ಪ್ರಭುಸ್ವಾಮಿ ನಟೇಕರ್

ಬೆಂಗಳೂರು :  ರಾಜಧಾನಿಯಲ್ಲಿ ಹಳೆಯ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ‘ಹಳೆ ಬೇರು ಹೊಸ ಚಿಗುರು’ ಎಂಬಂತೆ ಆಧುನಿಕತೆ ಜೊತೆಗೆ ಸಂಪ್ರದಾಯವನ್ನು ಉಳಿಸಿಕೊಂಡಿದೆ. ಇಲ್ಲಿ ಅನೇಕ ದೇವಸ್ಥಾನಗಳಿವೆ, ಪ್ರಖ್ಯಾತ ಶಿಕ್ಷಣ ಸಂಸ್ಥೆಗಳಿವೆ, ಸಾಂಸ್ಕೃತಿಕ, ಸಂಗೀತ ಚಟುವಟಿಕೆಗಳು ಈ ಕ್ಷೇತ್ರದ ಒಂದಲ್ಲಾ ಒಂದು ಕಡೆ ನಡೆಯುತ್ತಿವೆ. ‘ಮಲ್ಲೇಶ್ವರ ಎಂಟನೇ ಕ್ರಾಸ್’ ಮಧ್ಯಮ ವರ್ಗದ ಮೆಚ್ಚಿನ ಮಾರುಕಟ್ಟೆ. ಇಂತಹ ಹಲವು ವಿಶೇಷತೆಗಳಿಂದ ಕೂಡಿದ ಈ ಕ್ಷೇತ್ರದ ಶಾಸಕರಾಗಿ ಎರಡು ಬಾರಿ ಆಯ್ಕೆಯಾಗಿರುವ ಡಾ.ಅಶ್ವತ್ಥ ನಾರಾಯಣ ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿದ್ದಾರೆ. ಬಿರುಸಿನ ಪ್ರಚಾರದ ಮಧ್ಯೆಯೂ ಡಾ.ಸಿ.ಎನ್.
ಅಶ್ವತ್ಥನಾರಾಯಣ ತಾವು ಮಾಡಿದ ಕೆಲಸ, ಭವಿಷ್ಯದ ಕನಸುಗಳನ್ನು ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. 

ಮೂರನೇ ಬಾರಿ ಆಯ್ಕೆಯ ನಿರೀಕ್ಷೆಯಲ್ಲಿರುವ ನಿಮಗೆ ಕ್ಷೇತ್ರದ ಜನರು ಪ್ರಚಾರದಲ್ಲಿ ಹೇಗೆ ಸ್ಪಂದಿಸುತ್ತಿದ್ದಾರೆ?

ಎರಡು ಬಾರಿ ಆಯ್ಕೆಯಾಗಿ ಕ್ಷೇತ್ರದ ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ. ಜನರ ಸಮಸ್ಯೆಗಳಿಗೆ  ಸ್ಪಂದಿಸಿರುವ ತೃಪ್ತಿ, ಸಂತೋಷ ಇದೆ. ಅದೆಲ್ಲಾಕ್ಕಿಂತಹೆಚ್ಚಾಗಿ ನಾನು ಜನರಿಗೆ ಕೈಗೆಟುವ ಶಾಸಕನಾಗಿದ್ದೇನೆ ಎಂಬ ಸಂತಸ ಇದೆ. ಈ ಎಲ್ಲಾ ಕಾರಣಗಳಿಂದಾಗಿ ಕ್ಷೇತ್ರದ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಮತ್ತೊಮ್ಮೆ ಗೆಲ್ಲುವ ವಿಶ್ವಾಸ ಇದೆ.

ನಿಮ್ಮ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿದಿಲ್ಲ ಎಂಬ ಮಾತುಗಳಿವೆ?

ನನಗೆ ಹಾಗೆ ಅನಿಸುವುದಿಲ್ಲ. ಇತರೆ ಪಕ್ಷದವರು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಎಲ್ಲರಿಗಿಂತ ಹೆಚ್ಚಾಗಿ ಕಾಂಗ್ರೆಸ್ ಪ್ರತಿಸ್ಪರ್ಧಿ ಇರಬಹುದು ಅಷ್ಟೆ. ಆದರೆ, ಕಾಲಕಾಲಕ್ಕೆ ಬಿಜೆಪಿ ಕ್ಷೇತ್ರದಲ್ಲಿ ಸದೃಢವಾಗಿ ಬೆಳೆದಿದೆ. ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳಿದ್ದು, ಪ್ರೀತಿಸುವ ಜನರು ಸಹ ಅಪಾರವಾಗಿದ್ದಾರೆ. ಕ್ಷೇತ್ರದಲ್ಲಿ ಸಂಚರಿಸಿದಾಗ ಮೋದಿಯ ವ್ಯಕ್ತಿತ್ವ ವನ್ನು ನೋಡಿ ಓಟು ಹಾಕುತ್ತಾರೆ ಎಂದು ಕೆಲವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇದರ ಜತೆಗೆ ನಾನು ಕೈಗೊಂಡಿರುವ ಕೆಲಸಗಳು ನನ್ನ ಕೈಹಿಡಿಯಲಿವೆ ಎಂಬ ನಂಬಿಕೆ ಇದೆ.

ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ನಿಮ್ಮ ಕೊಡುಗೆ ಏನು? 

ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ನೀರಿನ ಬವಣೆಯನ್ನು ನಿಭಾಯಿಸಲಾಗಿದೆ. ವ್ಯವಸ್ಥಿತವಾಗಿ ನೀರಿನ ಸರಬರಾಜು ಮಾಡಲಾಗಿದೆ. ಕಸ ವಿಲೇವಾರಿ ಉತ್ತಮವಾಗಿದೆ. ಜನ ಸಾಮಾನ್ಯರು ತಮ್ಮ ಸಮಸ್ಯೆಗಳನ್ನು ಫೋನ್, ಇ-ಮೇಲ್, ವಾಟ್ಸಪ್ ಸೇರಿದಂತೆ ಯಾವುದೇ ಮೂಲಕ ತಿಳಿಸಿದರೂ ಬಗೆಹರಿಸುವ ಕೆಲಸ ಮಾಡಲಾಗಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಮಾಡಲಾಗಿದೆ. ಅಂಗನವಾಡಿ ಕೇಂದ್ರಗಳನ್ನು ಹೆಚ್ಚಿಸಲಾಗಿದೆ. ಹಿರಿಯ ನಾಗರಿಕರಿಗೆ ಸವಲತ್ತುಗಳನ್ನು ಕಲ್ಪಿಸಲಾಗಿದೆ. ಸ್ವಚ್ಛ
ಭಾರತಕ್ಕೆ ಆದ್ಯತೆ ನೀಡಿ ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲಾ ಜಯಂತಿಗಳನ್ನು ಆಚರಿಸಲಾಗುತ್ತಿದೆ. 

ನಿಮ್ಮ ಪಕ್ಷದ ಪ್ರಕಾಶ್ ಅಯ್ಯಂಗಾರ್  ಅವರು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈಗ ಪ್ರಚಾರದಲ್ಲಿ ನಿಮಗೆ ಸಾಥ್ ನೀಡುತ್ತಿದ್ದಾರೆಯೇ?

ಟಿಕೆಟ್ ಕೇಳುವುದು ತಪ್ಪಲ್ಲ. ಪ್ರತಿಯೊಬ್ಬರಿಗೂ  ಕೇಳುವ ಹಕ್ಕಿದೆ. ಕೊನೆಗೆ ಪಕ್ಷದ ನಿರ್ಣಯಕ್ಕೆ ಬದ್ಧವಾಗಿರಬೇಕು. ನನಗೂ ಆರ್‌ಎಸ್‌ಎಸ್ ಮಾರ್ಗದರ್ಶನ ಇದೆ. ಸದ್ಯಕ್ಕೆ ಚುನಾವಣಾ ಪ್ರಚಾರದಲ್ಲಿ ನನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಎಲ್ಲರ  ವಿಶ್ವಾಸದೊಂದಿಗೆ ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದೇನೆ. 

ಅಭಿವೃದ್ಧಿ ಕ್ಷೇತ್ರ ಎನಿಸಿದರೂ ಮೂಲ ಸಮಸ್ಯೆಗಳು ಜೀವಂತವಾಗಿವೆಯಲ್ಲ?

ಜನರು ಸಮಸ್ಯೆಯೊಂದಿಗೆ ಬದುಕುವುದನ್ನು ಕಲಿತುಬಿ ಟ್ಟಿದ್ದಾರೆ. ಅದರಿಂದ ಮುಕ್ತಿ ಕೊಡಬೇಕಾಗಿರುವುದು ಜನಪ್ರತಿನಿಧಿಗಳಾದ ನಾವುಗಳು. ಸಮಸ್ಯೆಗಳನ್ನು ಅರಿತು ಒತ್ತು ನೀಡಬೇಕು. ಜನರ ದೃಷ್ಟಿಕೋನವನ್ನು ಬದಲಿಸಿ ಪ್ರಶ್ನಿಸುವ ಮನೋಭಾವ ಮೂಡಿಸಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು ಹಾಗೂ ಕಾಳಜಿ ವಹಿಸಬೇಕು. ಹೊರ ರಾಜ್ಯ, ದೇಶದಿಂದ ಬರುವವರು ಭಯಬೀಳದಂತಹ ವಾತಾವರಣ ಸೃಷ್ಟಿಸಬೇಕು. ಕ್ಷೇತ್ರದಲ್ಲಿ ಶ್ರಮಿಕ ವರ್ಗದವರು ಹಲವು ಮಂದಿ ಇದ್ದಾರೆ. ಅವರ ಕೈಗೆಟುಕುವ ಕೆಲಸಗಳಾಗಬೇಕು. ಈ ನಿಟ್ಟಿನಲ್ಲಿ ನಾನು ಕಾರ್ಯೋನ್ಮುಖವಾಗಿದ್ದೇನೆ.

ಕ್ಷೇತ್ರದ ಜನರು ಮತ್ತೊಮ್ಮೆ ನಿಮಗೆ ಏಕೆ  ಮತ ಹಾಕಬೇಕು ಹೇಳಿ? 

ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡಿದರೂ ಸರ್ಕಾರದ ಸ್ಪಂದನೆ ಸರಿ ಇಲ್ಲದ ಕಾರಣ ಕಳಪೆ ವ್ಯವಸ್ಥೆ ಇದೆ. ಅದನ್ನು ಸರಿಪಡಿಸುವ ತುಡಿತ ಇದೆ. ಕ್ಷೇತ್ರದ ಜನರ ನಾಡಿಮಿಡಿತ ಅರ್ಥ ಮಾಡಿಕೊಂಡಿದ್ದೇನೆ. ಸಾಕಷ್ಟು ಕೆಲಸಗಳನ್ನು ನಾನೇ ಖುದ್ದಾಗಿ ಮುಂದೆ ನಿಂತು ಮಾಡಿಸುತ್ತೇನೆ. ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಹಿಂದೇಟು ಹಾಕಿಲ್ಲ. ಆರೋಗ್ಯ, ಶಿಕ್ಷಣ ಸೇರಿದಂತೆ ಪಾರ್ಕ್, ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ವೃತ್ತಿಪರತೆಯಂತೆ ರಾಜಕೀಯ ಕೆಲಸ ಮಾಡುತ್ತೇನೆ. ನನ್ನ ಕಚೇರಿಯ ವೃತ್ತಿಪರತೆ ಕೆಲಸ ನೋಡಿದರೆ ನನಗೆ ಮತ ಹಾಕಬೇಕು ಎಂಬ ಭಾವನೆ ಜನರಲ್ಲಿ ಮೂಡುತ್ತದೆ. ಅಷ್ಟರ ಮಟ್ಟಿಗೆ ಶಿಸ್ತಿನಿಂದ ಕಾರ್ಯನಿರ್ವಹಿಸುತ್ತೇನೆ. ಯಾವುದೇ ಜಾತಿ ಆಧಾರದ ಮೇಲೆ ಸಮಸ್ಯೆಗಳನ್ನು ಆಲಿಸುವುದಿಲ್ಲ. ಯಾವುದೇ ಭಾಷಿಕರನ್ನು ವಿರೋಧಿಸುವುದಿಲ್ಲ. ಎಲ್ಲಾ ಸಮುದಾಯದವರು ಬಂದು ಸಮಸ್ಯೆಗಳನ್ನು ಹೇಳುತ್ತಾರೆ. ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಎಲ್ಲರಿಗೂ ಸಲ್ಲುವ ರೀತಿಯಲ್ಲಿ ಪ್ರತಿನಿಧಿ ನಾನಾಗಿದ್ದೇನೆ ಎಂಬ ಸಂತಸ ನನ್ನಲ್ಲಿದೆ.