ಸದನಕ್ಕೆ ಮುಖ್ಯಮಂತ್ರಿಯಾಗಿ ಭಾವಪೂರ್ಣ ವಿದಾಯ ಹೇಳಿದ ಯಡಿಯೂರಪ್ಪ

B S Yeddyurappa bid emotional adieu to Karnataka Assembly
Highlights

ಇಡೀ ದೇಶವಾಸಿಗಳ ಕಣ್ಣು ಕರ್ನಾಟಕ ವಿಧಾನಸೌಧದ ಮೇಲಿತ್ತು. ಮೊನ್ನೆ ಗುರುವಾರವಷ್ಟೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ಬಹುಮತ ಸಾಬೀತುಪಡಿಸುವ ಬಗ್ಗೆ ಇದ್ದ ಕುತೂಹಲಕ್ಕೆ ತೆರೆ ಬಿದ್ದಿದೆ. ವಿಶ್ವಾಸ ಮತಕ್ಕೂ ಯಾಚಿಸುವ ಮುನ್ನವೇ ರಾಜೀನಾಮೆ ನೀಡುವುದಾಗಿ ಘೋಷಿಸಿದ ಯಡಿಯೂರಪ್ಪ, ಸದನದಲ್ಲಿ ಭಾವನಾತ್ಮಕವಾಗಿ ಮಾತನಾಡಿದ್ದು ಹೀಗೆ.

ಬೆಂಗಳೂರು: ಮುಖ್ಯಮಂತ್ರಿಯಾಗಿ ಮೇ 17ರಂದು ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ಅವರು ಸದನದಲ್ಲಿ ಬಹುಮತ ಸಾಬೀತು ಪಡಿಸುವ ಕುತೂಹಲಕ್ಕೆ ಕಡೆಗೂ ತೆರೆ ಬಿದ್ದಿದ್ದು, ಅಗತ್ಯ ಮ್ಯಾಜಿಕ್ ನಂಬರ್ ತಲುಪಲು ಸಾಧ್ಯವಿಲ್ಲವೆಂದು, ವಿಶ್ವಾಸಮತ ಯಾಚಿಸದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.

ಸದನದಲ್ಲಿ ಭಾವಪೂರ್ಣವಾಗಿ ಮಾತನಾಡಿದ ಬಿಎಸ್‌ವೈ, 'ನಮ್ಮಪ್ಪನ ಆಣೆ, ನಮ್ಮಮ್ಮನ ಆಣೆ ಬಿಎಸ್‌ವೈ ಮುಖ್ಯಮಂತ್ರಿಯಾಗೋಲ್ಲ,' ಎಂದೇ ಪ್ರಚಾರ ಮಾಡಲಾಗಿತ್ತು. ನಾನು ನನ್ನ ಜೀವನವನ್ನು ರೈತರಿಗಾಗಿಯೇ ಮೀಸಲಿಡುತ್ತೇನೆ, ಎಂದು ಹೇಳಿದರು. 

'ಅನ್ನದಾತ ಗೌರವವನ್ನು ಕಾಪಾಡಲು ಒಂದಾಗಿ ಶ್ರಮಿಸಬೇಕು. ಸ್ವಾತಂತ್ರ್ಯ ಬಂದ ನಂತರದಿಂದಲೂ ರೈತನ ಸಂಕಟಕ್ಕೆ ಅಂತ್ಯ ಹಾಡಲು ಆಗುತ್ತಿಲ್ಲ. ಎಲ್ಲೆಡೆ ನೀರಿಗಾಗಿ ಹಾಹಾಕಾರವೆದ್ದಿದೆ. ಎಲ್ಲ ಜನರು ಕಣ್ಣೀರಿಡುವ ಸಂದರ್ಭದಲ್ಲಿ ಚುನಾವಣೆ ನಡೆಯಿತು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾರು ಎಷ್ಟು ಕ್ಷೇತ್ರಗಳನ್ನು ಗೆದ್ದರೆಂಬುವುದು ಮುಖ್ಯವಲ್ಲ. ಆದರೆ, ಆಡಳಿತದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರ ಪ್ರೀತಿ, ವಿಶ್ವಾಸ ಗಳಿಸಿ, ಜನರ ಸಂಕಟಗಳಿಗೆ ಸ್ಪಂದಿಸಿ, ಇಬ್ಬರು ಶಾಸಕರ ಮೂಲಕ ಇದೀಗ ಏಕೈಕ ದೊಡ್ಡ ಪಕ್ಷವಾಗಿ ಬೆಳೆದಿದ್ದೇವೆ. ರೈತ ಸಮೂಹಕ್ಕೆ ನೆರವು ನೀಡಿದ ಫಲವಾಗಿ ಇಂದು ಇಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದೇವೆ. ನಿರಂತರ ಹೋರಾಟ, ಚಳುವಳಿ, ಪಾದಯಾತ್ರೆಗಳನ್ನು ನಡೆಸುತ್ತಲೇ ಇದ್ದೇನೆ. ಯಾವುತ್ತೂ ಕೈ ಕಟ್ಟಿಕೊಂಡು ಕುಳಿತುಕೊಳ್ಳಲಿಲ್ಲ. ರಾಜ್ಯದ ಜನರ ಸೇವೆ ಮಾಡಬೇಕು, ರೈತರನ್ನು ಉಳಿಸುವ ಹಂಬಲದಿಂದ ನನ್ನ ಜೀವನವನ್ನು, ಬದುಕಿನ ಕೊನೆ ಉಸಿರಿರುವರೆಗೂ ರೈತರು ಸ್ವಾಭಿಮಾನದಿಂದ ಬದುಕುವಂತೆ ಮಾಡಲು ಹೋರಾಡುತ್ತೇನೆ. ಎಂದು ಭರವಸೆ ನೀಡುತ್ತೇನೆ,' ಎಂದರು.

'ನಾನು ಶಾಸಕರೊಂದಿಗೆ ಆತ್ಮ ಸಾಕ್ಷಿಯಂತೆ ಮತ ಹಾಕಲು ಆಗ್ರಹಿಸಿದ್ದು ಹೌದು. ಆದರೆ, ಕುಟುಂಬದವರೊಂದಿಗೆ ಬೆರೆಯಲು ಬಿಡದಂತೆ ಕಟ್ಟಿ ಹಾಕಲಾಗಿತ್ತು. ಸಹಕಾರ ಸಂಘದ ಸಾಲ ಮನ್ನಾ ಮಾಡಬೇಕು, ಒಂದೂವರೆ ಲಕ್ಷ ಕೋಟಿ ನೀರಾವರಿಗೆ ಆದ್ಯತೆ ನೀಡಬೇಕು. ರೈತರ ಬೆಳೆಗೆ ಬೆಂಬಲ ನೀಡಬೇಕು. ವೃದ್ಧಾಪ್ಯ, ಅಂಗವಿಕಲವೇತನ ಹೆಚ್ಚು ಮಾಡಬೇಕು. ಬಡವರ ಹಸಿವು ನೀಗಿಸಲು ಸಂಕಲ್ಪ ತೊಟ್ಟಿದ್ದೆ. ಆದರೆ, ವಿಧಿ ಇಚ್ಛೆ ಬೇರೆಯೇ ಇದೆ. ಏನೇ ಆದರೂ ಜನರಿಗೆ ಪ್ರಾಣ ನೀಡುವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಮಾಲೀಕರು. ಆದರೆ, ನಾನು ಜನರು ತೋರಿಸಿದ ಪ್ರೀತಿಗೆ ಚಿರಋಣಿ,' ಎಂದರು.

ಕಾಂಗ್ರೆಸ್ ಕುತಂತ್ರದಿಂದ ಸರಕಾರ ರಚಿಸುವಲ್ಲಿ, ವಿಶ್ವಾಸಮತ ಯಾಚಿಸುವಲ್ಲಿ ವಿಫಲವಾಗಿದ್ದೇನೆ. ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ, ಎಂದು ಹೇಳಿ ಮಾತನ್ನು ಮುಗಿಸಿದರು.

ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳನ್ನೂ ಗೆದ್ದು ಮೋದಿಗೆ ಬಲ ತುಂಬುವುದಾಗಿ ಹೇಳಿದರು.

loader