ಬೆಂಗಳೂರು (ಏ. 24): ನಟ ಅಂಬರೀಶ್ ಟಿಕೆಟ್ ಪ್ರಹಸನಕ್ಕೆ ಕಡೆಗೂ ಪೂರ್ಣ ವಿರಾಮ ಹಾಕಿದ್ದಾರೆ. ಅಂತಿಮವಾಗಿ ತಮ್ಮ ರಾಜಕೀಯ ನಿಲುವನ್ನು ಮಾಧ್ಯಮಗಳು ಮುಂದೆ ಸ್ಪಷ್ಟಪಡಿಸಿದ್ದಾರೆ. 

ನಾನು  ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಈ ಮುಂಚೆಯೇ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದೆ.  ಇದನ್ನು ಮುಂಚೆಯೇ ಹೇಳಿದಿದ್ದರೆ ಮಂಡ್ಯದ ಜನತೆ ನನ್ನನ್ನು ಬಿಡುತ್ತಿರಲಿಲ್ಲ.  ನಾನು ಎಲ್ಲವನ್ನೂ ಯೋಚಿಸಿಯೇ ನಿರ್ಧರಿಸಿದ್ದೇನೆ. ಗಣಿಗ ರವಿ ಅಲ್ಲ ಯಾರಿಗೇ ಟಿಕೆಟ್  ಕೊಟ್ಟರೂ ನನ್ನ ಬೆಂಬಲ ಇದೆ.  ಆದರೆ, ನಾನು ಯಾರ ಪರವೂ ಪ್ರಚಾರಕ್ಕೆ ಹೋಗಲ್ಲ.  ಪ್ರಚಾರ ಮಾಡುವ ಶಕ್ತಿ ಇದ್ದಿದ್ದರೆ ನಾನೇ ಚುನಾವಣೆಗೆ ಸ್ಪರ್ಧಿಸುತ್ತಿದ್ದೆ. ಸಿಎಂ ಅಲ್ಲದೇ ಬೇರೆ ಯಾರ ಪರವೂ ಪ್ರಚಾರಕ್ಕೆ ಹೋಗಲ್ಲ ಎಂದು ಅಂಬರೀಶ್ ಹೇಳಿದ್ದಾರೆ. 

ಅಂಬರೀಶ್​ ಕಣಕ್ಕಿಳಿಯದಿರಲು ದಿನೇಶ್ ಗುಂಡೂರಾವ್ ಕಾರಣ ಎಂಬ  ಸತ್ಯವನ್ನು  ಅಂಬರೀಶ್ ಬಹಿರಂಗಪಡಿಸಿದ್ದಾರೆ. ​ ‘ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್​ ನನ್ನ ಮನೆಗೆ ಬಂದಿದ್ದರು. ಮಂಡ್ಯದಲ್ಲಿ ನೀವು ಸೋಲುವ ಸಾಧ್ಯತೆ ಬಗ್ಗೆ ಇಂಟಿಲಿಜೆನ್ಸ್ ರಿಪೋರ್ಟ್ ಇದೆ. ಮಂಡ್ಯದಲ್ಲಿ ವಾತಾವರಣ ಸರಿ ಇಲ್ಲ, ನಿಮ್ಮ ನಿರ್ಧಾರ ಸರಿ ಇದೆ’ ಎಂದಿದ್ದರು. ನಾನು ಸೋಲ್ತೀನಿ ಅಂತ ದಿನೇಶ್ ಗುಂಡೂರಾವ್ ಹೇಳಿದ್ದು ಬೇಜಾರಾಯ್ತು.  ಆಗ ನಾನೇ ಹೇಳಿದೆ ಬೇರೆಯವರಿಗೆ ಟಿಕೆಟ್ ಕೊಡಿ ಅಂತ.  ನನಗೂ ರಾಜ್ಯದಲ್ಲಿ ಐದು ಪರ್ಸೆಂಟ್ ಓಟ್​ ತೆಗೆದುಕೊಳ್ಳುವ  ಕೆಪಾಸಿಟಿ ಇದೆ ಎಂದು  ದಿನೇಶ್ ಗುಂಡೂರಾವ್ ವಿರುದ್ಧ ನೇರ ಆರೋಪ ಮಾಡಿದ್ದಾರೆ. 

ಇಡೀ ಕರ್ನಾಟಕದಲ್ಲೇ ನನಗೆ ಅಭಿಮಾನಿಗಳಿದ್ದಾರೆ.  ಎಚ್.ಕೆ. ಪಾಟೀಲ್ ನನ್ನ ಬಗ್ಗೆ ಮಾಡಿದ ಭಾಷಣ ನೆನಪಿದೆ.  ಅಧಿಕಾರ ಬಂದಾಗ ಎಲ್ಲವೂ ಬದಲಾಗುತ್ತದೆ ಎಂದು  ಎಚ್.ಕೆ. ಪಾಟೀಲ್ ಗೆ ಟಾಂಗ್ ನೀಡಿದ್ದಾರೆ. 

ಸಿಎಂ ಆದ ಮೇಲೆ ಸಿದ್ದರಾಮಯ್ಯ ಬದಲಾಗಿಲ್ಲ.  ಹಳೆಯದನ್ನು ಅವರೇ ಹೇಳಬೇಕು.  ನನಗೆ ಇಷ್ಟ ಬಂದಾಗ ಮಂಡ್ಯಕ್ಕೆ ಹೋಗ್ತೀನಿ.  ಇಲ್ಲೇ ಕುಳಿತುಕೊಂಡು ಆಟ ಆಡಿಸಬಲ್ಲೆ. ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಬಯಸಿದ್ದೇ ನಾನು. ಆಗ ನನ್ನನ್ನು ಟೀಕಿಸಿದವರು ಈಗ ಸಿಎಂ ಜತೆಗಿದ್ದಾರೆ.  ಸಿಎಂ ನನ್ನ ಜತೆ ಫೋನ್​ನಲ್ಲಿ ಮಾತನಾಡಿದ್ದಾರೆ.  ಸಿಎಂಗೆ ನೂರಾರು ಕೆಲಸಗಳಿರುತ್ತವೆ. ನನಗೆ ಸಿಎಂ ಮನಗೆ ಬರಬೇಕೆಂಬ ಆಸೆ ಇಲ್ಲ.  ನನ್ನ ಮನೆಗೆ ಹತ್ತಾರು ಸಿಎಂಗಳು ಬಂದಿದ್ದಾರೆ. ನಾನು ಅವರಿಂದ ಗ್ರೇಟ್​ ಎಂಬ ಭಾವನೆ ಇಲ್ಲ. ನಾನು ಸೀರಿಯಸ್ ರಾಜಕಾರಣಿ ಅಲ್ಲ.  ಚುನಾವಣಾ ರಾಜಕೀಯದಿಂದಷ್ಟೇ ನಿವೃತ್ತಿ ತೆಗೆದುಕೊಳ್ಳುತ್ತೇನೆ.  ಸಕ್ರಿಯ ರಾಜಕಾರಣದಲ್ಲಿ ನಾನು ಇದ್ದೇ ಇರುತ್ತೇನೆ ಎಂದು ಅಂಬಿ ಹೇಳಿದ್ದಾರೆ. 

ನನಗೂ ವಯಸ್ಸಾಗುತ್ತಿದೆ. ಆಸಕ್ತಿ, ಶಕ್ತಿ ಕುಂದುತ್ತಿದೆ. ಇಂತಹ ವಯಸ್ಸಲ್ಲಿ ಕೆಲಸ ಮಾಡುವುದು ಕಷ್ಟವಾಗುತ್ತದೆ. ನಾನು ಕೆಲಸ ಮಾಡಬೇಕೆಂದು ಜನರು ತುಂಬಾ ಆಸೆ ಪಡುತ್ತಾರೆ  ಅವರ ಆಸೆ ಈಡೇರಿಸದಿದ್ದ ಮೇಲೆ ನಾನೇಕೆ ಚುನಾವಣೆಗೆ ಸ್ಪರ್ಧಿಸಬೇಕು. ನಾನು ಬಿ.ಫಾರಂ ಪಡೆದುಕೊಳ್ಳದಿದ್ದಾಗಲೇ ತಿಳಿದುಕೊಳ್ಳಬೇಕಿತ್ತು ನನಗೆ  ಚುನಾವಣೆಗೆ ಸ್ಪರ್ಧಿಸುವುದು ಇಷ್ಟ ಇಲ್ಲ ಎಂದಿದ್ದಾರೆ. 

ನನಗೆ ಯೋಗ್ಯತೆ ಇದೆಯೋ, ಇಲ್ಲವೋ ನನಗೆ ದೊಡ್ಡ ಸ್ಥಾನ ಕೊಟ್ಟ ಮಂಡ್ಯ ಜನತೆಗೆ ಖುಣಿಯಾಗಿರುತ್ತೇನೆ.  ರಾಜ್ಯ ನಾಯಕರು ನನಗಾಗಿ ಕೊನೆ ತನಕ ಬಿಫಾರಂ ಕೊಡದೇ ಇಟ್ಟುಕೊಂಡಿದ್ದು  ಇದು ನನ್ನ ಮೇಲಿನ ಪ್ರೀತಿಯನ್ನು ತೋರಿಸುತ್ತದೆ.  ಇದಕ್ಕೆ ರಾಜ್ಯ ನಾಯಕರಿಗೆ ನನ್ನ ಧನ್ಯವಾದ ಎಂದಿದ್ದಾರೆ.