ಬೆಂಗಳೂರು : ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದು ಶೇ.100ಕ್ಕೆ ನೂರರಷ್ಟು ಖಚಿತವಾಗಿದ್ದು ನಾನು ಮೇ18ರಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ನಾನೇ ಪ್ರಮಾಣ ವಚನ ಸ್ವೀಕರಿಸಲಿದ್ದೇನೆ. ಅದಾಗಿ 24 ಗಂಟೆಗಳೊಳಗೆ ಸಿದ್ದರಾಮಯ್ಯನನ್ನು ಎಲ್ಲಿಗೆ ಕಳುಹಿಸಬೇಕೋ ಅಲ್ಲಿಗೆ ಕಳುಹಿಸುತ್ತೇನೆ ಎಂದು ಗುಡುಗಿದ್ದಾರೆ.
ಗದಗ, ಕುಂದಗೋಳ, ನರಗುಂದಗಳಲ್ಲಿ ಶನಿವಾರ ನಡೆದ ಬಿಜೆಪಿ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದು ಆಡಳಿತಾವಧಿಯಲ್ಲಿ ಮಾಡಿದ ಎಲ್ಲ ಹಗರಣಗಳನ್ನು ಬಯಲಿಗೆಳೆದು ಜೈಲಿಗೆ ಕಳಿಸದೆ ಇದ್ದರೆ ನಾನು ಯಡಿಯೂರಪ್ಪನೇ ಅಲ್ಲ. ಅನ್ನಭಾಗ್ಯದ ಯೋಜನೆಯಲ್ಲಿ ನಡೆಯುತ್ತಿರುವ ಕಾಳಸಂತೆ ಯನ್ನೂ ಪತ್ತೆ ಮಾಡಿ ಕಳ್ಳರನ್ನು ಪತ್ತೆ ಹಚ್ಚಿ ಜೈಲಿಗೆ ಕಳಿಸುತ್ತೇನೆ ಎಂದರು. ಬಿಜೆಪಿಯ 150 ಅಭ್ಯರ್ಥಿಗಳು ಗೆದ್ದು ಸರ್ಕಾರ ರಚನೆ ಮಾಡುವುದು ಸೂರ್ಯಚಂದ್ರರಷ್ಟೇ ಸತ್ಯ.
ಬರುವ ಮೇ 18 ಅಥವಾ 19ಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರಧಾನಿ ಮೋದಿ ಸಮ್ಮುಖದಲ್ಲಿ ನಾನು ಕರ್ನಾಟಕದ ಪ್ರಮಾಣ ವಚನ ಸ್ವೀಕಾರ ಮಾಡುತ್ತೇನೆ ಎಂದರು.

ರಾಹುಲ್ ಚಿಕ್ಕಪ್ಪನ ಮಗನಾ?: ಮೋದಿ,ಯೋಗಿಯನ್ನು ಹೊರಗಿನವರು ಎಂದು ಆರೋಪಿಸಿದ್ದ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡ ಯಡಿಯೂರಪ್ಪ ಅವರು, ‘ಸಿದ್ದರಾಮಯ್ಯ ಅವರೇ ರಾಹುಲ್ ಗಾಂಧಿ ನಿಮ್ಮ ಚಿಕ್ಕಪ್ಪನ ಮಗನಾ? ಸೋನಿಯಾ ಗಾಂಧಿ ನಿಮ್ಮ ಚಿಕ್ಕಮ್ಮನಾ’ ಎಂದು ಪ್ರಶ್ನಿಸಿದರು.