವರು ಯಡಿಯೂರಪ್ಪ ಅವರನ್ನು ಸಂಬೋಧಿಸುವ ಭಾಷೆಯಲ್ಲಿ ಯಾವತ್ತೂ ಬಳಿಗಾರ್‌ ಮಾತನಾಡಿಲ್ಲ. ಗೌರವಪೂರ್ವಕವಾಗಿಯೇ ಟೀಕಿಸುತ್ತಾರೆ. ಅದಕ್ಕಿಂತಲೂ ಮುಖ್ಯವಾಗಿ ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ನೀರಾವರಿ ವಿಷಯವನ್ನು ಚುನಾವಣಾ ಅಜೆಂಡಾ ಆಗಿ ಮಾಡುವಲ್ಲಿ ಇವರ ಪಾಲು ಬಹು ದೊಡ್ಡದು.

ಎಂಟು ಬಾರಿ ಗೆದ್ದಿರುವ, ಮುಖ್ಯಮಂತ್ರಿಯೂ ಆಗಿರುವ ಯಡಿಯೂರಪ್ಪ ಅವರು ಕ್ಷೇತ್ರದ ಸಮಗ್ರ ನೀರಾವರಿಗೆ ಏಕೆ ಪ್ರಯತ್ನ ಮಾಡಲಿಲ್ಲ? ಅಂಜನಾಪುರ, ಅಂಬ್ಲಿಗೊಳಕ್ಕೆ ಮಾತ್ರ ಏಕೆ ಇವರ ಹೋರಾಟ ಸೀಮಿತವಾಯಿತು ಎಂಬ ಬಹುಮುಖ್ಯ ಪ್ರಶ್ನೆಗಳನ್ನು ಎತ್ತಿದ್ದಾರೆ.

ಬಳಿಗಾರ್‌ ಅವರ ಪಾದಯಾತ್ರೆಗಳು, ನೀರಾವರಿ ಯೋಜನೆಯ ವೈಜ್ಞಾನಿಕ ವರದಿಗಳು ಶಾಸಕರಾಗಿದ್ದ ಬಿ.ವೈ. ರಾಘವೇಂದ್ರ ಅವರ ನಿದ್ದೆಗೆಡಿಸಿದ್ದರಲ್ಲಿ ಅನುಮಾನವಿಲ್ಲ. ತೀವ್ರತೆ ಹೆಚ್ಚಾಗುತ್ತಿದ್ದಂತೆ ಅನಿವಾರ್ಯವಾಗಿ ರಾಘವೇಂದ್ರ ಸಹ ನೀರಾವರಿ ಬಗ್ಗೆ ಮಾತನಾಡಬೇಕಾಯಿತು. ರಾಜ್ಯ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗುವುದಿಲ್ಲ ಎಂದು ಗೊತ್ತಾದಾಗ ಕೇಂದ್ರವು ಈ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ನೆರವು ಭರವಸೆ ನೀಡಿದ್ದ ಪತ್ರವೊಂದನ್ನು ರಾಜ್ಯ ಸರ್ಕಾರಕ್ಕೆ ಬರೆಯುವಂತೆ ಮಾಡುವಲ್ಲಿ ಯಡಿಯೂರಪ್ಪನವರೂ ಸಹ ಯಶಸ್ವಿಯಾದರು. ಜತೆಗೆ ಯಡಿಯೂರಪ್ಪ ಅವರು ‘ಈ ಯೋಜನೆಗಳನ್ನು ನಾವೇ ಅನುಷ್ಠಾನ ಮಾಡುತ್ತೇವೆ’ ಎಂದು ಹಳ್ಳಿಹಳ್ಳಿಗಳಿಗೆ ಹೋದಾಗ ಹೇಳಿ ಬಂದಿದ್ದಾರೆ.

ವಿರೋಧಿ ಅಲೆ ಇಲ್ಲ:

ಶಿಕಾರಿಪುರ ಕ್ಷೇತ್ರದಲ್ಲಿ ಯಡಿಯೂರಪ್ಪ ವಿರೋಧಿ ಅಲೆ ಮೇಲ್ನೋಟಕ್ಕೆ ಕಾಣುತ್ತಿಲ್ಲ. ಆದರೆ ಕಪ್ಪನಹಳ್ಳಿ, ಈಸೂರು, ಶಿರಾಳಕೊಪ್ಪ ಆಸುಪಾಸಿನಲ್ಲಿ ಬಿಜೆಪಿಯ ಪ್ರಭಾವ ಆಗಾಗ ಕಡಿಮೆ ಆಗುವುದು ಮೊದಲಿನಿಂದಲೂ ಯಡಿಯೂರಪ್ಪ ಅವರಿಗೆ ತಲೆನೋವಿನ ವಿಷಯವೇ. ಎಷ್ಟೇ ಪ್ರಯತ್ನ ಮಾಡಿದರೂ ಈ ಭಾಗಗಳು ಬಿಜೆಪಿಗೆ ಸಂಪೂರ್ಣವಾಗಿ ಒಲಿಯಲಿಲ್ಲ. ಪಂಚಾಯ್ತಿ ಚುನಾವಣೆಯಲ್ಲಿ ಈಗಲೂ ಬಿಜೆಪಿಯೇತರ ಸದಸ್ಯರು ಆಯ್ಕೆಯಾಗುವುದು ಈ ಭಾಗದಿಂದಲೇ.

ಬಿಜೆಪಿಯು ತಾಲೂಕು ಪಂಚಾಯ್ತಿಯ 19 ಸ್ಥಾನಗಳಲ್ಲಿ 12ರಲ್ಲಿ ಗೆದ್ದಿದೆ. ಉಳಿದ 7 ಕಡೆ ಕಾಂಗ್ರೆಸ್‌ ಸದಸ್ಯರಿದ್ದಾರೆ. ಜಿಲ್ಲಾ ಪಂಚಾಯ್ತಿಯ ಐದು ಕ್ಷೇತ್ರಗಳಲ್ಲಿ ನಾಲ್ಕನ್ನು ತನ್ನದಾಗಿಸಿಕೊಂಡಿರುವ ಬಿಜೆಪಿಯು ಒಂದು ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದೆ. ಶಿಕಾರಿಪುರ ಹಾಗೂ ಶಿರಾಳಕೊಪ್ಪ ಪಟ್ಟಣ ಪಂಚಾಯ್ತಿಗಳಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. 1983ರಿಂದ ಜಯಭೇರಿ ಭಾರಿಸುತ್ತಿರುವ ಯಡಿಯೂರಪ್ಪ ಅವರ ವಿರೋಧಿ ಮತಗಳು ಒಗ್ಗೂಡಿದ್ದು ಕೇವಲ 1999ರ ಚುನಾವಣೆಯಲ್ಲಿ ಮಾತ್ರ. ಮತ್ತೆ ಯಾವತ್ತೂ ಒಗ್ಗೂಡಲಿಲ್ಲ. ಸ್ವತಃ ಎಸ್‌. ಬಂಗಾರಪ್ಪ ಅವರೇ ಸ್ಪರ್ಧಿಸಿದ್ದಾಗಲೂ ಸಾಧ್ಯವಾಗಲಿಲ್ಲ. ಈ ಬಾರಿ ಪವಾಡ ನಡೆಯಬೇಕಷ್ಟೇ.

ತಂತ್ರಗಾರಿಕೆ:

ಚುನಾವಣೆ ದಾಳ ಉರುಳಿಸುವುದರಲ್ಲಿ ಬಿಜೆಪಿ ಯಾವತ್ತೂ ಎತ್ತಿದ ಕೈ. 2014ರ ಉಪಚುನಾವಣೆ ಬಿಜೆಪಿಯ ಪಾಲಿಗೆ ಎಚ್ಚರಿಕೆಯ ಗಂಟೆಯಾಗಿತ್ತು. ನೇರ ಜಿದ್ದಾಜಿದ್ದಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರು ಸುಮಾರು ಆರು ಸಾವಿರ ಮತಗಳ ಅಂತರದಿಂದ ಜಯ ಗಳಿಸಿದ್ದರು. ಆಗ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಎಚ್‌.ಎಸ್‌. ಶಾಂತವೀರಪ್ಪಗೌಡ ಈಗ ಬಿಜೆಪಿ ಸೇರಿರುವುದು ಯಡಿಯೂರಪ್ಪ ಅವರಿಗೆ ಅನುಕೂಲ.

ಯಾವ ಊರಿನ ಪ್ರಮುಖರು ಯಾವ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ, ಯಾವ ನಾಯಕರ ಜತೆಗಿದ್ದಾರೆ ಎಂದು ತಿಳಿದುಕೊಂಡು ಅವರನ್ನು ತನ್ನತ್ತ ಸೆಳೆಯುವುದು ಯಡಿಯೂರಪ್ಪ ಹಾಗೂ ಅವರ ಆತ್ಮೀಯ ಬಳಗಕ್ಕೆ ಕರತಲಾಮಲಕವಾಗಿದೆ. ಜತೆಗೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಶಿಕಾರಿಪುರಕ್ಕೆ ತಂದ ಯೋಜನೆಗಳು ಇನ್ನೂ ಕಣ್ಣಿಗೆ ಕಾಣುತ್ತಿವೆ. ವಿದ್ಯುತ್‌ ಸಮಸ್ಯೆ ಇಲ್ಲದಂತೆ ಕ್ಷೇತ್ರವನ್ನು ರೂಪಿಸಿರುವುದು, ರಸ್ತೆಗಳು, ದೊಡ್ಡದೊಡ್ಡ ಕಟ್ಟಡಗಳು ಆಗಿವೆ. ಜತೆಗೆ ಶಿಕಾರಿಪುರವನ್ನು ಕೇಂದ್ರವನ್ನಾಗಿಸಿ ಜಿಲ್ಲೆಯನ್ನು ರೂಪಿಸುವ ಕನಸನ್ನು ಕ್ಷೇತ್ರದಲ್ಲಿ ಬಿತ್ತಿದ್ದಾರೆ.

ಸದ್ಯ ಶಿಕಾರಿಪುರ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಗಳು ಪವಾಡದ ನಿರೀಕ್ಷೆಯಲ್ಲಿದ್ದಾರೆ. ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಲ್ಪಟ್ಟಯಡಿಯೂರಪ್ಪ ಅವರ ಗೆಲವು ಖಚಿತ ಎಂದು ಬಿಜೆಪಿಯು ವಿಶ್ವಾಸದಲ್ಲಿದೆ.

2014ರ ಉಪಚುನಾವಣೆ ಫಲಿತಾಂಶ

ಅಭ್ಯರ್ಥಿ ಪಕ್ಷ ಮತ

ಬಿ.ವೈ. ರಾಘವೇಂದ್ರ ಬಿಜೆಪಿ 71,547

ಎಚ್‌.ಎಸ್‌. ಶಾಂತವೀರಪ್ಪ ಗೌಡ ಕಾಂಗ್ರೆಸ್‌ 65,117

ಜಾತಿ ಲೆಕ್ಕಾಚಾರ

ಶಿಕಾರಿಪುರದಲ್ಲಿ 1,84,896 ಮತದಾರರಿದ್ದಾರೆ. ಲಿಂಗಾಯತ ಸಮುದಾಯ ಇಲ್ಲಿ ಪ್ರಬಲವಾಗಿದ್ದು, ಒಟ್ಟು ಮತದಾರರ ಪೈಕಿ ಶೇ.35ರಷ್ಟಿದೆ ಎರಡನೇ ಸ್ಥಾನದಲ್ಲಿ ಬಂಜಾರ ಸಮುದಾ ಯದವರಿದ್ದು, ಶೇ.25ರಷ್ಟುಸಂಖ್ಯೆಯಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಕುರುಬ ಹಾಗೂ ಮುಸ್ಲಿಂ ಮತದಾರರಿದ್ದಾರೆ.

Follow Us:
Download App:
  • android
  • ios