50 ಸಾವಿರಕ್ಕೂ ಹೆಚ್ಚಿನ ರೈತರ ಕೃಷಿ ಸಾಲ ಮನ್ನಾ

BJP Give Promis To Many People
Highlights

ಸಹಕಾರ ಬ್ಯಾಂಕ್‌ಗಳಲ್ಲಿರುವ ರೈತರ 50 ಸಾವಿರ ರು.ಗಿಂತ ಹೆಚ್ಚು ಕೃಷಿ ಸಾಲಮನ್ನಾ ಮಾಡುವ ಜೊತೆಗೆ ಪಂಜಾಬ್‌, ಉತ್ತರಪ್ರದೇಶ ಮಾದರಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲಮನ್ನಾ ಮಾಡುವ ಕುರಿತು ಇನ್ನೆರಡು ದಿನಗಳಲ್ಲಿ ಸ್ಪಷ್ಟನಿರ್ಧಾರ ಪ್ರಕಟಿಸುತ್ತೇವೆ ಎಂದು  ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಬೀದರ್‌ :  ಸಹಕಾರ ಬ್ಯಾಂಕ್‌ಗಳಲ್ಲಿರುವ ರೈತರ 50 ಸಾವಿರ ರು.ಗಿಂತ ಹೆಚ್ಚು ಕೃಷಿ ಸಾಲಮನ್ನಾ ಮಾಡುವ ಜೊತೆಗೆ ಪಂಜಾಬ್‌, ಉತ್ತರಪ್ರದೇಶ ಮಾದರಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲಮನ್ನಾ ಮಾಡುವ ಕುರಿತು ಇನ್ನೆರಡು ದಿನಗಳಲ್ಲಿ ಸ್ಪಷ್ಟನಿರ್ಧಾರ ಪ್ರಕಟಿಸುತ್ತೇವೆ. ಜೊತೆಗೆ ಭಾಗ್ಯಲಕ್ಷ್ಮೇ ಹಾಗೂ ತಾಳಿಭಾಗ್ಯ ಮೊತ್ತವನ್ನು ಹೆಚ್ಚಿಸಲು ನಿರ್ಧರಿಸಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಬೀದರ್‌ನ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಬಿಜೆಪಿ ಕಾರ್ಯಕರ್ತರ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಅಧಿಕಾರಾವಧಿಯಲ್ಲಿ ಜಾರಿಗೆ ತಂದ ಭಾಗ್ಯಲಕ್ಷ್ಮಿ ಬಾಂಡ್‌ಗೆ 1.25 ಲಕ್ಷ ರು. ನೀಡಲಾಗುತ್ತಿದೆ. ತಾಯಂದಿರ ಬೇಡಿಕೆಯಂತೆ ಅದನ್ನು ಮತ್ತಷ್ಟುಹೆಚ್ಚಿಸುತ್ತೇವೆ. ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ತಾಳಿ ಭಾಗ್ಯ ಯೋಜನೆಯನ್ನು ಎಲ್ಲ ವರ್ಗಗಳಿಗೂ ವಿಸ್ತರಿಸಿ, ಸದ್ಯ ನೀಡುತ್ತಿರುವ 2 ಗ್ರಾಂ ತಾಳಿಯನ್ನು 3ರಿಂದ 4 ಗ್ರಾಂಗೆ ಹೆಚ್ಚಿಸುವ ಬಗ್ಗೆ ನಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿ, ಬಡವರು ಗೌರವದಿಂದ ಮದುವೆಯಾಗುವಂತೆ ನೋಡುಕೊಳ್ಳುತ್ತೇವೆ ಎಂದರು.

ಹಿಂದುಳಿದ ವರ್ಗಗಳ ಜನರ ಅಭಿವೃದ್ಧಿಗೆ ಹೆಚ್ಚು ಅನುದಾನ ಕಲ್ಪಿಸಿಕೊಡುವುದು ನಮ್ಮ ಜವಾಬ್ದಾರಿ. ಕಾಂಗ್ರೆಸ್‌ ಸರ್ಕಾರ ಮನ್ನಾ ಮಾಡಿರುವ ಸಹಕಾರ ಬ್ಯಾಂಕ್‌ ಸಾಲ ಇನ್ನೂ ತೀರಿಲ್ಲ ಎಂದು ಅವರು ತರಾಟೆಗೆ ತೆಗೆದುಕೊಂಡರು. ಕೃಷ್ಣಾ ಮೇಲ್ದಂಡೆ ಯೋಜನೆಗೆ 10 ಸಾವಿರ ಕೋಟಿ ರು. ಅನುದಾನ ಮೀಸಲಿಡುತ್ತೇನೆ ಎಂದು ಹೇಳಿದ್ದ ಸಿದ್ದರಾಮಯ್ಯ ಅವರು 5 ವರ್ಷಕ್ಕೆ 50 ಸಾವಿರ ಕೋಟಿ ರು. ಖರ್ಚು ಮಾಡಬೇಕಿತ್ತು ಆದರೆ, ಕೇವಲ 650 ಕೋಟಿ ರು. ಖರ್ಚು ಮಾಡಿದ್ದಾರೆ. ಅವರಿಗೆ ನಾಚಿಕೆ ಆಗಬೇಕು ನಾವು ಅಧಿಕಾರಕ್ಕೆ ಬಂದರೆ ಕೃಷ್ಣಾ ಮೇಲ್ದಂಡೆ ಅಣೆಕಟ್ಟನ್ನು 519 ಮೀಟರ್‌ನಿಂದ 524 ಮೀಟರ್‌ಗೆ ಹೆಚ್ಚಿಸಿ ಪುನರ್ವಸತಿ ಕಲ್ಪಿಸಲು ಅಗತ್ಯ ಅನುದಾನ ನೀಡುತ್ತೇವೆ. ಕೃಷಿಗೆ 1 ಲಕ್ಷ ಕೋಟಿ ರು.ಗೂ ಹೆಚ್ಚು ಅನುದಾನ ಮೀಸಲಿಡುತ್ತೇವೆ ಎಂದರು.

13 ದಿನ ಮಾತ್ರ ಕಾಂಗ್ರೆಸ್‌ ಸರ್ಕಾರ:  ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಖಜಾನೆ ಹಣವನ್ನು ಕೊಳ್ಳೆ ಹೊಡೆದಿದೆ. ಈ ಸರ್ಕಾರ ಕೇವಲ ಇನ್ನು 13 ದಿನಗಳ ಕಾಲ ಮಾತ್ರ ಅಧಿಕಾರದಲ್ಲಿರುತ್ತದೆ ಎಂದ ಅವರು, ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿನ ಭೀತಿಯಿಂದ ಬಾದಾಮಿಯಿಂದ ಸ್ಪರ್ಧಿಸಿದ್ದಾರೆ. ಅಲ್ಲೂ ಅವರು ಸೋಲುವುದು ಖಚಿತ. ಅಲ್ಲಿ ನಮ್ಮ ಅಭ್ಯರ್ಥಿ ಶ್ರೀರಾಮುಲು ಗೆಲುವು ಖಚಿತ. ಇದರಲ್ಲಿ ಸಂದೇಹವೇ ಇಲ್ಲ. ಎರಡೂ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಸೋಲುತ್ತಾರೆ ಎಂದರು.

ಕಾಂಗ್ರೆಸ್‌ ನಾಯಕರಾದ ಸಿಎಂ ಸಿದ್ದರಾಮಯ್ಯ, ವೀರಪ್ಪ ಮೊಯ್ಲಿ, ಸಂಸದ ಮಲ್ಲಿಕಾರ್ಜುನ್‌ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರು ನಾಲ್ಕು ದಿಕ್ಕುಗಳಾಗಿದ್ದಾರೆ. ಅವರು ಒಂದಾಗುವುದು ಸಾಧ್ಯವೇ ಇಲ್ಲ. ಸಿದ್ದರಾಮಯ್ಯ ಅವರಿಗೆ 2 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ಕೊಟ್ಟಂತೆ ನನಗೇಕಿಲ್ಲ ಎಂದು ಪರಮೇಶ್ವರ್‌ ಅವರು ಪ್ರಶ್ನಿಸುತ್ತಿದ್ದಾರೆ ಎಂದರು.

loader