Asianet Suvarna News Asianet Suvarna News

ಬಿಜೆಪಿ ಬಗ್ಗೆ ಜನರ ಆಕ್ರೋಶವಿದೆ : ಎಂ. ಬೋರೇಗೌಡ

ಉದ್ಯಾನನಗರಿಯ ಐತಿಹಾಸಿಕ ಪರಂಪರೆಯುಳ್ಳ ಪ್ರಮುಖ ವಿಧಾನಸಭಾ ಕ್ಷೇತ್ರ ಬಸವನಗುಡಿ. ಇತ್ತೀಚೆಗೆ ಕಮಲ ಪಕ್ಷದ ಭದ್ರಕೋಟೆಯಾಗಿ ಬದಲಾಗಿರುವ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಎಂ.ಬೋರೇಗೌಡ ಕಾಂಗ್ರೆಸ್ ಅಭ್ಯರ್ಥಿ. ತಮ್ಮ ಪ್ರಚಾರ ಹಾಗೂ ಬಸವನಗುಡಿ ಅಭಿವೃದ್ಧಿಗೆ ಹೊಂದಿರುವ ಪರಿಕಲ್ಪನೆ ಬಗ್ಗೆ ಅವರು ಹೇಳಿದ್ದೇನು..?

Boregowda Congress MLA Candidate Basavanagudi Constituency

ಶ್ರೀಕಾಂತ್ ಎನ್.ಗೌಡಸಂದ್ರ

ಬೆಂಗಳೂರು :  ಉದ್ಯಾನನಗರಿಯ ಐತಿಹಾಸಿಕ ಪರಂಪರೆಯುಳ್ಳ ಪ್ರಮುಖ ವಿಧಾನಸಭಾ ಕ್ಷೇತ್ರ ಬಸವನಗುಡಿ. ಇತ್ತೀಚೆಗೆ ಕಮಲ ಪಕ್ಷದ ಭದ್ರಕೋಟೆಯಾಗಿ ಬದಲಾಗಿರುವ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಎಂ.ಬೋರೇಗೌಡ ಕಾಂಗ್ರೆಸ್ ಅಭ್ಯರ್ಥಿ. 30ಕ್ಕೂ ಹೆಚ್ಚು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಬೋರೇಗೌಡ ಬಸವನಗುಡಿ ಸಹಕಾರ ಸಂಘದ ಅಧ್ಯಕ್ಷರೂ ಹೌದು. ಸಹಕಾರ ಸಂಘದ ಮೂಲಕ ಕ್ಷೇತ್ರದಲ್ಲಿ ಹಿಡಿತ ಹೊಂದಿರುವ ಅವರು 2004ರಲ್ಲಿ ಕಾಂಗ್ರೆಸ್ ಕಳೆದುಕೊಂಡಿರುವ ಬಸವನಗುಡಿ ಕ್ಷೇತ್ರವನ್ನು  ಮತ್ತೆ ಧಕ್ಕಿಸಿಕೊಳ್ಳುವ ವಿಶ್ವಾಸದಲ್ಲಿ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ತಮ್ಮ ಪ್ರಚಾರ ಹಾಗೂ ಬಸವನಗುಡಿ ಅಭಿವೃದ್ಧಿಗೆ ಹೊಂದಿರುವ ಪರಿಕಲ್ಪನೆ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ್ದಾರೆ. 

ಬಸವನಗುಡಿಯಲ್ಲಿ ಪ್ರಚಾರ ಆರಂಭಿಸಿದ್ದೀರಿ. ಜನರ ಸ್ಪಂದನೆ ಹೇಗಿದೆ? 

ಕ್ಷೇತ್ರಾದ್ಯಂತ ಸಂಚಾರ ಮಾಡಿ ಪ್ರಚಾರ ಕಾರ್ಯ ಹಮ್ಮಿಕೊಳ್ಳುತ್ತಿದ್ದೇನೆ. ಕ್ಷೇತ್ರದ ಜನರೊಂದಿಗೆ ಉತ್ತಮ ಒಡನಾಟ ಹೊಂದಿರುವ ನನಗೆ ಪೂರಕ ವಾತಾವರಣ ತೋರಿ ಬರುತ್ತಿದೆ. ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಸಂತೃಪ್ತಿ ಇದೆ. ಹೀಗಾಗಿ ಜನ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ.

ಕಾಂಗ್ರೆಸ್ ಕಳೆಗುಂದಿರುವ ಕ್ಷೇತ್ರವಿದು. ನಿಜಕ್ಕೂ ಉತ್ತಮ ಸ್ಪಂದನೆ ಇದೆಯೇ?

ಕಾಂಗ್ರೆಸ್ ಸಂಘಟನೆ ಅತ್ಯುತ್ತಮವಾಗಿದೆ ಎಂದು ಹೇಳಲಾಗದು. ಬಿಜೆಪಿ ಸಾಂಪ್ರದಾಯಿಕ ಮತಗಳು ಹೆಚ್ಚಾಗಿವೆ. ಆದರೆ ಕ್ಷೇತ್ರದ ಶಾಸಕರು ಹಾಗೂ ಏಳೂ ವಾರ್ಡ್‌ನಲ್ಲಿರುವ ಬಿಜೆಪಿ ಸದಸ್ಯರ ಬಗ್ಗೆ ಜನರಿಗೆ ಆಕ್ರೋಶವಿದೆ. ಯಾವೊಬ್ಬ ಪಾಲಿಕೆ ಸದಸ್ಯರೂ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸುತ್ತಿಲ್ಲ. ಈ ವಿಚಾರ ಮುಂದಿಟ್ಟುಕೊಂಡು ಕ್ಷೇತ್ರದಲ್ಲಿ ಪಕ್ಷ ಸಂಘಟಿಸಿ ಗೆಲುವಿಗೆ ಯತ್ನಿಸುತ್ತಿದ್ದೇವೆ. ಈ ಬಾರಿ ಕಾಂಗ್ರೆಸ್ ಗೆಲ್ಲುವ ಎಲ್ಲಾ ಸಾಧ್ಯತೆಗೂ ಇವೆ.

ಬಿಜೆಪಿ ಸಾಂಪ್ರದಾಯಿಕ ಮತಗಳ ಕ್ಷೇತ್ರವಿದು. ನಿಮ್ಮ ಗೆಲುವು ನಿಜಕ್ಕೂ ಸಾಧ್ಯವೇ?

ಬಸವನಗುಡಿ ಸಹಕಾರ ಸಂಘದ ಅಧ್ಯಕ್ಷನಾಗಿ ಕಳೆದ ನಾಲ್ಕು ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಅದರಲ್ಲಿ ೧೧ ಸಾವಿರ ಮಂದಿ ಬ್ರಾಹ್ಮಣ ಮತದಾರರೇ ಇದ್ದಾರೆ. ಸ್ಥಳೀಯ ಶಾಸಕರ ಮೇಲೆ ಜನರಿಗೆ ಆಕ್ರೋಶವಿದೆ. ಕಳೆದ ಹತ್ತು ವರ್ಷದಲ್ಲಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಜಿಂಕೆ ಪಾರ್ಕ್ ಕ್ಷೇತ್ರಕ್ಕೆ ಕಾಂಗ್ರೆಸ್ ಆಡಳಿತವೇ ಎಲ್ಲಾ ಕೊಡುಗೆ ನೀಡಿದೆ. ಬಿಜೆಪಿ ಒಂದು ಕೆಳಸೇತುವೆಯೂ ನಿರ್ಮಾಣ ಮಾಡಿಲ್ಲ. ಹೀಗಾಗಿ ಕ್ಷೇತ್ರದ ನನ್ನ ಪರಿಕಲ್ಪನೆ ಮುಂದಿಟ್ಟು ಜನರ ಒಲವು ಗಳಿಸುತ್ತೇನೆ.

ಮಾದರಿ ಬಸವನಗುಡಿ ಅಭಿವೃದ್ಧಿಗೆ ನಿಮ್ಮ ಬಳಿಯಿರುವ ಪರಿಕಲ್ಪನೆ ಏನು?

ಬಸವನಗುಡಿಯಲ್ಲಿ ಕಳೆದ ಹತ್ತು ವರ್ಷದಿಂದ ಒಂದು ರಸ್ತೆಯೂ ಅಗಲೀಕರಣ ಆಗಿಲ್ಲ. ಆದರೆ, ವಾಹನಗಳ ಸಂಖ್ಯೆ ಮಾತ್ರ ದುಪ್ಪಟ್ಟಾಗಿದೆ. ಇದರ ಬಗ್ಗೆ ಯಾವುದೇ   ದೂರದೃಷ್ಟಿಯ ಯೋಜನೆಯನ್ನು ಶಾಸಕರು ಹೊಂದಿಲ್ಲ. ನಾವು ಸಂಚಾರ ದಟ್ಟಣೆ, ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಬೇಕು. ಕ್ಷೇತ್ರದಲ್ಲಿ ಸರ್ಕಾರಿ ಪಿಯು ಕಾಲೇಜು ನಿರ್ಮಾಣ ಮಾಡಬೇಕು. ಸೂಕ್ತ ಮಾರುಕಟ್ಟೆ ನಿರ್ಮಾಣ ಮಾಡಬೇಕು.  ಮಡಿವಾಳ ಸಮುದಾಯಕ್ಕಾಗಿ ಹೈಟೆಕ್ ದೋಬಿಘಾಟ್ ನಿರ್ಮಾಣ ಮಾಡಬೇಕು ಎಂದುಕೊಂಡಿದ್ದೇವೆ.

ನಿಮ್ಮ ಪಕ್ಷದಲ್ಲಿಯೇ ಹಲವರ ಬಂಡಾಯ ಇದೆಯಲ್ಲಾ?

ಪಕ್ಷದಲ್ಲಿ ಬಂಡಾಯ ಇರುವುದು ನಿಜ. ಬಂಡಾಯ ಅಭ್ಯರ್ಥಿಯನ್ನು ಪಕ್ಷ ವಜಾಗೊಳಿಸಿದೆ. ಅವರ ಉಚ್ಛಾಟನೆಯಿಂದ ಯಾವುದೇ ನಷ್ಟ ಉಂಟಾಗಿಲ್ಲ. ಬಂಡಾಯ ಅಭ್ಯರ್ಥಿ ಪರ ವಕಾಲತ್ತು ವಹಿಸಿ ರಾಜೀನಾಮೆ ನೀಡಿದ್ದವರೆಲ್ಲಾ ನಮ್ಮೊಂದಿಗೆ ಮತ್ತೆ ಕೆಲಸ ಮಾಡುತ್ತಿದ್ದಾರೆ. ಗೆಲುವು ನನ್ನ ಗುರಿ. ಹೀಗಾಗಿ ಕ್ಷೇತ್ರಾದ್ಯಂತ ಸೂಕ್ತ ಪ್ರಚಾರ ನಡೆಸಿ ಗೆಲ್ಲುತ್ತೇನೆ.

Follow Us:
Download App:
  • android
  • ios