ಹಿಂದೆ ಮಾಡಿದ ತಪ್ಪನ್ನು ಮತ್ತೆ ಮಾಡುವುದಿಲ್ಲ

BS Yeddyurappa Interview
Highlights

ಮತ್ತೆ ಮುಖ್ಯಮಂತ್ರಿಯಾದಲ್ಲಿ ಹಿಂದೆ ಸರ್ಕಾರ ನಡೆಸುವಾಗ ಆಗಿರುವ ಲೋಪದೋಷಗಳನ್ನು ಸರಿಪಡಿಸಿಕೊಂಡು ಎಚ್ಚರಿಕೆಯಿಂದ ಆಡಳಿತ ನಡೆಸುವುದಾಗಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯೂ ಆಗಿರುವ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸ್ಪಷ್ಟ ಭರವಸೆ ನೀಡಿದ್ದಾರೆ. 

ಬೆಂಗಳೂರು :  ಮತ್ತೆ ಮುಖ್ಯಮಂತ್ರಿಯಾದಲ್ಲಿ ಹಿಂದೆ ಸರ್ಕಾರ ನಡೆಸುವಾಗ ಆಗಿರುವ ಲೋಪದೋಷಗಳನ್ನು ಸರಿಪಡಿಸಿಕೊಂಡು ಎಚ್ಚರಿಕೆಯಿಂದ ಆಡಳಿತ ನಡೆಸುವುದಾಗಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯೂ ಆಗಿರುವ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸ್ಪಷ್ಟ ಭರವಸೆ ನೀಡಿದ್ದಾರೆ.  ಈಗಾಗಲೇ ಹೇಳಿರುವಂತೆ ಮೇ 17 ರಂದು ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ ಎಂದು ಪುನರುಚ್ಚರಿಸಿರುವ ಅವರು ಮುಖ್ಯಮಂತ್ರಿಯಾಗಿ ಪದಗ್ರಹ ಣವಾದ 24 ಗಂಟೆಗಳಲ್ಲಿ ರೈತರ ಒಂದು ಲಕ್ಷ ರು.ವರೆಗಿನ  ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರ ಬ್ಯಾಂಕ್‌ನ ಬೆಳೆ ಸಾಲವನ್ನು ಮನ್ನಾ ಮಾಡುತ್ತೇನೆ. ಒಂದು ವೇಳೆ ನುಡಿದಂತೆ ನಡೆಯದಿದ್ದರೆ ಒಂದು ಗಂಟೆಯೂ ಮುಖ್ಯಮಂತ್ರಿ ಗಾದಿಯಲ್ಲಿ ಕುಳಿ ತುಕೊಳ್ಳುವುದಿಲ್ಲ ಎಂದೂ ಅವರು ಕಡ್ಡಿ ಮುರಿದಂತೆ ಹೇಳಿದ್ದಾರೆ. ಅಲ್ಲದೆ, ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಒಳ್ಳೆಯ ಯೋಜನೆ ಗಳನ್ನು ಮುಂದುವರೆಸುವುದಾಗಿಯೂ ಯಡಿಯೂರಪ್ಪ ತಿಳಿಸಿದ್ದಾರೆ.

ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರದ ಗದ್ದುಗೆ ಏರಲಿದೆಯೇ?

ದೈವ ಬಲ ಮತ್ತು ಜನಬಲ ಇದ್ದು, ಬಿಜೆಪಿ ಜಯ ಗಳಿಸು ವುದು ಖಚಿತ. ಇದರಲ್ಲಿ ಯಾವುದೇ ಸಂಶಯ ಬೇಡ. 

ಚುನಾವಣೆಯಲ್ಲಿ ಒಂದು ವೇಳೆ ಯಾವುದೇ ಪಕ್ಷಕ್ಕೆ ಬಹುಮತ ಬಾರದಿದ್ದರೆ ಜೆಡಿಎಸ್ ಜತೆ ಮೈತ್ರಿ ಮಾಡುವ ಸಾಧ್ಯತೆ ಇದೆಯೇ?

ಯಾವುದೇ ಕಾರಣಕ್ಕೂ ಈ ಬಾರಿ ಅತಂತ್ರ ಸ್ಥಿತಿ ನಿರ್ಮಾಣ ವಾಗುವುದಿಲ್ಲ. ಬಿಜೆಪಿಗೆ ಬಹುಮತ ಬರಲಿದ್ದು, ಈಗಾಗಲೇ ಹೇಳಿರುವಂತೆ ಮೇ 17ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ. ಕಳೆದ ಬಾರಿ 20-20 ಆಡಳಿತದ ವೇಳೆ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡ ಬಳಿಕ ಕೆಟ್ಟ ಅನುಭವ ಆಗಿದೆ. ಇದನ್ನು ಮತ್ತೆ ಮರು ಕಳಿಸುವುದಿಲ್ಲ. ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳುವುದಿಲ್ಲ.

ನಿಮ್ಮ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಉತ್ತಮ ಆಡಳಿತ ನೀಡುವ ಭರವಸೆ ಇಟ್ಟುಕೊಳ್ಳಬಹುದೆ?

ಮಾದರಿ ರಾಜ್ಯ, ಸ್ವಚ್ಛ, ದಕ್ಷ ಪ್ರಾಮಾಣಿಕ ಆಡಳಿತ ನೀಡುವ ಕನಸು ನಮ್ಮದಾಗಿದೆ. ಬೆಂಗಳೂರಲ್ಲಿ ಕಸದ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಕೊಲೆ, ಸುಲಿಗೆ ನಡೆಯುತ್ತಿದೆ. ಇದಕ್ಕೆಲ್ಲಾ ಅಂತ್ಯ ಹಾಡಿ ಮೊದಲ ಸ್ಥಿತಿಗೆ ತರುವುದು ಮೊದಲ ಆದ್ಯತೆ ನೀಡಲಾಗುವುದು. ಹಿಂದಿನ ಬಾರಿ ಬಿಜೆಪಿ 120 ಸ್ಥಾನ ಪಡೆದಿದ್ದರೆ ಗೊಂದಲಗಳು ಉದ್ಭವಿಸುತ್ತಿರಲಿಲ್ಲ. ಈಗ ಅದರ ಅನುಭವ ಆಗಿದೆ. ಆಗಿರುವ ಲೋಪದೋಷಗಳನ್ನು ಸರಿಪಡಿಸಿಕೊಂಡು ಒಳ್ಳೆಯ ಆಡಳಿತ ನೀಡುತ್ತೇವೆ.

ಕೃಷಿ ಮತ್ತು ನೀರಾವರಿಗೆ ಆದ್ಯತೆ ನೀಡುವುದಾಗಿ ನಿಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿದ್ದೀರಿ?

ರೈತರ ಒಂದು ಲಕ್ಷ ರು.ವರೆಗಿನ ರಾಷ್ಟ್ರೀಕೃತ ಬ್ಯಾಂಕ್, ಸಹ ಕಾರ ಬ್ಯಾಂಕ್‌ನಲ್ಲಿನ ಬೆಳೆ ಸಾಲ ಮನ್ನಾ ಮಾಡಲಾಗುವುದು. ಸುವರ್ಣ ಭೂಮಿ ಯೋಜನೆಯಡಿ 10 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರಿಗೆ 10 ಸಾವಿರ ರು. ನೀಡಿ ಕೃಷಿಗೆ ಅನುಕೂಲವಾಗುವಂತೆ ಮಾಡಿರುವುದನ್ನು 20 ಲಕ್ಷ ರೈತರಿಗೆ ವಿಸ್ತರಣೆ ಮಾಡುವ ಉದ್ದೇಶ ಇದೆ. ನೀರಾವರಿ ಯೋಜನೆಗೆ 1.5 ಲಕ್ಷ ಕೋಟಿ ರು. ಅನುದಾನ ಮೀಸಲಿಡಲು ತೀರ್ಮಾನಿಸಲಾಗಿದೆ. ಸಿದ್ದರಾಮಯ್ಯ ಸರ್ಕಾರ ಕೇವಲ ಮಾತುಗಳಲ್ಲೇ ಕೃಷಿ, ನೀರಾವರಿಗೆ ಆದ್ಯತೆ ನೀಡಿತೇ ಹೊರತು ಅನುಷ್ಠಾನದಲ್ಲಿ ಅಲ್ಲ. ಆದರೆ, ನಾವು ಜಾರಿಗೊಳಿಸುತ್ತೇವೆ.

ಹಾಗಾದರೆ ಇತರ ವರ್ಗಗಳಿಗೆ ಆದ್ಯತೆ ಇಲ್ಲವೇ?

ಎಲ್ಲ ವರ್ಗಗಳಿಗೂ ಆದ್ಯತೆ ನೀಡಲಾಗುವುದು. ಭಾಗ್ಯಲಕ್ಷ್ಮಿ ಯೋಜನೆಯ ಮೊತ್ತವನ್ನು ಎರಡು ಲಕ್ಷ ರು.ಗಳಿಗೆ ಹೆಚ್ಚಿಸಲಾಗುವುದು. ಎಲ್ಲ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪದವಿ ಹಂತದವರೆಗೆ (ವೃತ್ತಿಪರ ಕೋರ್ಸ್ ಹೊರತುಪಡಿಸಿ) ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಉಚಿತ ಶಿಕ್ಷಣ ಕಲ್ಪಿಸಲಾಗುವುದು. ಸ್ತ್ರೀಶಕ್ತಿ ಗುಂಪನ್ನು ಬಲಪಡಿಸಿ ಶೇ.೧ರ ಬಡ್ಡಿದರದಲ್ಲಿ 2 ಲಕ್ಷ ರು.ವರೆಗೆ ಸಾಲ ನೀಡುವ ಯೋಜನೆ ಮತ್ತು ತಾಳಿ ಕೊಂಡುಕೊಳ್ಳಲು ಶಕ್ತಿಇಲ್ಲದ ವಿವಾಹವಾಗುವ ಬಡ ಕುಟುಂಬದ ಯುವತಿಗೆ 25 ಸಾವಿರ ರು. ನಗದು ಮತ್ತು ಮೂರು ಗ್ರಾಂ ತಾಳಿ ನೀಡಲಾಗುವುದು. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರಂಭಿಸಿರುವ ಜನಪ್ರಿಯ ಯೋಜನೆಗಳನ್ನು ಮುಂದುವರಿಸುತ್ತೀರಾ?

ಖಂಡಿತವಾಗಿಯೂ ಮುಂದುವರೆಸುತ್ತೇವೆ. ಯಾವುದೇ ಸರ್ಕಾರದ ಒಳ್ಳೆಯ ಕಾರ್ಯಕ್ರಮಗಳನ್ನು ನಿಲ್ಲಿಸುವುದಿಲ್ಲ. ಹಿಂದಿನ ಸರ್ಕಾರದ ಉತ್ತಮ ಕಾರ್ಯಕ್ರಮಗಳನ್ನು ಮುಂದುವರಿಸುವುದರ ಜತೆಗೆ ನಮ್ಮ ಹೊಸ ಕಾರ್ಯಕ್ರಮಗಳನ್ನು ಜೋಡಿಸುತ್ತೇವೆ. ಅವರು ಮಾಡಿದಂತೆ ನಾವು ಮಾಡುವುದಿಲ್ಲ. 

ಹೊಸದಾಗಿ ಅನ್ನಪೂರ್ಣ ಕ್ಯಾಂಟೀನ್ ಬಗ್ಗೆ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ್ದೀರಿ. ಹಾಗಾದರೆ ಈಗಿರುವ ಇಂದಿರಾ ಕ್ಯಾಂಟೀನ್ ಭವಿಷ್ಯ?

ಹೆಸರು ಏನೇ ಇರಲಿ, ಆದರೆ ಯೋಜನೆ ಮುಂದುವರಿಯಲಿದೆ.

ಮುಖ್ಯಮಂತ್ರಿಗಳು ಪದೇ ಪದೇ ನಿಮ್ಮನ್ನು ಜೈಲಿಗೆ ಹೋದವರು, ಜೈಲು ಹಕ್ಕಿಗಳು ಎಂದು ಟೀಕಿಸುತ್ತಾರೆ?

ಯಾವುದಾದರೊಂದು ಪ್ರಕರಣದಲ್ಲಿ ನನ್ನ ವಿರುದ್ಧ ಆರೋಪ ಸಾಬೀತಾಗಿದೆಯೇ ಎಂಬುದನ್ನು ಸಿದ್ದ ರಾಮಯ್ಯ ತೋರಿಸಲಿ. ಹೈಕೋರ್ಟ್, ಸುಪ್ರೀಂಕೋರ್ಟ್ ಸೇರಿದಂತೆ ಎಲ್ಲಾ ನ್ಯಾಯಾಲಯ ಗಳಿಂದ ರಿಲೀಫ್ ಸಿಕ್ಕಿದೆ. ಅವನೊಬ್ಬ ಮುಖ್ಯಮಂತ್ರಿ. ಬೆಳಗ್ಗೆಯಾದರೆ ಜೈಲಿಗೆ ಹೋದವರು ಎನ್ನುತ್ತಾರೆ. 75 ಲಕ್ಷ ರು. ವಾಚ್ ಯಾರಪ್ಪನದ್ದು? ಯಾರು ಕೊಟ್ಟಿದ್ದರು ಎಂಬುದನ್ನು ಹೇಳಲಿ. ಭ್ರಷ್ಟಾಚಾರ ಮಾಡಿ ಲೂಟಿ ಮಾಡಿದ್ದಾರೆ.

ತಮ್ಮ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲ ಎನ್ನುತ್ತೀರಿ. ಹಾಗಾದರೆ ಸಿದ್ದರಾಮಯ್ಯರದ್ದು 10 ಪರ್ಸೆಂಟ್ ಸರ್ಕಾರ ಎನ್ನುವ ಆರೋಪ ಸಾಬೀತಾಗಿದೆಯಾ?

ಯಾವುದೇ ಇಲಾಖೆಯಲ್ಲಿ ಗಮನಿಸಿ. ಪರ್ಸೆಂಟೇಜ್ ಇಲ್ಲದೆ ಕೆಲಸಗಳು ನಡೆಯುತ್ತವೆಯೇ? ನೀರಾವರಿ ಇಲಾಖೆಯಲ್ಲಿ ಅತಿ ಹೆಚ್ಚು ನಡೆದಿದೆ. ಈ ಹಿಂದೆ ನನ್ನ ಆಡಳಿತಾವಧಿಯಲ್ಲಿ ತಜ್ಞರ ಸಮಿತಿ ಪರಿಶೀಲನೆ ಬಳಿಕ ಕಾಮಗಾರಿ ಪ್ರಕ್ರಿಯೆ ಆರಂಭವಾಗುತ್ತಿತ್ತು. ಅಧಿಕಾರಕ್ಕೆ ಬಂದ ಮೇಲೂ ಮತ್ತದೇ ಕೆಲಸ ಮಾಡಿ ತಜ್ಞರ ಸಮೀತಿ ಪರಿಶೀಲನೆ ಬಳಿಕ ಟೆಂಡರ್ ಕರೆಯಲಾಗುವುದು.

ಅಕ್ರಮ ಗಣಿಗಾರಿಕೆ ಭಾರೀ ಸದ್ದು ಮಾಡಿದ ಬಳಿಕ ಪಕ್ಷದಿಂದ ದೂರವಿಟ್ಟಿದ್ದ ಗಾಲಿ ಜನಾರ್ದನ ರೆಡ್ಡಿ ಚುನಾವಣೆ ವೇಳೆ ಬಿಜೆಪಿಯಲ್ಲಿ ಸಕ್ರಿಯರಾಗಿದ್ದಾರೆ. ಅವರು ಹೇಳಿದವರಿಗೇ ಟಿಕೆಟ್ ನೀಡಿದ್ದೀರಂತೆ?

ಸಂಸದ ಶ್ರೀರಾಮುಲು ಸೇರಿದಂತೆ ಬಳ್ಳಾರಿ ಜಿಲ್ಲೆಯ ಮಾಜಿ ಮತ್ತು ಹಾಲಿ ಶಾಸಕರು ನಮ್ಮ ಜತೆಗಿದ್ದಾರೆ. ಇಬ್ಬರು ಮಾತ್ರ ಪಕ್ಷವನ್ನು ತೊರೆದಿದ್ದಾರೆ. ಪಕ್ಷದಿಂದ ಟಿಕೆಟ್ ನೀಡಿರುವವರೆಲ್ಲಾ ಗೆದ್ದು ಬರಲಿದ್ದಾರೆ. ಬಳ್ಳಾರಿಯ ರೆಡ್ಡಿ ಸಹೋದರರಿಗೆ ಸಮೀಕ್ಷೆ ಆಧಾರದ ಮೇಲೆ ಟಿಕೆಟ್ ನೀಡಲಾಗಿದೆ. ಇಂತಹವರಿಗೆ ಟಿಕೆಟ್ ನೀಡಬೇಕು ಎಂದು ಜನಾರ್ದನ ರೆಡ್ಡಿ ಕೇಳಿಲ್ಲ. ಅವರ ಸಹೋದರರು ಮತ್ತು ಬೆಂಬಲಿಗರ ಮೇಲೆ ಯಾವುದೇ ರೀತಿಯ ಆರೋಪಗಳಿಲ್ಲ. ಗೆಲುವು ಅಷ್ಟೇ ಮುಖ್ಯ. ಜನಾರ್ದನ ರೆಡ್ಡಿ ಚುನಾವಣಾ ಕಣಕ್ಕಿಳಿಯುವ ಬಗ್ಗೆ ಆಪೇಕ್ಷೆ  ಪಟ್ಟಿಲ್ಲ. ಹಳೆಯದನ್ನು ಮರೆತು ಮುಂದೆ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತೇವೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಬಿಜೆಪಿಗೂ ಮತ್ತು ಜನಾರ್ದನ ರೆಡ್ಡಿಗೂ ಸಂಬಂಧವಿಲ್ಲ ಎನ್ನುತ್ತಾರೆ. ಆದರೆ, ನೀವು  ಅವರ ಜೊತೆಗೆ ಓಡಾಡುತ್ತೀರಿ?

ಬಿಜೆಪಿಯಲ್ಲಿ ರೆಡ್ಡಿ ಇಲ್ಲ. ಯಾವುದೋ ಕಾರ್ಯಕ್ರಮದಲ್ಲಿ ಭೇಟಿ ಮಾಡಿದ್ದು ನಿಜ. ಅವರಿಗೆ ಪಕ್ಷ ಟಿಕೆಟ್ ನೀಡಿಲ್ಲ. 

ರೆಡ್ಡಿ ವಿರುದ್ಧ ಇನ್ನೂ ವಿಚಾರಣೆ ನಡೆಯುತ್ತಿದೆ. ಅವರನ್ನು ಪಕ್ಷಕ್ಕೆ ಕರೆತರುವುದು ಅಗತ್ಯ ಇತ್ತೇ?

ಅವರ ವಿರುದ್ಧದ ಎಲ್ಲಾ ಪ್ರಕರಣಗಳ ವಿಚಾರಣೆ ಮುಗಿದಿವೆ. ಬಹುತೇಕ ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದಾರೆ. ಭವಿಷ್ಯ  ರಾಜಕೀಯದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಈಗಾಗಲೇ ತಿಳಿಸಿದ್ದೇನೆ. ಸರ್ಕಾರ ರಚನೆ ಮಾಡಲು ನಮಗೆ ಪ್ರತಿ ಕ್ಷೇತ್ರವೂ ಮುಖ್ಯ. ಬಳ್ಳಾರಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ. 

ಪಕ್ಷದ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ತಾವು ಒಟ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ?

ಪ್ರಧಾನಿ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕೈಗೊಂಡಿರುವ ಪ್ರಚಾರ ಸಭೆಗಳಲ್ಲಿ ಯಡಿಯೂರಪ್ಪ ಬರಬೇಕು ಎಂದು ಅಪೇಕ್ಷೆ ಪಡುವುದಿಲ್ಲ. ರಾಜ್ಯದಲ್ಲಿನ ಎಲ್ಲಾ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಳ್ಳಬೇಕಿರುವ ಕಾರಣ ಬೇರೆ ಬೇರೆ ಕಡೆ ಪ್ರಚಾರ ಕೈಗೊಳ್ಳಲಾಗಿದೆ. ಒಂದೋ  ಎರಡು ಕಾರ್ಯಕ್ರಮದಲ್ಲಿ ಪ್ರಧಾನಿ ಮತ್ತು ರಾಷ್ಟ್ರಾಧ್ಯಕ್ಷರ ಜತೆಗಿರುತ್ತೇನೆ. ಆದರೆ, ಕಾಂಗ್ರೆಸ್‌ನಲ್ಲಿ ಒಡೆದ ಮನೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರದ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಒಂದೊಂದು ದಿಕ್ಕಿನಲ್ಲಿದ್ದಾರೆ. ಕಳೆದ ಒಂದು ತಿಂಗಳಿನಿಂದ ಒಟ್ಟಿಗೆ ತಿರುಗಾಡುತ್ತಿಲ್ಲ.

ಅಂದರೆ, ಕಾಂಗ್ರೆಸ್ಸಿನ ಮೂವರು ಹಿರಿಯ ನಾಯಕರಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಎಂಬ ಅಭಿಪ್ರಾಯ ನಿಮ್ಮದಾ?

ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು ಕಾಂಗ್ರೆಸ್‌ನ ಮೂಲ ನಾಯಕರಿಗೆ ಇಷ್ಟ ಇಲ್ಲ. ಬೇಕಾದರೆ ಸವಾಲು ಹಾಕುತ್ತೇನೆ. ಮೂವರೂ ಒಟ್ಟಿಗೆ ಓಡಾಡಲಿ ನೋಡೋಣ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ಉಂಟಾಗಿರುವ ಸೋಲಿನ ಭೀತಿಯಿಂದಾಗಿ ಎರಡು ಕಡೆ ಸ್ಪರ್ಧಿಸಿದ್ದಾರೆ. ಚಾಮುಂಡೇ ಶ್ವರಿ ಕ್ಷೇತ್ರದಲ್ಲಿ ಸೋಲು ನಿಶ್ಚಿತ. ಜತೆಗೆ ಬಾದಾಮಿಯಲ್ಲಿಯೂ ಸೋಲು ಅನುಭವಿಸಲಿದ್ದಾರೆ.

ಕೈಕಾಲು ಕಟ್ಟಿಯಾದರೂ ಮತ ಕೇಳಿ ಎಂಬ ನಿಮ್ಮ ಹೇಳಿಕೆ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಲು ಮುಂದಾಗಿದೆ? 

ಕಾಂಗ್ರೆಸ್‌ನವರು ತಲೆ ತಲೆಕೆಟ್ಟವರು. ಚುನಾವಣಾ ಆಯೋಗಕ್ಕೆ ಹೋಗಿ ಕೊಡಲಿ. ಅಭ್ಯಂತರ ಇಲ್ಲ.

ಲಿಂಗಾಯತ ಪ್ರತ್ಯೇಕ ಧರ್ಮ ರಾಜಕೀಯ  ವಿಷಯವಲ್ಲ, ಚುನಾವಣಾ ವಿಚಾರವೂ ಅಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ?

ನಾನು ಕೂಡ ಅದೊಂದು ಚುನಾವಣಾ ವಿಷಯ ಎಂದು ಹೇಳಿಲ್ಲ. ಆದರೆ, ಅದನ್ನು ಚುನಾವಣಾ ವಿಷಯವನ್ನಾಗಿ ಮಾಡಿದ್ದೇ ಸಿದ್ದರಾಮಯ್ಯ, ಲಿಂಗಾಯತ-ವೀರಶೈವರನ್ನು ವಿಭಜಿಸಿದವರು ಯಾರು? ಈ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದನ್ನು  ತಡೆಯುವ ಷಡ್ಯಂತ್ರ ರೂಪಿಸಿದರು. ಆದರೆ, ಈಗ ಅವರಿಗೆ ತಿರುಗುಬಾಣ ಆಗಿದೆ. ಹೀಗಾಗಿ ಈಗ ಮೌನವಾಗಿದ್ದಾರೆ. 

ನಿಮ್ಮ ಪುತ್ರ ವಿಜಯೇಂದ್ರಗೆ ಟಿಕೆಟ್ ತಪ್ಪಿದ ನಂತರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ?

ವಿಜಯೇಂದ್ರ ಪಕ್ಷಕ್ಕಾಗಿ ದುಡಿಯುತ್ತಿದ್ದಾನೆ. ಹೀಗಾಗಿ ಯುವ ಮೋರ್ಚಾಗೆ ನೇಮಕ ಮಾಡಲಾಗಿದೆ. ಇದರಲ್ಲಿ ತಪ್ಪೇನಿದೆ? ಅವರ 
ವರ್ಚಸ್ಸು ನೋಡಿ ಹುದ್ದೆ ನೀಡಲಾಗಿದೆ. ಅಷ್ಟಕ್ಕೂ ಇದು ಪಕ್ಷಕ್ಕೆ ಬಿಟ್ಟ ವಿಚಾರ. 

ನೂರಾರು ದಿನಗಳ ಕಾಲ ಮಹದಾಯಿ ಹೋರಾಟಗಾರರು ಬಿಸಿಲಲ್ಲಿ ಕುಳಿತಾಗ ಕರಗದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಈಗ ಚುನಾವಣೆ ನಂತರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರಲ್ಲ? 

ನನ್ನ ಜೀವನವನ್ನೇ ರೈತರಿಗೆ ಮುಡುಪಾಗಿಟ್ಟಿದ್ದೇನೆ. ಮಹದಾಯಿ ವಿವಾದ ಕಾಂಗ್ರೆಸ್‌ನ ಪಾಪದ ಕೂಸು ಎಂಬುದು ಜಗತ್ತಿಗೆ ಗೊತ್ತು. ಕಾಂಗ್ರೆಸ್‌ನ ಸೋನಿಯಾಗಾಂಧಿ ರಾಜ್ಯಕ್ಕೆ ಒಂದು ಹನಿ ನೀರು ಬಿಡಲ್ಲ ಎಂದಿದ್ದರು. ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಒಂದೇ ಒಂದು ಮಾತು ಚಕಾರ ಎತ್ತಿಲ್ಲ. ಸಮಸ್ಯೆಯ ತೀವ್ರತೆಯನ್ನು ಅರಿತ ಪ್ರಧಾನಿ ನರೇಂದ್ರ ಮೋದಿ ಬಗೆಹರಿಸುವ ಅಶ್ವಾಸನೆ ನೀಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಮಹದಾಯಿ ವಿವಾದ ಬಗೆಹರಿಸಲಾಗುವುದು.

ರೈತರ ಸಾಲಮನ್ನಾ ಭರವಸೆ ನಿಜಕ್ಕೂ ಕಾರ್ಯರೂಪಕ್ಕೆ ಬರುತ್ತಾ?

ಮಹಾರಾಷ್ಟ್ರ, ಉತ್ತರ ಪ್ರದೇಶ ಸರ್ಕಾರ ಸಾಲಮನ್ನಾ ಮಾಡಿದ ಮಾದರಿಯಲ್ಲಿ ರಾಜ್ಯದಲ್ಲಿಯೂ ಮಾಡಲಾಗುವುದು.  ಮುಖ್ಯ ಮಂತ್ರಿಯಾಗಿ ಪದಗ್ರಹಣವಾದ 24 ಗಂಟೆಯಲ್ಲಿ ಒಂದು ಲಕ್ಷ ರು.ವರೆಗಿನ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರ ಬ್ಯಾಂಕ್‌ನ ಸಾಲವನ್ನು ಮನ್ನಾ ಮಾಡ ಲಾಗುವುದು. ನುಡಿದಂತೆ ನಡೆಯದಿದ್ದರೆ 1 ಗಂಟೆಯೂ ಮುಖ್ಯಮಂತ್ರಿ ಗಾದಿಯಲ್ಲಿ ಕುಳಿತುಕೊಳ್ಳುವುದಿಲ್ಲ.

ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಎಂದು ಹೇಳುವ ಬಿಜೆಪಿ ಒಂದು ಕ್ಷೇತ್ರದಲ್ಲೂ ಮುಸ್ಲಿಂ ಸಮುದಾಯವರಿಗೆ ಟಿಕೆಟ್ ಏಕೆ ಕೊಟ್ಟಿಲ್ಲ
ಎಂದು ಸಿದ್ದರಾಮಯ್ಯ ಕೇಳಿದ್ದಾರೆ?

ನಮಗೆ ಯಾವ ಸಲಹೆಗಳೂ ಬೇಕಿಲ್ಲ. ಗೆಲ್ಲುವ ವಿಶ್ವಾಸ ಇಲ್ಲದ ಕಾರಣ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿಲ್ಲ. ಈಗ ಮಾತ್ರವಲ್ಲ 110 ಸ್ಥಾನಗಳನ್ನು ಗೆಲುವು ಸಾಧಿಸಿದಾಗಲೂ ಮುಸ್ಲಿಂ ಅಭ್ಯರ್ಥಿ ಇರಲಿಲ್ಲ. ಆದರೆ, ಸರ್ಕಾರ ರಚನೆಯಾದ ಬಳಿಕ ಮುಸ್ಲಿಂ ಸಮುದಾಯದರೊಬ್ಬರಿಗೆ ಸಚಿವ ಸ್ಥಾನ ನೀಡಲಾಗುವುದು. ಪ್ರಸ್ತುತ ಅದು ಅನಗತ್ಯ. 

ಬಿಜೆಪಿ ಕೋಮುವಾದದ ಪ್ರಯೋಗಾಲಯ ಎಂದು ಮುಖ್ಯಮಂತ್ರಿ ಪದೇ ಪದೇ ಕಿಚಾಯಿಸುತ್ತಾರಲ್ಲ?

ಜಾತಿ ವಿಷಬೀಜ ಬಿತ್ತುವ ಮೂಲಕ 24 ಯುವಕರ ಹತ್ಯೆಗೆ ಕಾರಣವಾಗಿರುವ ಮತ್ತು ಯಾವುದೋ ಸಮುದಾಯದ ಓಲೈಕೆಗಾಗಿ ಮಾಡುವ ಮುಖ್ಯಮಂತ್ರಿಗಳ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಇನ್ನು ಒಂಭತ್ತು ದಿನದಲ್ಲಿ ಅವರು ಮನೆಗೆ ಹೋಗಲಿದ್ದಾರೆ. ಆಗ ಗೊತ್ತಾಗುತ್ತದೆ ಕೋಮುವಾದಿ, ಜಾತಿವಾದಿ ಯಾರು ಎಂಬುದು. ಜಾತಿ ವಿಷ ಬೀಜ ಬಿತ್ತಿರುವ ಮುಖ್ಯಮಂತ್ರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ.

ದಲಿತರಿಗೆ ಬಿಜೆಪಿ ಅಗೌರವ ನೀಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ?

ದಲಿತ ಸಮುದಾಯಕ್ಕೆ ಅಪಮಾನ ಮಾಡಿದ್ದು ಬಿಜೆಪಿಯಲ್ಲ, ಕಾಂಗ್ರೆಸ್ ಪಕ್ಷ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನಿಧನರಾದ ವೇಳೆ ಶವಸಂಸ್ಕಾರಕ್ಕೆ ದೆಹಲಿಯಲ್ಲಿ ಜಾಗ ನೀಡಲಿಲ್ಲ. ಬಳಿಕ ಮುಂಬೈನಲ್ಲಿ ಮಾಡಬೇಕಾಯಿತು. ಅಂಬೇಡ್ಕರ್ ಅವರು ಸಹ ಕಾಂಗ್ರೆಸ್ ಜತೆಗೆ ಹೋದರೆ ಸುಟ್ಟು ಹೋಗುತ್ತೀರಿ ಎಂದು ಹೇಳಿದ್ದಾರೆ. ದಲಿತರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ.

ನಿಮ್ಮದೇ ಪಕ್ಷದ ಸಚಿವ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಿಸಿಬೇಕು ಎನ್ನುತ್ತಾರೆ. ಇದು ಅಂಬೇಡ್ಕರ್ ಮಾಡಿದ ಅವಮಾನವಲ್ಲವೇ?

ಅಂಬೇಡ್ಕರ್ ರಚನೆಯ ಸಂವಿಧಾನವನ್ನು ಜಗತ್ತು ಒಪ್ಪಿದೆ. ಸಮಯಕ್ಕೆ ತಕ್ಕಂತೆ ತಿದ್ದುಪಡಿ ಆಗಿರಬೇಕು. ಆದರೆ, ಅವರ ಸಂವಿಧಾನಕ್ಕೆ ಮಾನ್ಯತೆ ಇದೆ. ಅನಂತಕುಮಾರ್ ಹೆಗಡೆ ಈಗಾಗಲೇ ಈ ಹೇಳಿಕೆಗೆ ಸಂಸತ್‌ನಲ್ಲಿ ಕ್ಷಮೆ ಕೋರಿದ್ದಾರೆ. ಅಲ್ಲದೇ ಪ್ರಧಾನಿಯವರು ಸಹ ಎಚ್ಚರಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಅವರು ಹಿಂದೆ ೨೦೦೪ರಲ್ಲಿ  ಜೆಡಿಎಸ್‌ನಲ್ಲಿ ಇದ್ದಾಗ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸುವ ಪ್ರಯತ್ನ ನಡೆಸಿದ್ದರಂತೆ?

ಆ ವೇಳೆ ಸಿದ್ದರಾಮಯ್ಯಗೆ ನಾವು ಆಹ್ವಾನ ನೀಡಿರಲಿಲ್ಲ. ಅವರು ಬಂದಿದ್ದರೂ ಸೇರಿಸುತ್ತಿರಲಿಲ್ಲ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಯಾರು ಹೇಳಿದ್ದಾರೋ ಅವರನ್ನೇ ಕೇಳಿ.

loader