ಹರಿಹರ ಶಾಸಕ ರಾಮಪ್ಪಗೆ ಬಿಜೆಪಿ ಗಾಳ

BJP Plan To Trap Harihar Congress Leader Ramappa
Highlights

ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಸುಪ್ರೀಂ ಕೋರ್ಟ್ 24 ಗಂಟೆ ಕಾಲಾವಕಾಶ ನೀಡಿದ ಬೆನ್ನಲ್ಲೇ ಹರಿಹರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್. ರಾಮಪ್ಪಗೆ ಗಾಳ ಹಾಕಲು ಬಿಜೆಪಿ ತೆರೆಮರೆಯಲ್ಲೇ ಇನ್ನಿಲ್ಲದ ಪ್ರಯತ್ನ ನಡೆಸಿದೆ ಎನ್ನಲಾಗಿದೆ. 
 

ದಾವಣಗೆರೆ (ಮೇ 19) : ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಸುಪ್ರೀಂ ಕೋರ್ಟ್ 24 ಗಂಟೆ ಕಾಲಾವಕಾಶ ನೀಡಿದ ಬೆನ್ನಲ್ಲೇ ಹರಿಹರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್. ರಾಮಪ್ಪಗೆ ಗಾಳ ಹಾಕಲು ಬಿಜೆಪಿ ತೆರೆಮರೆಯಲ್ಲೇ ಇನ್ನಿಲ್ಲದ ಪ್ರಯತ್ನ ನಡೆಸಿದೆ ಎನ್ನಲಾಗಿದೆ. 

ಈ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿರುವ ರಾಮಪ್ಪ, ಹರಿಹರದ ಜನತೆ, ಕಾಂಗ್ರೆಸ್ ಪಕ್ಷಕ್ಕೆ ನಾನು ನಿಷ್ಠನಾಗಿದ್ದು, ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರುವ ಆಲೋಚನೆ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. 

ರಾಮಪ್ಪ ಅವರನ್ನು ಸೆಳೆಯುವ ಹೊಣೆಯನ್ನು ಮಾಜಿ ಶಾಸಕ ಬಿ.ಪಿ. ಹರೀಶ್, ಜಗಳೂರು ಶಾಸಕ ಎಸ್.ವಿ. ರಾಮಚಂದ್ರಗೆ ಅವರಿಗೆ ಬಿಜೆಪಿ ವಹಿಸಿದೆ. ಅಲ್ಲದೇ, ಬಿಜೆಪಿಯ ಜಿಲ್ಲಾ ಮುಖಂಡರು, ಸ್ಥಳೀಯ ಮುಖಂಡರು, ರಾಮಪ್ಪ ಆಪ್ತರು, ಬಂಧುಗಳ ಮೂಲಕವೂ ಬಿಜೆಪಿಗೆ ಸೇರುವಂತೆ ಒತ್ತಡ ಹೇರುವ ಇನ್ನಿಲ್ಲದ ಸಾಹಸವನ್ನು ಮುಂದುವರಿಸಿದೆ ಎಂದು ಹೇಳಲಾಗಿದೆ. 

ಬಿಜೆಪಿ ನಾಯಕರು ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರ ಮೇಲೆ ಕಣ್ಣಿಟ್ಟಿದ್ದರು ಎನ್ನಲಾಗಿದೆ. ಹಿರಿಯ ಕಾಂಗ್ರೆಸ್ಸಿಗ ಡಾ.ಶಾಮನೂರು  ಶಿವಶಂಕರಪ್ಪ ಕಾಂಗ್ರೆಸ್ ತೊರೆಯುವ ಪ್ರಶ್ನೆಯೇ ಇಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಶಾಸಕ ಎಸ್.ರಾಮಪ್ಪಗೆ ಕರೆ ಮಾಡಿ, ಬಿಜೆಪಿಗೆ ಸೇರುವಂತೆ ಆಹ್ವಾನಿಸಿದ್ದಾರೆ. ಆದರೆ, ಕೇಸರಿ ಪಡೆಯ ಆಹ್ವಾನವನ್ನು ರಾಮಪ್ಪ ತಿರಸ್ಕರಿಸಿದ್ದಾರೆ.

loader