ಬಾಗಲಕೋಟೆ :  ಪ್ರವಾಸೋದ್ಯಮ, ನೇಕಾರಿಕೆ ಹಾಗೂ ಗ್ರಾನೈಟ್ ಉದ್ಯಮಕ್ಕೆ ಹೆಸರಾದ ಜಿಲ್ಲೆಯು ಏಳು ವಿಧಾನಸಭೆ ಕ್ಷೇತ್ರಗಳನ್ನು ಹೊಂದಿದೆ. ಕಳೆದ ಬಾರಿ ಏಳರಲ್ಲಿ ಕಾಂಗ್ರೆಸ್ ಆರು ಹಾಗೂ ಒಂದು ಕ್ಷೇತ್ರವನ್ನು ಬಿಜೆಪಿ ಪಡೆದಿತ್ತು. ಈ ಬಾರಿ ಬಾದಾಮಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುತ್ತಿರುವುದರಿಂದ ಎಲ್ಲ ಸ್ಥಾನಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ. ಆದರೆ, ಬಿಜೆಪಿಯು ಅದಕ್ಕೆ ತಡೆಯೊಡ್ಡಲು ಸಮರ್ಥ ರಣತಂತ್ರವನ್ನೇ ಹೆಣೆಯಲು ಸಜ್ಜಾಗಿದೆ. 

ವಿಠ್ಠಲ ಬಲಕುಂದಿ

ಬಾದಾಮಿ

ಇಡೀ ರಾಜ್ಯ ಕುತೂಹಲದಿಂದ ಗಮನಿಸುತ್ತಿರುವ ಈ ಕ್ಷೇತ್ರದಲ್ಲಿ ಜಾತಿಪ್ರೀತಿ ಗುಪ್ತಗಾಮಿನಿಯಾಗಿ ಹರಿಯತೊಡಗಿದೆ. ಇಲ್ಲಿ ಕುರು ಬರ ಪ್ರಾಬಲ್ಯ ಹೆಚ್ಚಿದ್ದು, ಅಂದಾಜು 51 ,226 ಮತದಾರರಿದ್ದಾರೆ. ಸಿದ್ದರಾಮಯ್ಯ ಗೆಲವಿಗೆ ಶ್ರೀರಕ್ಷೆ. ಇಲ್ಲಿ 11,720 ಅಲ್ಪಸಂಖ್ಯಾತರಿದ್ದಾರೆ. ಹಾಗೆಯೇ 29,141 ಎಸ್ಸಿ ಮತಗಳಿವೆ. ಆದರೆ, ಇವೆಲ್ಲ ಮತಗಳಾಗಿ ಸಿಎಂಗೇ ಬಿದ್ದರೆ ಅವರು ಗೆಲುವಿನ ದಡ ದಾಟುತ್ತಾರೆ. ವಿಭಜನೆಯಾದಲ್ಲಿ ಪೈಪೋಟಿ ಎದುರಿಸಬೇಕು. ಬಿಜೆಪಿಯು 18 ಸಾವಿರ ಎಸ್ಟಿ, 34 ಸಾವಿರ ಲಿಂಗಾಯತ ಮತ್ತು ೨೨ ಸಾವಿರ ಗಾಣಿಗ ಮತಗಳ ಮೇಲೆ ಭರವಸೆ ಇಟ್ಟುಕೊಂಡಿದೆ. ಆದರೆ, ಜೆಡಿಎಸ್ ಅಭ್ಯರ್ಥಿ ಲಿಂಗಾಯತರಾಗಿದ್ದಾರೆ. ಅವರು ಮತ ಒಡೆದರೆ ಕಾಂಗ್ರೆಸ್‌ಗೆ ಲಾಭವಾಗಲಿದೆ ಎನ್ನುವ ಲೆಕ್ಕಾಚಾರ ಇದೆ

ಹುನಗುಂದ
ಕಾಂಗ್ರೆಸ್‌ನ ಹಾಲಿ ಶಾಸಕ ವಿಜಯಾನಂದ ಕಾಶಪ್ಪನವರ ಮರು ಆಯ್ಕೆ ಬಯಸಿ ಕಣಕ್ಕಿಳಿದಿದ್ದಾರೆ. ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಬಿಜೆಪಿ ಅಭ್ಯರ್ಥಿ. ಬಿಜೆಪಿ ಟಿಕೆಟ್ ಸಿಗದ ಕಾರಣ ಎಸ್. ಆರ್. ನವಲಿಹಿರೇಮಠ ಪಕ್ಷೇತರರಾಗಿ ಕಣದಲ್ಲಿದ್ದಾರೆ. ಅವರಿಗೆ ಜೆಡಿಎಸ್ ಬಾಹ್ಯ ಬೆಂಬಲ ಘೋಷಿಸಿದೆ. ಜತೆಗೆ ಬಿಜೆಪಿ ಮತ್ತು ಕಾಂಗ್ರೆಸ್‌ನ ಅತೃಪ್ತರು ನವಲಿಹಿರೇಮಠರ ಬೆಂಬಲಕ್ಕೆ ಮುಂದಾಗಿ ದ್ದಾರೆ. ಬಿಜೆಪಿ ಅಭ್ಯರ್ಥಿ ರಡ್ಡಿ ಸಮುದಾಯಕ್ಕೆ ಸೇರಿದವರಾಗಿದ್ದು, ಇವರ ಮತದಾರರ ಸಂಖ್ಯೆ 9 ಸಾವಿರದಷ್ಟಿದೆ. ಇವರು ಕೂಡ
ಲಿಂಗಾಯತ ಸಮುದಾಯದ ಮತಗಳಿಗೆ ಬೆವರು ಹರಿಸಬೇಕಿದೆ.  ವೀರಶೈವ ಲಿಂಗಾಯತರು ಯಾರ ಪರ ವಾಲಲಿದ್ದಾರೆ ಎನ್ನುವುದು ಫಲಿತಾಂಶದ ಮೇಲೆ ಪರಿಣಾಮ  ಬೀರಲಿದೆ.

ಬಾಗಲಕೋಟೆ
35 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಕಾಂಗ್ರೆಸ್ ಇಲ್ಲಿ ಗೆಲವು ಸಾಧಿಸಿದೆ. ಅದರ ಶ್ರೇಯಸ್ಸು ಹಾಲಿ ಶಾಸಕ ಎಚ್.ವೈ. ಮೇಟಿ ಅವರಿಗೆ ಸಂದಿದೆ. ಅವರು ಮತ್ತೆ  ಕಣಕ್ಕಿಳಿದಿದ್ದಾರೆ. ಕಳೆದ ಬಾರಿ ಅವರ ಪ್ರತಿಸ್ಪರ್ಧಿಯಾಗಿದ್ದ ಮಾಜಿ ಶಾಸಕ ವೀರಣ್ಣ ಚರಂತಿಮಠ ಈ ಬಾರಿಯೂ ಬಿಜೆಪಿ ಅಭ್ಯರ್ಥಿ. ಅಲ್ಪಸಂಖ್ಯಾತರ ಮತಗಳ ಜತೆಗೆ ಲಿಂಗಾಯತ ಪ್ರತ್ಯೇಕ ಧರ್ಮ ಬೇಕು ಎನ್ನುವವರು ಕಾಂಗ್ರೆಸ್ ಬೆಂಬಲಿಸುವ ಸಾಧ್ಯತೆ ಇದೆ. ಹಾಗಾದಲ್ಲಿ ಕಾಂಗ್ರೆಸ್‌ಗೆ ಅನುಕೂಲ. ಆದರೆ ವೈಯಕ್ತಿಕ ವರ್ಚಸ್ಸು ಹೆಚ್ಚಿನ ಕೆಲಸ ಮಾಡಿದರೆ, ಬಿಜೆಪಿಗೂ ವರವಾಗಲಿದೆ. ಜೆಡಿಎಸ್ ಬೆಂಬಲಿತ ಬಿಎಸ್ಪಿಯಿಂದ  ಮೋಹನ್ ಜಿಗಳೂರು ಬಾಚುವ ಮತಗಳು ಯಾರಿಗೆ ಮುಳುವಾಗ ಬಹುದೆಂಬುದೇ ಕುತೂಹಲದ ಸಂಗತಿಯಾಗಿದೆ. 


ಬೀಳಗಿ
ಕಳೆದ ಬಾರಿ ಆಯ್ಕೆಗೊಂಡಿದ್ದ ಕಾಂಗ್ರೆಸ್‌ನ ಜೆ.ಟಿ. ಪಾಟೀಲ ಈ  ಬಾರಿಯೂ ಕಣಕ್ಕಿಳಿದಿದ್ದಾರೆ. ಜೆ.ಟಿ. ಪಾಟೀಲ ಎದುರು ಕಳೆದ ಬಾರಿ ಪರಾಭವಗೊಂಡಿದ್ದ ಮಾಜಿ ಸಚಿವ  ಮುರುಗೇಶ ನಿರಾಣಿಯವರೇ ಈ ಸಲವೂ ಬಿಜೆಪಿ ಹುರಿಯಾಳು. ಲಿಂಗಾಯತ ಮತದಾರರ ಸಂಖ್ಯೆ 60 ಸಾವಿರದಷ್ಟಿದೆ. ಅವರೇ ಇಲ್ಲಿ ನಿರ್ಣಾಯಕ. ಕುರುಬ ಸಮುದಾಯದ ಮತಗಳು 35 ಸಾವಿರದಷ್ಟಿವೆ. ಎಸ್ಸಿ ಮತಗಳು 37 ಸಾವಿರ, ಎಸ್ಟಿ ಮತಗಳು 27 ಸಾವಿರಷ್ಟಿವೆ. ಅಹಿಂದ ಮತಗಳು ಕಾಂಗ್ರೆಸ್ ಅಭ್ಯರ್ಥಿಗೆ ಸಹಕಾರಿ. ನೇರ ಹಣಾಹಣಿ
ಇದ್ದರೂ ಈ ಬಾರಿಯ ಚುನಾವಣೆಯ ಲೆಕ್ಕಾಚಾರವೇ ಬೇರೆಯಾ ಗಿದೆ. ವೈಯಕ್ತಿಕವಾಗಿ ಇಬ್ಬರೂ ವರ್ಚಸ್ಸು ಹೊಂದಿದ್ದಾರೆ. ಯಾವುದೇ ಭ್ರಷ್ಟಾಚಾರದ ಆರೋಪವೂ ಮೆತ್ತಿಕೊಂಡಿಲ್ಲ. 


ಜಮಖಂಡಿ
ಹಾಲಿ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡರಿಗೆ ಇಲ್ಲಿ ಸಂಘ  ಪರಿವಾರದ ಹಿನ್ನೆಲೆಯ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಬಿಜೆಪಿಯಿಂದ ಎದುರಾಳಿಯಾಗಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಮಾಜಿ ಸಚಿವ ಮುರುಗೇಶ ನಿರಾಣಿ ಸಹೋದರ ಸಂಗಮೇಶ ನಿರಾಣಿ ಕಣದಲ್ಲಿರುವುದು ಬಿಜೆಪಿ ಪಾಲಿಗೆ ಬಹುದೊಡ್ಡ ಪೆಟ್ಟು ಎಂದು ಹೇಳಲಾಗುತ್ತಿದೆ. ಪಕ್ಕಾ ಬಿಜೆಪಿ ಬೆಂಬಲಿಸುವ ಮತದಾರರು ಯಾರಿಗೆ ಮತ ಹಾಕಬೇಕು ಎಂಬ ಗೊಂದಲದಲ್ಲಿ ದ್ದಾರೆ. ಕ್ಷೇತ್ರದಲ್ಲಿ ಲಿಂಗಾಯತ ಮತದಾರರು 77 ಸಾವಿರದಷ್ಟಿದ್ದಾರೆ.  ಅದೇ ಸಮುದಾಯದ ಸಂಗಮೇಶ ನಿರಾಣಿ ಬಂಡಾಯ ಅಭ್ಯರ್ಥಿಯಾಗಿರುವುದರಿಂದ ಮತಗಳ ವಿಭಜನೆ ಆಗಲಿವೆ. ಹಾಗಾದಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿಗೆ ಹೆಚ್ಚಿನ ನಷ್ಟ. ಕ್ಷೇತ್ರದಲ್ಲಿ ಎಂಆರ್‌ಎನ್ ಫೌಂಡೇಶನ್ ಮೂಲಕ ಸಾಕಷ್ಟು ಕಾರ್ಯ ಮಾಡಿರುವ ನಿರಾಣಿ ಅವರಿಗೆ ಅವರದೇಯಾದ ಮತಗಳಿವೆ. 

ತೆರದಾಳ
 ಪುನರ್‌ವಿಂಗಡಣೆ ಬಳಿಕ ಅಸ್ತಿತ್ವಕ್ಕೆ ಬಂದ ಈ ಕ್ಷೇತ್ರದಲ್ಲಿ  ಸಚಿವೆ ಉಮಾಶ್ರೀ ಮತ್ತು ಮಾಜಿ ಶಾಸಕ ಸಿದ್ದು ಸವದಿ ಪರಸ್ಪರ ಎದುರಾಳಿಗಳು. ಇಬ್ಬರೂ ಒಂದೊಂದು ಬಾರಿ  ಕ್ಷೇತ್ರ ಪ್ರತಿನಿಧಿಸಿದ್ದಾರೆ. ಆದರೆ ಇಬ್ಬರೂ ಹೊರಗಿನವರೇ. ಈ ನಡುವೆ ಬಸವರಾಜ ಕೊಣ್ಣೂರ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಇವರಿಗೆ ಸ್ಥಳೀಯರು ಎನ್ನುವ ಪಟ್ಟ ಇದೆ. ಕೊಣ್ಣೂರ ಕುರುಬರಾಗಿದ್ದು, ಆ ಮತಗಳು 15 ಸಾವಿರದಷ್ಟಿವೆ. ಕಾಂಗ್ರೆಸ್‌ನ ಉಮಾಶ್ರೀ ನೇಕಾರ ಸಮುದಾಯಕ್ಕೆ  ಸೇರಿದ್ದು, ಆ ಸಮುದಾಯದ ಮತಗಳು 50 ಸಾವಿರದಷ್ಟಿದೆ. ಬಿಜೆಪಿಯ ಸಿದ್ದು ಸವದಿ ಲಿಂಗಾಯತರಾಗಿದ್ದು, ಈ ಸಮುದಾಯದ ಮತದಾರರು 58 ಸಾವಿರದಷ್ಟಿದ್ದಾರೆ. ಮತ ವಿಭಜನೆ ಎಲ್ಲವೂ ಅಂದುಕೊಂಡಂತೆ ನಡೆದರೆ, ಕಾಂಗ್ರೆಸ್‌ಗೆ ಮುನ್ನಡೆ ಆಗಬೇಕು. ಆದರೆ, ಸ್ಥಳೀಯರು ಎಂಬ ಪ್ರಶ್ನೆ ಬಂದಾಗ ಮತದಾರ ಇಲ್ಲಿ ಯಾರ ಕೈ ಹಿಡಿಯುತ್ತಾನೆ ಎಂದು ಊಹಿಸುವುದು ಕಷ್ಟ.


ಮುಧೋಳ
ಕ್ಷೆೀತ್ರದಲ್ಲಿ ಸಚಿವ ಆರ್.ಬಿ. ತಿಮ್ಮಾಪುರ ಮತ್ತು ಶಾಸಕ ಗೋವಿಂದ ಕಾರಜೋಳ ಕಾಯಂ ಎದುರಾಳಿಗಳು. ಆದರೆ ಈ ಬಾರಿ ತಿಮ್ಮಾಪುರ ಬದಲಿಗೆ ಹೊಸ ಮುಖ ಸತೀಶ್ ಬಂಡಿವಡ್ಡರ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ತಿಮ್ಮಾಪುರ ಅವರು ಬೆನ್ನಿಗೆ ನಿಂತು ಗೆಲ್ಲಿಸುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ. 2004 ರಿಂದ ಸತತ ಮೂರು 
ಗೆಲವು ಸಾಧಿಸಿ ಹ್ಯಾಟ್ರಿಕ್ ಸಾಧನೆ ಮಾಡಿರುವ ಬಿಜೆಪಿಯ ಕಾರಜೋಳ ಕಾಂಗ್ರೆಸ್‌ನ ಹೊಸ ಮುಖದ ಜತೆ ಸೆಣಸಬೇಕಿದೆ. ಇಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಶಂಕರ ನಾಯಕ ಕಣದಲ್ಲಿದ್ದಾರೆ. ನೇರ  ಸ್ಪರ್ಧೆ ಕಾರಜೋಳ ಮತ್ತು ಬಂಡಿವಡ್ಡರ ನಡುವೆ ನಡೆಯಲಿ ದೆಯಾದರೂ ಜನ ಮಾತ್ರ ಇದು ಕಾರಜೋಳ ಮತ್ತು ತಿಮ್ಮಾಪುರ ಕಾಳಗವೆಂದು ಬಣ್ಣಿಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಹಿಂದ ಮತಗಳ ಜತೆಗೆ ರಡ್ಡಿ ಮತ್ತು ಲಿಂಗಾಯತ ಮತ ಪಡೆದಲ್ಲಿ ಮಾತ್ರ ಕಾರಜೋಳರನ್ನು ಮಣಿಸಲು ಸಾಧ್ಯ ಎಂದು ಹೇಳಲಾಗುತ್ತಿದೆ.