Asianet Suvarna News Asianet Suvarna News

ಬಿಜೆಪಿಯಿಂದ ಶಾಸಕ ಆನಂದ್ ಸಿಂಗ್ ಅಪಹರಣ : ಸಿದ್ದರಾಮಯ್ಯ

ಅನೈತಿಕವಾಗಿ ಅಧಿಕಾರ ಪಡೆಯಲು ಪ್ರಯತ್ನಿಸುತ್ತಿರುವ ಬಿಜೆಪಿ ನಾಯಕರು ಕಾಂಗ್ರೆಸ್‌ನ ಶಾಸಕ ಆನಂದ್ ಸಿಂಗ್ ಅವರನ್ನು ಅಪಹರಿಸಿ, ವಶದಲ್ಲಿಟ್ಟುಕೊಂಡಿದ್ದಾರೆ. ಕಾಂಗ್ರೆಸ್-ಜೆಡಿಎಸ್‌ನ ಶಾಸಕರಿಗೆ ವ್ಯಾಪಕ ಆಮಿಷ ಒಡ್ಡಲಾಗುತ್ತಿದ್ದು, ಒಪ್ಪದಿದ್ದವರನ್ನು ಬೆದರಿಸಲು ಸಂವಿಧಾನಾತ್ಮಕ ಸಂಸ್ಥೆಗಳ ಬಳಕೆ ಮಾಡಲಾಗುತ್ತಿದೆ  ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

BJP Kidnap Anand Song Says Siddaramaiah

ಬೆಂಗಳೂರು : ಅನೈತಿಕವಾಗಿ ಅಧಿಕಾರ ಪಡೆಯಲು ಪ್ರಯತ್ನಿಸುತ್ತಿರುವ ಬಿಜೆಪಿ ನಾಯಕರು ಕಾಂಗ್ರೆಸ್‌ನ ಶಾಸಕ ಆನಂದ್ ಸಿಂಗ್ ಅವರನ್ನು ಅಪಹರಿಸಿ, ವಶದಲ್ಲಿಟ್ಟುಕೊಂಡಿದ್ದಾರೆ. ಕಾಂಗ್ರೆಸ್-ಜೆಡಿಎಸ್‌ನ ಶಾಸಕರಿಗೆ ವ್ಯಾಪಕ ಆಮಿಷ ಒಡ್ಡಲಾಗುತ್ತಿದ್ದು, ಒಪ್ಪದಿದ್ದವರನ್ನು ಬೆದರಿಸಲು ಸಂವಿಧಾನಾತ್ಮಕ ಸಂಸ್ಥೆಗಳ ಬಳಕೆ ಮಾಡಲಾಗುತ್ತಿದೆ. 

ಇದರ ಬಗ್ಗೆ ನಮ್ಮ ಬಳಿ ಎಲ್ಲಾ ರೀತಿಯ ಸಾಕ್ಷ್ಯಾಧಾರ ಗಳಿದ್ದು, ಸೂಕ್ತ ಕಾಲದಲ್ಲಿ ಬಹಿರಂಗಪಡಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಬಹುಮತ ಸಾಬೀತಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ರಾಜ್ಯಪಾಲರು ನೀಡಿದ್ದ 15 ದಿನಗಳ ಕಾಲಾವಕಾಶವನ್ನು ಶುಕ್ರವಾರ ರದ್ದುಪಡಿಸಿದ ಸುಪ್ರೀಂಕೋರ್ಟ್ ಶನಿವಾರ ಸಂಜೆ 4 ಗಂಟೆಗೆ ಬಹುಮತ ಸಾಬೀತುಪಡಿಸುವಂತೆ ಆದೇಶಿಸಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕರಾದ ಗುಲಾಮ್ ನಬಿ ಆಜಾದ್, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. 

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಸರ್ಕಾರ ರಚನೆಗೆ ಅಗತ್ಯ ಸಂಖ್ಯಾಬಲ ಹೊಂದಿಲ್ಲದಿದ್ದರೂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಯಡಿಯೂರಪ್ಪ ಈಗ ಬಹುಮತ ಸಾಬೀತು ಪಡಿಸಲು ವಾಮಮಾರ್ಗ ಅನುಸರಿಸುತ್ತಿದ್ದಾರೆ. ಜನಾರ್ದನರೆಡ್ಡಿ, ಶ್ರೀರಾಮುಲು ಸೇರಿದಂತೆ ಹಲವರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ದೂರವಾಣಿ ಕರೆ ಮಾಡಿ ಹಲವು ರೀತಿಯ ಆಮಿಷಗಳನ್ನು ಒಡ್ಡುತ್ತಿದ್ದಾರೆ.

ಅವರು ಕಾಂಗ್ರೆಸ್‌ನ ಯಾವ್ಯಾವ ಶಾಸಕರಿಗೆ ಏನೇನು  ಆಮಿಷ ಒಡ್ಡಿದ್ದಾರೆ, ಏನೇನೆಲ್ಲಾ ಮಾತನಾಡಿದ್ದಾರೆ ಎಂಬುದರ ಧ್ವನಿ ಮುದ್ರಣ ನಮ್ಮ ಬಳಿ ಇದೆ. ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇವೆ ಎಂದರು. ಶಾಸಕರಾದ ಆನಂದ್ ಸಿಂಗ್ ಮತ್ತು ಪ್ರತಾಪ್‌ಗೌಡ ಪಾಟೀಲ್ ಕಾಣೆಯಾಗಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಮೊದಲು ಆನಂದ್‌ಸಿಂಗ್ ಅವರನ್ನು ಅಪಹರಿಸಲಾಗಿದೆ. ಅವರೀಗ ಕೇಂದ್ರದ ವಶದಲ್ಲಿದ್ದಾರೆ. 

ಏನೇ ಮಾಡಿದರೂ ಬಿಜೆಪಿಯವರ ಜತೆ ಅವರು ಹೋಗುವುದಿಲ್ಲ. ನಮ್ಮ ಜತೆಯೇ ಬರುತ್ತಾರೆ. ಇನ್ನು ಶಾಸಕ ಪ್ರತಾಪ್‌ಗೌಡ ಪಾಟೀಲ್ ಪೂನಾದಲ್ಲಿದ್ದು, ನಮ್ಮ ಸಂಪರ್ಕದಲ್ಲಿದ್ದಾರೆ. ಮೇ 16 ರಂದು  ರಾಜ್ಯಪಾಲರಿಗೆ ಸಲ್ಲಿಸಿರುವ ಕಾಂಗ್ರೆಸ್ ಶಾಸಕರ ಪಟ್ಟಿಯಲ್ಲಿ ಅವರು ಸಹಿ ಹಾಕಿದ್ದಾರೆ ಎಂದರು. ಬಿಜೆಪಿಯವರು ಅನ್ಯ ಪಕ್ಷದ ಶಾಸಕರ ಅಪಹರಿಸುವುದು, ಆಮಿಷಗಳನ್ನು ಒಡ್ಡುವುದು ಇದೇ ಮೊದಲಲ್ಲ. 

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎಲ್ಲ ಕಡೆಯೂ ಇದನ್ನೇ ಮಾಡಿಕೊಂಡು ಬಂದಿದ್ದಾರೆ. ಅವರಿಗೆ ಕಾನೂನು, ಸಂವಿಧಾನದ ಬಗ್ಗೆ ಕಿಂಚಿತ್ತೂ ಗೊತ್ತಿಲ್ಲ. ಆದರೆ, ಕರ್ನಾಟಕದಲ್ಲಿ ಅವರ ಆಟ ಏನೂ ನಡೆಯಲಿಲ್ಲ. ನಡೆಯಲು ಬಿಡುವುದೂ ಇಲ್ಲ ಎಂದು ಅವರು ಹೇಳಿದರು.

Follow Us:
Download App:
  • android
  • ios