‘ಚಿನ್ನದ ನಾಡು’ ಕೋಲಾರದ ಆರು ಕ್ಷೇತ್ರಗಳಲ್ಲಿ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಕಂಡುಬರುತ್ತಿದೆಯಾದರೂ, ಬಹುತೇಕ ನೇರ ಹಣಾಹಣಿ ಇರುವುದು ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ. ಸಚಿವ ರಮೇಶ್ ಕುಮಾರ್ ಹಾಗೂ ಸಂಸದ ಕೆ.ಎಚ್. ಮುನಿಯಪ್ಪ ಅವರ ಪುತ್ರಿ ಈ ಜಿಲ್ಲೆಯಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಇಬ್ಬರಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಜೆ. ಸತ್ಯರಾಜ್

ಕೋಲಾರ :  ಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಇದೆ. ಆದರೆ, ಪ್ರಬಲ ಪೈಪೋಟಿ ಇರುವುದು ‘ನಮ್ಮ ಕಾಂಗ್ರೆಸ್’ನ ವರ್ತೂರು ಪ್ರಕಾಶ್ ಮತ್ತು ಜೆಡಿಎಸ್‌ನ ಶ್ರೀನಿವಾಸಗೌಡರ ನಡುವೆ. ಹಾಲಿ ಶಾಸಕ ವರ್ತೂರು ಪ್ರಕಾಶ್ ಹ್ಯಾಟ್ರಿಕ್ ಗೆಲುವಿಗಾಗಿ ಪ್ರಯಾಸ ಪಡುತ್ತಿದ್ದಾರೆ. ಕಳೆದೆ ರಡು ಬಾರಿ ಕಾಂಗ್ರೆಸ್ ಸಂಸದ ಕೆ.ಎಚ್. ಮುನಿಯಪ್ಪ ಸಹಕಾರ ದೊಂದಿಗೆ ಗೆದ್ದಿದ್ದ ಅವರಿಗೆ ಈ ಬಾರಿ ಪರಿಸ್ಥಿತಿ ಹಿಂದಿನಂತಿಲ್ಲ.  ವರ್ತೂರು ಗೆಲುವಿಗೆ ಬ್ರೇಕ್ ಹಾಕಲು ಮಾಜಿ ಸಚಿವ ಕೆ.ಶ್ರೀನಿವಾಸ 
ಗೌಡರು ಈ ಬಾರಿ ಭರ್ಜರಿ ತಯಾರಿ ನಡೆಸಿದ್ದಾರೆ. ಗೆದ್ದೇ ಬಿಟ್ಟಿದ್ದೇನೆ ಎಂಬ ಭಾವನೆ ಅವರಲ್ಲಿ ಕಾಣುತ್ತಿದೆ. ಕೊನೆ ಕ್ಷಣದಲ್ಲಿ ಎಚ್ಚರ ತಪ್ಪಿದರೆ ವರ್ತೂರು ಅವರು ಗೆಲ್ಲುವನ್ನು ತಮ್ಮದಾಗಿಸುವುದಂತೂ ಗ್ಯಾರಂಟಿ. ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಜಮೀರ್ ಪಾಷಾಗೆ ಚುನಾವಣೆ ಹೊಸದು. ಬಿಜೆಪಿಯಿಂದ ಓಂ ಶಕ್ತಿಚಲಪತಿ ಕಣದಲ್ಲಿ ದ್ದಾರೆ. ಆದರೆ ಬಿಜೆಪಿ ಸಂಘಟನೆ ಪ್ರಬಲವಾಗಿಲ್ಲ. ಪಕ್ಷೇತರ ಅಭ್ಯ ರ್ಥಿಯಾಗಿ ಡಿ.ಕೆ. ರವಿ ಅವರ ತಾಯಿ ಗೌರಮ್ಮ ಸ್ಪರ್ಧಿಸಿದ್ದಾರೆ.


ಮಾಲೂರು :  ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಇದೆ. ಆದರೆ ಹೆಚ್ಚು ಪೈಪೋಟಿ ಕಂಡುಬರುತ್ತಿರುವುದು ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ. ಜೆಡಿಎಸ್‌ನ ಹಾಲಿ ಶಾಸಕ ಕೆ.ಎಸ್. ಮಂಜುನಾಥಗೌಡ ಪುನರಾಯ್ಕೆಗೆ ಕಸರತ್ತು ನಡೆಸುತ್ತಿದ್ದಾರೆ. ಈಗಾ ಗಲೇ ಸಾಕಷ್ಟು ಪ್ರಚಾರ ಮಾಡಿರುವ ಅವರು ಓಡುವ ಕುದುರೆಯಂತಿದ್ದಾರೆ. ಅವರ ಓಟಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್‌ನ ಕೆ.ವೈ. ನಂಜೇಗೌಡ ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಹೊಸಕೋಟೆ ತಾಲೂ ಕಿನ ಮಂಜುನಾಥಗೌಡರನ್ನು ಕರೆದು ಮಾಲೂರಿನಲ್ಲಿ ಕಳೆದ ಬಾರಿ ಸ್ಪರ್ಧೆಗಿಳಿಸಿದ್ದು ಇದೇ ನಂಜೇಗೌಡ. ಕ್ಷೇತ್ರದಲ್ಲಿ ಒಕ್ಕಲಿಗ ಮತ್ತು ಪರಿಶಿಷ್ಟ ಜಾತಿ, ವರ್ಗದ ಮತಗಳೇ ನಿರ್ಣಾಯಕ. ನಂಜೇಗೌಡರಿಗೆ
ಸಂಸದ ಕೆ.ಎಚ್.ಮುನಿಯಪ್ಪ ಬೆಂಬಲವಿದೆ. ಅಹಿಂದ ಓಟುಗಳು ಕೈ ಹಿಡಿದರೆ ಗೆಲುವು ಕಷ್ಟವೇನಲ್ಲ. ಬಿಜೆಪಿಯ ಕೃಷ್ಣಯ್ಯ ಶೆಟ್ಟಿ ಅವರು ಡಿನೋಟಿಫಿಕೇಷನ್ ಹಗರಣದಲ್ಲಿ ಜೈಲಿಗೆ ಹೋಗಿ ಬಂದ ನಂತರ ಹಿಂದಿನ ವರ್ಚಸ್ಸು ಗಳಿಸಲು ಸಾಕಷ್ಟು ಶ್ರಮಿಸುತ್ತಿದ್ದಾರೆ. 


ಬಂಗಾರಪೇಟೆ : ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ಪೈಪೋಟಿ ಇದೆ. ಕಾಂಗ್ರೆಸ್‌ನ ಹಾಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಕ್ಷೇತ್ರ ದಲ್ಲಿ ಒಳ್ಳೆಯ ಕೆಲಸ ಮಾಡಿಸಿದ್ದಾರೆ ಎಂಬ ಅಭಿಪ್ರಾಯವಿದೆ. ಆದರೆ ಜಿಲ್ಲೆಯಲ್ಲಿ ನಡೆಯುತ್ತಿರುವ ಪಕ್ಷದ ಒಳಜಗಳ ಈ ಕ್ಷೇತ್ರದ ಮೇಲೂ ಪರಿಣಾಮ ಬೀರಿದೆ. ಬಿಜೆಪಿ ಬಲಿಷ್ಠವಾಗಿತ್ತಾದರೂ ಟಿಕೆಟ್ ಗಲಾಟೆಯಲ್ಲಿ ಮಾಜಿ ಶಾಸಕ ಎಂ. ನಾರಾಯಣಸ್ವಾಮಿ ಪಕ್ಷ ಬಿಟ್ಟಿರುವುದು ಬಿಜೆಪಿ ಅಭ್ಯರ್ಥಿ ಬಿ.ಪಿ. ವೆಂಕಟಮುನಿಯಪ್ಪಗೆ
ಬಾರಿ ಪೆಟ್ಟು ಕೊಡುವ ಸಾಧ್ಯತೆ ಹೆಚ್ಚಿದೆ. ಕಳೆದ ಬಾರಿ ನಾರಾಯ ಣಸ್ವಾಮಿಗೆ ಟಿಕೆಟ್ ಕೊಟ್ಟಿದ್ದರಿಂದ ವೆಂಕಟಮುನಿಯಪ್ಪ ಕಾಂಗ್ರೆಸ್ ಬೆಂಬಲಿಸಿದ್ದರು. ಇಬ್ಬರೂ ನಾಯಕರು ಒಟ್ಟಿಗೆ ಕೆಲಸ ಮಾಡಿದ್ದರೆ ಬಿಜೆಪಿಗೆ ಅವಕಾಶ ಇತ್ತು. ನಾರಾಯಣಸ್ವಾಮಿ ಜೆಡಿಎಸ್‌ಗೆ ವಲಸೆ ಹೋಗಿರುವುದರಿಂದ ಆ ಪಕ್ಷಕ್ಕೆ ಆನೆ ಬಲ ಸಿಕ್ಕಿದೆ. ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಚುರುಕಿನಿಂದ ಓಡಾಡುತ್ತಿದ್ದಾರೆ. ಕ್ಷೇತ್ರದಲ್ಲಿ ದಲಿತ, ಒಕ್ಕಲಿಗ, ಕುರುಬ ಮತಗಳೇ ನಿರ್ಣಾಯಕ.


ಶ್ರೀನಿವಾಸಪುರ : ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸಮಬಲದ ಪೈಪೋಟಿ ಏರ್ಪಟ್ಟಿದೆ. ಜೆಡಿಎಸ್‌ನ ಜಿ.ಕೆ. ವೆಂಕಟಶಿವಾರೆಡ್ಡಿ ಗೆಲುವಿಗಾಗಿ ಹೋರಾಟ ನಡೆಸಿದ್ದಾರೆ. ಅವರ ಬೆಂಬಲಕ್ಕೆ ಒಕ್ಕಲಿಗ ಮತಗಳಿವೆ. ಆದರೆ ಕಾಂಗ್ರೆಸ್ ಅಭ್ಯರ್ಥಿ, ಸಚಿವ ರಮೇಶ್ ಕುಮಾರ್ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿ ಜನಮನ ಗೆದ್ದಿರುವುದರಿಂದ ಈ ಚುನಾವಣೆಯಲ್ಲಿ ರೆಡ್ಡಿ ಅವರು ಹೆಚ್ಚು ಪ್ರಯತ್ನ ನಡೆಸಬೇಕಾಗಿದೆ. ಇನ್ನು ರಮೇಶ್ ಕುಮಾರ್ ಅವರಿಗೆ ಐದು ವರ್ಷಗಳಲ್ಲಿ ಆಗಿರುವ
ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆ. ಅಭಿವೃದ್ಧಿಯನ್ನೇ ಮಾನದಂ ಡವಾಗಿಟ್ಟುಕೊಂಡು ನೋಡಿದರೆ ಅವರು ಮತ್ತೆ ಗೆದ್ದು ಬರಬೇಕು. ಆದರೆ ಶ್ರೀನಿವಾಸಪುರದ ಮತದಾರರು ಒಮ್ಮೆ ವೆಂಕಟಶಿವಾರೆಡ್ಡಿ ಮತ್ತೊಂದು ಅವಧಿಗೆ ರಮೇಶ್ ಕುಮಾರ್ ಅವರನ್ನು ಗೆಲ್ಲಿಸಿಕೊಂಡು ಬಂದವರು. ಈ ಬಾರಿಯೂ ಇದೇ ಸಂಪ್ರದಾಯ ಮುಂದುವರೆ ಯುತ್ತದೋ ಅಥವಾ ಇಲ್ಲಿಗೇ ಕೊನೆಗೊಳ್ಳುತ್ತದೋ ನೋಡಬೇಕಿದೆ. ಇನ್ನು ಬಿಜೆಪಿ ಇಲ್ಲಿ ಲೆಕ್ಕಕ್ಕಿಲ್ಲ

ಕೆಜಿಎಫ್
ಸಂಸದ ಕೆ.ಎಚ್. ಮುನಿಯಪ್ಪ ಪುತ್ರಿ ರೂಪಾ ಶಶಿಧರ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಮಾಜಿ ಶಾಸಕ ವೈ. ಸಂಪಂಗಿ ಪುತ್ರಿ ಅಶ್ವಿನಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಈ ಹಿಂದೆ ರೂಪಾ, ಅಶ್ವಿನಿ ಇಬ್ಬರೂ ಜಿ.ಪಂ. ಚುನಾವಣೆಯಲ್ಲಿ ಎದುರಾಳಿಯಾಗಿದ್ದರು. ಆಗ ಅಶ್ವಿನಿ ಜಯ ಪಡೆದಿದ್ದರು. ಜಿ.ಪಂ. ಚುನಾವಣೆಯಲ್ಲಿನ ಸೋಲನ್ನು ರೂಪಾ ಶಶಿಧರ್ ವಿಧಾನಸಭಾ ಚುನಾವಣೆಯಲ್ಲಿ ಸವಾಲಾಗಿ ತೆಗೆದುಕೊಂಡಿದ್ದಾರೆ. ಸಂಸದ ಮುನಿಯಪ್ಪ ಅವರಿಗೂ ಇದು ಪ್ರತಿಷ್ಠೆಯ ಚುನಾವಣೆ. ಕೆಜಿಎಫ್ ಗಣಿಯನ್ನು ಉಳಿಸಿ ಕೊಳ್ಳುವ ವಿಚಾರದಲ್ಲಿ ಮುನಿಯಪ್ಪ ಲೋಕಸಭಾ ಸದಸ್ಯರಾಗಿ ಸಮರ್ಥವಾಗಿ ಕೆಲಸ ಮಾಡಿಲ್ಲ ಎನ್ನುವ ಆರೋಪ ಇದೆ. ಕೆಜಿಎಫ್ ನಗರದಲ್ಲಿ ಸಾಕಷ್ಟು ವಿರೋಧವಿದೆ. ಆದರೆ ಗ್ರಾಮಾಂತರ ಪ್ರದೇಶ ದಲ್ಲಿ ಅವರಿಗೆ ಹೆಚ್ಚಿನ ಬೆಂಬಲ ಇದೆ. ಇನ್ನು ಮಾಜಿ ಶಾಸಕ ವೈ.ಸಂಪಂಗಿ, ನಂತರ ಅವರ ತಾಯಿ, ಹಾಲಿ ಶಾಸಕಿ ರಾಮಕ್ಕ ಸಾಕಷ್ಟು ಪ್ರಭಾವ ಹೊಂದಿದ್ದಾರೆ. ಜೆಡಿಎಸ್‌ನ ಭಕ್ತವತ್ಸಲಂ ಬಲ ಹಿಂದಿನಂತೆ ಇಲ್ಲ 


ಮುಳಬಾಗಿಲು
ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಅಧಿಕೃತ ಅಭ್ಯರ್ಥಿಯೇ ಇಲ್ಲ. ಜಾತಿ ಪ್ರಮಾಣ ಪತ್ರ ಅಸಿಂಧುಗೊಂಡ ಹಿನ್ನೆಲೆಯಲ್ಲಿ ಹಾಲಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿಯಾಗಬೇಕಿದ್ದ ಕೊತ್ತೂರು ಮಂಜುನಾಥ್ ನಾಮಪತ್ರ ತಿರಸ್ಕೃತಗೊಂಡಿದೆ. ಇದರಿಂದಾಗಿ ಕಾಂಗ್ರೆಸ್ ಹವಾ ಕ್ಷೀಣಿಸಿದೆ. ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಎಚ್. ನಾಗೇಶ್ ಎಂಬುವರನ್ನು ಕಾಂಗ್ರೆಸ್ ಬೆಂಬಲಿಸಿದೆ. ಈ ಬೆಳವಣಿಗೆ ಯಿಂದಾಗಿ ಕ್ಷೇತ್ರದಲ್ಲಿ ಯಾವುದೇ ಪ್ರಭಾವ ಇಲ್ಲದೆ ಪರದಾಡುತ್ತಿದ್ದ ಜೆಡಿಎಸ್ ಚೇತರಿಸಿಕೊಂಡಿದೆ. ಆಲಂಗೂರು ಶ್ರೀನಿವಾಸ್ ನಂತರ ಕ್ಷೇತ್ರದಲ್ಲಿ ಜೆಡಿಎಸ್ ಶಕ್ತಿ ಕುಂದಿತ್ತು. ಆರ್ಥಿಕವಾಗಿ ಪ್ರಬಲರಾಗಿರುವ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ತೀವ್ರ ಪೈಪೋಟಿ ಒಡ್ಡುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ಸಿನಲ್ಲಿದ್ದ ಅಮರೇಶ್ ಬಿಜೆಪಿ ಸೇರಿ ಅಭ್ಯರ್ಥಿಯಗಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಸ್ಥಿತಿ ಹಿಂದಿನಂತಿಲ್ಲ. ಆಂತರಿಕ ಕಚ್ಚಾಟ ಹೆಚ್ಚಾಗಿದೆ. ಹೀಗಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹಾಗೂ ಜೆಡಿಎಸ್ ನಡುವೆ ಪೈಪೋಟಿ ಕಂಡುಬರುತ್ತಿದೆ.