ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಜ ಒಡೆಯುವ ದ್ರೋಹಿ, ನಾನು ಕಂಡ ದರಿದ್ರ ಮುಖ್ಯಮಂತ್ರಿ. ನನ್ನನ್ನು ಬೆಂಕಿ ಇಡುವ ವ್ಯಕ್ತಿ ಎಂದು ಎಲ್ಲ ಕಡೆ ಹೇಳಿಕೊಂಡು ತಿರುಗಾಡುವ ಅವರು ರಾಜ್ಯದಲ್ಲಿ ಜಾತಿಗಳನ್ನು ಒಡೆದು ಜನರ ಬದುಕಿಗೆ ಬೆಂಕಿ ಇಟ್ಟಿದ್ದಾರೆ. 

ಚೆನ್ನಮ್ಮನ ಕಿತ್ತೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಜ ಒಡೆಯುವ ದ್ರೋಹಿ, ನಾನು ಕಂಡ ದರಿದ್ರ ಮುಖ್ಯಮಂತ್ರಿ. ನನ್ನನ್ನು ಬೆಂಕಿ ಇಡುವ ವ್ಯಕ್ತಿ ಎಂದು ಎಲ್ಲ ಕಡೆ ಹೇಳಿಕೊಂಡು ತಿರುಗಾಡುವ ಅವರು ರಾಜ್ಯದಲ್ಲಿ ಜಾತಿಗಳನ್ನು ಒಡೆದು ಜನರ ಬದುಕಿಗೆ ಬೆಂಕಿ ಇಟ್ಟಿದ್ದಾರೆ. ಅಂಥ ಸಿದ್ದರಾಮಯ್ಯನ ಬದುಕಿಗೆ ನಾನೇಕೆ ಬೆಂಕಿ ಇಡಬಾರದು ಎಂದು ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಪ್ರಶ್ನಿಸಿದರು.

ಬೆಳಗಾವಿ ಜಿಲ್ಲೆ ಕಿತ್ತೂರು ವಿಧಾನಸಭಾ ಕ್ಷೇತ್ರದ ತಿಗಡೊಳ್ಳಿ, ಅವರಾದಿ, ಹಿರೇನಂದಿಹಳ್ಳಿ ಗ್ರಾಮಗಳಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿ ಮಾತನಾಡಿ, ‘ಅಲ್ಪಸಂಖ್ಯಾತರ ವೋಟಿಗಾಗಿ ಕಾಂಗ್ರೆಸ್‌ನವರು ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ. ಕೇರಳದ ಪಿಎಫ್‌ಐ ಭಯೋತ್ಪಾದಕರ ಜತೆಗೆ ಮಜಾ ಮಾಡ್ತಾರೆ. ದೇಶದಲ್ಲಿ ಹಿಂದೂ ಧರ್ಮ ಇದೆ ಎಂಬುದು ರಾಹುಲ್‌ ಗಾಂಧಿ ಅವರಿಗೆ ಈಗ ಗೊತ್ತಾಗಿದೆ. ಈಗ ದೇವಾಲಯ ಹಾಗೂ ಮಠಗಳಿಗೆ ಕಾಲಿಗೆ ಚಕ್ರಕಟ್ಟಿಕೊಂಡು ತಿರುಗುವ ನಾಟಕವನ್ನು ಕಾಂಗ್ರೆಸ್‌ ಆರಂಭಿಸಿದೆ. ಆದರೆ, ಮಠಗಳಲ್ಲಿ ತೀರ್ಥವನ್ನು ಹೇಗೆ ಸ್ವೀಕರಿಸಬೇಕೆಂಬ ಪದ್ಧತಿಯೂ ಅವರಿಗೆ ಗೊತ್ತಿಲ್ಲ. ಯಾರೋ ಹೇಳಿದರೆಂದು ಕಾವಿ ಬಟ್ಟೆಧರಿಸಿ ಮಠ, ಮಂದಿರಗಳಿಗೆ, ಕೋಳಿ ಪುಕ್ಕಗಳನ್ನು ತಲೆ ಮೇಲೆ ಹೊತ್ತು ಮಸೀದಿಗಳಿಗೆ, ಶಿಲುಬೆ ಹಾಕಿಕೊಂಡು ಚರ್ಚ್’ಗಳಿಗೆ ತೆರಳುತ್ತಾರೆ. ಹಾಗಿದ್ದರೆ ದೇಶದ ಅತ್ಯಂತ ದೊಡ್ಡ ಶ್ರದ್ಧಾ ಕೇಂದ್ರ ಶ್ರವಣ ಬೆಳಗೊಳಕ್ಕೆ ಬರಿಮೈಯಲ್ಲಿ ಹೋಗಿ ಬನ್ನಿ’ ಎಂದು ಹೆಗಡೆ ವ್ಯಂಗ್ಯವಾಡಿದರು.

ರಾಹುಲ್‌ ಗಾಂಧಿ ಆ್ಯಂಡ್‌ ಟೀಂ ರಾಜ್ಯದಲ್ಲಿ ನಾಟಕ ಕಂಪನಿ ನಡೆಸುತ್ತಿದೆ. ಕೇವಲ ಒಂದು ಕುಟುಂಬಕ್ಕೆ ಸೀಮಿತವಾದ ಕಾಂಗ್ರೆಸ್‌ 70 ವರ್ಷಗಳಿಂದ ದೇಶವನ್ನು ಲೂಟಿ ಮಾಡಿ ಅಧೋಗತಿಗೆ ತಳ್ಳಿದೆ. ಕಾಂಗ್ರೆಸ್‌ ಹುಚ್ಚರ ಸಂತೆಯಾಗಿದ್ದು, ಅಲ್ಲಿ ಭಿನ್ನಮತ ಭುಗಿಲೆದ್ದಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ನಡುವೆ ಹೊಂದಾಣಿಕೆಯೇ ಇಲ್ಲ. ಅವರ ಕಚ್ಚಾಟದಿಂದ ಬೇಸತ್ತು ಕಾಂಗ್ರೆಸ್‌ ನಾಯಕರು ಬಿಜೆಪಿ ಸೇರುತ್ತಿದ್ದಾರೆ ಎಂದರು.

ಇದೇ ವೇಳೆ, ಪ್ರಧಾನಿ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಏಕವಚನದಲ್ಲಿ ಮಾತನಾಡುವ ಸಿದ್ದರಾಮಯ್ಯ ಅವರಿಗೆ ಏಕವಚನದಲ್ಲಿ ಮಾತನಾಡುವ ಧೈರ್ಯ ಕೇಂದ್ರ ಸಚಿವನಾದ ಅನಂತ್‌ ಕುಮಾರ್‌ ಹೆಗಡೆಗೆ ಇದೆ ಎಂದು ತಿಳಿಸಿದರು.