Asianet Suvarna News Asianet Suvarna News

106 ಹೊಸಬರಿಗೆ ಬಿಜೆಪಿ ಟಿಕೆಟ್ ನೀಡಿದೆ : ಅನಂತ್ ಕುಮಾರ್

ಅನಂತಕುಮಾರ್ ಯಡಿಯೂರಪ್ಪ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಮಾಡಲು ಟೊಂಕಕಟ್ಟಿ ನಿಂತಿದ್ದಾರೆ. ಬಿರುಸಿನ ಪ್ರಚಾರದ ನಡುವೆಯೇ ವಿಶೇಷ ಸಂದರ್ಶನದಲ್ಲಿ ಅವರು ಹಲವಾರು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. 

Ananth Kumar Interview

ವಿಜಯ್ ಮಲಗಿಹಾಳ

ಬೆಂಗಳೂರು :  ರಾಜ್ಯ ಬಿಜೆಪಿ ಅಂದಾಕ್ಷಣ ಬಿ.ಎಸ್. ಯಡಿಯೂರಪ್ಪ ನಂತರ ಅವರ ಬೆನ್ನ ಹಿಂದೆಯೇ ಕೇಳಿಬರುವ ಹೆಸರು ಕೇಂದ್ರ ಸಚಿವ ಅನಂತಕುಮಾರ್ ಅವರದ್ದು. ಬಿಜೆಪಿಯ ಜೋಡೆತ್ತು, ಹಕ್ಕ-ಬುಕ್ಕರು ಎಂಬೆಲ್ಲ ನಾಮಧೇಯಗಳಿಂದ ಕರೆಯಲ್ಪಡುವ ಉಭಯ ನಾಯಕರ ನಡುವೆ ಹಿಂದೆ ಆಗಾಗ ತುಸು ಮುನಿಸು ಕಂಡು ಬರುತ್ತಿದ್ದರೂ ಅದನ್ನು ಬಹಿರಂಗವಾಗಿ ತೋರಿಸಿಕೊಳ್ಳದೆ ಒಟ್ಟಾಗಿ ಶ್ರಮಿಸು ವುದು ಅನಂತಕುಮಾರ್ ಅವರ ವೈಶಿಷ್ಟ್ಯ. ಹಲವು ದಶಕಗಳಿಂದ ರಾಷ್ಟ್ರ ರಾಜಕಾರಣದಲ್ಲೇ ಮುಂದುವರೆದಿರುವ ಅನಂತಕುಮಾರ್ ಅವರು ಸದ್ಯ ನರೇಂದ್ರ ಮೋದಿ ಸಂಪುಟದಲ್ಲಿ ಪ್ರಮುಖ ಜವಾಬ್ದಾರಿ ಹೊತ್ತಿದ್ದಾರೆ. ಪಕ್ಷದ ವರಿಷ್ಠರು ಕರ್ನಾಟಕಕ್ಕೆ ಸಂಬಂಧಿಸಿದ ಪ್ರತಿ ಬೆಳವಣಿಗೆಗಳಲ್ಲೂ ಅನಂತಕುಮಾರ್ ಅವರ ಅಭಿಪ್ರಾಯ ಪಡೆಯುತ್ತಾರೆ. ಅಷ್ಟರಮಟ್ಟಿಗೆ ಅನಂತಕುಮಾರ್ ಪ್ರಭಾವಿಯಾಗಿದ್ದಾರೆ.  ಯಡಿಯೂರಪ್ಪ ಅವರನ್ನು ಮತ್ತೊಮ್ಮೆ ಮುಖ್ಯ ಮಂತ್ರಿಯನ್ನಾಗಿ ಮಾಡಲು ಟೊಂಕಕಟ್ಟಿ ನಿಂತಿದ್ದಾರೆ. ಬಿರುಸಿನ ಪ್ರಚಾರದ ನಡುವೆಯೇ ‘ಕನ್ನಡಪ್ರಭ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಹಲವಾರು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. 

ಬಹುತೇಕ ಚುನಾವಣಾ ಪೂರ್ವ ಸಮೀಕ್ಷೆಗಳೂ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ರಚನೆಯಾಗಲಿದೆ ಎಂದೇ ಭವಿಷ್ಯ ನುಡಿದಿವೆ? 

ನಾನು 1977 ರಿಂದಲೂ ಚುನಾವಣೆಗಳನ್ನು ನೋಡುತ್ತಿ ದ್ದೇನೆ. ಯಾವುದೇ ಚುನಾವಣೆಯಲ್ಲೂ ಸಮೀಕ್ಷೆಗಳಿಗೆ ಅನುಗುಣವಾಗಿ  ಫಲಿತಾಂಶ ಹೊರಬಿದ್ದಿಲ್ಲ. ಮತದಾರರು  ತಾವು ಸುಪ್ರೀಂ ಎಂದು ಸಾಬೀತುಪಡಿಸಿರುವುದೇ ಇದಕ್ಕೆ ಕಾರಣ. ಈ ಬಾರಿ ರಾಜ್ಯದಲ್ಲಿ ಅಭೂತಪೂರ್ವ ಫಲಿತಾಂಶ ಹೊರಬರಲಿದೆ. ಕಾದು ನೋಡಿ. ಉತ್ತರ ಪ್ರದೇಶದಲ್ಲಿ ಬಿಜೆಪಿ ೩೨೫ ಸೀಟು ಗೆಲ್ಲಲಿದೆ ಎಂಬುದನ್ನು ಯಾವ ಮಾಧ್ಯಮಗಳೂ ತಮ್ಮ ಸಮೀಕ್ಷೆಯಲ್ಲಿ ಹೇಳಿರಲಿಲ್ಲ.

ಗುಜರಾತ್‌ನಲ್ಲಿ ಸಮೀಕ್ಷೆ ಹೆಚ್ಚೂ ಕಡಮೆ ಫಲಿತಾಂಶದ ಸಮೀಪದಲ್ಲೇ ಇತ್ತಲ್ಲವೇ?

ಒಂದು ಗಮನಿಸಬೇಕು. ಅಲ್ಲಿ ಬಿಜೆಪಿ ಸತತ ನಾಲ್ಕು ಬಾರಿ  ಸರ್ಕಾರ ರಚಿಸಿ ಐದನೇ ಬಾರಿ ಚುನಾವಣೆ ಎದುರಿಸಿತ್ತು. ಅದನ್ನು ಯಾವ ಮಾಧ್ಯಮವೂ ಹೇಳಲಿಲ್ಲ.

ಹಾಗಿದ್ದರೆ ನಿಮ್ಮ ಪ್ರಕಾರ ಕಾಂಗ್ರೆಸ್ ಪಕ್ಷ ಎಷ್ಟು ಸ್ಥಾನ ಗಳಿಸಲಿದೆ? 

ಕಾಂಗ್ರೆಸ್ ಪಕ್ಷ ಕರ್ನಾಟಕ ವಿಧಾನಸಭೆಯಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಗಳಿಸಿದ್ದ ಒಟ್ಟು ಸ್ಥಾನಗಳಷ್ಟೇ ಪಡೆಯಲಿದೆ. ಸುಮಾರು 48 ಸ್ಥಾನ ಗಳಿಸಬಹುದು. 

ನರೇಂದ್ರ ಮೋದಿ ನೇತೃತ್ವದ ಸರ್ಕಾರ 4  ವರ್ಷ ಪೂರೈಸಿದರೂ ಅಚ್ಛೇ ದಿನ್ ಎಲ್ಲಿದೆ ಎಂಬುದು ಕಾಣಿಸುತ್ತಿಲ್ಲ ಎಂದು ಕಾಂಗ್ರೆಸ್ ಟೀಕೆ?

ಹತ್ತು ವರ್ಷಗಳ ಕಾಲ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಹಗರಣಗಳ ಸರ್ಕಾರ. ಒಂದೇ ಒಂದು ಹಗರಣ ಇಲ್ಲದ ಮೋದಿ ಅವರ ಸರ್ಕಾರ. ಒಂದಲ್ಲ, ಎರಡರಲ್ಲ. ಹತ್ತು ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಇಲ್ಲದಿದ್ದರೆ 21 ರಾಜ್ಯಗಳಲ್ಲಿ ಬಿಜೆಪಿಗೆ ಗೆಲುವು ಸಾಧ್ಯವಿರಲಿಲ್ಲ. 

ಏನೇ ಆದರೂ ಅಗತ್ಯ ವಸ್ತುಗಳ ಬೆಲೆ ಏರಿಕೆ  ನಿಯಂತ್ರಣಕ್ಕೆ ತರಲಿಲ್ಲ ಎಂಬ ಆರೋಪವಿದೆ? 

ಬೆಲೆ ಏರಿಕೆ ಅತ್ಯಂತ ಕಡಮೆಯಾಗಿದೆ ಎಂಬುದು ಎಲ್ಲರ ಅಭಿಪ್ರಾಯ. ಅಗತ್ಯ ವಸ್ತುಗಳ ಈಗಿನ ಕಡಮೆ ದರ ಕಳೆದ ಸರ್ಕಾರದ ಅವಧಿಯಲ್ಲಿ ಇರಲಿಲ್ಲ.

ದೇವೇಗೌಡರ ಬಗ್ಗೆ ಗೌರವ ತೋರುವ ಮೋದಿ ಅವರು ಅಡ್ವಾಣಿ ಅವರಿಗೆ ಗೌರವ ತೋರದೆ ಅಪಮಾನಿಸಿದರು ಎಂದು ಕೆಪಿಸಿಸಿ
ಅಧ್ಯಕ್ಷ ಪರಮೇಶ್ವರ್ ಟೀಕಿಸಿದ್ದಾರೆ? 

ವಾಜಪೇಯಿ ಮತ್ತು ಅಡ್ವಾಣಿ ಅವರು ನಮ್ಮ ಪಕ್ಷದ ದೊಡ್ಡ ನಾಯಕರು. ಮೋದಿ ಸೇರಿದಂತೆ ನಾವೆಲ್ಲರೂ ಅವರ ಗರಡಿಯಲ್ಲೇ ಬೆಳೆದು ಬಂದಿದ್ದೇವೆ. ಅವರನ್ನು ಅಪಮಾನಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ದೇವೇಗೌಡರ ಬಗ್ಗೆ ನಮಗೆ ಗೌರವವಿದೆ. ನಮಗೆ ವಲ್ಲಭಭಾಯಿ ಪಟೇಲ್ ಬಗ್ಗೆ ಗೌರವವಿದೆ. ಶಾಸ್ತ್ರಿ ಬಗ್ಗೆ ಗೌರವವಿದೆ. ಅಂಬೇಡ್ಕರ್ ಬಗ್ಗೆ ಗೌರವವಿದೆ. ಆದರೆ, ಇವರೆಲ್ಲರ ಬಗ್ಗೆ ಕಾಂಗ್ರೆಸ್ಸಿಗೆ ಗೌರವವಿಲ್ಲ.  ಇಂದಿರಾ ಗಾಂಧಿಗೆ ಭಾರತರತ್ನ ಕೊಟ್ಟರು. ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಡಲಿಲ್ಲ. ಅವರದೇ ಪಕ್ಷದ ನರಸಿಂಹರಾವ್ ಮತ್ತು ಸೀತಾರಾಂ ಕೇಸರಿ ಅವರಿಗೂ ಗೌರವ ಕೊಡಲಿಲ್ಲ. ಬಿಜೆಪಿ ಹಿರಿಯರಿಗೆ ಗೌರವ ಕೊಡುವ ಪಕ್ಷ.

ಕಳೆದ ಲೋಕಸಭಾ ಚುನಾವಣೆ ವೇಳೆ ಮೋದಿ ಅವರು ದೇವೇಗೌಡರು ವೃದ್ಧಾಶ್ರಮ ಸೇರಲಿ ಎಂಬ ಮಾತನ್ನು ಹೇಳಿದ್ದರಂತೆ?

ಮೋದಿ ಅವರು ಎಲ್ಲಿಯಾದರೂ ಹಾಗೆ ಹೇಳಿದ್ದಾರೆ ಎಂಬುದಕ್ಕೆ ದಾಖಲೆ ಇದ್ದರೆ ತೋರಿಸಲಿ. ಇನ್ನು ಮೋದಿ ಅವರು ಸಿದ್ದರಾಮಯ್ಯ ಕಿವಿಯಲ್ಲಂತೂ ಹೇಳಿರಲಿಕ್ಕಿಲ್ಲ. ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯವರು ಒಳ್ಳೆಯ ಪದಗಳನ್ನು ಬಳಸಿ ಭಾಷಣ ಮಾಡುತ್ತಾರೆ, ಮಾತಿನಲ್ಲೇ ಮನೆ ಕಟ್ಟುತ್ತಾರೆ ಎಂದು ಸಿದ್ದರಾಮಯ್ಯ ಟೀಕಿಸುತ್ತಾರೆ. ಮಾತಿನಲ್ಲೇ ಮನೆ ಕಟ್ಟುವ ಹಾಗಿದ್ದಿದ್ದರೆ ಯೂರಿಯಾ ಗೊಬ್ಬರ ಯಾಕೆ ದೇಶದೆಲ್ಲೆಡೆ ಸಿಗುತ್ತಿದೆ? ಕೊರತೆ ಯಾಕಿಲ್ಲ? 

ದೇಶದಲ್ಲಿ ಒಂದು ಕಡೆಯೂ ಗೊಬ್ಬರಕ್ಕಾಗಿ ಲಾಠಿ ಚಾರ್ಜ್ ಇಲ್ಲ. ಗದ್ದಲ ಇಲ್ಲ. ಯುಪಿಎ ಅವಧಿಯಲ್ಲಿ ಜನರಿಕ್ ಔಷಧ ಮಳಿಗೆಗಳ ಸಂಖ್ಯೆ 99 ಇತ್ತು. ಈಗ 3000 ಮಳಿಗೆ ಗಳು ಸ್ಥಾಪನೆಯಾಗಿವೆ. ಮಾತಿನಲ್ಲಿ ಮನೆ ಕಟ್ಟುವುದು ಎಂದರೆ ಏನರ್ಥ? 


ಕಳೆದ 4 ವರ್ಷಗಳಲ್ಲಿ ಆಗಿರುವಷ್ಟು ಕೆಲಸ ಹಿಂದೆಂದೂ ಆಗಿಲ್ಲ. ಎಲ್ಲ ಇಲಾಖೆಗಳಲ್ಲೂ ಕೆಲಸ ಆಗಿದೆ. ತೆರಿಗೆ ಆರೂವರೆ ಲಕ್ಷ ಕೋಟಿ ರು. ಸಂಗ್ರಹವಾ ಗುತ್ತಿತ್ತು. ಈಗ ಅದು 12 ಲಕ್ಷ ಕೋಟಿ ರು.ಗೆ ಹೆಚ್ಚಿದೆ.

ರಾಹುಲ್‌ಗೆ ಸರ್ ಎಂ.ವಿಶ್ವೇಶ್ವರಯ್ಯ ಹೆಸರು  ಹೇಳಲು ಬರದಿರುವುದನ್ನು ಪ್ರಧಾನಿ ಮೋದಿ ಬಹಿರಂಗ ಸಮಾವೇಶದಲ್ಲಿ ಅಣುಕಿಸಿದ್ದು
ಸರಿಯೇ ಎಂಬ ಪ್ರಶ್ನೆ ಕಾಂಗ್ರೆಸ್‌ನದು? 

ನಾನು ರಾಹುಲ್ ಅವರಷ್ಟು ಅಷ್ಟು ದೊಡ್ಡ ಮನುಷ್ಯ ಅಲ್ಲ.  ಆದರೆ, ನಾನು ಕೇರಳಕ್ಕೆ ಹೋದಾಗ ಮಲೆಯಾಳಿ, ಬಿಹಾರಕ್ಕೆ ಹೋದಾಗ ಭೋಜಪುರಿ ಬರೆದುಕೊಂಡು ಮಾತನಾಡುತ್ತೇನೆ. ಯಾವುದಾದರೂ ಒಂದು ಭಾಷೆಯ ಬಗ್ಗೆ ಗೌರವ ಇದ್ದರೆ ಸರಿಯಾಗಿ ಓದಿಕೊಂಡು
ಮಾತನಾಡಬೇಕು. ರಾಹುಲ್ ಒಬ್ಬ ರಾಷ್ಟ್ರೀಯ ಪಕ್ಷದ ಅಧ್ಯಕ್ಷರು. ಸರ್ ಎಂ.ವಿಶ್ವೇಶ್ವರಯ್ಯ ಎಂಬುದನ್ನು ಸರಿಯಾಗಿ ಹೇಳ ಬೇಕಾಗುತ್ತದೆ. ವೇದಿಕೆ ಮೇಲೆ ಕಲಿಯುವುದಲ್ಲ. ಮೊದಲೇ ಪೂರ್ವ ಸಿದ್ಧತೆ ಮಾಡಿಕೊಂಡು ವೇದಿಕೆ ಹತ್ತಬೇಕು.

ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರಿಬ್ಬರೂ ಬಿಜೆಪಿಗೆ ಟಫ್ ಆಗುತ್ತಿದ್ದಾರಾ? 

ನಮಗೆ ಯಾರೂ ಟಫ್ ಅಲ್ಲ. ಇಬ್ಬರೂ ಸೋಲುತ್ತಿದ್ದಾರೆ. ಒಬ್ಬರು ರಾಷ್ಟ್ರದಲ್ಲಿ, ಮತ್ತೊಬ್ಬರು ರಾಜ್ಯದಲ್ಲಿ. ರಾಹುಲ್ ಅಧ್ಯಕ್ಷರಾದ ಮೇಲೆ ಕಾಂಗ್ರೆಸ್ ಅಧೋಗತಿ ತಲುಪುತ್ತಿದೆ. ಅವರೇ ಏಕಾಂಗಿಯಾಗಿ ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತಿದ್ದಾರೆ.

ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ವೈಯಕ್ತಿಕ ವಾಗ್ದಾಳಿ ಅತಿರೇಕಕ್ಕೆ ಹೋಗುತ್ತಿದೆಯೇ?

ಕಾಂಗ್ರೆಸ್‌ನವರು ವೈಯಕ್ತಿಕ ದಾಳಿ ನಡೆಸುವಾಗ ನಾವು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ನಾವೂ ಉತ್ತರ ನೀಡಬೇಕಾಗುತ್ತದೆ.

ಲಿಂಗಾಯತ ಸ್ವತಂತ್ರ ಧರ್ಮ ವಿಷಯ ಬಿಜೆಪಿಗೆ ಮುಳುವಾಗುತ್ತದೆ ಎಂಬ ವಾದಕ್ಕೆ ಏನಂತೀರಿ?

ಸಿದ್ದರಾಮಯ್ಯ ಅವರು ಲಿಂಗಾಯತ ಸ್ವತಂತ್ರ ಧರ್ಮ ವಿಷಯ ತಂದಿದ್ದೇ ಯಡಿಯೂರಪ್ಪ ಅವರನ್ನು ತಡೆಯುವುದಕ್ಕಾಗಿ ಎಂಬುದು ಎಲ್ಲರ ಭಾವನೆ. ಲಿಂಗಾಯತರಿಗೆ ಸ್ವತಂತ್ರ ಧರ್ಮ ಸ್ಥಾನಮಾನ ನೀಡಬೇಕು ಎಂಬ ಕಳಕಳಿ ನಿಜವಾಗಿಯೂ ಇದ್ದಲ್ಲಿ 2013 ರಲ್ಲೇ ತರಬೇಕಿತ್ತು. ಈಗ ಚುನಾವಣೆ ಹೊಸ್ತಿಲಲ್ಲಿ ಯಾಕೆ? ಇದು ಜನರಿಗೆ ಗೊತ್ತಿದೆ.

ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ  ಟಿಕೆಟ್ ತಪ್ಪುವುದರಲ್ಲಿ ನಿಮ್ಮ ಪಾತ್ರವಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬಂದಿತ್ತು?

ಇದರ ಬಗ್ಗೆ ಈಗಾಗಲೇ ಯಡಿಯೂರಪ್ಪ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸ್ಪಷ್ಟಪಡಿಸಿದ್ದಾರಲ್ಲ 

ಟಿಕೆಟ್ ಹಂಚಿಕೆಯಲ್ಲಿ ಯಡಿಯೂರಪ್ಪ ಅವರ ಕೈಮೇಲಾಯಿತು ಎಂಬ ವಿಶ್ಲೇಷಣೆಯ ಬಗ್ಗೆ?

10 ನಾಯಕರು ಸೇರಿ ಟಿಕೆಟ್ ಅಂತಿಮಗೊಳಿಸಿದ್ದೇವೆ. ಯಾರದ್ದೂ ಕೈ ಮೇಲಾಗುವ ಪ್ರಶ್ನೆಯೇ ಉದ್ಭವಿಸದು. 

 ಕಳಂಕಿತರೂ ಸೇರಿದಂತೆ ಹಳೆಯ ಮುಖಗಳಿಗೆ ಟಿಕೆಟ್ ನೀಡಿದ್ದೀರೆಂಬ ಅಭಿಪ್ರಾಯದ ಬಗ್ಗೆ?

224 ಅಭ್ಯರ್ಥಿಗಳ ಪೈಕಿ 106 ಹೊಚ್ಚ ಹೊಸಬರಿಗೆ ಟಿಕೆಟ್ ನೀಡಿದ್ದೇವೆ. ಅಂದರೆ, ಶೇ.50 ರಷ್ಟು ಹೊಸಬರಿಗೆ ಅವಕಾಶ ಕೊಟ್ಟಿದ್ದೇವೆ. ಅಂತಿಮವಾಗಿ ಯಾರು ಗೆಲ್ಲುತ್ತಾರೆ ಎಂಬುದನ್ನು ಆಧರಿಸಿ ಅವರಿಗೆ ಟಿಕೆಟ್ ಕೊಟ್ಟಿದ್ದೇವೆ. 

ಜನಾರ್ದನರೆಡ್ಡಿ ಅವರಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಅಮಿತ್ ಶಾ ಹೇಳಿದ ಬಳಿಕವೂ ಯಡಿಯೂರಪ್ಪ ಅವರು ರೆಡ್ಡಿ ಪರವಾಗಿ ವಕಾಲತ್ತು ವಹಿಸುತ್ತಾರೆ ಎಂಬುದು ಕಾಂಗ್ರೆಸ್‌ಗೆ ಸಿಕ್ಕಿರುವ ಹೊಸ ಅಸ್ತ್ರ? 

ರಾಷ್ಟ್ರೀಯ ಅಧ್ಯಕ್ಷರು ಕೈಗೊಳ್ಳುವ ನಿಲವಿಗೆ ಇಡೀ ಪಕ್ಷ ಬದ್ಧ. ಇದಕ್ಕಿಂತ ಹೆಚ್ಚು ಇನ್ನೇನು ಹೇಳಲು ಸಾಧ್ಯ

ನೀವು ಮುಖ್ಯಮಂತ್ರಿಯಾಗುವ ಸರದಿ ಯಾವಾಗ ಬರಲಿದೆ? 

ಈಗ ನಮ್ಮ ಮುಂದಿರುವ ಒಂದು ಅಂಶ ಬಿಜೆಪಿ ಮಿಷನ್  150 ಪ್ಲಸ್ ಗಳಿಸುವುದು ಮತ್ತು ಯಡಿಯೂರಪ್ಪ ಸಿಎಂ ಆಗಬೇಕು. ನಾನು ಜೆ.ಪಿ.ಚಳವಳಿ ಹಿನ್ನೆಲೆಯಿಂದ ಬಂದ ವನು. ಆಗ ನಾನು ಮುಂದೊಂದು ದಿನ ಸಂಸದನಾಗುತ್ತೇನೆ, ಕೇಂದ್ರ ಸಚಿವನಾಗುತ್ತೇನೆ  ಎಂದುಕೊಂಡಿರಲಿಲ್ಲ. ನನಗೆ ರಾಷ್ಟ್ರ ರಾಜಕಾರಣದಲ್ಲಿ ಜವಾಬ್ದಾರಿಯಿದೆ. ನಾನಿರುವ ಸತ್ಸಂಗದಲ್ಲಿ ವೈಯಕ್ತಿಕ ಹಂಬಲ, ಕನಸು ಇಟ್ಟುಕೊಳ್ಳುವುದು ತಪ್ಪು ಎಂದೆನಿಸುತ್ತದೆ. ನನಗೆ ವೈಯಕ್ತಿಕ ಕನಸುಗಳಿಲ್ಲ. ನಾನು ಯೋಚನೆ ಮಾಡದಿರುವಷ್ಟು ಸ್ಥಾನಮಾನ ಸಿಕ್ಕಿದೆ.

Follow Us:
Download App:
  • android
  • ios