Asianet Suvarna News Asianet Suvarna News

ಮತ್ತೆ ಕಾಂಗ್ರೆಸ್ – ಬಿಜೆಪಿ ನಡುವೆ ಆಮದು ಸಮರ

ಚುನಾವಣಾ ಕಾವು ಏರಿದಂತೆ ರಾಜಕೀಯ ನಾಯಕರ ವಾಕ್ಸಮರ ಆರಂಭಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದವರು ಮತ್ತು ಹೊರಗಿನವರು ಎಂಬ ಚರ್ಚೆ ಹುಟ್ಟು ಹಾಕಿದ್ದಾರೆ. ಮೋದಿ, ಯೋಗಿ ಅವರನ್ನು ಉತ್ತರ ಭಾರತದ ಆಮದು ನಾಯಕರು ಎಂದು ಅವರು ಜರೆದಿದ್ದಾರೆ.

Again Congress And BJP Leaders Clash

ಬೆಂಗಳೂರು : ಚುನಾವಣಾ ಕಾವು ಏರಿದಂತೆ ರಾಜಕೀಯ ನಾಯಕರ ವಾಕ್ಸಮರ ಆರಂಭಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದವರು ಮತ್ತು ಹೊರಗಿನವರು ಎಂಬ ಚರ್ಚೆ ಹುಟ್ಟು ಹಾಕಿದ್ದಾರೆ. ಮೋದಿ, ಯೋಗಿ ಅವರನ್ನು ಉತ್ತರ ಭಾರತದ ಆಮದು ನಾಯಕರು ಎಂದು ಅವರು ಜರೆದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ‘ಬಿಜೆಪಿಗೆ ರಾಜ್ಯ ದಲ್ಲಿ ಯಾವುದೇ ಪ್ರಮುಖ ನಾಯ ಕರು ಇಲ್ಲದಿರುವುದರಿಂದ ಆ ಪಕ್ಷವು ಉತ್ತರ ಭಾರತದ ಪ್ರಧಾನಿ ನರೇಂದ್ರ ಮೋದಿ, ಉತ್ತರ ದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಮದಿಗಾಗಿ ಕಾಯುತ್ತಿದೆ’ ಎಂದು ಟಾಂಗ್ ನೀಡಿದ್ದಾರೆ. ಇದರ ಬೆನ್ನಲ್ಲೇ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದ ವರಿಷ್ಠ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಎಲ್ಲಿಯವರು ಎಂದು ಪ್ರಶ್ನಿಸಿದ್ದಾರೆ.

ಬುಧವಾರ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಬಿಜೆಪಿಯು ರಾಜ್ಯದ ಮುಖ್ಯಮಂತ್ರಿ ಅಭ್ಯರ್ಥಿಯಾದ ಬಿ.ಎಸ್ .ಯಡಿಯೂರಪ್ಪ ಅವರನ್ನು ಡಮ್ಮಿಯನ್ನಾಗಿಸಿದೆ.

ಪ್ರಧಾನಿ ಬಂದು ಹೋಗಬಹುದು. ಆದರೆ, ಇಲ್ಲಿರುವುದು ಸಿದ್ದರಾಮಯ್ಯ ವರ್ಸಸ್ ಯಡಿಯೂರಪ್ಪ ಮಾತ್ರ. ಇದರಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ನಿಮಗೆ ಗೊತ್ತಿದೆ ಎಂದೂ ಅವರು ಕೆಣಕುವ ಪ್ರಯತ್ನ ಮಾಡಿದ್ದಾರೆ.

 ಇದಕ್ಕೆ ಟ್ವೀಟ್ ಮೂಲಕವೇ ಖಾರವಾದ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಭಾರತದ ಆಮದು ಆದರೆ, ನಿಮ್ಮ ಪಕ್ಷದ ಅಧ್ಯಕ್ಷ ರಾಹುಲ್ ಅವರು ಇಟಲಿಯಿಂದ ಆಮದಾಗಿರುವ ಬೊಂಬೆಯೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

‘ನೀವು ನಿಮ್ಮ ಮಾತುಗಳನ್ನು ನಮ್ಮ ಬಾಯಿಗೆ ಹಾಕಿಸುತ್ತಿದ್ದೀರಾ? ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಭಾರತದ ಆಮದು ಆದರೆ ರಾಹುಲ್ ಗಾಂಧಿ ಅವರನ್ನು ಏನೆಂದು ಕರೆಯಬೇಕು? ಇಟಲಿಯಿಂದ ಆಮದಾಗಿರುವ ಬೊಂಬೆಯೇ? ಇತ್ತೀಚಿನ ದಿನಗಳಲ್ಲಿ ನೀವು ನಿಮ್ಮ ಚುನಾವಣಾ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಇಟಲಿಯ ಬೊಂಬೆಯ ಸರ್ಕಸ್ ಪ್ರದರ್ಶನ ಮಾಡುತ್ತಿದ್ದಿರಿ.

ಈಗ ರಾಹುಲ್ ಪ್ರಯೋಜನ ಇಲ್ಲದಂತಾಗಿದೆಯೇ? ಹಾಗಾಗಿ ನಿಮ್ಮನ್ನು ನೀವು ಬಿಂಬಿಸಿಕೊಳ್ಳುತ್ತಿದ್ದೀರಿ’ ಎಂದು ಕಾಲೆಳೆದಿದ್ದಾರೆ. ಇದೇ ವೇಳೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರ ಬಗ್ಗೆ ಹೇಳುವ ಮೊದಲು ಒಮ್ಮೆ ತಮ್ಮ ಮನೆಯ ಒಳಗೆ ಇಣುಕಿ ನೋಡಿ ತಮ್ಮ ನಾಯಕರು ಎಲ್ಲಿಂದ ಬಂದರು ಎಂಬುದನ್ನು ಯೋಚಿಸಬೇಕು ಎಂದು ಹೇಳಿದ್ದಾರೆ.

ಅಲ್ಲದೆ, ನನ್ನ ಜೊತೆ ಸ್ಪರ್ಧೆ ನಡೆಸುವ ಮೊದಲು ಚಾಮುಂಡೇಶ್ವರಿ ಮತ್ತು ಬಾದಾಮಿ ಯುದ್ಧವನ್ನು ಗೆದ್ದು ತೋರಿಸಿ. ಚಾಮುಂಡೇಶ್ವರಿಯ ಕಣದಿಂದ ನೀವು ಪಲಾಯನ ಮಾಡಿದ್ದೀರಿ ಎಂದು ಜನ ನನಗೆ ಹೇಳುತ್ತಿದ್ದಾರೆ ಎಂದು ಟ್ವೀಟರ್‌ನಲ್ಲಿ ಲೇವಡಿ ಮಾಡಿದ್ದಾರೆ.

Follow Us:
Download App:
  • android
  • ios