Asianet Suvarna News Asianet Suvarna News

ಬಿಜೆಪಿ ಹೈಕಮಾಂಡ್ ಪ್ರಬಲವಾಗಿದ್ದರೂ ಅವರದು ಮಾರ್ಗದರ್ಶನ ಅಷ್ಟೆ, ನಿರ್ಧಾರ ರಾಜ್ಯ ನಾಯಕರದ್ದೇ!

ಸಂಘಟನೆ ಹಿನ್ನೆಲೆಯಿಂದ ಬಂದು ರಾಜ್ಯ ಬಿಜೆಪಿಯ ಸಂಘಟನೆಯಲ್ಲಿ ಮಹತ್ವದ ಪಾತ್ರ ವಹಿಸಿದವರಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಿಂಬಾವಳಿ ಕೂಡ ಒಬ್ಬರು. ಲಿಂಬಾವಳಿ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯವರು. ಹಿಂದೆ ವಿಧಾನಪರಿಷತ್ ಸದಸ್ಯರಾಗಿದ್ದ ಅವರು 2008 ರ ಚುನಾವಣೆಯಲ್ಲಿ ಹೊಸದಾಗಿ ರಚನೆಯಾಗಿದ್ದ ರಾಜಧಾನಿ ಬೆಂಗಳೂರಿನ ಮಹದೇವಪುರ ಕ್ಷೇತ್ರದಿಂದ ಕಣಕ್ಕಿಳಿದಾಗ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದರು.

Aravinda Limbavali

ಸಂಘಟನೆ ಹಿನ್ನೆಲೆಯಿಂದ ಬಂದು ರಾಜ್ಯ ಬಿಜೆಪಿಯ ಸಂಘಟನೆಯಲ್ಲಿ ಮಹತ್ವದ ಪಾತ್ರ ವಹಿಸಿದವರಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಿಂಬಾವಳಿ ಕೂಡ ಒಬ್ಬರು. ಲಿಂಬಾವಳಿ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯವರು. ಹಿಂದೆ ವಿಧಾನಪರಿಷತ್ ಸದಸ್ಯರಾಗಿದ್ದ ಅವರು 2008 ರ ಚುನಾವಣೆಯಲ್ಲಿ ಹೊಸದಾಗಿ ರಚನೆಯಾಗಿದ್ದ ರಾಜಧಾನಿ ಬೆಂಗಳೂರಿನ ಮಹದೇವಪುರ ಕ್ಷೇತ್ರದಿಂದ ಕಣಕ್ಕಿಳಿದಾಗ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದರು. ಆದರೆ, ಆ ಕ್ಷೇತ್ರದಿಂದಲೇ ಎರಡು ಬಾರಿ ಗೆದ್ದು ಇದೀಗ ಹಾಟ್ರಿಕ್ ಬಾರಿಸುವ ಉತ್ಸಾಹದಲ್ಲಿದ್ದಾರೆ.

ಚುನಾವಣೆಯ ಪಕ್ಷದ ತಂತ್ರಗಾರಿಕೆ ರೂಪಿಸುವಲ್ಲಿ ತೆರೆಮರೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲಿಂಬಾವಳಿ ಅವರು ಬಿರುಸಿನ ಪ್ರಚಾರದ ನಡುವೆ ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನ ನೀಡಿ ಪಕ್ಷ ಹಾಗೂ ಚುನಾವಣೆ ಕುರಿತ ಹಲವು ಪ್ರಶ್ನೆಗಳಿಗೆ ನೇರ ಉತ್ತರ ನೀಡಿದ್ದಾರೆ.

ನರೇಂದ್ರ ಮೋದಿಯವರ ‘ಅಚ್ಛೇ ದಿನ್’ ಕರ್ನಾಟಕದಲ್ಲಿ ಬರಬಹುದು ಎಂದು  ನಿರೀಕ್ಷಿಸಬಹುದೇ?
ಕರ್ನಾಟಕದಲ್ಲಿ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಚ್ಛೇ ದಿನ್ ಇತ್ತು. ಆದರೆ, ನಂತರ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಅಚ್ಛೇ ದಿನ್ ಹೋಯಿತು. ಈಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಏರಿದ ನಂತರ ಮತ್ತೆ ಅಚ್ಛೇ ದಿನ್ ಬರುವುದು ನಿಶ್ಚಿತ.

ನೀವು ಸಂಘಟನೆ ಹಿನ್ನೆಲೆಯಿಂದ ಬಂದವರು. ಅಮಿತ್ ಶಾ ಅವರು ಕಳೆದ ಒಂದು ವರ್ಷದಿಂದ ಪಕ್ಷದ ರಾಜ್ಯ ಘಟಕವನ್ನು ನಿರ್ವಹಿಸಿದ ರೀತಿ ಹೇಗಿತ್ತು?
ಅಮಿತ್ ಶಾ ಅವರು ಸಂಘಟನೆಗೆ ಹೊಸ ಸ್ವರೂಪ ನೀಡಿ ಬಲಗೊಳಿಸುವ ಪ್ರಯೋಗವನ್ನು ಮೊದಲು ಗುಜರಾತ್‌ನಲ್ಲಿ ಮಾಡಿದರು. ನಂತರ ದೇಶದ ಅನೇಕ ರಾಜ್ಯಗಳಲ್ಲಿ ಪ್ರಯೋಗ ಮಾಡಿ ಯಶಸ್ವಿಯಾದರು. ಇದೀಗ ಕರ್ನಾಟಕದಲ್ಲೂ ಪಕ್ಷ ಸಂಘಟನೆ ಗಟ್ಟಿಗೊಳಿಸಿದ್ದಾರೆ. ಸಂಘಟನೆಗೆ ಸಂಬಂಧಿಸಿದಂತೆ ನಮ್ಮಲ್ಲೂ ಕೆಲವು ಸಣ್ಣ ಪುಟ್ಟ ದೋಷಗಳಿದ್ದವು. ಈಗ ಅವುಗಳೆಲ್ಲವನ್ನೂ ಮೆಟ್ಟಿ ನಿಂತು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಚುನಾವಣೆ ಎದುರಿಸುವಲ್ಲಿ ಅಮಿತ್ ಶಾ ಅವರ ಪಾತ್ರ  ಪ್ರಮುಖವಾದದ್ದು.  ಬೂತ್ ಕಮಿಟಿ ಯಾಕೆ ರಚಿಸಬೇಕು? ಯಾವ್ಯಾವ ಮೋರ್ಚಾಗಳು ಏನು ಮಾಡಬೇಕು? ಪಕ್ಷದ ವಿವಿಧ ಹಂತದ ಪದಾಧಿಕಾರಿಗಳು ಏನು ಮಾಡಬೇಕು? ಜನಪ್ರತಿನಿಧಿಗಳು  ಏನು ಮಾಡಬೇಕು ಎಂಬಿತ್ಯಾದಿ ಅಂಶಗಳನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ. ಬಿಜೆಪಿಯನ್ನು ಮತ್ತೆ ಕೇಡರ್ ಆಧಾರಿತ ಪಕ್ಷವಾಗಿ ಬೆಳೆಸುವುದಕ್ಕೆ ಒತ್ತು ನೀಡುತ್ತಿದ್ದಾರೆ.

ಅಂದರೆ ಅಮಿತ್ ಶಾ ಅವರು ಪಕ್ಷದ ಬುನಾದಿ ಭದ್ರಗೊಳಿಸುವ ಕೆಲಸ ಮಾಡುತ್ತಿದ್ದಾರೆ?
ಹೌದು. ಇದು ನಮ್ಮ ಪಕ್ಷದ ಸಂಘಟನೆಗೆ ಹಾಕುತ್ತಿರುವ ಭದ್ರ ಬುನಾದಿ. ಇದರಿಂದ ಬಹಳ ಕಾಲ ಪಕ್ಷ ಹಾಗೂ ದೇಶವನ್ನು ಮುನ್ನಡೆಸಲು ಸಹಾಯವಾಗಲಿದೆ. ಈ ಕಾರಣಕ್ಕಾಗಿಯೇ ಅಮಿತ್ ಶಾ ಆಧುನಿಕ ಚಾಣಕ್ಯ ಎಂಬ ಹೆಸರು ಗಳಿಸಿದ್ದಾರೆ. ಅದು ಸುಮ್ಮನೆ ಬಂದಿಲ್ಲ. ನಾನು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಬಹಳ ಹತ್ತಿರದಿಂದ ಗಮನಿಸಿದ್ದೇನೆ. ಸಂಘಟನೆಯ  ವ್ಯಕ್ತಿಗಳಿಗೆ ಜವಾಬ್ದಾರಿ ಕೊಡುತ್ತಿರುವುದು ಪಕ್ಷದಲ್ಲಿನ ಎಲ್ಲರಿಗೂ ಸಂತೋಷ ಮತ್ತು ಸಮಾಧಾನ ಉಂಟುಮಾಡಿದೆ.

ಪ್ರಸಕ್ತ ವಿದ್ಯಮಾನಗಳನ್ನು ಗಮನಿಸಿದರೆ ಎಲ್ಲೋ ಒಂದು ಕಡೆ ಸ್ಥಳೀಯ ನಾಯಕತ್ವಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ಅನಿಸಿಲ್ಲವೇ?  ರಾಜ್ಯ ನಾಯಕರು ಏನೇನು ಮಾಡಬೇಕು, ಮಾಡಬಾರದು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತಿರುವಂತಿದೆ?
ಹಾಗೇನಿಲ್ಲ. ರಾಜ್ಯ ಘಟಕವೇ ಎಲ್ಲ ನಿರ್ಧಾರ ತೆಗೆದುಕೊಳ್ಳುತ್ತಿದೆ. ಹೈಕಮಾಂಡ್ ನಮಗೆ ಮಾರ್ಗದರ್ಶನ ಮಾಡುತ್ತಿದೆ ಅಷ್ಟೆ. ವರಿಷ್ಠರು ನಮಗೆ ಕಾಲಕಾಲಕ್ಕೆ ಏನಾಗುತ್ತಿದೆ ಎಂಬುದರ ಫೀಡ್ ಬ್ಯಾಕ್ ಕೊಡುತ್ತಿದ್ದಾರೆ. ಅದನ್ನು ಸರಿಪಡಿಸಿಕೊಂಡು ನಾವು ರಾಜ್ಯ ನಾಯಕರು ಮುಂದೆ ಹೋಗುತ್ತಿದ್ದೇವೆ. ಅಂತಿಮವಾಗಿ ಕೆಳಹಂತದ ಘಟಕಗಳ ಅಭಿಪ್ರಾಯ ಆಧರಿಸಿಯೇ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ.

ಅಮಿತ್ ಶಾ ರಾಜ್ಯ ನಾಯಕರಿಗೆ ಚೆನ್ನಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂಬ ಮಾತು ನಿಮ್ಮ ಪಕ್ಷದ ಪಾಳೆಯದಿಂದ  ಕೇಳಿಬಂದಿದೆ?
ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದೇನಲ್ಲ. ರಾಜ್ಯ ಘಟಕದಲ್ಲಿ ವ್ಯಕ್ತಿಗಳಲ್ಲಿನ ಅಭಿಪ್ರಾಯ ಭೇದದ ಹಿನ್ನೆಲೆಯಲ್ಲಿ ಕೆಲವು ವ್ಯತ್ಯಾಸಗಳಾಗಿದ್ದುದು ನಿಜ. ಹೀಗಾದರೆ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಸಾಧ್ಯವಿಲ್ಲ. ಜನ ಸೇವೆ ಮಾಡುವುದಕ್ಕೂ ಆಗುವುದಿಲ್ಲ ಎಂದು ಅವರು ನಮಗೆಲ್ಲ ಹಿತವಚನ ಹೇಳುವ ಮೂಲಕ ವ್ಯತ್ಯಾಸಗಳನ್ನು ಸರಿಪಡಿಸಿದ್ದಾರೆ.

ಈ ಚುನಾವಣೆಯಲ್ಲಿ ವಿಷಯಾಧಾರಿತ ಚರ್ಚೆಗಳಿಗಿಂತ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳೇ ಹೆಚ್ಚು ಪ್ರಾಮುಖ್ಯತೆ ಪಡೆದಿರುವಂತಿದೆ?
ಅಭಿವೃದ್ಧಿ ವಿಷಯಗಳನ್ನು ಪ್ರತಿ ಭಾಷಣದಲ್ಲೂ  ನಾಯಕರು ಹೇಳುತ್ತಾರೆ. ಆದರೆ, ಜನರಿಗೆ ಮತ್ತು ಮಾಧ್ಯಮಗಳಿಗೆ ಕ್ಯಾಚ್ ಆಗುವುದು ಯಾವುದೋ ಅದು ಹೈಲೈಟ್ ಆಗುತ್ತದೆ. ಅದು ಮುಂದುವರೆದು ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗುತ್ತದೆ. ರಾಜ್ಯದ ಭ್ರಷ್ಟ ಸರ್ಕಾರ ಬೇಡ, ಆಡಳಿತ ವಿರೋಧಿ ಅಲೆ ಇದೆ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ, ಹಿಂದಿನ ಬಿಜೆಪಿ ಸರ್ಕಾರ ಜನಪರ ಆಡಳಿತ ನೀಡಿತ್ತು ಎಂಬಿತ್ಯಾದಿ ಚುನಾವಣಾ ವಿಷಯಗಳಿವೆ. ಆದರೆ, ಸ್ವಾಭಾವಿಕವಾಗಿ ಮಾಧ್ಯಮಗಳಲ್ಲಿ ಯಾವುದು ಪ್ರಾಮುಖ್ಯತೆಗಳಿಸುತ್ತದೆಯೋ ಅದನ್ನು ಜನ ಅನುಸರಿಸುತ್ತಾರೆ.

ಬೆಂಗಳೂರು ಬಿಜೆಪಿ ನಾಯಕತ್ವಕ್ಕಾಗಿ ನಿಮ್ಮ ಮತ್ತು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ನಡುವೆ ಕೋಲ್ಡ್ ವಾರ್ ನಡೆಯುತ್ತಿದೆ?
ಆ ರೀತಿ ಯಾವುದೂ ಇಲ್ಲ. ಅಶೋಕ್ ನಮ್ಮ ನಾಯಕರು. ಅವರ ನಾಯಕತ್ವದಲ್ಲಿ ಬೆಂಗಳೂರಿಗೆ ಅನೇಕ ಕೆಲಸಗಳನ್ನು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಕೆಲಸಗಳನ್ನು ಮಾಡುತ್ತೇವೆ.  ಬಿಜೆಪಿ ಹೆಚ್ಚು ಸ್ಥಾನ ಗಳಿಸುವುದು ಕಷ್ಟ ಎಂಬ ವರದಿಗಳ ಹಿನ್ನೆಲೆಯಲ್ಲಿ ಕೊನೆಯ ಗಳಿಗೆಯಲ್ಲಿ ಪ್ರಧಾನಿ ಮೋದಿ ಅವರ ಸಮಾವೇಶಗಳ ಸಂಖ್ಯೆ ಹೆಚ್ಚಿಸಲಾಯಿತು ಎಂಬ ಆರೋಪ ಕಾಂಗ್ರೆಸ್ ಪಕ್ಷದಿಂದ ಕೇಳಿಬಂದಿದೆ. ಅದರಲ್ಲಿ ಹುರುಳಿಲ್ಲ.

ಮೋದಿ ಅವರು ಚುನಾವಣೆಯಲ್ಲಿ ನಮಗೆ ದೊಡ್ಡ ಅಸ್ತ್ರ. ಯಾವುದೇ ರಾಜ್ಯದ ಚುನಾವಣೆ ಇದ್ದರೂ ಮೋದಿ ಅವರು ಪ್ರಚಾರ ಕೈಗೊಳ್ಳುತ್ತಾರೆ. ನಾವು ಇನ್ನೂ ಹೆಚ್ಚು  ಸಮಾವೇಶಗಳಲ್ಲಿ ಪಾಲ್ಗೊಳ್ಳುವಂತೆ ಮೋದಿ ಅವರಿಗೆ ಮನವಿ ಮಾಡಿದ್ದೆವು. ಮುಖ್ಯವಾಗಿ ದೇಶ ನಡೆಸುವ ಜವಾಬ್ದಾರಿ ಹೊತ್ತಿರುವ ಮೋದಿ ಅವರು ಇಂಥ ಪ್ರವಾಸಗಳ ಮೂಲಕ ದೇಶದ ವಿವಿಧ  ಭಾಗಗಳಲ್ಲಿ ಜನರ ಅಭಿಪ್ರಾಯಗಳನ್ನು ಅರಿತುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಜನರು ಕೂಡ ಮೋದಿ ಬರುವುದಿಲ್ಲವೇ ಎಂದು ಕೇಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಒಬ್ಬ ಪ್ರಧಾನಿ ಸುಮ್ಮನೆ  ದೆಹಲಿಯಲ್ಲಿ ಕುಳಿತುಕೊಳ್ಳದೆ ದೇಶಾದ್ಯಂತ ಸುತ್ತಾಡುವುದು ಅಪರೂಪದ ಸಂಗತಿ.

ನೀವು ಮಹದೇವಪುರ ಕ್ಷೇತ್ರದಿಂದ ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿದ್ದೀರಿ?
ಕಳೆದ ಹತ್ತು ವರ್ಷಗಳಲ್ಲಿ ನಾನು ಏನು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂಬುದು ಕ್ಷೇತ್ರದ ಜನರಿಗೆ ಗೊತ್ತಿದೆ. ಮೇಲಾಗಿ ನಾನು ಪ್ರತಿ ವರ್ಷ ಕ್ಷೇತ್ರಕ್ಕೆ ಲಭಿಸಿರುವ ಅನುದಾನ ಮತ್ತು ಅದರ ವೆಚ್ಚ ಕುರಿತು ಕಳೆದ ಚುನಾವಣೆ ವೇಳೆ ಲೆಕ್ಕ ಕೊಟ್ಟಿದ್ದೇನೆ. ಈ ಬಾರಿಯೂ ನೀಡಿದ್ದೇನೆ. ಒಂದೇ ಒಂದು ವ್ಯತ್ಯಾಸವೆಂದರೆ ಈ ಸರ್ಕಾರದಲ್ಲಿ ನಮ್ಮ ಕ್ಷೇತ್ರಕ್ಕೆ ಹೆಚ್ಚು ಅನುದಾನ ಸಿಗಲಿಲ್ಲ. 798 ಕೋಟಿ ರು. ಲಭಿಸಿದೆ. ಆದರೆ, ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ 1400 ಕೋಟಿ ಅನುದಾನ ಸಿಕ್ಕಿತ್ತು. ನಮ್ಮ ಕ್ಷೇತ್ರ 2006 ರಲ್ಲಿ ಹೊಸದಾಗಿ ಬಿಬಿಎಂಪಿ ರಚನೆಯಾದ ವೇಳೆ ಒಂದು ನಗರಸಭೆ ಮತ್ತು 31  ಹಳ್ಳಿಗಳು ಸೇರ್ಪಡೆಯಾಗಿದ್ದವು. ಹೀಗಾಗಿ, ಮೂಲಸೌಕರ್ಯಗಳನ್ನು ಕಲ್ಪಿಸಬೇಕಾದ ಜವಾಬ್ದಾರಿಯಿದೆ. ಅದಕ್ಕಾಗಿ ಹೆಚ್ಚಿನ ಅನುದಾನದ ಅಗತ್ಯವಿದೆ. 

ತೆರಿಗೆ ಪಾವತಿಯಲ್ಲಿ ನಿಮ್ಮ ಮಹದೇವಪುರ ಕ್ಷೇತ್ರ ದಾಖಲೆ ಸಾಧಿಸಿದೆಯಂತೆ?
ಹೌದು. ಇಡೀ ಕರ್ನಾಟಕಕ್ಕೆ ಅತಿಹೆಚ್ಚು ತೆರಿಗೆ ಪಾವತಿಯಾಗುವ ಕ್ಷೇತ್ರ ಎಂದರೆ ಅದು ಮಹದೇವಪುರ. ಕಳೆದ ಐದು ವರ್ಷಗಳಲ್ಲಿ ಕೇವಲ ಬಿಬಿಎಂಪಿಯೊಂದಕ್ಕೇ ಮಹದೇವಪುರ ಕ್ಷೇತ್ರದಿಂದ 1,700 ಕೋಟಿ ರು. ತೆರಿಗೆ ಪಾವತಿಯಾಗಿದೆ. ಅದಕ್ಕೆ ತಕ್ಕಂತೆ ಅನುದಾನ ಬಿಡುಗಡೆ ಮಾಡಬೇಕು ಎನ್ನುವುದನ್ನು ನಾನು ಹಲವು ಬಾರಿ ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡಿದ್ದೇನೆ.

-ಸಂದರ್ಶನ: ವಿಜಯ್ ಮಲಗಿಹಾಳ 
 

Follow Us:
Download App:
  • android
  • ios