ಬೆಂಗಳೂರು : ಈವರೆಗೆ ಜೆಡಿಎಸ್‌ಅನ್ನು ‘ಬಿಜೆಪಿಯ ಬಿ ಟೀಂ’ ಎಂದು ಕಿಡಿಕಾರುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಎರಡೂ ಪಕ್ಷಗಳ ನಡುವೆ ಒಳಒಪ್ಪಂದ ಆಗಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಒಂದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಆರೋಪಕ್ಕೆ ಸಂಬಂಧಿಸಿ ಕಿಡಿಕಾರಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ದಾಖಲೆ ಬಿಡುಗಡೆ ಮಾಡುವಂತೆ ಆಗ್ರಹಿಸಿದಾಗ, ‘ನಮ್ಮ ಬಳಿ ಫೋಟೋ ಇದೆ, ಅದನ್ನು ಸೂಕ್ತ ಸಂದರ್ಭದಲ್ಲಿ ಬಿಡುಗಡೆ ಮಾಡುವೆ’ ಎಂದು ಸಿದ್ದು ಹೇಳಿದ್ದಾರೆ.

ಸಿದ್ದರಾಮಯ್ಯ ಹೇಳಿದ್ದೇನು?: ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಪ್ರಮಾಣ ವಚನಕ್ಕೆ ಈಗಾಗಲೇ ಮುಹೂರ್ತವನ್ನೂ ನಿಗದಿ ಪಡಿಸಿಕೊಂಡಿದ್ದಾರೆ. ಅಮಿತ್ ಶಾ ಮತ್ತು ಕುಮಾರಸ್ವಾಮಿ ಒಂದೇ ವಿಮಾನದಲ್ಲಿ ದೆಹಲಿಗೆ ಹೋಗಿದ್ದಾರೆ. ಈ ಇಬ್ಬರೂ ಜತೆಗೆ  ಪ್ರಯಾಣಿಸಿರುವ ಫೋಟೋ ನನ್ನ ಬಳಿ ಇದ್ದು ಸೂಕ್ತ ಸಮಯ ಬಂದಾಗ ದಾಖಲೆ ಸಮೇತ ಬಿಡುಗಡೆ ಮಾಡುತ್ತೇವೆ ಎಂದು ಸಿಎಂ ತಿಳಿಸಿದರು.