ಬೆಂಗಳೂರು : ‘ಕೇಂದ್ರಕ್ಕೆ ಲಕ್ಷಾಂತರ ಕೋಟಿ ರು. ಆದಾಯ ತಂದುಕೊಡುವ ಬೆಂಗಳೂರನ್ನು ಮೋದಿ ‘ಪಾಪಿನಗರಿ’ ಎಂದು ಟೀಕಿಸಿ ದ್ದಾರೆ. ಈ ಮೂಲಕ ಬೆಂಗಳೂರು ಇತಿಹಾಸ, ಹಾಗೂ ನಾಡಪ್ರಭು ಕೆಂಪೇಗೌಡ ಅವರಿಗೆ ಅವಮಾನ ಮಾಡಿದ್ದಾರೆ. ನಗರದ ಬಗ್ಗೆ ಇಷ್ಟು ಕೀಳಾಗಿ ಮಾತನಾಡುವ ಮೋದಿ ನಗರದ ಅಭಿವೃದ್ಧಿಗೆ ಕೇವಲ 550 ಕೋಟಿ ರು. ನೀಡಿರುವ ನಾಚಿಕೆಗೇಡಿನ ಸಂಗತಿ.’ ಇದು ಪ್ರಧಾನಮಂತ್ರಿ ನರೇಂದ್ರ  ಮೋದಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೀಡಿದ ತಿರುಗೇಟು.  

ಉದ್ಯಾನನಗರಿ ಬೆಂಗಳೂರಿನಿಂದ ಕೇಂದ್ರ ಸರ್ಕಾರಕ್ಕೆ  ಲಕ್ಷಾಂತರ ಕೋಟಿ ರು. ಆದಾಯ ಬರುತ್ತಿದೆ. ಬೆಂಗಳೂರು ಅಭಿವೃದ್ಧಿಗೆ ರಾಜ್ಯ ಸರ್ಕಾರ 10 ಸಾವಿರ ಕೋಟಿ ರು. ನೀಡಿದೆ. ವಿಶ್ವಮಟ್ಟದಲ್ಲಿ ದೇಶದ ಘನತೆ ಹೆಚ್ಚಿಸಿರುವ ಬೆಂಗಳೂರು ನಗರವನ್ನು ಕೀಳುಮಟ್ಟದಲ್ಲಿ ಟೀಕಿಸುವ ಮೋದಿ ನಗರಕ್ಕೆ ನೀಡಿರುವುದು ಕೇವಲ 550 ಕೋಟಿ ರು. ಮಾತ್ರ. ಇದು ನಾಚಿಕೆಗೇಡಿನ ಸಂಗತಿ ಶೇಮ್. ಶೇಮ್.

ಮೋದಿ ಎಂದು ಟೀಕಿಸಿದರು. ಬುಧವಾರ ಬೆಂಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದ ರಾಹುಲ್ ಗಾಂಧಿ, ಶಿವಾಜಿನಗರದ ರಸೆಲ್ ಮಾರುಕಟ್ಟೆ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಬೆಂಗಳೂರನ್ನು ಕಟ್ಟಿ ಬೆಳೆಸಿದ್ದು ನೀವು ಹಾಗೂ ನಿಮ್ಮ ಪೂರ್ವಜರು. ಮೋದಿ ನಗರಕ್ಕೆ ಬರುವ  ಮೊದಲೇ ಬೆಂಗಳೂರು ಐಟಿ ರಾಜಧಾನಿಯಾಗಿ ಹೆಸರು ಪಡೆದಿದೆ. ಬೆಂಗಳೂರಿನಲ್ಲಿ ಏನೂ ಅಭಿವೃದ್ಧಿ ಆಗಿಲ್ಲ ಎನ್ನುವ ಹಾಗೂ ಕೀಳುಮಟ್ಟದಲ್ಲಿ ಟೀಕಿಸುವ ಮೂಲಕ ನಾಡಪ್ರಭು ಕೆಂಪೇಗೌಡರಿಗೆ ಮೋದಿ ಅವಮಾನ ಮಾಡಿದ್ದಾರೆ. ಈ ಪ್ರದೇಶವನ್ನು ಕರ್ನಾಟಕದ ಎಲ್ಲಾ ವರ್ಗಗಳೂ ಸೇರಿ ಕಟ್ಟಿವೆ. ಕನ್ನಡಿಗರ ಶ್ರಮವನ್ನು ಅವಮಾನಿಸಬೇಡಿ ಎಂದು ಹೇಳಿದರು. 

ಮೋದಿ ದೇಶಾದ್ಯಂತ ಸ್ಟಾರ್ಟ್ ಅಪ್ ಇಂಡಿಯಾ ಎಂದು ಓಡಾಡುತ್ತಿದ್ದಾರೆ. ಆದರೆ, ಸ್ಟಾರ್ಟ್‌ಅಪ್ ಇಂಡಿಯಾ ಎಲ್ಲಾ ನಗರಗಳಲ್ಲೂ ವಿಫಲವಾಗಿದೆ. ಆದರೆ, ರಾಜ್ಯದ ಸ್ಟಾರ್ಟ್‌ಅಪ್ ನೀತಿಯಿಂದಾಗಿ ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿಯಾಗಿ ಬೆಳೆದಿದೆ. ಇಡೀ ದೇಶದಲ್ಲಿರುವ ಡೈನಾಮಿಕ್ ಸಿಟಿ ಎಂದು ಖ್ಯಾತಿ ಪಡೆದಿದೆ. ವಿಶ್ವಕ್ಕೆ 3 ಲಕ್ಷ ಕೋಟಿ ರು. ಐಟಿ ರಫ್ತು ಮಾಡುತ್ತಿದೆ. ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರೇ ನಗರವನ್ನು ಮೆಚ್ಚಿಕೊಂಡಿದ್ದಾರೆ. ದೇಶದ ಆದಾಯಕ್ಕೆ ಲಕ್ಷಾಂತರ ಕೋಟಿ ರು. ಕೊಡುಗೆ ನೀಡುತ್ತಿದೆ. ಇಂತಹ ನಗರ ಅಭಿವೃದ್ಧಿಗೆ ಹಣ ನೀಡಲು ಆಗದ ಮೋದಿ ಅವಮಾನಿಸಲು ಮುಂದಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.