ಜನಾರ್ದನ ರೆಡ್ಡಿಯಿಂದ ಅಂತರ ಕಾಯ್ದುಕೊಂಡ ಬಿಜೆಪಿ

BJP Maintain Space With Mining king Janardhan Reddy
Highlights

ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಬಿಜೆಪಿ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದು,  ಜಾಗರೂಕತೆಯಿಂದ ನಿಭಾಯಿಸಲು ಮುಂದಾಗಿದೆ. ಈ ಕಾರಣಕ್ಕಾಗಿಯೇ ಎರಡು ವಿಧಾನಸಭಾ ಕ್ಷೇತ್ರಗಳಿಂದ ಕಣಕ್ಕಿಳಿದಿರುವ ಸಂಸದ ಬಿ.ಶ್ರೀರಾಮುಲು ಅವರ ಆಪ್ತ ಮಿತ್ರ ಎಂಬ ಕಾರಣಕ್ಕಾಗಿ ಜನಾರ್ದನರೆಡ್ಡಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರಬಹುದು ಎನ್ನುವ ಮೂಲಕ ರೆಡ್ಡಿ ವಿವಾದದಿಂದ ಅಂತರ ಕಾಪಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ಬೆಂಗಳೂರು : ಗಣಿಧಣಿಯಾಗಿದ್ದ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಬಿಜೆಪಿ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ಅವರನ್ನು ಜಾಗರೂಕತೆಯಿಂದ ನಿಭಾಯಿಸಲು ಮುಂದಾಗಿದೆ. ಈ ಕಾರಣಕ್ಕಾಗಿಯೇ ಎರಡು ವಿಧಾನಸಭಾ ಕ್ಷೇತ್ರಗಳಿಂದ ಕಣಕ್ಕಿಳಿದಿರುವ ಸಂಸದ ಬಿ.ಶ್ರೀರಾಮುಲು ಅವರ ಆಪ್ತ ಮಿತ್ರ ಎಂಬ ಕಾರಣಕ್ಕಾಗಿ ಜನಾರ್ದನರೆಡ್ಡಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರಬಹುದು ಎನ್ನುವ ಮೂಲಕ ಪಕ್ಷದ ರಾಷ್ಟ್ರೀಯ ನಾಯಕರು ರೆಡ್ಡಿ ವಿವಾದದಿಂದ ಅಂತರ ಕಾಪಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ಇದೇ ವೇಳೆ ರಾಜ್ಯ ನಾಯಕರು ಮಾತ್ರ ರೆಡ್ಡಿ ಅವರನ್ನು ಅತ್ಯಂತ ಆತ್ಮೀಯವಾಗಿಯೇ ಒಳಗೊಂಡು ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಪಕ್ಷದ ಪ್ರಮುಖ ತೀರ್ಮಾನಗಳಲ್ಲಿ ಅವರ ಸಲಹೆ- ಅಭಿಪ್ರಾಯಗಳನ್ನು ಗಂಭೀರವಾಗಿಯೇ ಸ್ವೀಕರಿಸುತ್ತಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಇದೀಗ ಜನಾರ್ದನರೆಡ್ಡಿ ಅವರನ್ನೇ ಮುಂದಿಟ್ಟುಕೊಂಡು ತಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡುತ್ತಿರುವುದು ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿದೆ. 
ಹಲವು ಕಾರಣಕ್ಕಾಗಿ ರೆಡ್ಡಿ ಅವರನ್ನು ಸಂಪೂರ್ಣವಾಗಿ ಹೊರಗಿಟ್ಟು ಚುನಾವಣೆ ನಡೆಸುವ ಸ್ಥಿತಿಯಲ್ಲಿ ಬಿಜೆಪಿ ನಾಯಕರು ಇಲ್ಲ. ಹಾಗಂತ ಅವರನ್ನು ಪಕ್ಷದ ವೇದಿಕೆಗಳಲ್ಲಿ ರಾಜಾರೋಷವಾಗಿ ಜತೆಯಲ್ಲಿ ಇರಿಸಿಕೊಳ್ಳಲೂ ಆಗುತ್ತಿಲ್ಲ. ಒಟ್ಟಿನಲ್ಲಿ ತೆರೆಮರೆಯಲ್ಲಿ ಜನಾರ್ದನ ರೆಡ್ಡಿ ಅವರು ಪ್ರಸಕ್ತ ಚುನಾವಣೆಯ ಪಕ್ಷದ ಬೆಳವಣಿಗೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. 
ಸದ್ಯ ಜನಾರ್ದನ ರೆಡ್ಡಿ ಅವರು ಶ್ರೀರಾಮುಲು ಸ್ಪರ್ಧಿಸುತ್ತಿರುವ ಮೊಳಕಾಲ್ಮೂರು, ಬಾದಾಮಿ ಹಾಗೂ ಅವರ ಸಮೀಪದ ಸಂಬಂಧಿ ಲಲ್ಲೇಶ್ ರೆಡ್ಡಿ ಸ್ಪರ್ಧಿಸಿರುವ ಬೆಂಗಳೂರಿನ ಬಿಟಿಎಂ ಲೇಔಟ್ ಕ್ಷೇತ್ರದ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನಲ್ಲಿ ಖುದ್ದು ರೆಡ್ಡಿ ಮನೆಯನ್ನೇ ಮಾಡುವ ಮೂಲಕ ಆ ಕ್ಷೇತ್ರದ ಉಸ್ತುವಾರಿಯನ್ನೇ ಹೊತ್ತಿದ್ದಾರೆ.
ಬಾದಾಮಿಯಲ್ಲಿ ರೆಡ್ಡಿ ಅವರು ಸಕ್ರಿಯ ಪ್ರಚಾರ ಕೈಗೊಳ್ಳುವ ಬಗ್ಗೆ ಅನುಮಾನಗಳಿದ್ದು, ಅಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾಂಗ್ರೆಸ್  ಅಭ್ಯರ್ಥಿಯಾಗಿರುವುದಿರಿಂದ  ವಿನಾಕಾರಣ ಆರೋಪ- ಪ್ರತ್ಯಾರೋಪಗಳಿಗೆ ಕಾರಣ ವಾಗಬಹುದು ಎಂಬ ಆತಂಕವಿದೆ.

ಇನ್ನು ಬಳ್ಳಾರಿ ಜಿಲ್ಲೆಗೆ ಕಾಲಿಡುವಂತೆ ಇಲ್ಲವಾಗಿರುವು ದರಿಂದ ಮೊಳಕಾಲ್ಮೂರಿನಲ್ಲೇ ಕುಳಿತು ಬಳ್ಳಾರಿ ಬಿಜೆಪಿಯ ಪ್ರಚಾರ ಮತ್ತು ತಂತ್ರಗಾರಿಕೆ ನಿರ್ಧರಿಸಲಿದ್ದಾರೆ ಎನ್ನಲಾಗಿದೆ. ಆದರೆ, ಒಂದಂತೂ ಸ್ಪಷ್ಟ. ಚುನಾವಣೆ ಮುಗಿಯುವವರೆಗೆ ರಾಷ್ಟ್ರೀಯ ನಾಯಕರು ಜನಾರ್ದನ ರೆಡ್ಡಿ ಅವರೊಂದಿಗೆ ಬಹಿರಂಗವಾಗಿ ಗುರುತಿಸಿಕೊಳ್ಳುವುದಾಗಲಿ ಅಥವಾ ವೇದಿಕೆ ಹಂಚಿಕೊಳ್ಳುವುದಾಗಲಿ ತೀರಾ ಕಡಮೆ. ಅಷ್ಟರ ಮಟ್ಟಿಗೆ ಅಂತರ ಕಾಪಾಡಿಕೊಳ್ಳುತ್ತಾರೆ ಎನ್ನಲಾಗುತ್ತಿದೆ.

loader