ಸಿದ್ದು ಹಗರಣ ಬಯಲು ಮಾಡದಿದ್ರೆ ಯಡಿಯೂರಪ್ಪ ಎಂದು ಕರೀಬೇಡಿ

BS Yeddyurappa Slams CM Siddaramaiah
Highlights

ನಾವು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಜಾರಿಗೆ ತಂದಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ವನ್ನು ರದ್ದು ಮಾಡಿ ಲೋಕಾಯುಕ್ತ ಬಲಪಡಿಸಿ ಸಿದ್ದರಾಮಯ್ಯ ಅವರ ಎಲ್ಲ ಹಗರಣಗಳನ್ನು ಬಯಲು ಮಾಡಿ ಜೈಲಿಗೆ ಕಳಿಸದಿದ್ದರೆ ನನ್ನನ್ನು ಯಡಿಯೂರಪ್ಪ ಎಂದು ಕರೆಯಬೇಡಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸವಾಲು ಹಾಕಿದರು.

ಬೀದರ್‌:  ನಾವು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಜಾರಿಗೆ ತಂದಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ವನ್ನು ರದ್ದು ಮಾಡಿ ಲೋಕಾಯುಕ್ತ ಬಲಪಡಿಸಿ ಸಿದ್ದರಾಮಯ್ಯ ಅವರ ಎಲ್ಲ ಹಗರಣಗಳನ್ನು ಬಯಲು ಮಾಡಿ ಜೈಲಿಗೆ ಕಳಿಸದಿದ್ದರೆ ನನ್ನನ್ನು ಯಡಿಯೂರಪ್ಪ ಎಂದು ಕರೆಯಬೇಡಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸವಾಲು ಹಾಕಿದರು.

ನಗರದ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಭಾನುವಾರ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಸಿದ್ದರಾಮಯ್ಯ ಐದು ವರ್ಷದಿಂದ ಕತ್ತೆ ಕಾಯುತ್ತಿದ್ದರಾ? ಎಸಿಬಿಯನ್ನು ಜಾರಿಗೆ ತಂದು ಅವರ ಸಚಿವ ಸಂಪುಟದ ಲೂಟಿಕೋರರಿಗೆಲ್ಲ ಕ್ಲೀನ್‌ಚೀಟ್‌ ಕೊಡಿಸಿದ್ದಾರೆ. ಈಗ ಲೋಕಾಯುಕ್ತ ಬಲಪಡಿಸುತ್ತೇನೆ ಎನ್ನುತ್ತಿದ್ದಾರೆ. ಮೇ 17 ಅಥವಾ 18ರಂದು ಪ್ರಧಾನಿ ನರೇಂದ್ರ ಮೋದಿ ಹಾಗೂ 3ರಿಂದ 4ಲಕ್ಷ ಜನರ ಸಮ್ಮುಖದಲ್ಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮರಾಠಾ ಸಮಾಜ 2ಎಗೆ ಸೇರ್ಪಡೆ:  ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಮರಾಠ ಸಮುದಾಯವನ್ನು 2ಎ ವರ್ಗಕ್ಕೆ ಸೇರಿಸಲಾಗುವುದು. ಮಲ್ಲಿಕಾರ್ಜುನ್‌ ಖೂಬಾ ನೀಡಿರುವ ಪಟ್ಟಿಯಲ್ಲಿರುವ ಎಲ್ಲ ಅಭಿವೃದ್ಧಿಗೆ ಅನುದಾನ ಒದಗಿಸಲಾಗುವುದು. ಬಸವಕಲ್ಯಾಣಕ್ಕೆ ಆರಂಭದಲ್ಲೇ 200 ಕೋಟಿ ರು. ಅನುದಾನ ಬಿಡುಗಡೆ ಮಾಡುತ್ತೇನೆ. ಬಿಜೆಪಿಯಲ್ಲಿದ್ದು ಬಿಜೆಪಿಗೆ ಚೂರಿ ಹಾಕುವವರ ಬಗ್ಗೆ ಮಾಹಿತಿ ಇದ್ದು ಅಂತಹವರು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬೇಕು ಇಲ್ಲದಿದ್ದರೆ, ಅಂತಹವರನ್ನು ಪಕ್ಷದಿಂದ ಉಚ್ಛಾಟಿಸಲಾಗುವದು ಎಂದರು.

ಪ್ರತ್ಯೇಕ ಧರ್ಮ ಕಾಂಗ್ರೆಸ್‌ಗೆ ತಿರುಗುಬಾಣ:  ಮತ್ತೊಂದೆಡೆ ಚಿಂಚೋಳಿಯಲ್ಲಿ ಮಾತನಾಡಿದ ಅವರು, ವೀರಶೈವ ಮತ್ತು ಲಿಂಗಾಯತ ಎಂಬ ಪ್ರತ್ಯೇಕ ಧರ್ಮ ರಚಿಸಲು ಹೊರಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಬಾರಿ ಚುನಾವಣೆಯಲ್ಲಿ ಅದೇ ತಿರುಗುಬಾಣವಾಗಲಿದೆ. ಸಿದ್ದರಾಮಯ್ಯ ಅವರು ಸಮಾಜದಲ್ಲಿ ಒಡಕು ಹುಟ್ಟಿಸಿ ಸಮಾಜ ಒಡೆಯುವ ಕೆಲಸ ಮಾಡಿದ್ದಾರೆ. ವೀರಶೈವ ಮತ್ತು ಲಿಂಗಾಯತರಲ್ಲಿ ಭಿನ್ನಾಭಿಪ್ರಾಯ ಮೂಡಿಸಿ ಮತಗಳಿಸಲು ಪ್ರಯತ್ನ ಮಾಡಿದ್ದರು. ಆದರೆ, ಈಗ ಚುನಾವಣೆಯಲ್ಲಿ ವೀರಶೈವ-ಲಿಂಗಾಯತ ಸಮುದಾಯವದವರು ತಕ್ಕ ಪಾಠ ಕಲಿಸಲಿದ್ದಾರೆ

ಬಿಜೆಪಿ-ಜೆಡಿಎಸ್‌ ಒಳಒಪ್ಪಂದವಿಲ್ಲ:  ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಯಾವುದೇ ಒಳಒಪ್ಪಂದ ಮಾಡಿಕೊಂಡಿಲ್ಲ. ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲಿ ನಾವು ಸ್ಪರ್ಧಿಸಲಿದ್ದೇವೆ. ರಾಜ್ಯದೆಲ್ಲೆಡೆ ಬಿಜೆಪಿ ಗಾಳಿ ಬೀಸುತ್ತಿದೆ. ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಜಯ ಸಾಧಿಸಿ ಸ್ಪಷ್ಟಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ ಎಂದ ಅವರು ಬಿಜೆಪಿ ಐಟಿ ದಾಳಿ ನಡೆಸಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬ ಆರೋಪವನ್ನು ತಳ್ಳಿ ಹಾಕಿದರು.

loader