ಲಿಂಗರಾಜು ಕೋರಾ

ಬೆಂಗಳೂರು :  ರಾಜ್ಯದ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಹೆಗ್ಗಳಿಕೆಯ ಕ್ಷೇತ್ರ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ. ಇಲ್ಲಿರುವ ಮತದಾರರನ್ನು ಎರಡು ಕ್ಷೇತ್ರಗಳಿಗೆ ಹಂಚಬಹುದು. ಕ್ಷೇತ್ರ ಮರು ವಿಂಗಡಣೆಗೂ ಮುನ್ನ ಇದ್ದ ಉತ್ತರಹಳ್ಳಿ ವಿಧಾನಸಭೆ ಕ್ಷೇತ್ರದ ಕೆಲ ಪ್ರದೇಶಗಳೇ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಸೇರಲ್ಪಟ್ಟಿವೆ. 

 ಮೂಲ ಸೌಕರ್ಯಗಳನ್ನು ಬೇಡುತ್ತಿರುವ ರೆವಿನ್ಯೂ ಬಡಾವಣೆಗಳು ಹಾಗೂ ಹೊಸ ಬಡಾವಣೆಗಳ ರಸ್ತೆಗಳು ಟಾರು ಕಾಣದಾಗಿದೆ. ಕ್ಷೇತ್ರದ ಬಹುಭಾಗ ಕುಡಿವ ನೀರಿಗೆ ಕೊಳವೆಬಾವಿಗಳನ್ನು ನೆಚ್ಚಿಕೊಂಡಿದೆ. ಅಂತರ್ಜಲ ಪಾತಾಳ ಕಂಡಿರುವುದರಿಂದ ಕೊಳವೆಬಾವಿಗಳು ಬರಿದಾಗಿವೆ.

ಕಾವೇರಿ ಕುಡಿವ ನೀರಿನ ಸಂಪರ್ಕ ಮರೀಚಿಕೆಯಾಗಿದೆ. 2010ರಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಈ ಪ್ರದೇಶಗಳು ಸೇರಿಕೊಂಡಿವೆ. ಅದಕ್ಕೂ ಮುನ್ನ ಪಟ್ಟಣಗೆರೆ ನಗರ ಸಭೆ ಆಡಳಿತ ವ್ಯಾಪ್ತಿಗೊಳ ಪಟ್ಟಿದ್ದವು. ಬೆಳೆಯುತ್ತಿರುವ ಬೆಂಗಳೂರಿನ ಹೊರವಲಯದಲ್ಲಿ ಬರುವ ಗೊಟ್ಟಿಗೆರೆ, ಕೋಣನ ಕುಂಟೆ, ಅಂಜನಾಪುರ, ವಸಂತಪುರ, ಉತ್ತರಹಳ್ಳಿ, ಯಲಚೇನಹಳ್ಳಿ ಹಾಗೂ ಬೇಗೂರು ಪ್ರದೇಶಗಳನ್ನು ಈ ಕ್ಷೇತ್ರ ಹೊಂದಿದ್ದು, ಇಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ. 

ಬಿಜೆಪಿ ಭದ್ರಕೋಟೆ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬೆಂಗಳೂರು ದಕ್ಷಿಣ ಕ್ಷೇತ್ರ ಕಳೆದ ಎರಡು ವರ್ಷದಿಂದ ಬಿಜೆಪಿಯ ಭದ್ರಕೋಟೆಯಾಗಿದೆ. ಕ್ಷೇತ್ರ ವಿಂಗಡಣೆ ಬಳಿಕ ಕಳೆದ ಕ್ಷೇತ್ರದ ಎರಡು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಯ ಹಾಲಿ ಶಾಸಕ ಎಂ.ಕೃಷ್ಣಪ್ಪ 2013 ರ ಚುನಾವಣೆಯಲ್ಲಿ 1.02 ಲಕ್ಷಕ್ಕೂ ಹೆಚ್ಚು ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಮತ್ತೆ ಕಣಕ್ಕಿಳಿಸಿದ್ದಾರೆ. ಕೃಷ್ಣಪ್ಪ ವಿರುದ್ಧ ಜೆಡಿಎಸ್‌ನಿಂದ ಸ್ಪರ್ಧಿಸಿ 72  ಸಾವಿರಕ್ಕೂ ಹೆಚ್ಚು ಮತಗಳಿಸಿ 2ನೇ ಸ್ಥಾನ ಪಡೆದಿದ್ದ ಆರ್. ಪ್ರಭಾಕರ್‌ರೆಡ್ಡಿ ಅವರೇ ಈ ಬಾರಿಯೂ ಅದೃಷ್ಟಪರೀಕ್ಷೆಗಿಳಿದಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಜನ 2009 ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರನ್ನು  ಅತಿ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಿದ್ದುಂಟು. ಹಾಗಾಗಿ ಇಲ್ಲಿ ಜೆಡಿಎಸ್ ಪ್ರಾಬಲ್ಯವೂ ಇದೆ. ಇನ್ನು ಆಡಳಿತ ಪಕ್ಷ ಕಾಂಗ್ರೆಸ್ ಹೇಗಾದರೂ ಮಾಡಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸಿದ್ದು, ಬಮೂಲ್ ಮಾಜಿ ಅಧ್ಯಕ್ಷ ಆರ್.ಕೆ.ರಮೇಶ್ ಅವರನ್ನು ಅಖಾಡಕ್ಕಿಳಿಸಿದೆ. ಮೂವರೂ ಒಕ್ಕಲಿಗರ  ಸಮುದಾಯದವರೇ ಆಗಿರುವುದರಿಂದ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸರಣಿ ಏರ್ಪಟ್ಟಿದೆ.

ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರದಲ್ಲಿ ಹಾಲಿ ಶಾಸಕ ಎಂ.ಕೃಷ್ಣಪ್ಪ ಮರು ಆಯ್ಕೆಗೆ ಪ್ರಯತ್ನ ನಡೆಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಪ್ರಭಾಕರ ರೆಡ್ಡಿ ರಿಯಲ್ ಎಸ್ಟೇಟ್ ಉದ್ಯಮಿ. ನೂರಾರು ಕೋಟಿ ರು. ಮೌಲ್ಯದ ಆಸ್ತಿ ಹೊಂದಿರುವ ದೊಡ್ಡ ಕುಳ. ಕಳೆದ ಬಾರಿ ಸೋತ ಅನುಕಂಪದ ಜತೆಗೆ ಜನರು ಈ ಬಾರಿ ಜೆಡಿಎಸ್‌ಗೆ ಜೈ ಎಂದರೆ ಜಯಕ್ಕೆ ಇನ್ನೊಂದೇ ಹೆಜ್ಜೆ. ಕಾಂಗ್ರೆಸ್‌ನಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಮಾಜಿ ಸಂಸದೆ ತೇಜಸ್ವಿನಿಗೌಡ ಬಿಜೆಪಿ ಸೇರಿದ್ದರಿಂದ. ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಬೆಂಗಳೂರು ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಬೆಂಬಲದೊಂದಿಗೆ ಆರ್.ಕೆ.ರಮೇಶ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

ಟಿಕೆಟ್ ಆಕಾಂಕ್ಷೆಯೊಂದಿಗೆ ಕ್ಷೇತ್ರದಲ್ಲಿ ಈಗಾಗಲೇ ಒಂದಷ್ಟು ಹಿಡಿತ ಸಾಧಿಸಿ, ಅಭಿವೃದ್ಧಿ ಕಾರ್ಯಗಳನ್ನೂ ಮಾಡಿದ್ದಾರೆ. ಅನ್ಯ ಪಕ್ಷಗಳ ಒಂದಷ್ಟು ಮುಖಂಡರನ್ನು ಕಾಂಗ್ರೆಸ್‌ಗೂ ಸೇರಿಸಿಕೊಂಡಿದ್ದಾರೆ. ಇವರು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಮೂವರ ಕೃಪಾಕಟಾಕ್ಷ ಕೆಲಸ ಮಾಡಿದರೆ ಗೆಲುವು ನಿರಾಯಾಸ. 

ಪರಿಶಿಷ್ಟ, ಮುಸ್ಲಿಂ ಮತಗಳೇ ನಿರ್ಣಾಯಕ: 6 ಲಕ್ಷಕ್ಕೂ ಹೆಚ್ಚು ಮತದಾರರಿರುವ ಇಲ್ಲಿ ಒಕ್ಕಲಿಗರೇ ಪರಿಶಿಷ್ಟರು ಮತ್ತು ಮುಸ್ಲಿಮರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಮೂರೂ ಪಕ್ಷಗಳ ಅಭ್ಯರ್ಥಿಗಳು ಒಕ್ಕಲಿಗರೇ ಆಗಿರುವುದರಿಂದ ಒಕ್ಕಲಿಗರ ಮತಗಳು ವಿಭಜನೆ ಯಾಗಲಿದೆ. ಹಾಗಾಗಿ ಪರಿಶಿಷ್ಟರು ಹಾಗೂ ಮುಸ್ಲಿಮರ ಮತಗಳೇ ಗೆಲುವು ನಿರ್ಧರಿಸುತ್ತವೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಜತೆಗೆ ನಾಲ್ವರು ಬೇರೆ ಬೇರೆ ಪಕ್ಷದ ಅಭ್ಯರ್ಥಿಗಳು, 7 ಮಂದಿ ಪಕ್ಷೇತರ ಅಭ್ಯರ್ಥಿಗಳು ಸೇರಿ ಒಟ್ಟು 14 ಮಂದಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಅತಿ ಹೆಚ್ಚು ಮತದಾರರು: ಒಟ್ಟು 603678 ಮಂದಿ ಮತದಾರರಿದ್ದು, ಇಡೀ ರಾಜ್ಯದಲ್ಲೇ ಇಷ್ಟು ಸಂಖ್ಯೆಯ ಮತದಾರರು ಬೇರ‌್ಯಾವ ಕ್ಷೇತ್ರದಲ್ಲೂ ಇಲ್ಲ.